ಬಿಗ್ ಬಾಸ್ ಹೃದಯ ಗೆದ್ದ ಗಿಲ್ಲಿ, ಕಿಲಾಡಿ ಹುಡುಗನಿಗೆ ಸಿಕ್ತು ಕಿಚ್ಚನ ಚಪ್ಪಾಳೆ
ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು. ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಸುದೀಪ್ ತಾವು ಅತ್ಯುತ್ತಮ ನಿರೂಪಕ ಕೂಡ ಹೌದು ಎನ್ನುವುದನ್ನು ಕಳೆದ ಹತ್ತು ವರ್ಷಗಳ ಹಿಂದೆಯೇ ಸಾಬೀತು ಮಾಡಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ''ಬಿಗ್ ಬಾಸ್'' ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.
ಇಂಥಾ ಸುದೀಪ್ ಪ್ರತಿ ವಾರಾಂತ್ಯಕ್ಕೆ ''ಬಿಗ್ ಬಾಸ್'' ಕಾರ್ಯಕ್ರಮದ ವಾರದ ಪಂಚಾಯ್ತಿ ಮಾಡಲು ಬಂದಾಗ, ಮನೆಯಲ್ಲಿನ ಸ್ಫರ್ಧಿಗಳಿಗೆ ಕಿಚ್ಚನ ಚಪ್ಪಾಳೆ ಈ ವಾರ ತಮಗೆ ಸಿಗಬೇಕು ಎನ್ನುವ ಆಸೆ ಇರುತ್ತೆ. ವಾರಪೂರ್ತಿ ಈ ಆಸೆಯನ್ನೇ ಕೆಲವರು ಕನವರಿಸುತ್ತಾರೆ. ಕಿಚ್ಚನ ಗಮನ ಸೆಳೆಯುವ ಪ್ರಯತ್ನವನ್ನು ಕೂಡ ಮಾಡುತ್ತಾರೆ. ಆದರೆ ಅದು ಸುಲಭ ಅಲ್ಲ. ಯಾರಿಗೆ ಚಪ್ಪಾಳೆ ಹೊಡೆಯಬೇಕು. ಯಾರಿಗೆ ತಪರಾಕಿ ಹಾಕಬೇಕು ಎನ್ನುವುದು ಸುದೀಪ್ ಅವರಿಗೆ ಚೆನ್ನಾಗಿಯೇ ಗೊತ್ತಿರುತ್ತೆ.

ಇದಕ್ಕೆ ಕೈಗನ್ನಡಿ ಎಂಬಂತೆ ಇದ್ದ ಈ ವಾರದ (ಅಕ್ಟೋಬರ್ 18) ಕಾರ್ಯಕ್ರಮದಲ್ಲಿ ಸುದೀಪ್, ಅಳೆದು ತೂಗಿ ಮಾತನಾಡಿದರು. ನ್ಯಾಯ-ನೀತಿ-ಧರ್ಮದ ಪಾಠ ಮಾಡಿದರು. ರಕ್ಷಿತಾ ಅವರನ್ನು ಬಲಿ ಕಾ ಬಖ್ರಾ ಮಾಡುವ ಪ್ರಯತ್ನವನ್ನು ಇಡೀ ವಾರ ಪೂರ್ತಿ ಮಾಡಿದ ರಾಜಮಾತೆ ಅಶ್ವಿನಿ ಗೌಡ ಮತ್ತು ಅವರ ಸೇವಕಿಯಂತೆ ಮನೆಯಲ್ಲಿರುವ ಜಾಹ್ನವಿಯ ಮೈಚಳಿ ಬಿಡಿಸಿದರು. ಇದೇ ಸಮಯದಲ್ಲಿ ''ಬಿಗ್ ಬಾಸ್'' ಮೂಲಕ ಅನೇಕ ಹೃದಯ ಗೆದ್ದ ಮತ್ತು ಗೆಲ್ಲುತ್ತಿರುವ ಗಿಲ್ಲಿ ನಟಗೆ ಸುದೀಪ್ ಚಪ್ಪಾಳೆಯನ್ನು ಕೂಡ ಹೊಡೆದರು.
ಅಶ್ವಿನಿ ಗೌಡ ಮತ್ತು ಜಾಹ್ನವಿ ಇಬ್ಬರು ಸೇರಿ ರಕ್ಷಿತಾ ಅವರನ್ನು ಕಾಡಿದರೂ ಇಡೀ ಮನೆಯ ಸದಸ್ಯರು ರಕ್ಷಿತಾ ಅವರನ್ನು ಅನುಮಾನ ದೃಷ್ಟಿಯಿಂದ ನೋಡಿದ್ದರೂ ಕೂಡ ಅಶ್ವಿನಿ ಗೌಡ ಮತ್ತು ಜಾಹ್ನವಿ ವಿರುದ್ದ ಯಾರು ತಿರುಗಿ ಬೀಳಲೇ ಇಲ್ಲ. ನೀವು ಮಾಡ್ತಿರುವುದು ತಪ್ಪು ಎಂದು ಹೇಳಿ ರಕ್ಷಿತಾ ಪರ ಬೆಂಬಲಕ್ಕೆ ನಿಲ್ಲಲಿಲ್ಲ. ನಿಂತಿದ್ದು ಕೇವಲ ಗಿಲ್ಲಿ ಮಾತ್ರ. ಪ್ರತಿಯೊಂದು ಹಂತದಲ್ಲಿಯೂ ರಕ್ಷಿತಾ ಅವರನ್ನು ಬೆಂಬಲಿಸುತ್ತಾ ಬಂದ ಗಿಲ್ಲಿ ತಮ್ಮ ಈ ನಡೆಯ ಮೂಲಕ ಕಿಚ್ಚ ಸುದೀಪ್ ಅವರ ಮೇಲೆ ಕೂಡ ಮೋಡಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಗಿಲ್ಲಿಗೆ ಚಪ್ಪಾಳೆ ಹೊಡೆದ ಸುದೀಪ್ ಇದೇ ಸಮಯದಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರಿಗೆ ಕಾಲೆಳೆದಿದ್ದಾರೆ. ಬುದ್ದಿ ಮಾತನ್ನು ಕೂಡ ಹೇಳಿದ್ದಾರೆ.ಜಾಹ್ನವಿ ಅವರಿಗೆ ನೀವು ತಪ್ಪು ದಾರಿಯಲ್ಲಿ ಹೋಗುತ್ತಿದ್ದೀರಾ ಎಂದು ಕಿವಿ ಮಾತು ಹೇಳಿದ ಸುದೀಪ್, ಅಶ್ವಿನಿ ಅವರಿಗೆ ನಿಮ್ಮ ಸರದಿ ಯಾವಾಗ ಎಂಬರ್ಥದಲ್ಲಿ ಪ್ರಶ್ನೆ ಮಾಡಿದ್ದಾರೆ.
ಆಗ ಅಶ್ವಿನಿ ನಾನು ತಗೊಳ್ತೀನಿ ಎಂದು ಹೇಳಿದಾಗ ಸರಿಯಾದ ಸಮಯದಲ್ಲಿ ಸ್ಟ್ಯಾಂಡ್ ತಗೊಳೋದು ಮುಖ್ಯ. ನೀವು ತೆಗೆದುಕೊಳ್ಳುವ ಸ್ಟ್ತಾಂಡ್ಗೆ ಇಡೀ ಕರ್ನಾಟಕ ಚಪ್ಪಾಳೆ ತಟ್ಟುತ್ತೆ. ಹಾಗೆ ತೆಗೆದುಕೊಳ್ಳುವ ಸ್ಟ್ಯಾಂಡ್ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ಹೇಳಿದ್ದಾರೆ. ಸುದೀಪ್ ಅವರ ಈ ಮಾತು ಅಶ್ವಿನಿ ಗೌಡ ಮತ್ತು ಜಾಹ್ನವಿ ಇಬ್ಬರಿಗೂ ಅನ್ವಯವಾಗಿದ್ದು ಇಬ್ಬರು ಸುದೀಪ್ ನೀಡಿದ ಸಂದೇಶ ಅರ್ಥವಾದಂತೆ ತಲೆಯಾಡಿಸಿದ್ದಾರೆ. ರಕ್ಷಿತಾ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಕ್ಕಾಗಿ ಕಾರ್ಯಕ್ರಮದಲ್ಲಿ ಕಿಚ್ಚನ ಎದುರು ತಲೆಯನ್ನು ಕೂಡ ತಗ್ಗಿಸಿದ್ದಾರೆ.
ಸದ್ಯ ಮಂಜು ಭಾಷಿಣಿ ಮತ್ತು ಅಶ್ವಿನಿ ಮನೆಯಿಂದ ಹೊರ ಬಂದಿದ್ದಾರೆ. ಮುಂದಿನ ವಾರ ಯಾರು ಬರುತ್ತಾರೆ.? ಕಿಚ್ಚನ ಚಪ್ಪಾಳೆ ಯಾರಿಗೆ ಸಿಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಇದರ ನಡುವೆ ವೈಲ್ಡ್ ಕಾರ್ಡ್ ಮೂಲಕ ಕೂಡ ಸ್ಫರ್ಧಿಗಳು ಮನೆಯ ಒಳಗಡೆ ಇನ್ನೂ ಬರಬೇಕಿದೆ.


Click it and Unblock the Notifications











