'ಗಿಣಿರಾಮ'ನ ತಂಗಿಗೆ ನಿಶ್ಚಿತಾರ್ಥ: 8 ವರ್ಷದ ಸೈನಿಕನ ಪ್ರೀತಿ ಸಕ್ಸಸ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕನ್ನಡ ಸೊಬಗಿನ 'ಗಿಣಿರಾಮ' ಧಾರಾವಾಹಿಯಲ್ಲಿ ನಾಯಕ ಶಿವರಾಮನ ತಂಗಿ ಸೀಮಾ ಆಗಿ ನಟಿಸಿ ವೀಕ್ಷಕರ ಮನ ಸೆಳೆದಿದ್ದ ಕಾವೇರಿ ಬಾಗಲಕೋಟೆ ಸೈನಿಕನ ಕೈ ಹಿಡಿಯಲಿದ್ದಾರೆ. ಈ ವಿಚಾರವನ್ನು ಸ್ವತಃ ಕಾವೇರಿ ಬಾಗಲಕೋಟೆ ಅವರೇ ತಮ್ಮ
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕಾವೇರಿ ಬಾಗಲಕೋಟೆ ಸೈನಿಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಿಠ್ಠಲ್ ಹಿರಣ್ಣನವರ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಹೆಣ್ಣು ನೋಡುವ ಶಾಸ್ತ್ರ ಮುಗಿದಿದ್ದು, ಅವರು ಯಾವಾಗ ಮದುವೆ ಆಗಲಿದ್ದಾರೆ ಎಂಬ ವಿಚಾರ ಇನ್ನು ಕೂಡಾ ತಿಳಿಯಬೇಕಿದೆ.

ಕನಸು ನನಸಾಯಿತು ಎಂದ ಕಾವೇರಿ
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಕಾವೇರಿ ಬಾಗಲಕೋಟೆ "ಎಲ್ಲರಿಗೂ ನಮಸ್ಕಾರ. ನಮ್ಮ 8 ವರ್ಷದ ಪ್ರೀತಿಯ ಕನಸು ನನಸಾಯಿತು. ಇವತ್ತು ಹಣ್ಣು ಇಡುವ ಶಾಸ್ತ್ರ ಆಯಿತು. ನಾನು ಸೈನಿಕನ ಹೆಂಡತಿ ಆಗುವಳು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ" ಎಂದು ಬರೆದುಕೊಂಡಿದ್ದಾರೆ.
ಮೊದಲಿನಿಂದಲೂ ನಟಿಯಾಗುವ ಕನಸಿತ್ತು
ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಕಾವೇರಿ 'ಗಿಣಿರಾಮ' ಧಾರಾವಾಹಿಯ ಸೀಮಾ ಆಗಿ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದರು. ಈಕೆ ನಟಿಸಿದ್ದು ಪೋಷಕ ಪಾತ್ರಗಳಲ್ಲಾದರೂ, ತನ್ನ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದಿದ್ದರೂ ಎಂಬುದಕ್ಕೆ ಅನುಬಂಧ ಅವಾರ್ಡ್ಸ್‌ನಲ್ಲಿ ಪಡೆದ 'ಬೆಸ್ಟ್ ಸಹೋದರಿ' ಪ್ರಶಸ್ತಿ ಸಾಕ್ಷಿ.
ಪಾತ್ರಕ್ಕೆ ವಿದಾಯ ಹೇಳಿದ್ದರು
ಸೀಮಾ ಆಗಿ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದ ಕಾವೇರಿ ಬಾಗಲಕೋಟೆ ಅದ್ಭುತ ನಟನೆಯಿಂದ ಗುರುತಿಸಿಕೊಂಡಿದ್ದರು. ಆದರೆ ವೈಯಕ್ತಿಕ ಕಾರಣಾಂತರಗಳಿಂದ ಆಕೆ ಧಾರಾವಾಹಿಯಿಂದ ಅರ್ಧಕ್ಕೆ ಹೊರಬಂದಿದ್ದರು. ಧಾರಾವಾಹಿಯಿಂದ ಹೊರಬಂದ ಬಳಿಕ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಕಾವೇರಿ ಮತ್ತೆ ಬಣ್ಣದ ಲೋಕದ ನಂಟು ಬೆಳೆಸಿಕೊಳ್ಳುತ್ತಾರಾ? ಅನ್ನೋದು ಸದ್ಯಕ್ಕೆ ಕುತೂಹಲ.


Click it and Unblock the Notifications











