ಸೋನು ನಿಗಮ್‌ನ ಬ್ಯಾನ್ ಮಾಡಿದರೆ ಕನ್ನಡ ಚಿತ್ರರಂಗಕ್ಕೆ ನಷ್ಟ - ಗಿಣಿರಾಮ ನಟಿ ನಯನಾ ನಾಗರಾಜ್ ..!
ಕರುನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ. ಸಾರ್ವಭೌಮರು ಯಾವಾಗಲೂ ಕೊಡುಗೈ ದಾನಿಗಳಾಗಿರುತ್ತಾರೆಯೇ ಹೊರತು ಎಂದೂ ಯಾರ ಬಳಿಯಲ್ಲಿಯೂ ದೈನೇಸಿಯಾಗಿ ಕೈಚಾಚುವುದಿಲ್ಲ. ಆದರೆ ಇದನ್ನು ಅರಿಯದ ಕೆಲವು ಉತ್ತರ ಭಾರತದ ಕ್ರೀಮಿಗಳು ಕನ್ನಡಿಗರನ್ನು ಕೆಣುಕುತ್ತಾನೇ ಬರುತ್ತಿದ್ದಾರೆ. ತುತ್ತು ಅನ್ನದ ಹುಡುಕಾಟದಲ್ಲಿ ಅದೆಲ್ಲಿಂದಲೋ ಇಲ್ಲಿ ಬಂದು ಕನ್ನಡ ಮತ್ತು ಕರುನಾಡನ್ನು ಜರಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ನಿಯತ್ತು ಎಂತಹದ್ದು ಎನ್ನುವುದನ್ನೂ ತೋರಿಸುತ್ತಿದ್ದಾರೆ.
ಕೇವಲ ಜನಸಾಮಾನ್ಯರು ಮಾತ್ರವಲ್ಲ.ಇಲ್ಲಿ ಬಂದು ಕೆಲಸ ಮಾಡಿ, ಕನ್ನಡದ ಅನ್ನವನ್ನು ತಿಂದು, ಹಣ ಗಳಿಸುವ ಪಕ್ಕದ ಮನೆಯ ಅನೇಕ ಸೆಲೆಬ್ರಿಟಿಗಳು ಕೂಡ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಆಗಾಗ ಮಾಡುತ್ತಲೇ ಇರುತ್ತಾರೆ. ಆದರೂ ಕೂಡ ನಮ್ಮಲ್ಲಿನ ಕೆಲವರು ಅವಮಾನ ಮಾಡಿದವರನ್ನೇ ಕರೆದು ಸನ್ಮಾನ ಮಾಡುತ್ತಾರೆ. ಅವರೇ ಶ್ರೇಷ್ಠರು ಎನ್ನುವಂತೆ ಮಾತುಗಳನ್ನಾಡುತ್ತಾರೆ.ಉದಾಹರಣೆಗೆ ಗಿಣಿರಾಮ ಧಾರಾವಾಹಿಯ ನಯನಾ ನಾಗರಾಜ್.

ಹೌದು, ಎಲ್ಲರಿಗೆ ಗೊತ್ತಿರುವಂತೆ ಕರುನಾಡಿನೆಲ್ಲೆಡೆ ಕನ್ನಡ ಮತ್ತು ಕನ್ನಡಿಗರನ್ನು ಕಡೆಗಣಿಸಿದ್ದಕ್ಕೆ ಸೋನು ನಿಗಮ್ ವಿರುದ್ಧ ಆಕ್ರೋಶದ ಅಲೆ ಎದ್ದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಾವು ಇನ್ಮುಂದೆ ಸೋನು ನಿಗಂ ಅವರ ಮುಂದೆ ಕೈ ಚಾಚುವುದಿಲ್ಲ, ಕನ್ನಡದ ಹಾಡು ಹಾಡಿ ಎಂದು ಕೇಳುವುದಿಲ್ಲ ಎಂದು ಹೇಳಿದೆ.
ಕನ್ನಡ ಚಿತ್ರರಂಗ ಸೋನು ನಿಗಂ ಅವರನ್ನು ಬಳಿಸಿಕೊಳ್ಳದಿರಲು ನಿರ್ಧಾರ ಮಾಡಿದ ಬೆನ್ನಲ್ಲೇ ಸೋನು ನಿಗಂ ಕನ್ನಡಿಗರಲ್ಲಿ ಕ್ಷಮೆಯನ್ನು ಕೂಡ ಕೇಳಿದ್ದಾರೆ. ಆದರೂ ಕೂಡ ಸೋನು ನಿಗಮ್ ವಿರುದ್ಧ ಆಕ್ರೋಶ ಇನ್ನು ಕಡಿಮೆಯಾಗಿಲ್ಲ.
ಆದರೆ ಇಷ್ಟೆಲ್ಲಾ ಆದರೂ ಕೂಡ ಕೆಲವರು ಸೋನು ನಿಗಮ್ ಅವರ ನಡೆ ಮತ್ತು ನುಡಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕನ್ನಡದ ಚಿತ್ರಕ್ಕೆ ಸೋನು ಕಂಠ ಕುಣಿಯದಿದ್ದರೆ ಅದು ಕನ್ನಡ ಚಿತ್ರರಂಗಕ್ಕಾದ ನಷ್ಟವೇ ಹೊರತು ಸೋನು ನಿಗಂಗಾದ ನಷ್ಟವಲ್ಲ ಎನ್ನುವ ವಾದ ಮಾಡುತ್ತಿದ್ದಾರೆ. ದುರಂತ ಅಂದರೆ ಈ ಸಾಲಿಗೆ ಗಿಣಿರಾಮ ನಾಯಕಿ ನಯನ ನಾಗರಾಜ್ ಕೂಡ ಸೇರಿಕೊಂಡಿದ್ದಾರೆ. ಈ ಮೂಲಕ ಅಸಂಖ್ಯಾತ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಹೌದು, ಹಲವು ವಾದ ವಿವಾದಗಳ ನಂತರ ನಿನ್ನೆ ಸೋನು ನಿಗಂ ಕೊನೆಗೂ ಕನ್ನಡಿಗರಲ್ಲಿ ಕ್ಷಮೆಯನ್ನು ಕೇಳಿದ್ದರು. ಸಾರಿ ಕರ್ನಾಟಕ ನಿಮ್ಮ ಮೇಲಿರುವ ನನ್ನ ಪ್ರೀತಿ ನನ್ನ ಅಹಂಕಾರಕ್ಕಿಂತ ದೊಡ್ಡದು ಎಂದು ಹೇಳಿದ್ದರು. ನಿಮ್ಮನ್ನು ನಾನು ಸದಾ ಪ್ರೀತಿಸುತ್ತೇನೆ ಎಂದು ಕೂಡ ಸೋನು ನಿಗಂ ಹೇಳಿದ್ದರು.
ಇದಕ್ಕೆ ಹಲವಾರು ಅಭಿಪ್ರಾಯಗಳು ಸದ್ಯ ವ್ಯಕ್ತವಾಗಿದ್ದು, ಗಿಣಿರಾಮ ಧಾರಾವಾಹಿಯ ನಟಿ ನಯನಾ ನಾಗರಾಜ್ ಮಾಡಿರುವ ಕಾಮೆಂಟ್ ಅನೇಕರ ಕಣ್ಣು ಕೆಂಪಾಗಿಸಿದೆ.ನಯನಾ ನಾಗರಾಜ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಯಾಕೆಂದರೆ ಸೋನು ನಿಗಮ್ ನಿನ್ನೆ ಹಂಚಿಕೊಂಡ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ''ನಯನ ನಾಗರಾಜ್, ಲವ್ ಯೂ ನಿಮ್ಮನ್ನು ಬ್ಯಾನ್ ಮಾಡಿದರೆ ನಷ್ಟ ಆಗುವುದು ಕನ್ನಡ ಚಿತ್ರರಂಗಕ್ಕೆ'' ಎಂದು ಹೇಳಿದ್ದಾರೆ.
ಸಹಜವಾಗಿ ನಯನ ನಾಗರಾಜ್ ಅವರ ಈ ಅಭಿಪ್ರಾಯ ಹಲವರನ್ನು ಕೆರಳಿಸಿದೆ. ಹೀಗಾಗಿಯೇ ನಯನ ನಾಗರಾಜ್ ಅವರ ಕಾಮೆಂಟ್‌ಗಳಿಗೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವ ಅನೇಕರು ನಯನಾಗೆ ತಪರಾಕಿ ಹಾಕುತ್ತಿದ್ದಾರೆ.
ಹಾಗಂಥ ನಯನಾ ನಾಗರಾಜ್ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿಲ್ಲ. ಬದಲಿಗೆ ತಮ್ಮ ಹೇಳಿಕೆಯನ್ನು ನಯನಾ ನಾಗರಾಜ್ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ನಿಜವಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ಸೋನು ನಿಗಮ್ ಅವರಿಗಿಂತ ಉತ್ತಮ ಗಾಯಕರು ಇಲ್ವಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ನಯನಾ ಸೋನು ನಿಗಂ ತರಹ ಬೇರೆಯವರು ಹಾಡುಗಳನ್ನು ಹಾಡಲಾರರು ಎಂದಿದ್ದಾರೆ. ನೀವು ಅದರಲ್ಲಿ ಪರಿಣಿತರಾಗಿರಬಹುದು ವಿಷಯವನ್ನು ಬೇರೆ ಕಡೆ ತಿರುಗಿಸಬೇಡಿ ಎಂದಿದ್ದಾರೆ.
ಇನ್ನೂ, ಪಹಲ್ಗಾಮ್‌ನಲ್ಲಿ ನಡೆದ ಘಟನೆಗೆ ಕನ್ನಡ ಭಾಷೆ ಕಾರಣ ಅಂತ ಹೇಳಿಕೆ ಕೊಟ್ಟಿದ್ದು ನಿಮ್ಮ ಪ್ರಕಾರ ಸರೀನಾ ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡಿರುವ ನಯನಾ ನಾಗರಾಜ್, ಅವರ ಹೇಳಿಕೆಯನ್ನು ದೊಡ್ಡವರೇ ಅರ್ಥ ಮಾಡಿಕೊಂಡಿಲ್ಲ ಇನ್ನು ನೀವು ಅರ್ಥ ಮಾಡಿಕೊಳ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅವರ ಹೇಳಿಕೆಗಳನ್ನು ಸರಿಯಾಗಿ ಗಮನಿಸಿ ಅಲ್ಲಿ ಕೆಲವೊಂದು ಪದಗಳು ಕಾಣೆಯಾಗಿವೆ, ಅವರಾಡಿದ ಮಾತು ತಪ್ಪು ನಿಜಾ ಆದರೆ ಅವರು ಹೇಳಿದ ಅರ್ಥ ಬೇರೆ ಎಂದು ನಯನಾ ನಾಗರಾಜ್ ಹೇಳಿದ್ದಾರೆ.



Click it and Unblock the Notifications











