Gowri shankara: ಗಯ್ಯಾಳಿ ಅತ್ತೆ ಹುಟ್ಟಡಗಿಸಲು 'ಜೋಗಿ' ಮನೆಗೆ ಗೌರಿಯೇ ಸರಿ: ಫ್ಯಾನ್ಸ್ ಸಲಹೆ ಏನು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಗೌರಿ ಶಂಕರ' ಧಾರಾವಾಹಿ ಮೂಡಿ ಬರುತ್ತಿದೆ. ಆರಂಭದಲ್ಲಿ ಗೌರಿಯಾಗಿ ಕೌಸ್ತುಭ ಮಣಿ ಕಾಣಿಸಿಕೊಂಡಿದ್ದರು. ಮದುವೆಯ ತನಕ ಆಕೆಯ ನಟಿಸಿದ್ದರು. ಆದರೆ ಕಾರಣಾಂತರಗಳಿಂದ ಕೌಸ್ತುಭ ಮಣಿ ಬದಲಾಗಿದ್ದು, ಆ ಜಾಗವನ್ನು ದಿವ್ಯಾ ತುಂಬುತ್ತಿದ್ದಾರೆ.
ಜೋಗಿ ಮನೆಯಲ್ಲಿ ಅತ್ತೆಯಾಗಿ ಸ್ಪಂದನಾ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಗಯ್ಯಾಳಿ ಅತ್ತೆ ಎಂದರೆ ಹೇಗಿರುತ್ತಾರೆ? ಎಂದು ಯಾರಾದರೂ ನೋಡಬೇಕು ಎಂದಾದರೇ ಇವರನ್ನೇ ಉದಾಹರಣೆಯಾಗಿ ತೋರಿಸಬಹುದು. ಸೊಸೆ ಎಂದರೆ ತಾನು ಹೇಳಿದ್ದನ್ನಷ್ಟೇ ಪಾಲಿಸಬೇಕು, ಗಂಡನ ಸೇವೆಗಷ್ಟೇ ಅವಳ ಜೀವನ ಸೀಮಿತವಾಗಬೇಕು ಎಂಬುದನ್ನೇ ನಡೆಸಿಕೊಂಡು ಬಂದಿದ್ದಾಳೆ. ಈಗ ಸೊಸೆ ಮೇಲೂ ಅದೇ ದಬ್ಬಾಳಿಕೆ ನಡೆಯುತ್ತಿದೆ. ಒಮ್ಮೆ ತಿರುಗಿ ಬಿದ್ದರೆ ಜೋಗಿ ಮನೆಯ ಅತ್ತೆಯ ಆರ್ಭಟ ಖಂಡಿತ ನಿಲ್ಲಲಿದೆ.

ಸೊಸೆ ಮೇಲೆ ಅತ್ತೆಯ ಸವಾರಿ
ಜೋಗಿ ಮನೆಯಲ್ಲಿ ಸಿಕ್ಕಾಪಟ್ಟೆ ಜೋರು ಅತ್ತೆ ಇದ್ದಾಳೆ. ಸೊಸೆ ಬಂದಿರುವುದೇ ನಾನು ಸವಾರಿ ಮಾಡುವುದಕ್ಕೆ ಎಂಬಂತೆ ಭಾವಿಸಿದ್ದಾಳೆ. ಹೀಗಾಗಿ ಸಣ್ಣ ಸಣ್ಣ ವಿಚಾರವನ್ನು ಇಟ್ಟುಕೊಂಡು ಸೊಸೆಯ ಮೇಲೆ ಸವಾರಿ ಮಾಡಲು ಹೊರಟಿದ್ದಾಳೆ. ಈಗ ಅಡುಗೆ ಮಾಡುವ ವಿಚಾರಕ್ಕೆ ಸೊಸೆಯನ್ನು ಪರೀಕ್ಷೆ ಮಾಡಲು ಮುಂದಾಗಿದ್ದಾಳೆ. ಜೋಗಿ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುವಂತ ಅಡುಗೆ ಮಾಡಬೇಕೆಂದು ಆಜ್ಞೆ ಮಾಡಿದ್ದಾಳೆ.
ಎಲ್ಲರಿಂದ ನಿಂದಿಸಬೇಕೆಂಬ ಅತ್ತೆಯ ಪ್ಲ್ಯಾನ್
ಗೌರಿ ಎಲ್ಲರಿಂದ ಬೈಸಿಕೊಳ್ಳಬೇಕೆಂಬುದೇ ಅತ್ತೆಯ ಆಸೆ. ಮೊದಲೇ ಗೌರಿಗೆ ಇಷ್ಟವಿಲ್ಲದೇ ಶಂಕರನಿಂದ ತಾಳಿ ಕಟ್ಟಿಸಿಕೊಂಡಿದ್ದಾಳೆ. ಗಂಡನ ಮನೆಯಲ್ಲಿ ಸುಖವಾಗಿರದ ಗೌರಿ, ಮದುವೆಯಾಗಿದ್ದೀನಿ ಅನ್ನೋ ಒಂದೇ ಕಾರಣಕ್ಕೆ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ. ಎಲ್ಲದನ್ನು ಅಡ್ಜೆಸ್ಟ್ ಮಾಡಿಕೊಳ್ಳುತ್ತಿದ್ದಾಳೆ. ಅತ್ತೆ ಮಾಡಿದ ಎಲ್ಲಾ ಕಿತಾಪತಿಗೂ, ಅಧಿಕಾರಕ್ಕೂ ಎದುರಾಡದೇ ಮುನ್ನಡೆಯುತ್ತಿದ್ದಾಳೆ. ಇದರ ನಡುವೆ ಅತ್ತೆ ಹಾಕಿದ ಸವಾಲಿನಲ್ಲೂ ಗೆದ್ದಿದ್ದಾಳೆ ಗೌರಿ. ರುಚಿ ರುಚಿಯಾದ ಅಡುಗೆ ಮಾಡಿ, ಎಲ್ಲರ ನಾಲಿಗೆಗೂ ರುಚಿ ಹತ್ತಿಸಿದ್ದಾಳೆ. ಈ ಮೂಲಕ ಗಂಡನ ಮನಸ್ಸು, ಮಾವನ ಮನಸ್ಸು ಗೆದ್ದಿದ್ದು, ಅತ್ತೆಯ ಕೊಂಕಿಗೆ ಫುಲ್ ಸ್ಟಾಪ್ ಇಟ್ಟಿದ್ದಾಳೆ.

ಅತ್ತೆಗೆ ಎದುರೇಟು ನೀಡುತ್ತಿರುವ ಸೊಸೆ
ಅತ್ತೆ ಸಮಯ ಸಿಕ್ಕಿದರೆ ಸಾಕು ಸೊಸೆಯ ದರ್ಪ ತೋರಿಸುತ್ತಿದ್ದಳು. ಗೌರಿ ಕೂಡ ಎಷ್ಟು ಸಾಧ್ಯವೋ ಅಷ್ಟು ಸಹಿಸಿಕೊಂಡಳು. ಅತ್ತೆ ಹೇಳಿದ್ದಕ್ಕೆಲ್ಲಾ ಕುಣಿದಳು. ಆದರೆ ಹೆಸರು ಬದಲಾಯಿಸಬೇಕು ಎಂದಾಗ ಗೌರಿ ಜೋರು ಧ್ವನಿಯಲ್ಲಿ ಖಂಡಿಸಿದಳು. ಅಡುಗೆ ನೀನೆ ಮಾಡಬೇಕು ಎಂದಾಗ ಕಾಲ ಬದಲಾಗಿದೆ. ಗಂಡ- ಹೆಂಡತಿ ಇಬ್ಬರು ಕೆಲಸವನ್ನು ಹಂಚಿಕೊಳ್ಳಬಹುದು ಎಂದಳು. ಈ ಮಾತುಗಳು ಅತ್ತೆಯ ಕೋಪ ಹೆಚ್ಚಿಸಿತ್ತು.
ನೆಟ್ಟಿಗರಿಂದ ಸೊಸೆ ಗೌರಿಗೆ ಬೆಂಬಲ
ಈ ಧಾರಾವಾಹಿ ಹಳ್ಳಿ ಭಾಷೆಯಲ್ಲಿಯೇ ಮೂಡಿ ಬರುತ್ತಿದ್ದು, ಗೌರಿ, ಜೋಗಿ ಮನೆಗೆ ಸೊಸೆಯಾದರೆ, ಜೋಗಿ ಮನೆಯ ಮಗಳು ಗೌರಿ ಮನೆಗೆ ಸೊಸೆಯಾಗಿ ಹೋಗಿದ್ದಾಳೆ. ಆದರೆ ಗೌರಿ ಮನೆಯಲ್ಲಿ ಐಶ್ವರ್ಯಾ ಯಾವಾಗಲೂ ಅಹಂಕಾರದಿಂದಾನೇ ನಡೆದುಕೊಳ್ಳುತ್ತಾಳೆ. ಇದಕ್ಕೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಮಗಳಿಗೆ ಸರಿಯಾದ ಬುದ್ದಿ ಕಲಿಸುವುದಕ್ಕೆ ಆಗಲ್ಲ. ಸೊಸೆ ಮೇಲೆ ಸವಾರಿ ಮಾಡ್ತೀಯಾ? ಗೌರಿ ನೀನು ಇನ್ನಷ್ಟು ಧೈರ್ಯವಂತಳಾಗಬೇಕು. ಇಂಥ ಅತ್ತೆಯ ಹುಟ್ಟಡಗಿಸಬೇಕು ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ಈ ಮೂಲಕ ಗೌರಿಗೆ ಬೆಂಬಲ ನೀಡುತ್ತಿದ್ದಾರೆ.


Click it and Unblock the Notifications











