ಧಾರಾವಾಹಿಯಲ್ಲಿ ವಿಲನ್ ನೋಡಿ ಕಟಕಟಕಟ ಅಂತ ಹಲ್ಲು ಕಡಿದು ಟಿವಿಗೆ ತಿವಿದು ಶಾಪ ಹಾಕಿದ ಅಜ್ಜಿ
ಸಿನಿಮಾ, ನಾಟಕ, ಧಾರಾವಾಹಿ ನೋಡುಗರ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಅದೆಲ್ಲಾ ನಟನೆ ಎಂದು ಗೊತ್ತಿದ್ದರೂ ಭಾವನಾತ್ಮಕವಾಗಿ ನೋಡುಗರನ್ನು ಕಟ್ಟಿಹಾಕಿಬಿಡುತ್ತದೆ. ಸಿನಿಮಾ ನೋಡಿ ಅಳುವುದು, ಸಂಭ್ರಮಿಸಿವುದು, ಮೈಮೇಲೆ ದೇವರು ಬಂದಂತೆ ಆಡುವುದನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಕೆಲವರು ಸಿನಿಮಾ, ಧಾರಾವಾಹಿ ನೋಡ್ತಾ ಎಷ್ಟು ಆಳಕ್ಕೆ ಇಳಿದುಬಿಡ್ತಾರೆ ಅಂದ್ರೆ ಅದು ನಮ್ಮದೇ ಕಥೆ ಎಂದು ಭಾವಿಸಿಬಿಡುತ್ತಾರೆ.
ಖಳನಟರನ್ನು ನೋಡಿ ಇವತ್ತಿಗೂ ಶಾಪ ಹಾಕುವವರು ಇದ್ದಾರೆ. ವಜ್ರಮುನಿ, ಸುಧೀರ್, ತೂಗುದೀಪ್ ಶ್ರೀನಿವಾಸ್ ಇವರೆಲ್ಲಾ ನಿಜ ಜೀವನದಲ್ಲಿ ಬಹಳ ಸೌಮ್ಯ ಸ್ವಭಾವದವರು. ಆದರೆ ತೆರೆಮೇಲೆ ಮಾಡುತ್ತಿದ್ದ ನೆಗೆಟಿವ್ ಪಾತ್ರಗಳಿಂದ ನೋಡುಗರು ಅವರನ್ನು ವಿಲನ್ ಎಂಏ ಭಾವಿಸಿಬಿಡುತ್ತಿದ್ದರು. ಇದೇ ರೀತಿ ಅಜ್ಜಿ ಒಬ್ಬರೂ ಮನೆಯಲ್ಲಿ ಧಾರಾವಾಹಿ ನೋಡುತ್ತಾ ಗರಂ ಆಗಿರುವ ವೀಡಿಯೋ ವೈರಲ್ ಆಗ್ತಿದೆ. ಟಿವಿ ಮುಂದೆ ನಿಂತು ಶಾಪ ಹಾಕಿದ್ದಾರೆ, ಪಾತ್ರಧಾರಿಯನ್ನು ನೋಡಿ ಮುಖಕ್ಕೆ ತಿವಿಯುವ ಪ್ರಯತ್ನ ಮಾಡಿದ್ದಾರೆ. ಆ ವೀಡಿಯೋ ವೈರಲ್ ಆಗ್ತಿದೆ.

ಟಿವಿಯಲ್ಲಿ ರಾಮಾಯಣ ಧಾರಾವಾಹಿಯನ್ನು ಅಜ್ಜಿ ನೋಡುತ್ತಿರುವಂತೆ ಕಾಣ್ತಿದೆ. ರಾಮನನ್ನು ವನವಾಸಕ್ಕೆ ಕಳುಹಿಸಿ ತನ್ನ ಮಗ ಭರತನಿಗೆ ಪಟ್ಟಾಭಿಷೇಕ ಮಾಡಲು ಕೈಕೇಯಿ ಯತ್ನಿಸುವ ಸನ್ನಿವೇಶದಂತೆ ಕಾಣುತ್ತಿದೆ. ಧಾರಾವಾಹಿ ನೋಡ್ತಾ ನೋಡ್ತಾ ಮುಗ್ಧ ಮನಸ್ಸಿನ ಅಜ್ಜಿ ಟಿವಿ ಬಳಿ ಹೋಗಿದ್ದಾರೆ. ಕೈಕೇಯಿ ಪಾತ್ರಧಾರಿಗೆ ಶಾಪ ಹಾಕುವುದನ್ನು ನೋಡಬಹುದು. ಪಾತ್ರಧಾರಿಗೆ ತಿವಿದಂತೆ ಟಿವಿಗೆ ತಿವಿಯುವುದನ್ನು ಗಮನಿಸಬಹುದು. ವೀಡಿಯೋ ಎಲ್ಲರ ಗಮನ ಸೆಳೆದಿದೆ.
ಎಷ್ಟು ಮುಗ್ಧ ಅಜ್ಜಿ. ನಮ್ಮ ಮನೆಯಲ್ಲಿ ನಮ್ಮ ಅಜ್ಜಿ ಕೂಡ ಹೀಗೆ ಸಿನಿಮಾ, ಧಾರಾವಾಹಿಯ ವಿಲನ್‌ಗಳನ್ನು ನೋಡಿ ಶಾಪ ಹಾಕ್ತಾರೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಅಜ್ಜಿ ತಮ್ಮದೇ ಮನೆ ಜಗಳ ಎನ್ನುವಂತೆ ಗಲಾಟೆ ಮಾಡುತ್ತಿದ್ದಾರೆ" ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಅಬ್ಬಬ್ಬಾ ಧಾರಾವಾಹಿ ನೋಡುಗರ ಮೇಲೆ ಇಷ್ಟರಮಟ್ಟಿಗೆ ಪ್ರಭಾವ ಬೀರುತ್ತಿದ್ಯಾ? ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ "ಕೊನೆಯ ತಲೆಮಾರು.. ಪ್ರಾಮಾಣಿಕ ತಲೆಮಾರು" ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕದಲ್ಲೇ ಈ ಸನ್ನಿವೇಶ ಕಂಡುಬಂದಿದೆ. ಅಜ್ಜಿ ಕನ್ನಡದಲ್ಲಿ ಮಾತನಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆದರೆ ಯಾವ ವಾಹಿನಿ, ಯಾವ ಧಾರಾವಾಹಿ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ.


Click it and Unblock the Notifications











