ಬಿಗ್ ಬಾಸ್ ಹಂಸ 'ಹುಚ್ಚ' ಸಿನಿಮಾಗೆ ನಾಯಕಿಯಾಗಲು ಆಡಿಷನ್ ಕೊಟ್ಟಿದ್ದ ವಿಷಯ ಗೊತ್ತೇ?
ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ನಟಿ ಹಂಸ ಪ್ರತಾಪ್. ನಟಿ ಹಂಸ ಎಂದರೆ ಈಗ ಕಿರುತೆರೆ ಪ್ರೇಕ್ಷಕರಿಗಂತೂ ಚೆನ್ನಾಗಿ ಪರಿಚಯವಿದೆ. ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡ ನಟಿ ಹಂಸ ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಸೀಸನ್ ಹನ್ನೊಂದರಲ್ಲಿ ಕೆಲ ದಿನಗಳ ಕಾಲ ಇದ್ದ ಹಂಸ, ಡಬಲ್ ಎಲಿಮಿನೇಷನ್ ಇದ್ದ ವಾರ ಒಂದರಲ್ಲಿ ಎಲಿಮಿನೇಟ್ ಆಗಿ ಬಿಗ್ ಮನೆಯಿಂದ ಹೊರ ನಡೆದರು. ತಾವು ಇದ್ದಿದ್ದು ಕೆಲವೇ ದಿನಗಳಾದರೂ ಸಾಕಷ್ಟು ಹೆಸರು ಮಾಡಿರುವ ನಟಿ ಹಂಸ ಪ್ರತಾಪ್ ಈಗ ಹೊಸ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗಷ್ಟೇ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಖಳನಾಯಕಿ ರಾಜಿ ಆಲಿಯಾಸ್ ರಾಜೇಶ್ವರಿಯ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ನಟಿ ಹಂಸ ಪ್ರತಾಪ್ ಬಿಗ್ ಬಾಸ್ ನಂತರ ಹೆಚ್ಚಿನ ಹೆಸರು ಮಾಡಿದ್ದಾರೆ. ಕಳೆದೊಂದು ದಶಕದಿಂದಲೂ ಕಿರುತೆರೆಯಲ್ಲಿರುವ ನಟಿ ಹಂಸ ಪ್ರತಾಪ್, ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ' ರಿಯಾಲಿಟಿ ಶೋ ನಲ್ಲಿಯೂ ತಮ್ಮ ಗಂಡ ಪ್ರತಾಪ್ ನೊಂದಿಗೆ ಕಾಣಿಸಿಕೊಂಡಿದ್ದರು.

'ಅಮ್ಮ', 'ಸೈಕಿಕ್', 'ಅಂಗುಲಿಮಾಲಾ', 'ಡ್ರಾಮ' ಮುಂತಾದ ಸಿನಿಮಾಗಳ ಮೂಲಕ ತಮ್ಮದೇ ಆದ ಫ್ಯಾನ್ ಬೇಸ್ ಪಡೆದಿರುವ ನಟಿ ಹಂಸ ಕನ್ನಡವಷ್ಟೇ ಅಲ್ಲದೆ ಬಹುಭಾಷಾ ನಟಿಯೂ ಹೌದು. ಬಿಗ್ ಬಾಸ್ ಸೀಸನ್ ಹನ್ನೊಂದರಲ್ಲಿ ಭಾಗವಹಿಸಿ ಬಿಗ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ನಟಿ ಹಂಸ ಪ್ರತಾಪ್ ಗೆ ಹಲವಾರು ಸಿನಿಮಾಗಳ ಅವಕಾಶಗಳು ಬರುತ್ತಿವೆಯಂತೆ.
ಅದೇ ರೀತಿ ಈಗೊಂದು ಬಿಗ್ ಅವಕಾಶ ದೊರಕಿದ್ದು, ನಟ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಅವರ ಹೊಸ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಹಂಸ ಪ್ರತಾಪ್. ಈ ಹೊಸ ಸಿನಿಮಾಗೆ ಇನ್ನು ಹೆಸರಿಟ್ಟಿಲ್ಲವಾದರೂ ಪ್ರಿಪ್ರೊಡಕ್ಷನ್ ಕೆಲಸಗಳು ಬಹಳ ಭರದಿಂದ ಸಾಗುತ್ತಿವೆ. ನಟಿ ಹಂಸ ಅವರಿಗೆ ಪ್ರಮುಖ ಪಾತ್ರ ಒಂದು ಸಿಕ್ಕಿದೆಯಂತೆ. ನಟ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯ ಸುದೀಪ್ ಅವರೇ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ಸುದೀಪ್ ಅವರ ಸೋದರಳಿಯ ಸಂಚಿತ್ ಅವರು ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಬಹಳ ಸಂತಸದಿಂದ ಮಾತನಾಡಿರುವ ನಟಿ ಹಂಸ ಪ್ರತಾಪ್ "ನಾನು ನಟ ಕಿಚ್ಚ ಸುದೀಪ್ ಅವರ ಹುಚ್ಚ ಸಿನಿಮಾಗೆ ನಾಯಕ ನಟಿಯಾಗಿ ಕಾಣಿಸಿಕೊಳ್ಳಲು ಆಡಿಶನ್ ನೀಡಿದ್ದೆ. ಆದರೆ ಸೆಲೆಕ್ಟ್ ಆಗಿರಲಿಲ್ಲ. ನಂತರ ಸುದೀಪ್ ಅವರದ್ದೇ 'ಧಮ್' ಸಿನಿಮಾದಲ್ಲಿ ಅವರ ತಂಗಿಯ ಪಾತ್ರ ಮಾಡಿದ್ದೆ. ಆ ಪಾತ್ರ ಹಾಗೂ ಸುದೀಪ್ ಅವರೊಂದಿಗೆ ನಟಿಸಿರುವ ಆ ಚಿತ್ರದ ನೆನಪುಗಳು ನನಗೆ ಈಗಲೂ ಬಹಳ ಹೆಮ್ಮೆ ಹಾಗೂ ಖುಷಿ ಕೊಡುತ್ತದೆ. ಇದೀಗ ವರ್ಷಗಳ ನಂತರ ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆಯೇ ಸುದೀಪ್ ಅವರ ಸೋದರಳಿಯನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಬಹಳ ಸಂತಸವಿದೆ. ಅದರಲ್ಲೂ ನಟ ಸಂಚಿತ್ ಅವರ ತಾಯಿ ಪಾತ್ರಕ್ಕೆ ನಾನು ಆಯ್ಕೆ ಆಗಿರುವುದರ ಬಗ್ಗೆ ಖುಷಿಯಿದೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದರು.
ಸಿನಿಮಾ ಬಗ್ಗೆ ಒಂದಷ್ಟು ಮಾತನಾಡಿರುವ ನಟಿ ಹಂಸ ಪ್ರತಾಪ್ ಈ ಸಿನಿಮಾದ ಕಥೆ ಕೇಳುತ್ತಿದ್ದಂತೆ ನನಗೆ ಬಹಳ ಇಷ್ಟವಾಯಿತು. ಕಥೆಯಿಂದ ಬಹಳ ಇಂಪ್ರೆಸ್ ಆಗಿ ಸಿನಿಮಾಗೆ ಒಪ್ಪಿಕೊಂಡೆ. ಸುಪ್ರಿಯಾನ್ವಿ ಪ್ರೊಡಕ್ಷನ್ ಜೊತೆಗೆ ಇದು ನನ್ನ ಮೊದಲ ಸಿನಿಮಾ ಆಗಿರೋದ್ರಿಂದ ಬಹಳ ಖುಷಿ ಇದೆ. ಈ ಸಿನಿಮಾ ಹಾಗೂ ನನ್ನ ಪಾತ್ರ ಇನ್ನು ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡುತ್ತದೆ ಎಂದು ನಂಬಿದ್ದೇನೆ ಎಂದಿದ್ದಾರೆ. ಮೈಸೂರು ನಗರಿಯಲ್ಲಿ ಶೂಟ್ ಆಗಲಿರುವ ಈ ಚಿತ್ರ ಬಹಳ ವಿಭಿನ್ನವಾಗಿದೆ ಎಂದು ಹಂಸ ಹೇಳಿದ್ದಾರೆ. ಚಿತ್ರದ ಹೆಸರು ಹಾಗೂ ಇನ್ನಿತರೆ ಮಾಹಿತಿಗಳು ಇನ್ನಷ್ಟೇ ಬರಬೇಕಿದೆ.


Click it and Unblock the Notifications











