ಡಿ.ಕೆ.ಶಿವಕುಮಾರ್ ಜೊತೆ ಹೆಜ್ಜೆ ಹಾಕಲಿದ್ದಾರೆ ಹಂಸಲೇಖ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಯೋಜನೆಗಾಗಿ ಪಾದಾಯಾತ್ರೆ ಮಾಡಲಿದ್ದು, ಇದಕ್ಕಾಗಿ ಜನ ಬೆಂಬಲ, ಸೆಲೆಬ್ರಿಟಿ ಬೆಂಬಲವನ್ನು ಪಡೆಯುವ ಕಾಯಕದಲ್ಲಿ ತೊಡಗಿದ್ದಾರೆ.
ಮೇಕೆದಾಟು ಪಾದಯಾತ್ರೆಗೆ ಹಲವು ಸಂಘಟನೆಗಳ ಬೆಂಬಲ ಕೋರಿರುವ ಡಿ.ಕೆ.ಶಿವಕುಮಾರ್, ಎರಡು ದಿನದ ಹಿಂದಷ್ಟೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಚಿತ್ರರಂಗದ ಬೆಂಬಲವನ್ನು ಕೋರಿದ್ದರು. ಇದೀಗ ರಿಯಾಲಿಟಿ ಶೋಗೆ ಭೇಟಿ ನೀಡಿ ಅಲ್ಲಿಯೂ ಮೇಕೆದಾಟು ಯೋಜನೆಯ ಮಹತ್ವ, ಅನುಕೂಲ, ಪಾದಯಾತ್ರೆಯ ರೂಪುರೇಷೆ ಇತರೆ ವಿಚಾರಗಳ ಬಗ್ಗೆ ಮಾತನಾಡಿ, ಬೆಂಬಲಕ್ಕೆ ಮನವಿ ಮಾಡಿದ್ದಾರೆ.
ಕನ್ನಡದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ 'ಸರಿಗಮಪ' ವೇದಿಕೆಗೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್, ಹಂಸಲೇಖ, ವಿಜಯ ಪ್ರಕಾಶ್, ಅರ್ಜುನ್ ಜನ್ಯ ಅವರುಗಳ ಮೂಲಕ ರಾಜ್ಯದ ಬೆಂಬಲವನ್ನು ಪಾದಯಾತ್ರೆಗಾಗಿ ಕೇಳಿದರು.

ಇತ್ತೀಚೆಗಷ್ಟೆ ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಅವರ 'ಯರೆಬೇವು' ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಡನೆ ವೇದಿಕೆ ಹಂಚಿಕೊಂಡಿದ್ದ ಹಂಸಲೇಖ, ವಚನ ಸಾಹಿತ್ಯ, ಡೆಮೊಕ್ರಸಿ ಹಾಗೂ ಸಿದ್ದರಾಮಯ್ಯ ಅವರ ಬಗ್ಗೆ ಮಾತಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಾರ್ಯಗಳನ್ನು ಮನಸಾರೆ ಹೊಗಳಿದ ಹಂಸಲೇಖ. ಕರ್ನಾಟಕಕ್ಕೆ ಸಿದ್ಧರಾಮಯ್ಯ ನೀಡಿದ ಕೊಡುಗೆಗಳ ಬಗ್ಗೆ ವೇದಿಕೆ ಮೇಲೆ ಮಾತಾಡಿದರು. ಮತ್ತೆ ಈ ರಾಜ್ಯಕ್ಕೆ ಸಿದ್ದರಾಮ್ಯ ಮುಖ್ಯಮಂತ್ರಿ ಆಗಬೇಕು ಅಂತ ಹಂಸಲೇಖ ಹೇಳಿದರು. ''ಈ ಧರ್ಮೋಕ್ರಸಿಯನ್ನು ಪಕ್ಕಕ್ಕೆ ಸರಿಸಿ, ಡೆಮೊಕ್ರಸಿಯನ್ನು ತಂದುಕೊಡಲಿ. ಹಾಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಾಡನ್ನು ಮತ್ತೆ ಹಾಲಾಗಿಸಲಿ'' ಎಂದು ಹಂಸಲೇಖ ಅಂದು ಹೇಳಿದ್ದರು.
ಅದೇ ವೇದಿಕೆಯಲ್ಲಿ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಹಂಸಲೇಖ ಅವರು ಜಾತಿವಾದ, ಧರ್ಮಾಂದತೆ ಬಗ್ಗೆ ಈ ಹಿಂದೆ ಆಡಿದ್ದ ಮಾತುಗಳಿಗೆ ಬೆಂಬಲ ಸೂಚಿಸಿದರು. ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಆಡಿದ್ದ ಮಾತು ಸರಿಯಾಗಿಯೇ ಇದೆ ಎಂದು ಸಹ ಸಿದ್ದರಾಮಯ್ಯ ಹೇಳಿದರು.


Click it and Unblock the Notifications











