'ಅವನು ಮತ್ತೆ ಶ್ರಾವಣಿ'ಗೆ 500ರ ಸಂಭ್ರಮ; ನಟಿ ಹರ್ಷಿತಾ ರಾಮಚಂದ್ರ ಹೇಳಿದ್ದೇನು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅವನು ಮತ್ತೆ ಶ್ರಾವಣಿ'ಯೂ ಒಂದು. ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ 'ಅವನು ಮತ್ತು ಶ್ರಾವಣಿ' ಧಾರಾವಾಹಿಯು ಯಶಸ್ವಿ 500 ಸಂಚಿಕೆ ಪೂರೈಸಿದೆ. ಸ್ಕಂದ ಅಶೋಕ್ ನಾಯಕನಾಗಿ ಅಭಿನಯಿಸಿದರೆ, ನಾಯಕಿಯಾಗಿ ಇಶಿಕಾ ಶೆಟ್ಟಿಗಾರ್ ಬಣ್ಣ ಹಚ್ಚುತ್ತಿದ್ದಾರೆ.
'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ನಾಯಕ ಅಭಿಮನ್ಯು ತಂಗಿ ಆದ್ಯಾ ಆಗಿ ನಟಿಸುತ್ತಿರುವ ಹರ್ಷಿತಾ ರಾಮಚಂದ್ರ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. 'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ನಾನು ಆದ್ಯಾ ಆಗಿ ಅಭಿನಯಿಸುತ್ತಿದ್ದೇನೆ. ಈ ಧಾರಾವಾಹಿಯು ಇದೀಗ 500 ಸಂಚಿಕೆ ಪೂರೈಸಿದೆ. ನನಗಂತೂ ತುಂಬಾ ಖುಷಿಯಾಗುತ್ತಿದೆ. ನಾನು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಹರ್ಷಿತಾ ರಾಮಚಂದ್ರ ಖುಷಿ ಹಂಚಿಕೊಂಡಿದ್ದಾರೆ.

"ಅವನು ಮತ್ತು ಶ್ರಾವಣಿ ಧಾರಾವಾಹಿಯ ಆದ್ಯಾ ಪಾತ್ರದಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತುಕೊಂಡಿದ್ದೇನೆ. ಇನ್ನು ಧಾರಾವಾಹಿಯ ತಂಡವೂ ಕೂಡಾ ಅಷ್ಟೇ! ತುಂಬಾ ಅದ್ಭುತವಾಗಿದೆ. ನಾವೆಲ್ಲರೂ ಕಲಾವಿದರು ಎನ್ನುವುದಕ್ಕಿಂತಲೂ ಒಂದೇ ಕುಟುಂಬದವರು ಎಂದು ಹೇಳಿದರೆ ತಪ್ಪಾಗಲಾರದು. ನಮ್ಮೆಲ್ಲರ ನಡುವೆ ಒಂದು ಸುಂದರವಾದ ಫ್ಯಾಮಿಲಿ ಬಾಂಡಿಂಗ್ ಇದೆ" ಎಂದು ನಟಿ ಹರ್ಷಿತಾ ರಾಮಚಂದ್ರ ಹೇಳಿದ್ದಾರೆ.
"ನಾನು ಅಭಿಮನ್ಯು ತಂಗಿ ಆದ್ಯಾ ಆಗಿ ಕಾಣಿಸಿಕೊಂಡಿದ್ದೇನೆ. ಇದು ಸೆಕೆಂಡ್ ಲೀಡ್ ಪಾತ್ರ ಹೌದು. ಆದ್ಯಾ ಪಾತ್ರದಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತುಕೊಂಡಿದ್ದೇನೆ. ಆರಂಭದಲ್ಲಿ ಭಯದಿಂದ, ಏನನ್ನೂ ಮಾತಾಡೋದಕ್ಕೆ ಧೈರ್ಯ ಇಲ್ಲದಂತ ವ್ಯಕ್ತಿಗೆ ಈಗ ಮದುವೆಯಾಗಿದೆ. ಓಡೊ ಹೋಗಿ ಆಕೆ ಮದುವೆಯಾಗಿರುತ್ತಾಳೆ. ಮದುವೆಯಾದ ಮೇಲೆ ಆಕೆ ಧೈರ್ಯವಂತೆಯಾಗಿದ್ದಾಳೆ. ಆ ತರಹದ ಪಾತ್ರ. ಎಲ್ಲಾ ಎಮೋಶನ್‌ಗಳನ್ನು ಕ್ಯಾರಿ ಮಾಡುವಂತಹ ಆದ್ಯಾ ಪಾತ್ರವನ್ನ ನಾನು ಎಂಜಾಯ್ ಮಾಡ್ಕೊಂಡು ಮಾಡ್ತಿದ್ದೀನಿ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಹರ್ಷಿತಾ ರಾಮಚಂದ್ರ ಶೇರ್ ಮಾಡಿದ್ದಾರೆ.
"ಸಪೋರ್ಟಿಂಗ್ ರೋಲ್ ಮೂಲಕ ನಟನೆಗೆ ಕಾಲಿಟ್ಟೆ. ಕನ್ನಡತಿ ಧಾರಾವಾಹಿಯಲ್ಲಿ ನಾನು ನಟಿಸಿದ್ದು ಒಂದು ಚಿಕ್ಕ ಪಾತ್ರದಲ್ಲಿ. ಒಂದೈವತ್ತು, ಅರುವತ್ತು ಎಪಿಸೋಡ್‌ಗಳು ಬಂದಂತಹ ಪಾತ್ರ. ಅಲ್ಲಿಂದ ಇಲ್ಲಿ, ಇಲ್ಲಿ ನಾನು ಸೆಕೆಂಡ್ ಲೀಡ್ ಮಾಡ್ತಿದ್ದೇನೆ. ತುಂಬಾ ಖುಷಿ ಇದೆ. ಆದ್ಯಾ ಪಾತ್ರ ಎಲ್ಲಾ ತರಹದ ಎಮೋಶನ್ಸ್ ಗಳನ್ನು ಕ್ಯಾರಿ ಮಾಡ್ತಿರೋದರಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಮುಂದೆ ಯಾವುದೇ ಒಂದು ಪ್ರಾಜೆಕ್ಟ್ ಸಿಕ್ಕಿದ್ರೂನೂ ಅದಕ್ಕೆ ನಾನು ನನ್ನ ಹಂಡ್ರೆಡ್ ಪರ್ಸೆಂಟ್ ಕೊಡ್ಬಹುದು ಎಂಬ ಕಾನ್ಫಿಡೆನ್ಸ್ ಆದ್ಯಾ ಪಾತ್ರದಿಂದ ಸಿಕ್ಕಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡಿದ ಹರ್ಷಿತಾ ರಾಮಚಂದ್ರ ಹೇಳಿಕೊಂಡಿದ್ದಾರೆ.

"ನಿರ್ದೇಶಕರು, ನಿರ್ಮಾಪಕರ ಜೊತೆಗೆ ಇಡೀ ಧಾರಾವಾಹಿ ತಂಡ, ಸಹಕಲಾವಿದರುಗಳು ನನಗೆ ಸಪೋರ್ಟ್ ಮಾಡ್ತಿದ್ದಾರೆ. ನಮ್ಮೆಲ್ಲರ ನಡುವೆ ಒಂದು ಫ್ಯಾಮಿಲಿ ಬಾಂಡಿಂಗ್ ಆಗಿದೆ. ಒಬ್ಬರನ್ನೊಬ್ಬರು ತಿದ್ದುತ್ತೀವಿ, ರೇಗಿಸ್ತೀವಿ, ಎಂಜಾಯ್ ಮಾಡ್ತೀವಿ. ಈ ತರಹದ ಟೀಂ ನಂಗೆ ಮುಂದೆ ಸಿಗುತ್ತಾ ಇಲ್ವಾ ಅಂತ ಗೊತ್ತಿಲ್ಲ. ಆದ್ಯಾ ಅನ್ನುವ ಕ್ಯಾರೆಕ್ಟರ್ ನನ್ನ ತಲೆಲಿ ಯಾವತ್ತೂ ಇದ್ದೇ ಇರುತ್ತೆ. ನಮ್ಮ ಧಾರಾವಾಹಿ ಈಗ 500 ಸಂಚಿಕೆ ಪೂರೈಸಿದೆ. ಅದು ಸ್ಟಾರ್ ಸುವರ್ಣ ವಾಹಿನಿಯಲ್ಲಿ, ಆ ಸ್ಲಾಟ್ ನಲ್ಲಿ 500 ಸಂಚಿಕೆ ಪೂರೈಸುವುದು ಚಿಕ್ಕ ಮಾತಲ್ಲ" ಎಂದು ಎನ್ನುತ್ತಾರೆ ಹರ್ಷಿತಾ.
ಹರ್ಷಿತಾ ರಾಮಚಂದ್ರ ಪೋಷಕ ಪಾತ್ರದ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಬೆಡಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಕನ್ನಡತಿ' ಯ ಮೂಲಕ ನಟನೆಯ ನಂಟು ಬೆಳೆಸಿಕೊಂಡರು ಹರ್ಷಿತಾ ರಾಮಚಂದ್ರ.
'ಕನ್ನಡತಿ' ಧಾರಾವಾಹಿಯಲ್ಲಿ ಪತ್ರಕರ್ತೆ ಪೂಜಾ ಆಗಿ ಅಭಿನಯಿಸಿದ ಹರ್ಷಿತಾ ರಾಮಚಂದ್ರ ಮೊದಲ ಧಾರಾವಾಹಿಯಲ್ಲಿಯೇ ನೆಗೆಟಿವ್ ರೋಲ್ ಗೆ ಜೀವ ತುಂಬಿದ ಹುಡುಗಿ. ಸಂಪೂರ್ಣ ನೆಗೆಟಿವ್ ರೋಲ್ ಮೂಲಕ ವೀಕ್ಷಕರ ಮನ ಸೆಳೆದ ಈಕೆ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ.
'ಗಜಾನನ ಆ್ಯಂಡ್ ಗ್ಯಾಂಗ್' ಸಿನಿಮಾದಲ್ಲಿ ಸಪೋರ್ಟಿಂಗ್ ರೋಲ್‌ನಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಕಮಾಲ್ ಮಾಡಿದ್ದಾರೆ ಹರ್ಷಿತಾ. ಇದರ ಜೊತೆಗೆ ರಕ್ಷಿತ್ ಕುಮಾರ್ ನಿರ್ದೇಶನದ ಪ್ರೇಮಕಥೆ 'ಜಂಗಲ್ ಮಂಗಲ್' ಸಿನಿಮಾದಲ್ಲಿ ಹರ್ಷಿತಾ ರಾಮಚಂದ್ರ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಆ ಮೂಲಕ ಮೊದಲ ಬಾರಿಗೆ ನಾಯಕಿಗಾಗಿ ಬೆಳ್ಳಿತೆರೆಯಲ್ಲಿ ಹರ್ಷಿತಾ ಮೋಡಿ ಮಾಡಲಿದ್ದಾರೆ.
ನಟನೆಯ ಹೊರತಾಗಿ ಹರ್ಷಿತಾ ರಾಮಚಂದ್ರ ಅವರು ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿರುವ ಹರ್ಷಿತಾ ರಾಮಚಂದ್ರ ಒಂದಷ್ಟು ಈವೆಂಟ್‌ಗಳ ನಿರೂಪಣೆಗಳನ್ನು ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ.


Click it and Unblock the Notifications











