ನಮಗೆಲ್ಲ ಇರಾನ್ ಸರ್ವೋಚ್ಛ ನಾಯಕ ಖಮೇನಿ ದೇವದೂತರಾಗಿದ್ದರು ; ಬಿಗ್ ಬಾಸ್ ಸ್ಫರ್ಧಿ ಕಣ್ಣೀರು-ಭುಗಿಲೆದ್ದ ಆಕ್ರೋಶ
ಯುದ್ದ ಶಾಂತಿ ಕದಡುವ ಕಾರ್ಮೋಡ. ಯುದ್ದಕ್ಕೆ ಮೊದಲು ಬಲಿಯಾಗುವುದೇ ಮಾನವೀಯತೆ. ಸಾವಿರಾರು ಅಮಾಯಕರು ಈ ಯುದ್ದದಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳುತ್ತವೆ. ದಶಕಗಳಿಂದ ಬೆಳೆದ ಆರ್ಥಿಕತೆ ಕ್ಷಣಮಾತ್ರದಲ್ಲಿ ಛಿದ್ರವಾಗುತ್ತೆ. ಯುದ್ದ ಕೇವಲ ಸೈನಿಕರಿಗೆ ಸೀಮಿತವಲ್ಲ. ಅದರ ಶಾಖ ಇಡೀ ಮನುಕುಲಕ್ಕೆ ತಟ್ಟುತ್ತೆ.
ಆದರೂ ಕೂಡ ಈ ಯುದ್ದೋನ್ಮಾದ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ದ ನಡೆಯುತ್ತಿದೆ. ಸಾವು ನೋವು ಆಗಳಾಗುತ್ತಿವೆ. ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿಯ ಹತ್ಯೆ ಕೂಡ ಆಗಿದೆ. ಖಮೇನಿಯ ಸಾವು ಕೇವಲ ಇರಾನ್ ನ ಬೆಂಬಲಿಗರಿಗೆ ಅಷ್ಟೇ ನೋವುಂಟು ಮಾಡಿಲ್ಲ. ಜಗದ ಬೇರೆ ಬೇರೆ ಕಡೆ ಅದರಲ್ಲಿಯೂ ಭಾರತದಲ್ಲಿ ಖಮೇನಿಯ ಸಾವಿಗೆ ಹಲವರು ಕಂಬನಿ ಮಿಡಿಯುತ್ತಿದ್ದಾರೆ. ಕೇವಲ ಜನಸಾಮಾನ್ಯರು ಮಾತ್ರವಲ್ಲ. ಸೆಲೆಬ್ರೆಟಿಗಳು ಕೂಡ ಖಮೇನಿಯ ನಿಧನದ ಸುದ್ದಿಯನ್ನು ಕೇಳಿ ವಿಚಲಿತರಾಗಿದ್ದಾರೆ. ಇರಾನ್ ನ ಸುಪ್ರೀಂ ಲೀಡರ್ ನ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ. ಉದಾಹರಣೆಗೆ ಫರ್ಹಾನ ಭಟ್.

ಹೌದು, ಫರ್ಹಾನ ಭಟ್.. ಕಾಶ್ಮೀರದ ಚೆಲುವೆ. ಹಿಂದಿ ಕಿರುತೆರೆ ಮತ್ತು ಬೆಳ್ಳಿತೆರೆಯ ಖ್ಯಾತ ಹೆಸರು. ರ್‍ಯಾಂಪ್ ಮೇಲೆ ಬೆಕ್ಕಿನ ನಡಿಗೆ ಮಾಡುತ್ತಲೇ ''ಇಷ್ಕ್ ಮೆ ಮರ್ಜಾವಾನ್'' ವೆಬ್ ಸರಣಿಯಲ್ಲಿ ಕಾಣಿಸಿಕೊಂಡ ಫರ್ಹಾನ, ಕಾಶ್ಮೀರಿ ಪಂಡಿತರ ವಲಸೆಯ ಕಥೆ ಹೊಂದಿದ್ದ ವಿಧು ವಿನೋದ್ ಚೋಪ್ರಾ ನಿರ್ದೇಶನದ ''ಶಿಖಾರಾ'' ಚಿತ್ರದಲ್ಲಿ ಕೂಡ ಮಿಂಚಿದ್ದರು. ಇನ್ನೂ ಕಳೆದ ವರ್ಷ ಸಲ್ಮಾನ್ ಖಾನ್ ಸಾರಥ್ಯದಲ್ಲಿ ನಡೆದ ''ಬಿಗ್ ಬಾಸ್''ನ 19ನೇ ಸೀಸನ್‌ನ ಮೊದಲ ರನ್ನರ್ ಅಪ್ ಈ ಫರ್ಹಾನ ಭಟ್.
ಇಂಥಾ ಫರ್ಹಾನ ಭಟ್ ಸದ್ಯ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಕಣ್ಣೀರು ಹಾಕಿದ್ದಾರೆ. ಈ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಫರ್ಹಾನ, ಅಯತೊಲ್ಲಾ ಅಲಿ ಖಮೇನಿ ಅವರದ್ದು ಮರೆಯಲಾಗದಂತಹ ವ್ಯಕ್ತಿತ್ವ, ಅವರು ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿರುತ್ತಾರೆ ಎಂದು ಹೇಳಿದ್ದಾರೆ.
ಅಲ್ಲಾ ಅವರ ತ್ಯಾಗಕ್ಕೆ ಮನ್ನಣೆ ನೀಡಿದ್ದಾನೆ, ಕಾಶ್ಮೀರದ ಜನರಿಗೆ ಖಮೇನಿ ಅವರ ಹ*ತ್ಯೆಯಿಂದ ತೀವೃ ನೋವಾಗಿದೆ ಎಂದು ಹೇಳಿರುವ ಫರ್ಹಾನಾ ಭಟ್ ಖಮೇನಿ ನಿಧನದಿಂದ ನನ್ನ ಹೃದಯ ಛಿದ್ರವಾಗಿದೆ, ನೀವು ನಂಬುವುದಿಲ್ಲ ನಾನು ಸೆಹ್ರಿಯ ನಂತರ ನಾನು ಮಲಗೇ ಇಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ನಮಾಜ್ ಮಾಡುವ ಸಮಯದಲ್ಲಿ ನನಗೆ ತುಂಬಾ ದುಃಖವಾಯಿತು, ಅನೇಕ ಜನರ ಪಾಲಿಗೆ ಅವರು ದೇವದೂತರಾಗಿದ್ದರು, ಮಾರ್ಗದರ್ಶಕರಾಗಿದ್ದರು, ರಕ್ಷಕರಾಗಿದ್ದರು ಎಂದು ಹೇಳಿರುವ ಫರ್ಹಾನ್ ನಮ್ಮೆಲ್ಲರ ಹೃದಯದಲ್ಲಿ ಅವರು ಸದಾ ಕಾಲ ಜೀವಂತವಾಗಿರುತ್ತಾರೆ ಎಂದು ಹೇಳಿದ್ದಾರೆ.

ಸದ್ಯ ಫರ್ಹಾನ ಭಟ್ ಅವರ ಹೇಳಿಕೆಗೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ. ಸಂಪೂರ್ಣ ಸತ್ಯ ತಿಳಿಯದೇ ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಕೆಲವರು ಹೇಳಿದರೆ, ಅನೇಕ ಯುವತಿಯರ ಮೇಲೆ ಕ್ರೂರವಾಗಿ ಅವರಿಂದ ಹಲ್ಲೆ ಆಗಿದೆ, ಇದು ಧರ್ಮದ ವಿಷಯ ಅಲ್ಲ, ಮಾನವೀಯೆತೆಯ ವಿಷಯ ಎಂದು ಇನ್ನು ಕೆಲವರು ಹೇಳಿದ್ದಾರೆ. ನಮ್ಮ ದೇಶ ಅಜ್ಞಾನಿಗಳಿಂದ ತುಂಬಿ ತುಳುಕುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲವರು ಫರ್ಹಾನ ಭಟ್ ಅವರನ್ನು ಹೀನಾ ಮಾನವಾಗಿ ಟ್ರೋಲ್ ಮಾಡುತ್ತಿದ್ದಾರೆ. ಹಿಂದಿ ಬಣ್ಣದ ಲೋಕದಲ್ಲಿಯೇ ಹಲವರು ಫರ್ಹಾನ ಭಟ್ ಅವರ ಈ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ.


Click it and Unblock the Notifications











