"ಸೂರ್ಯ-ಭೂಮಿ ಮದುವೆ ಆಗಿದ್ರೆ 'ಅಮೆರಿಕಾ ಅಮೆರಿಕಾ' ಸಿನಿಮಾ ಹಿಟ್ ಆಗ್ತಿರಲಿಲ್ಲ"; ನಟಿ ಹೇಮಾ ಪ್ರಭಾತ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳ ಪೈಕಿ 'ಸರಿಗಮಪ' ಕೂಡಾ ಒಂದು. ಸರಿಗಮಪ ಹೊಸ ಸೀಸನ್ ಈಗಾಗಲೇ ಶುರುವಾಗಿದ್ದು, ಈ ಬಾರಿ ವಿಶೇಷ ಅತಿಥಿಯಾಗಿ ಚಂದನವನದ ಎವರ್ ಗ್ರೀನ್ ಹೀರೊ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದರು. ಇನ್ನು ಸರಿಗಮಪ ಸ್ಪರ್ಧಿಗಳೆಲ್ಲಾ ರಮೇಶ್ ಅರವಿಂದ್ ಅವರು ನಟಿಸಿರುವಂತಹ ಸಿನಿಮಾದ ಹಾಡುಗಳನ್ನು ಆಯ್ಕೆ ಮಾಡಿಕೊಂಡು ಅವರ ಎದುರು ಹಾಡಿದ್ದರು.
ಇದೇ ವೇದಿಕೆ ಮೇಲೆ ರಮೇಶ್ ಅರವಿಂದ್ ಅವರ ಜೊತೆಗೆ ಅಭಿನಯಿಸಿರುವಂತಹ ಹೇಮಾ ಪ್ರಭಾತ್ ಅವರನ್ನು ವಿಶೇಷ ಅತಿಥಿಯಾಗಿ ಕರೆಸಿಕೊಳ್ಳಲಾಗಿತ್ತು. ಅಂದ ಹಾಗೇ ರಮೇಶ್ ಅರವಿಂದ್ ಹಾಗೂ ಹೇಮಾ ಪ್ರಭಾತ್ ಇಬ್ಬರೂ 'ಅಮೆರಿಕಾ ಅಮೆರಿಕಾ' ಸಿನಿಮಾದಲ್ಲಿ ಸೂರ್ಯ ಹಾಗೂ ಭೂಮಿ ಪಾತ್ರಧಾರಿಯಾಗಿ ನಟಿಸಿದ್ದರು.

'ಅಮೆರಿಕಾ ಅಮೆರಿಕಾ' ಸಿನಿಮಾದ ಹೆಸರು ಹೇಳಿದ ಕೂಡಲೆ ಥಟ್ಟನೇ ನೆನಪಾಗುವುದು "ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನ್ನು" ಹಾಡು. ಸರಿಗಮಪ ಸ್ಪರ್ಧಿಗಳಾದ ದೀಪಕ್ ಹಾಗೂ ಶಿವಾನಿ ಅವರು ಯಾವ ಮೋಹನ ಮುರಳಿ ಕರೆಯಿತು ಹಾಡನ್ನು ಹಾಡಿದ್ದು ಈ ಸಮಯದಲ್ಲಿ ರಮೇಶ್ ಅರವಿಂದ್ ಹಾಗೂ ಹೇಮಾ ಪ್ರಭಾತ್ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದರು.
ಹೌದು, ತ್ರಿಕೋನ ಪ್ರೇಮಕಥೆಯ ಕಥಾಹಂದರವನ್ನೊಳಗೊಂಡಿರುವ 'ಅಮೆರಿಕಾ ಅಮೆರಿಕಾ' ಸಿನಿಮಾವನ್ನು ಜನಪ್ರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದರು. ಸೂರ್ಯನಾಗಿ ರಮೇಶ್ ಅರವಿಂದ್, ಶಶಾಂಕನಾಗಿ ಅಕ್ಷಯ್ ಆನಂದ್ ಅಭಿನಯಿಸಿದರೆ, ನಾಯಕಿ ಭೂಮಿಯಾಗಿ ಹೇಮಾ ಪ್ರಭಾತ್ ಬಣ್ಣ ಹಚ್ಚಿದ್ದರು.
ಸೂರ್ಯ, ಶಶಾಂಕ್ ಹಾಗೂ ಭೂಮಿ ಚಿಕ್ಕ ವಯಸ್ಸಿನಿಂದಲೂ ಸ್ನೇಹಿತರಾಗಿರುತ್ತಾರೆ. ಶಶಾಂಕ್ ಕೆಲಸದ ನಿಮಿತ್ತ ಅಮೆರಿಕಾಕ್ಕೆ ಹೋಗುತ್ತಾನೆ. ಸೂರ್ಯ ಹಾಗೂ ಭೂಮಿ ಊರಿನಲ್ಲಿ ಜೊತೆಯಲ್ಲಿಯೇ ಕಲಿಯುತ್ತಿರುತ್ತಾರೆ. ಭೂಮಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಸೂರ್ಯ ಯಾರಿಗೂ ಕೂಡಾ ತನ್ನ ಪ್ರೀತಿಯ ವಿಚಾರವನ್ನು ತಿಳಿಸುವುದಿಲ್ಲ. ಭೂಮಿಗೂ ಕೂಡಾ ಓದೆಲ್ಲಾ ಮುಗಿದ ಬಳಿಕ ಇನ್ನೇನು ಸೂರ್ಯ ಭೂಮಿಗೆ ತನ್ನ ಪ್ರೀತಿಯನ್ನು ಹೇಳಬೇಕು ಎಂದು ಬರುತ್ತೆ ಆಗ ಮನೆಯವರು ಭೂಮಿ ಹಾಗೂ ಶಶಾಂಕ್‌ಗೆ ಮದುವೆ ನಿಶ್ಚಯ ಮಾಡುತ್ತಾರೆ. ಮದುವೆ ಬಳಿಕ ಭೂಮಿ, ಶಶಾಂಕ್ ಜೊತೆಗೆ ಅಮೆರಿಕಾಗೆ ಶಿಫ್ಟ್ ಆಗುತ್ತಾಳೆ. ಕೆಲಸದ ಸಲುವಾಗಿ ಸೂರ್ಯ ಅಮೆರಿಕಾಗೆ ಹೋದ ಸಂದರ್ಭದಲ್ಲಿ ಸೂರ್ಯ ಭೂಮಿಯನ್ನು ಪ್ರೀತಿಸುತ್ತಿದ್ದ ವಿಚಾರ ಹೊರಬರುತ್ತದೆ.
ಸಣ್ಣ ಮನ:ಸ್ತಾಪ ಬರುತ್ತದೆ. ಮುಂದೆ ಅದು ಇನ್ನೇನು ಸರಿಹೋಗಬೇಕು ಎನ್ನುವಷ್ಟರಲ್ಲಿ ಶಶಾಂಕ್ ಅಪಘಾತದಲ್ಲಿ ಸಾಯುತ್ತಾನೆ. ಶಶಾಂಕ್‌ನ ಸಾವಿನ ಬಳಿಕ ಭೂಮಿ ಏನು ಮಾಡುತ್ತಾಳೆ? ಯಾವ ನಿರ್ಧಾರ ತೆಗೆದುಕೊಳ್ಳುತ್ತಾಳೆ? ಅಮೆರಿಕಾದಿಂದ ಭಾರತಕ್ಕೆ ಬರುವುದಾದರೂ ಯಾಕೆ ಎಂಬುದು 'ಅಮೆರಿಕಾ ಅಮೆರಿಕಾ' ಸಿನಿಮಾದ ಕಥಾಹಂದರ.
'ಅಮೆರಿಕಾ ಅಮೆರಿಕಾ' ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ತುಂಬಾ ಜನ ಹೇಮಾ ಅವರಿಗೆ ಬೈದಿದ್ದರಂತೆ. ಭೂಮಿ ಸೂರ್ಯನನ್ನು ಮದುವೆಯಾಗದೇ ಇರುವುದೇ ಅವರ ಬೈಗುಳಿಗೆ ಕಾರಣವಂತೆ. ಆ ಸಮಯದಲ್ಲಿ ಏನೂ ಹೇಳದ ಹೇಮಾ ಪ್ರಭಾತ್ ನಕ್ಕು ಸುಮ್ಮನಾಗಿದ್ದರಂತೆ. ಅಂದು ಎಲ್ಲಿಯಾದರೂ ಭೂಮಿ ಸೂರ್ಯನನ್ನು ಮದುವೆಯಾಗಿರುತ್ತಿದ್ದರೆ 'ಅಮೆರಿಕಾ ಅಮೆರಿಕಾ' ಸಿನಿಮಾ ಸೂಪರ್ ಹಿಟ್ ಆಗುತ್ತಿರಲಿಲ್ಲ ಎಂದು ಸರಿಗಮಪ ಶೋವಿನಲ್ಲಿ ಹೇಳಿಕೊಂಡಿದ್ದರು.
ಇನ್ನು ಸರಿಗಮಪ ವೇದಿಕೆಯಲ್ಲಿ ನೂರು ಜನ್ಮಕೂ ಹಾಡನ್ನು ರಿಕ್ರಿಯೇಟ್ ಮಾಡಲಾಗಿತ್ತು. ರಾಜೇಶ್ ಕೃಷ್ಣನ್ ಅವರು ಬಹಳ ಸೊಗಸಾಗಿ ನೂರು ಜನ್ಮಕೂ ಹಾಡನ್ನು ಹಾಡಿದ್ದು ರಮೇಶ್ ಅರವಿಂದ್ ಹಾಗೂ ಹೇಮಾ ಪ್ರಭಾತ್ ಹೆಜ್ಜೆ ಹಾಕಿದರು. ಇದರ ಜೊತೆಗೆ ಸೂರ್ಯ ಅಂದು ಪತ್ರದಲ್ಲಿ ಪ್ರೇಯಸಿ ಹೆಸರು ಬರೆದಿರಲಿಲ್ಲ, ಇಂದು ಬರೆದುಕೊಟ್ಟಿಲ್ಲ ಎಂದು ಹೇಳಿದರು. ಆಗ ರಮೇಶ್ ಪೆನ್ನು ತೆಗೆದುಕೊಂಡು ಹೇಮಾ ಅವರ ಬೆನ್ನ ಮೇಲೆಯೇ ಕಾಗದ ಇರಿಸಿ ಪ್ರೀತಿಯಿಂದ ರಮೇಶ್ ಅರವಿಂದ್ ಎಂದು ಬರೆದರು. ಮಾತ್ರವಲ್ಲ ಸಿನಿಮಾದ ಒಂದೆರಡು ಡೈಲಾಗ್‌ಗಳನ್ನು ಹೇಳುವ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸಿದ್ದರು.


Click it and Unblock the Notifications