ಗಂಡು ಮಗುವಿನ ತಾಯಿಯಾದ 'ಹಿಟ್ಲರ್ ಕಲ್ಯಾಣ'ದ ದುರ್ಗಾ ಉರ್ಫ್ ನಂದಿನಿ ಮೂರ್ತಿ
ಕಿರುತೆರೆ ನಟಿ ನಂದಿನಿ ಮೂರ್ತಿ ಅವರು ಸಿಹಿಸುದ್ದಿಯನ್ನು ನೀಡಿದ್ದಾರೆ. ನಂದಿನಿಮೂರ್ತಿ ಅವರು ಗಂಡು ಮಗುವಿನ ತಾಯಿಯಾಗಿದ್ದಾರೆ. ಈಗಾಗಲೇ ಮುದ್ದಾದ ಹೆಣ್ಣು ಮಗುವಿನ ತಾಯಿಯಾಗಿದ್ದ ನಂದಿನಿ ಇದೀಗ ಗಂಡು ಮಗುವನ್ನು ಪಡೆದ ಖುಷಿಯಲ್ಲಿದ್ದಾರೆ. ಈ ಸಂತೋಷದ ವಿಚಾರವನ್ನು ಸ್ವತಃ ನಂದಿನಿಮೂರ್ತಿ ಅವರೇ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
"ನಮಗೆ ಗಂಡು ಮಗು ಆಗಿದೆ ಎಂದು ಹೇಳಲು ತುಂಬಾ ಖುಷಿಯಾಗುತ್ತಿದೆ. ನಿಮ್ಮ ಪ್ರೋತ್ಸಾಹ, ಪ್ರೀತಿ ಹಾಗೂ ಆಶೀರ್ವಾದಗಳಿಗೆ ಧನ್ಯವಾದಗಳು" ಎಂದು ನಂದಿನಿ ಮೂರ್ತಿ ತಮ್ಮ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಅಂದ ಹಾಗೇ ಜೀ ಕನ್ನಡ ವಾಹಿನಿಯ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ ಹಿರಿಸೊಸೆ ದುರ್ಗಾ ಪಾತ್ರದಲ್ಲಿ ನಂದಿನಿ ಮೂರ್ತಿ ನಟಿಸುತ್ತಿದ್ದರು. ತದ ನಂತರ ಆಕೆ ಗರ್ಭಿಣಿಯಾದ ಕಾರಣ ಧಾರಾವಾಹಿ ಕಥೆಯಲ್ಲಿಯೂ ಕೊಂಚ ಬದಲಾವಣೆಯನ್ನು ಮಾಡಿಕೊಳ್ಳಲಾಯಿತು. ಮೊದಲಿಗೆ ದುರ್ಗಾ ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದಾರೆ ಎಂದು ಸೃಷ್ಟಿ ಮಾಡಲಾಗಿತ್ತು. ನಂತರ ಆಕೆ ಕಿಡ್ನಾಪ್ ಆಗಿದ್ದಾಳೆ ಎಂದು ಬದಲಾಯಿಸಲಾಯಿತು. ಒಟ್ಟಿನಲ್ಲಿ ಆಮೇಲೆ ನಂದಿನಿ ಮೂರ್ತಿ ಧಾರಾವಾಹಿಯಿಂದ ಹೊರಬಂದ ಅಸಲಿ ಸತ್ಯ ಗೊತ್ತಾಯಿತು.
ಆ ಅಸಲಿ ಸತ್ಯ ಅನಾವರಣವಾದದ್ದು ಜೀ ಕುಟುಂಬ ಅವಾರ್ಡ್ಸ್ ನಲ್ಲಿ. ಕಳೆದ ವರ್ಷ ನಡೆದ ಜೀ ಕುಟುಂಬ ಅವಾರ್ಡ್ಸ್ ನಲ್ಲಿ 'ಹಿಟ್ಲರ್ ಕಲ್ಯಾಣ' ತಂಡದಿಂದ ನಂದಿನಿಮೂರ್ತಿಗೆ ಅದ್ಧೂರಿಯಾದ ಸೀಮಂತವನ್ನು ಮಾಡಿದ್ದರು. ಜೊತೆಗೆ ಇದು ನನ್ನ ಜೀವನದ ಅತ್ಯಂತ ಸುಮಧುರ ಕ್ಷಣ. ಮನಸ್ಸು ತುಂಬಿ ಬಂದಿದೆ. ಇದು ನನ್ನ ಜೀವನದಲ್ಲಿ ಯಾವಾಗಲೂ ನೆನಪಿನಲ್ಲಿ ಉಳಿಯುವಂತಹ ದಿನ ಎಂದು ಆ ದಿನವನ್ನು ನಂದಿನಿಮೂರ್ತಿ ನೆನಪಿಸಿಕೊಂಡಿದ್ದರು.

ಜೀ ಕನ್ನಡ ವಾಹಿನಿಯ 'ಚಿ.ಸೌ. ಸಾವಿತ್ರಿ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರುವಿದ್ದ ನಂದಿನಿಮೂರ್ತಿ ಮತ್ತೆ ದುರ್ಗಾಳಾಗಿ ಬಣ್ಣದ ಲೋಕಕ್ಕೆ ಮರಳಿದ್ದರು. ಖಡಕ್ ಅವತಾರದ ಮೂಲಕ ಮತ್ತೆ ಕಿರುತೆರೆಗೆ ಮರಳಿದ ನಂದಿನಿಮೂರ್ತಿ ಅವರನ್ನು ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದರು. ಏಜೆ ಎನ್ನುವ ಪರ್ಫೆಕ್ಷನಿಷ್ಟಿಗೆ ಪರ್ಫೆಕ್ಟಾಗಿರುವ ಸೊಸೆ ದುರ್ಗಾ. ಬದುಕಿನಲ್ಲಿ ಏಜೆ ಹಾಕಿಕೊಟ್ಟಿರುವ ದಾರಿ, ಮನೆಯ ಜವಾಬ್ದಾರಿ ಇವೆರಡನ್ನು ಖಡಕ್ ಆಗಿ ನಿಭಾಯಿಸುತ್ತಿದ್ದ ಹೆಣ್ಣುಮಗಳು ಈಕೆ.
ಇದೀಗ ಎರಡನೆ ಬಾರಿಗೆ ತಾಯಿಯಾಗಿರುವ ಸುದ್ದಿ ಕಿರುತೆರೆ ವೀಕ್ಷಕರಿಗೆ ಸಂತಸವನ್ನು ನೀಡಲಿದೆ. ಇನ್ನು ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿರುವ ನಂದಿನಿಮೂರ್ತಿ ಅವರು ಸಮಯ ಸಿಕ್ಕಾಗಲೆಲ್ಲಾ ತಮ್ಮ ಮಗಳೊಂದಿಗೆ ರೀಲ್ಸ್ ಮಾಡಿ ಅಪ್ ಲೋಡ್ ಮಾಡುತ್ತಿರುತ್ತಾರೆ. ನೆಟ್ಟಿಗರ ಮೆಚ್ಚುಗೆಗೂ ಪಾತ್ರರಾಗುತ್ತಿದ್ದಾರೆ. ಇದರ ಜೊತೆಗೆ ಇನ್ ಸ್ಟಾಗ್ರಾಂನಲ್ಲಿ ಆಕೆ ಬರೋಬ್ಬರಿ 102K ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.


Click it and Unblock the Notifications











