'ನಾರಿಗೊಂದು ಸೀರೆ' ಎಂದು ಮತ್ತೆ ನಿರೂಪಕಿಯಾದ 'ಹಿಟ್ಲರ್ ಕಲ್ಯಾಣ'ದ ರಜಿನಿ; ಶೋ ಬಗ್ಗೆ ಏನಂತಾರೆ?
ವಿನೂತನ ಧಾರಾವಾಹಿಗಳ ಜೊತೆಗೆ ವಿಭಿನ್ನ ರೀತಿಯ ಶೋಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯನ್ನು ಉಣಬಡಿಸುತ್ತಿರುವ ವಾಹಿನಿಗಳ ಪೈಕಿ ಸಿರಿಕನ್ನಡವೂ ಒಂದು. ಸಾಲು ಸಾಲು ಧಾರಾವಾಹಿಗಳ ಜೊತೆಗೆ ಶೋಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಿರುವ ಸಿರಿಕನ್ನಡ ವಾಹಿನಿಯ ಜನಪ್ರಿಯ ಶೋ ಗಳ 'ನಾರಿಗೊಂದು ಸೀರೆ' ಯೂ ಒಂದು.
'ನಾರಿಗೊಂದು ಸೀರೆ' ಶೋ ಇದೀಗ ಮತ್ತೆ ಶುರುವಾಗಿದ್ದು, ಅದರ ನಿರೂಪಕಿಯಾಗಿ ರಜನಿ ಕಾಣಿಸಿಕೊಂಡಿದ್ದಾರೆ ಕಿರುತೆರೆ ನಟಿ ರಜಿನಿ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ಅಂತರಾ ಆಲಿಯಾಸ್ ಪ್ರಾರ್ಥನಾ ಆಗಿ ಅಭಿನಯಿಸಿದ್ದ ನಟಿ ರಜಿನಿ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿರುವ ಬೆಡಗಿ. ತದ ನಂತರ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಹಾಗೂ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಮೋಡಿ ಮಾಡಿದ್ದರು.

ಇದೀಗ 'ನಾರಿಗೊಂದು ಸೀರೆ' ಕಾರ್ಯಕ್ರಮದ ನಿರೂಪಕಿಯಾಗಿ ಕಾಣಿಸಿಕೊಂಡಿರುವ ರಜಿನಿ ಅವರಿಗೆ ನಿರೂಪಣೆ ಕ್ಷೇತ್ರ ಹೊಸದೇನಲ್ಲ. ಈ ಹಿಂದೆ ಅಂದರೆ ಐದು ವರ್ಷದ ಮೊದಲು ಸಿರಿಕನ್ನಡ ವಾಹಿನಿಯಲ್ಲಿ ಶುರುವಾದ ನಾರಿಗೊಂದು ಸೀರೆ ಕಾರ್ಯಕ್ರಮದ ನಿರೂಪಣೆಯನ್ನು ಈಕೆ ಮಾಡಿದ್ದರು. ತದ ನಂತರ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ಕಾರಣದಿಂದ ನಿರೂಪಣೆಗೆ ವಿದಾಯ ಹೇಳಿದ್ದರು.
ವರ್ಷಗಳ ಬಳಿಕ ಕಂ ಬ್ಯಾಕ್ ಆಗಿರುವ ರಜಿನಿ ಸಕತ್ ಖುಷಿಯಲ್ಲಿದ್ದಾರೆ. "ನಟನೆ, ಹಾಡು, ನೃತ್ಯ ಇದೆಲ್ಲವೂ ಆಯಿತು. ಇದೀಗ ಮತ್ತೆ ನಿರೂಪಣೆಯತ್ತ ಮುಖ ಮಾಡಿದ್ದೇನೆ. ಅದರಲ್ಲೂ ಇದು ಲೈವ್ ಶೋ. ಲೈವ್ ಶೋ ಮಾಡುವಾಗ ಸಿಗುವ ಅನುಭವವೇ ಬೇರೆ. ಯಾವುದೇ ರೀತಿಯ ಕಟ್ ಶಾಟ್ಸ್ ಇರುವುದಿಲ್ಲ. ಶೋ ಅದರದೇ ಆದ ಒಂದು ಫ್ಲೋನಲ್ಲಿ ಹೋಗುತ್ತಿರುತ್ತದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ರಜಿನಿ ಸಂತಸ ಹಂಚಿಕೊಂಡಿದ್ದಾರೆ.

"ನಾರಿಗೊಂದು ಸೀರೆ ಶೋ ಐದು ವರ್ಷಗಳಿಂದ ಪ್ರಸಾರವಾಗುತ್ತಿದೆ. ಈ ಶೋ ಆರಂಭವಾದಾಗ ನಿರೂಪಕಿಯಾಗಿ ನಾನು ಕಾಣಿಸಿಕೊಂಡಿದ್ದೆ. ಮುಂದೆ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕಾರಣ ನಾನು ನಿರೂಪಣೆಯಿಂದ ಹೊರಬಂದೆ. ಇದೀಗ ಮತ್ತೆ ನಾನೇ ಈ ಶೋವಿನ ನಿರೂಪಕಿಯಾಗಿ ಕಾಣಿಸಿಕೊಂಡಿದ್ದೇನೆ. ತುಂಬಾನೇ ಖುಷಿಯಾಗುತ್ತಿದೆ" ಎಂದು ಸಂದರ್ಶನದ ವೇಳೆ ಮಾತನಾಡುತ್ತಾ ನಟಿ ರಜಿನಿ ಹೇಳಿಕೊಂಡಿದ್ದಾರೆ .
"ನಾರಿಗೊಂದು ಸೀರೆ ಕಾರ್ಯಕ್ರಮದ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ನನಗಂತೂ ತುಂಬಾ ಖುಷಿಯಾಗುತ್ತಿದೆ. ಯಾಕೆಂದರೆ ಮುಖ್ಯವಾಗಿ ಇದು ಕಾಲರ್ ಶೋ. ಅದರಲ್ಲಿ ಸಾಕಷ್ಟು ಮಾತನಾಡಲು ಅವಕಾಶವಿದ್ದು, ನಾನದನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ" ಎಂದು ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ರಜಿನಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಈ ಮೊದಲು 'ಶಾಂತಂ ಪಾಪಂ', 'ಪಾಕಶಾಲೆ' ಶೋಗಳ ನಿರೂಪಣೆ ಮಾಡಿ ಸೈ ಎನಿಸಿಕೊಂಡಿರುವ ರಜಿನಿ ಅವರ ಕಿರುತೆರೆ ಪಯಣ ಶುರುವಾಗಿದ್ದು ಅಮೃತಳಾಗಿ. ದಶಕಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ನಾಯಕಿ ಅಮೃತಾಳಾಗಿ ನಟಿಸಿದ್ದರು. ಬರೋಬ್ಬರಿ ಐದಾರು ವರ್ಷಗಳ ಕಾಲ ಆ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದರು.
ಮುಂದೆ 'ಆತ್ಮಬಂಧನ' ಎನ್ನುವ ಹಾರರ್ ಧಾರಾವಾಹಿಯಲ್ಲಿಯೂ ನಟಿಸಿದ ಈಕೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಪ್ರಾರ್ಥನಾ ಪಾತ್ರಕ್ಕೆ ಜೀವ ತುಂಬಿದ್ದರು. ಮೊದಲ ಧಾರಾವಾಹಿಯಲ್ಲಿ ಅಳುಮುಂಜಿ ಅಮೃತಳಾಗಿ ನಟಿಸಿದ್ದ ಇವರು 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನೆಗೆಟಿವ್ ಛಾಯೆಯಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅತಿಥಿ ಪಾತ್ರದ ಮೂಲಕ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿರುವ ಈಕೆ 'ಅಂಬುಜಾ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಕಮಾಲ್ ಮಾಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೂಪರ್ ಕ್ವೀನ್' ರಿಯಾಲಿಟಿ ಶೋವಿನ ಸ್ಪರ್ಧಿಯಾಗಿದ್ದ ಈಕೆ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದರ ಜೊತೆಗೆ 'ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2' ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ರಜಿನಿ ಕನ್ನಡ ಕಿರುತೆರೆಯ ಜನಪ್ರಿಯ ಶೋಗಳ ಪೈಕಿ ಒಂದಾದ 'ಮಜಾ ಟಾಕೀಸ್ ' ನಲ್ಲಿ ಕಾಣಿಸಿಕೊಂಡಿದ್ದು ಆ ಮೂಲಕ ವೀಕ್ಷಕರ ಮನ ಸೆಳೆದಿದ್ದರು.


Click it and Unblock the Notifications











