Hitler Kalyana: ಮನೆಯಲ್ಲಿ ಇರಲು ಒಪ್ಪಿದ ಅಂತರಾ: ಅಕ್ಕನಿಗೆ ಸುಳ್ಳು ಹೇಳಿದ ಲೀಲಾ
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಂತರಾ ಸಿಕ್ಕಿರುವುದಕ್ಕೆ ಎಜೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾನೆ. ಮನದಲ್ಲೇ ಹಕ್ಕಿಯಂತೆ ಹಾರಾಡುತ್ತಿದ್ದಾನೆ. ಇದು ಲೀಲಾಳಿಗೆ ಮಾತ್ರವೇ ಅರ್ಥವಾಗುತ್ತಿದೆ. ಆದರೆ, ಲೀಲಾ ತನ್ನ ಪ್ರೀತಿಯನ್ನು ಬಿಟ್ಟುಕೊಡಬೇಕಾಗಿ ಬಂತಲ್ಲಾ ಎಂಬ ಬೇಸರವನ್ನು ಅವಳೊಬ್ಬಳೇ ಅನುಭವಿಸುತ್ತಿದ್ದಾಳೆ. ಲೀಲಾ ಮನದ ಸಂಕಟ ಯಾರಿಗೂ ಅರ್ಥವಾಗುತ್ತಿಲ್ಲ.
ಅಂತರಾಳಿಗೆ ಯಾವುದೂ ನೆನಪಿನಲ್ಲಿ ಇಲ್ಲದ ಕಾರಣ ಹಿಂಸೆಯಾಗುತ್ತಿದೆ. ಇವರೆಲ್ಲಾ ಯಾಕೆ ತನ್ನನ್ನು ಬಲವಂತವಾಗಿ ಇಲ್ಲಿ ಇರಿಸಿಕೊಂಡಿದ್ದಾರೆ. ಅಷ್ಟಕ್ಕೂ ತಾನು ಯಾತಕ್ಕಾಗಿ ಅಲ್ಲಿರಬೇಕು ಎಂಬ ಗೊಂದಲದಲ್ಲಿದ್ದಾಳೆ. ಕೌಸಲ್ಯ ತನ್ನ ಮಗಳು ಲೀಲಾ ಬಾಳು ಹಾಳಾಗುತ್ತಿದೆ. ಆದರೆ, ಯಾರಿಗೂ ತನ್ನ ಮಗಳ ಮೇಲೆ ಕಾಳಜಿಯೇ ಇಲ್ಲ ಎಂದು ಆತಂಕಗೊಂಡಿದ್ದು, ಅಂತರಾಳನ್ನು ಮನೆಬಿಟ್ಟು ಹೋಗು ಎಂದು ಹೇಳಿಕೊಟ್ಟಿರುತ್ತಾಳೆ. ಈ ವಿಚಾರವನ್ನು ರೇವತಿ, ಲೀಲಾಗೆ ಹೇಳುತ್ತಾಳೆ. ಗಾಬರಿಯಾದ ಲೀಲಾ ಅಂತರಾಳನ್ನು ಹುಡುಕುತ್ತಾಳೆ. ಆಗ ಅಂತರಾ ಮನೆ ಬಿಟ್ಟು ಹೋಗಬೇಕು ಎಂದು ಕೊಂಡೆ ಆದರೆ, ನಿನಗೆ ಹೇಳಿ ಹೋಗೋಣ ಅಂತ ಇದ್ದೇನೆ ಎಂದು ಹೇಳುತ್ತಾಳೆ.

ಲೀಲಾ ಅಂತರಾಳಿಗೆ ಆಕೆಯ ಹಳೆಯ ನೆನಪುಗಳ ಒಂದಷ್ಟು ವಸ್ತುಗಳನ್ನು ತೋರಿಸುತ್ತಾಳೆ. ಬಳಿಕ ಮನೆ ಬಿಟ್ಟು ಹೋಗಬೇಡಿ ಎಂದು ಮಾತು ತೆಗೆದುಕೊಳ್ಳುತ್ತಾಳೆ. ಸದ್ಯಕ್ಕೆ ನಿಮಗೆ ಇದು ನಿಮ್ಮ ಮನೆ ಎಂದು ಅನಿಸದೇ ಇರಬಹುದು. ಆದರೆ, ಎಲ್ಲಾ ನೆನಪು ಬರಲು ಶುರುವಾದ ಮೇಲೆ ನಿಮಗೆ ಅರ್ಥವಾಗುತ್ತದೆ. ಈ ಮನೆಯಲ್ಲಿ ನಿಮ್ಮನ್ನು ಎಲ್ಲರೂ ಪ್ರೀತಿಸುತ್ತಾರೆ ಎಂದು ಹೇಳುತ್ತಾಳೆ.
ನಂತರ ಲೀಲಾ ಅಂತರಾಳನ್ನು ಪ್ರತಿಯೊಬ್ಬರಿಗೂ ಪರಿಚಯ ಮಾಡಿಸುತ್ತಾಳೆ. ಅಜ್ಜಿ ಬಳಿ ಅಂತರಾಳನ್ನು ಕರೆದುಕೊಂಡು ಹೋದಾಗ ಅಜ್ಜಿ ಅಂತರಾಳ ಮುಖವನ್ನು ನೋಡಲು ಕೂಡ ಬಯಸುವುದಿಲ್ಲ. ಆದರೂ ಕೂಡ ಲೀಲಾ ಪ್ರತಿಯೊಬ್ಬರಿಗೂ ಅಂತರಾಳನ್ನು ಪರಿಚಯ ಮಾಡಿಸುತ್ತಾಳೆ. ದುರ್ಗಾ ಬಳಿ ಹೋದಾಗ ಅಂತರಾಳಿಗೆ ನೀವು ಎಂದರೆ ತುಂಬಾ ಪ್ರೀತಿ, ಈ ಮನೆಯ ಪಿಲ್ಲರ್ ಎಂಬಂತೆ ಹೊಗಳುತ್ತಾಳೆ. ಇದರಿಂದ ದುರ್ಗಾಳಿಗೆ ಮುಜುಗರವಾಗುತ್ತದೆ.

ಇನ್ನು ಎಜೆ ಬಳಿ ಅಂತರಾಳನ್ನು ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಅವರಿಬ್ಬರನ್ನೇ ಬಿಟ್ಟು ಬರುತ್ತಾಳೆ. ಎಜೆ ಮತ್ತು ಅಂತರಾ ಮಾತನಾಡುತ್ತಾರೆ. ಎಜೆಗೆ ಅಂತರಾ ತನ್ನ ಜೊತೆಗೆ ಸಮಾಧಾನವಾಗಿ ಮಾತನಾಡುತ್ತಿರುವುದು ಖುಷಿಯಾಗುತ್ತದೆ.
ಇನ್ನು ಲೀಲಾಳನ್ನು ಅಂತರಾ ಬಂದು ನೀವು ಯಾರು ಎಂದು ಕೇಳುತ್ತಾಳೆ. ಆಗ ಸುಳ್ಳು ಹೇಳಲು ಲೀಲಾ ಒದ್ದಾಡುತ್ತಾಳೆ. ಕೊನೆಗೆ ತಾನು ಈ ಮನೆಗೆ ಬೇಕಾದವಳು. ಆಗಾಗ ಬರುತ್ತಿರುತ್ತೇನೆ. ಈ ಮನೆಯಿಂದ ನನಗೆ ಬಹಳ ಉಪಕಾರವಾಗಿದೆ. ಬದುಕುವುದನ್ನು ಹೇಳಿಕೊಟ್ಟಿದ್ದೇ ಎಜೆ. ನಾನು ತುಂಬಾ ಎಡವಟ್ಟುಗಳನ್ನು ಮಾಡುತ್ತಿದ್ದೆ ಅದನ್ನೆಲ್ಲಾ ಎಜೆ ತಿದ್ದಿದ್ದಾರೆ. ನನಗೆ ಈ ಮನೆಯೇ ಎಲ್ಲಾ ಎಂದು ಸುಳ್ಳು ಹೇಳುತ್ತಾಳೆ.
ಲೀಲಾ ಹೇಳಿದ ಮಾತುಗಳನ್ನು ಕೇಳಿ ಎಲ್ಲರೂ ಶಾಕ್ ಆಗುತ್ತಾರೆ. ಅಂತರಾ ನೀನು ತುಂಬಾ ಒಳ್ಳೆಯವಳು. ನಿನಗೆ ಎಲ್ಲಾ ಒಳ್ಳೆಯದೇ ಆಗುತ್ತದೆ ಎಂದು ಹೇಳುತ್ತಾಳೆ. ಇನ್ನು ಕೌಸಲ್ಯ ಹೀಗೆ ಸುಮ್ಮನೆ ಇದ್ದರೆ ಸರಿ ಆಗುವುದಿಲ್ಲ. ನನ್ನ ಮಗಳ ಬದುಕಿಗೆ ನ್ಯಾಯಬೇಕು ಎಂದು ಎಜೆ ಬಳಿ ಪ್ರಶ್ನೆ ಮಾಡುತ್ತಾಳೆ. ಈ ವಿಚಾರ ತಿಳಿದ ಲೀಲಾ ಕೌಸಲ್ಯಳನ್ನು ಮಾತು ನಿಲ್ಲಿಸುವಂತೆ ಹೇಳುತ್ತಾಳೆ.
ಎಜೆ ಬಳಿ ಕ್ಷಮೆ ಕೇಳಿ ಬಳಿಕ ಅವರ ತಾಯಿ ಹಾಗೂ ತಂದೆಯನ್ನು ಮನೆಗೆ ಹೋಗುವಂತೆ ಹೇಳುತ್ತಾಳೆ. ನಾನು ಹೀಗೆ ಹೇಳುತ್ತಿರುವುದಕ್ಕೆ ಬೇಸರ ಮಾಡಿಕೊಳ್ಳಬೇಡಿ, ದಯವಿಟ್ಟು ಇಲ್ಲಿಂದ ಹೊರಡಿ. ಈ ಮನೆ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ಇನ್ನೇನನ್ನು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಅಂತರಾಗೆ ಎಲ್ಲಾ ನೆನಪಾದರೆ, ಲೀಲಾ ಬದುಕು ದಿಕ್ಕಾಪಾಲಾಗುತ್ತದಾ ಎಂದು ಕಾದು ನೋಡಬೇಕಿದೆ.


Click it and Unblock the Notifications











