Hitler Kalyana: ಅಂತರಾ ಬಳಿ ಮತ್ತೆ ಸಿಕ್ಕಿಬಿದ್ದ ಲೀಲಾ: ಅಜ್ಜಿ ಬಂದು ಹೇಳಿದ್ದೇನು..?
Article desc: 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಂತರಾ ಈಗ ಹಳೆಯದು ನೆನಪಾಗದೇ ಹೋದರೂ ಅದೇ ಮನೆಯಲ್ಲಿ ಎಲ್ಲರ ಜೊತೆಗೆ ಒಂದಾಗಿ ಬದುಕಲು ಮುಂದಾಗಿದ್ದಾಳೆ. ಪ್ರತಿನಿತ್ಯ ಲೀಲಾ, ಅಂತರಾಳ ಜೊತೆಗೆ ಇರುತ್ತಾಳೆ. ಅಂತರಾಳ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಾಳೆ. ಅವಳಿಗೆ ಹಳೆಯದೆಲ್ಲಾ ನೆನಪು ಬರಲಿ ಎಂದು ಲೀಲಾ ಪದೇ ಪದೇ ಹಳೆಯ ಕಥೆಗಳನ್ನು ಅಂತರಾಗೆ ಹೇಳುತ್ತಿರುತ್ತಾಳೆ.
ಮನೆಯವರೆಲ್ಲಾ ಹೇಗೆ, ಎಜೆ, ಅಂತರಾಳನ್ನು ಎಷ್ಟು ಪ್ರೀತಿಸುತ್ತಾರೆ. ಮನೆಯಲ್ಲಿ ಎಜೆ ಎಷ್ಟು ಸ್ಟ್ರಿಕ್ಟ್. ಮಿಸ್ಟರ್ ಪರ್ಫೆಕ್ಷನಿಸ್ಟ್ ಎನಿಸಿಕೊಳ್ಳುವ ಎಜೆ ಬಗ್ಗೆ ಪ್ರತಿಯೊಂದು ವಿಚಾರವನ್ನೂ ಹೇಳಿ ಅಂತರಾಳಿಗೆ ಅರ್ಥ ಮಾಡಿಸುತ್ತಿರುತ್ತಾಳೆ. ಅಂತರಾ ಜೊತೆಗೆ ಲೀಲಾ ಇರುವುದು ದುರ್ಗಾ ಹಾಗೂ ಸರಸ್ವತಿಗೆ ಇಷ್ಟವಿರುವುದಿಲ್ಲ. ಇಬ್ಬರೂ ಲೀಲಾಳನ್ನು ನೋಡಿ ಪದೇ ಪದೇ ಹೊಟ್ಟೆ ಉರಿದುಕೊಳ್ಳುತ್ತಿರುತ್ತಾರೆ. ಹೇಗಾದರೂ ಮಾಡಿ ಅಂತರಾ ಅತ್ತೆಯಿಂದ ಲೀಲಾಳನ್ನು ದೂರ ಮಾಡಬೇಕು ಎಂದುಕೊಳ್ಳುತ್ತಾರೆ.

ಇಬ್ಬರೂ ಸೇರಿ ಒಂದು ಹೊಸ ಪ್ಲ್ಯಾನ್ ಮಾಡುತ್ತಾರೆ. ಅಂತರಾ ಅತ್ತಿಗೆ ಕೊಡಬೇಕಿರುವ ಮಾತ್ರೆಯನ್ನು ಲೀಲಾ ಬದಲಾಯಿಸಿದ್ದಾಳೆ. ಇದರಿಂದ ಅಂತರಾ ಅತ್ತೆ ಜೀವಕ್ಕೆ ಅಪಾಯವಿದೆ ಎಂದು ದೊಡ್ಡ ರಾದ್ಧಾಂತವನ್ನು ಮಾಡುತ್ತಾರೆ. ಅಂತರಾ ಬಳಿ ಲೀಲಾ ಕೆಟ್ಟವಳು. ಜೊತೆಗೆ ಇದ್ದು ಮೋಸ ಮಾಡುತ್ತಾಳೆ ಎಂದು ಚಾಡಿ ಹೇಳುತ್ತಾರೆ. ಇದೇ ವೇಳೆಗೆ ಎಜೆ ಬರುತ್ತಾರೆ. ಎಜೆಗೆ ವಿಚಾರ ತಿಳಿದು ಕೋಪ ಬರುತ್ತದೆ. ಆಗ ಲೀಲಾಳಿಗೆ ಶಿಕ್ಷೆ ಕೊಡಬೇಕು ಎಂದುಕೊಳ್ಳುವಾಗಲೇ, ಅಂತರಾ ಮಾತನಾಡುತ್ತಾಳೆ.
ನಾನು ನೋಡಿದಂತೆ ಲೀಲಾ ತುಂಬಾ ಒಳ್ಳೆಯವಳು. ಮಾತ್ರೆ ಬದಲಾಗಿರಬಹುದು. ಆದರೆ, ಲೀಲಾ ಬೇಕಂತ ಮಾಡಿರುವುದಿಲ್ಲ. ಲೀಲಾ ಯಾರಿಗೂ ಯಾವತ್ತೂ ಕೆಟ್ಟದ್ದನ್ನು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಈ ವೇಳೆ ರೂಪಾ ಬರುತ್ತಾಳೆ. ಮಾತ್ರೆಯನ್ನು ಯಾರು ಯಾಕೆ ಬದಲಾಯಿಸಿದರು ಅನ್ನೋ ಸತ್ಯವನ್ನು ಸಾಕ್ಷಿ ಸಮೇತ ತೋರಿಸುತ್ತೀನಿ ಎಂದು ವೀಡಿಯೋ ತೋರಿಸುತ್ತಾಳೆ. ಅದರಲ್ಲಿ ಸರಸ್ವತಿ ಬೇಕಂತಲೇ ಮಾತ್ರೆಯನ್ನು ಬದಲಾಯಿಸಿರುತ್ತಾಳೆ. ಎಜೆ, ಸರಸ್ವತಿಯನ್ನು ಕರೆದು ಬೈಯುತ್ತಾನೆ. ಲೀಲಾ ಯಾವತ್ತು ತಪ್ಪು ಮಾಡೋದಿಲ್ಲ. ಅವಳ ಮೇಲೆ ಹೀಗೆಲ್ಲಾ ಅಪವಾದ ಹೊರಿಸಬೇಡ ಎಂದು ಬುದ್ಧಿ ಹೇಳಿ ಕಳಿಸುತ್ತಾನೆ.
ಇತ್ತ ಎಜೆ ಮಕ್ಕಳಾದ ಪ್ರಮೋದ್ ಹಾಗೂ ಪ್ರೇಮ್ ಇಬ್ಬರೂ ಸರಸ್ವತಿ ಮಾಡಿದ್ದು ತಪ್ಪು ಎಂದು ಜಗಳವಾಡುತ್ತಾರೆ. ಇಬ್ಬರ ಜಗಳವನ್ನು ಅಜ್ಜಿ ಬಂದು ಬಿಡಿಸುತ್ತಾರೆ. ಬಳಿಕ ಅಂತರಾ, ಲೀಲಾಳನ್ನು ಪ್ರಶ್ನೆ ಮಾಡುತ್ತಾಳೆ. ದುರ್ಗಾಳಿಗೆ ನಿನ್ನನ್ನು ಕಂಡರೆ, ಯಾಕೆ ಆಗೋಲ್ಲ. ಅಂತಹದ್ದು ನಿಮ್ಮಿಬ್ಬರ ಮಧ್ಯೆ ಏನಾಗಿದೆ..? ನೀನು ಈ ಮನೆಗೆ ಏನು ಆಗಬೇಕು ಎಂದು ಪ್ರಶ್ನೆ ಮಾಡುತ್ತಾಳೆ. ಲೀಲಾಳಿಗೆ ಏನು ಹೇಳಬೇಕು ಎಂಬುದೇ ತಿಳಿಯುವುದಿಲ್ಲ. ಅಷ್ಟರಲ್ಲಿ ಅಜ್ಜಿ ಬಂದು ಜಡೆ ಜಗಳ ಎಂದು ಹೇಳಿ ಅಂತರಾ ಮಾತನ್ನು ಮರೆಸುತ್ತಾಳೆ.

ಇನ್ನು ಲೀಲಾ, ಅಂತರಾ ಬಂದಿದ್ದರಿಂದ ತನ್ನ ಸ್ಥಾನ ಕಳೆದು ಹೋಗುತ್ತಿದೆ ಎಂಬುದು ಗೊತ್ತಿದ್ದರೂ ಕೂಡ, ಎಜೆಯನ್ನು ಬಿಟ್ಟು ಕೊಡುತ್ತಿದ್ದಾಳೆ. ಎಜೆ ಹಾಗೂ ಅಂತರಾಳನ್ನು ಒಂದು ಮಾಡಲು ಪ್ರಯತ್ನಿಸುತ್ತಿದ್ದಾಳೆ. ಎಜೆ ಅಂತರಾಳಿಗೆ ಎಲ್ಲಾ ನೆನಪು ಬರಲು ಏನು ಮಾಡಬೇಕು ಎಂದು ಯೋಚಿಸುವಾಗ ಮೆಡಿಟೇಷನ್ ಮಾಡಿಸಿದರೆ ಒಳ್ಳೆಯದು ಎಂಬ ಸಲಹೆ ಮೇರೆಗೆ, ಅಂತರಾಳನ್ನು ಕರೆದುಕೊಂಡು ಬಾ ಎಂದು ಲೀಲಾಗೆ ಹೇಳುತ್ತಾನೆ.
ಇದಕ್ಕೆ ಲೀಲಾ ನಾನು ಹೋಗಿ ಕರೆಯುವುದು ಬೇಡ, ನೀವೇ ಹೋಗಿ ಕರೆಯಿರಿ. ನಿಮ್ಮಿಬ್ಬರ ಮಧ್ಯೆ ಆಗ ರೊಮ್ಯಾಂಟಿಕ್ ಸೀನ್ ಕ್ರಿಯೇಟ್ ಆಗುತ್ತೆ. ನೀವೇ ಹೋಗಿ ಅಂತರಾ ಅವರನ್ನು ಕರೆದುಕೊಂಡು ಬನ್ನಿ ಎಂದು ಕಳಿಸುತ್ತಾಳೆ. ಈಗ ಎಜೆ, ಅಂತರಾ ರೂಮಿಗೆ ಹೋಗಿದ್ದು, ಏನಾಗುತ್ತೋ ಕಾದು ನೋಡಬೇಕಿದೆ.


Click it and Unblock the Notifications











