'ಉಪಾಧ್ಯಕ್ಷ' ಬಳಿಕ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಮಲೈಕಾ ವಸುಪಾಲ್
ಕಿರುತೆರೆಯ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಅನೇಕರು ಇಂದು ಬೆಳ್ಳಿತೆರೆಯಲ್ಲಿ ಬದುಕು ರೂಪಿಸಿಕೊಂಡಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ ನಮ್ಮ ಎಡವಟ್ಟು ರಾಣಿ ಲೀಲಾ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಡವಟ್ಟು ರಾಣಿ ಲೀಲಾ ಆಗಿ ನಟಿಸಿ ಸೈ ಎನಿಸಿಕೊಂಡ ಬೆಡಗಿ ಹೆಸರು ಮಲೈಕಾ ವಸುಪಾಲ್. ಮೊದಲ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಮಲೈಕಾ ಅದ್ಭುತ ನಟನೆಯ ಮೂಲಕ ಮೋಡಿ ಮಾಡಿದ ಚೆಲುವೆ.
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವಾಗಲೇ ಸ್ಯಾಂಡಲ್ ವುಡ್ ನಲ್ಲಿ ನಟಿಸುವ ಅವಕಾಶವನ್ನು ಈಕೆ ಪಡೆದುಕೊಂಡಿದ್ದರು. ಹೌದು, ಹಾಸ್ಯನಟ ಚಿಕ್ಕಣ್ಣ ನಾಯಕ ನಟನಾಗಿ ಅಭಿನಯಿಸಿರುವ 'ಉಪಾಧ್ಯಕ್ಷ' ಸಿನಿಮಾದಲ್ಲಿ ಮಲೈಕಾ ನಾಯಕಿಯಾಗಿ ಬಣ್ಣ ಹಚ್ಚಿದರು. ಮೊದಲ ಧಾರಾವಾಹಿಯಂತೆ, ಮೊದಲ ಸಿನಿಮಾದಲ್ಲಿಯೂ ಈಕೆ ಅದ್ಭುತವಾಗಿ ನಟಿಸಿ ಸಿನಿ ಪ್ರಿಯರನ್ನು ರಂಜಿಸಿದ್ದರು.

'ಉಪಾಧ್ಯಕ್ಷ' ಸಿನಿಮಾ ರಿಲೀಸ್ ಆದ ಸ್ವಲ್ಪ ಸಮಯದಲ್ಲಿ ಮಗದೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಮಲೈಕಾಗೆ ದೊರಕಿತು. ಹೌದು, ಡಾಲಿ ಧನಂಜಯ್ ನಿರ್ಮಾಣದ ನಾಗಭೂಷಣ್ ನಾಯಕ ನಟನಾಗಿ ಬಣ್ಣ ಹಚ್ಚಿದ 'ವಿದ್ಯಾಪತಿ' ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿರುವ ಮಲೈಕಾಗೆ ಆ ಸಿನಿಮಾದಲ್ಲಿ ಅವಕಾಶ ಸಿಗಲು 'ಹಿಟ್ಲರ್ ಕಲ್ಯಾಣ' ಧಾರಾವಾಹಿಯೇ ಕಾರಣ.
ಇದರ ಹೊತೆಗೆ ಮಗದೊಂದು ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಈಕೆ ಪಡೆದುಕೊಂಡಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಮಲೈಕಾ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜಮೀರ್ ಅಹಮ್ಮದ್ ಖಾನ್ ಪುತ್ರ ಝೈದ್ ಖಾನ್ ನಟಿಸುತ್ತಿರುವ 'ಕಲ್ಟ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಅನ್ನು ಮಲೈಕಾ ವಸುಪಾಲ್ ಹಂಚಿಕೊಂಡಿದ್ದು "ಎಲ್ಲರಿಗೂ ನಮಸ್ಕಾರ. ನನ್ನ ಮುಂದಿನ ಪ್ರಾಜೆಕ್ಟ್ ಯಾವಾಗ ನಾನು ಈ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದನಿಸುತ್ತಿದೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ನನ್ನ ಮೇಲಿರಲಿ" ಎಂದು ಬರೆದುಕೊಂಡಿದ್ದಾರೆ ಮಲೈಕಾ.

ಇಂಜಿನಿಯರಿಂಗ್ ಪದವೀಧರೆಯಾಗಿರುವ ಮಲೈಕಾ ಅವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸಿತ್ತು. ಇದೀಗ ತನ್ನ ಕನಸನ್ನು ನನಸು ಮಾಡಿಕೊಂಡಿರುವ ಈಕೆ ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿದ್ದಾರೆ.
ಇನ್ನು ಮಲೈಕಾ ವಸುಪಾಲ್ ಅವರಿಗೂ, ಬಾಲಿವುಡ್ ಬೆಡಗಿ ಮಲೈಕಾ ಅರೋರಾ ಹೆಸರಿಗೂ ಸಂಬಂಧವಿದೆಯಂತೆ. ಹೌದು 1998ರಲ್ಲಿ ಬಿಡುಗಡೆಯಾಗಿದ್ದ "ಚಯ್ಯ ಚಯ್ಯ" ಹಾಡು ಆ ಸಮಯದ ಸೂಪರ್ ಹಿಟ್ ಹಾಡು ಹೌದು. ಆ ಹಾಡಿನಲ್ಲಿ ಟ್ರೈನ್ ಮೇಲೆ ಸ್ಟೆಪ್ ಹಾಕಿದ ನಟಿಯ ಹೆಸರು ಮಲೈಕಾ ಆರೋರ ಕೂಡ ಅಷ್ಟೇ ಫೇಮಸ್ ಆಗಿದ್ದರು. ಅದೇ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ಹುಟ್ಟಿದ ಈಕೆಗೆ 'ಮ' ಅಕ್ಷರದಿಂದಲೇ ಹೆಸರಿಡಬೇಕಾದ ಸಂದರ್ಭ ಬಂದಿತ್ತು. ಆಗ ಆಕೆಯ ತಂದೆ, ತಾಯಿ ಮಲೈಕಾ ವಸುಪಾಲ್ ಎಂದು ಇಟ್ಟಿದ್ದರು. ಒಟ್ಟಿನಲ್ಲಿ ಮಲೈಕಾ ಅರೋರಾಳಂತೆ ಮಲೈಕಾ ವಸುಪಾಲ್ ಕೂಡಾ ಬಣ್ಣದ ಲೋಕದಲ್ಲಿ ಮತ್ತಷ್ಟು ಗುರುತಿಸಿಕೊಳ್ಳಲಿ.


Click it and Unblock the Notifications











