'ಅಮೃತವರ್ಷಿಣಿ'ಯ ಅಮೃತಾಗೆ 'ಹಿಟ್ಲರ್ ಕಲ್ಯಾಣ'ದ ಅಂತರಾ ಅಂತ ಕರೆಸಿಕೊಳ್ಳುವ ಆಸೆ
ನಟ, ನಿರ್ದೇಶಕ ದಿಲೀಪ್ ರಾಜ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯು ದಿನದಿಂದ ದಿನಕ್ಕೆ ಬಹಳಷ್ಟು ಪಾಪ್ಯುಲಾರಿಟಿಯನ್ನು ಪಡೆಯುತ್ತಿದೆ. ಇನ್ನು ಈ ಧಾರಾವಾಹಿಯಲ್ಲಿ ಅಂತರಾ ಆಲಿಯಾಸ್ ಪ್ರಾರ್ಥನಾ ಎನ್ನುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ರಜಿನಿಯವರು ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.
ಇನ್ನು ರಜಿನಿ ಅವರಿಗೆ ಅಂತರಾ ಹಾಗೂ ಪ್ರಾರ್ಥನಾ ಪಾತ್ರದಿಂದ ಒಂದಷ್ಟು ಗುರುತಿಸುವಿಕೆ ಸಿಕ್ಕಿದರೂ ಸಹ ಇಂದಿಗೂ ಜನರು ಅವರನ್ನು 'ಅಮೃತವರ್ಷಿಣಿ' ಧಾರಾವಾಹಿಯ ಅಮೃತ ಎಂದೇ ಗುರುತಿಸುತ್ತಾರಂತೆ. ಅಂತರ ಪಾತ್ರಕ್ಕೆ ಬಹಳಷ್ಟು ತಯಾರಿಗಳನ್ನು ಮಾಡಿಕೊಂಡಿರುವ ನಟಿ ರಜಿನಿ ತಮ್ಮನ್ನು ಜನರು ಅಂತರ ಎಂದು ಗುರುತಿಸಬೇಕೆಂದು ಆಸೆ ಪಟ್ಟಿದ್ದಾರೆ.

ಅಸಲಿಗೆ ರಜಿನಿಗೆ ಅಂತರ ಪಾತ್ರ ಸಿಕ್ಕಾಗ ಆಕೆಗೆ ಮೊದಲು ನಟಿಸಲು ಇಷ್ಟವಿರಲಿಲ್ಲ. ಏಕೆಂದರೆ ಧಾರಾವಾಹಿ ಕಥೆಯಲ್ಲಿ ಅಂತರಳಿಗೆ ದೊಡ್ಡ ವಯಸ್ಸಿನ ಮಕ್ಕಳಿದ್ದಾರೆ. ಆದರೆ, ನಿರ್ದೇಶಕರು ಆ ಮಕ್ಕಳಿಗೆ ಸ್ವಂತ ತಾಯಿ ಅಂತರ ಅಲ್ಲ ಎಂಬ ಸತ್ಯಾಂಶವನ್ನು ಹೇಳಿದ ಮೇಲೆಯಷ್ಟೇ ರಜಿನಿ ಅವರು ಪಾತ್ರದ ಬಗ್ಗೆ ಯೋಚಿಸಿದರಂತೆ. ಕ್ರಮೇಣ ಆಕೆಗೂ ಈ ಪಾತ್ರ ಇಷ್ಟವಾಯಿತಂತೆ.
ಇಂದಿಗೂ ರಜಿನಿ ಹೆಸರು ಹೇಳಿದ ಕೂಡಲೇ ಜನರು 'ಅಮೃತವರ್ಷಿಣಿ' ಧಾರಾವಾಹಿಯ ಅಮೃತ ಎಂದೇ ಗುರುತಿಸುತ್ತಾರೆಯಂತೆ. ಅದು ಖುಷಿಯ ವಿಚಾರವಂತೆ. ಇನ್ನು ವೈಯಕ್ತಿಕವಾಗಿ ರಜಿನಿ ಪಾತ್ರವೂ ಅಮೃತ ಪಾತ್ರ ಮನಸ್ಸಿಗೆ ಬಹಳ ಹತ್ತಿರವಾಗಿದೆಯಂತೆ. ಆದರೆ ಇದೀಗ ರಜಿನಿ 'ಅಂತರ' ಪಾತ್ರಕ್ಕೆ ಹಾಕಿರುವ ಶ್ರಮಕ್ಕೆ ಸರಿಯಾದ ಪ್ರತಿಫಲವನ್ನು ಅಪೇಕ್ಷಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯಲ್ಲಿ ಅಗ್ನಿ ಶಿಖಾ ಪಾತ್ರಧಾರಿಯಾಗಿ ಗಮನ ಸೆಳೆದಿದ್ದರು ರಜಿನಿ. ಮೊದಲ ಬಾರಿಗೆ ಪೌರಾಣಿಕ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ರಜಿನಿ 'ಅಮೃತವರ್ಷಿಣಿ' ಧಾರಾವಾಹಿಯ ಅಮೃತಾ ಪಾತ್ರದ ಮೂಲಕ ಕಿರುತೆರೆಗೆ ಮರಳಿದ್ದರು.
ತದ ನಂತರ 'ಆತ್ಮಬಂಧನ' ಧಾರಾವಾಹಿಯಲ್ಲಿ ನಟಿಸಿದ ರಜಿನಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2' ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ 'ಸೂಪರ್ ಕ್ವೀನ್' ರಿಯಾಲಿಟಿ ಶೋವಿನಲ್ಲಿ ಭಾಗವಹಿಸಿ ವಿನ್ನರ್ ಆಗಿ ಹೊರಹೊಮ್ಮಿರುವ ಈಕೆ 'ನಾರಿಗೊಂದು ಸೀರೆ', 'ಶಾಂತಂ ಪಾಪಂ', 'ಪಾಕಶಾಲೆ' ಕಾರ್ಯಕ್ರಮದ ನಿರೂಪಕಿಯಾಗಿ ಗಮನ ಸೆಳೆದಿದ್ದಾರೆ. ಇದರ ಜೊತೆಗೆ 'ಅಂಬುಜಾ' ಸಿನಿಮಾದಲ್ಲಿ ನಾಯಕಿಯಾಗಿಯೂ ಮೋಡಿ ಮಾಡಿದ್ದಾರೆ .


Click it and Unblock the Notifications











