Hitler Kalyana: ಸೀರಿಯಲ್ ಪಾತ್ರಧಾರಿಗಳ ಕರುಣಾ ಜನಕ ಕಥೆ ಬಿಚ್ಚಿಟ್ಟ ಸೌಮ್ಯಾ ಭಟ್!
ಹಿಟ್ಲರ್ ಕಲ್ಯಾಣ ಹಾಗೂ ಕನ್ನಡತಿ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಸೌಮ್ಯಾ ಭಟ್ ಅವರು ಧಾರಾವಾಹಿ ತೆರೆ ಹಿಂದಿನ ಕಥೆ ತುಂಬಾನೇ ಡಿಫರೆಂಟಾಗಿದೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಪವಿತ್ರಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸೌಮ್ಯಾ ಭಟ್ ಅವರು ಕನ್ನಡತಿ ಧಾರಾವಾಹಿಯಲ್ಲಿ ಹರ್ಷನ ಅಸಿಸ್ಟಂಟ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅವರ ಪಾತ್ರ ಬಿಲ್ಡಿಂಗ್‌ನಿಂದ ಬಿದ್ದು ಇದೀಗ ಕೋಮ ಸ್ಟೇಜ್‌ಗೆ ಹೋಗಿದೆ.
ಯಾವ ಕೆಲಸವೂ ಸುಲಭವಲ್ಲ. ಅದರಲ್ಲಿ 100% ಕಷ್ಟಪಟ್ಟು, ಇಷ್ಟ ಪಟ್ಟು ಶ್ರಮವಹಿಸಿದರಷ್ಟೇ ಫಲಿತಾಂಶ ಸಿಗುವುದು. ಕಲಾವಿದರು ಹಾಗೆಯೇ, ಮನಸ್ಸಲ್ಲಿ ಖುಷಿಯಿರಲಿ - ದುಃಖವಿರಲಿ ತೋರ್ಪಡಿಸದೆ ಪಾತ್ರಕ್ಕಿಳಿದು ಅಭಿನಯಿಸಿದಾಗಲೇ ಅದು ನೈಜತೆಯಿಂದ ನೋಡುಗರನ್ನು ಸೆಳೆಯಲು ಸಾಧ್ಯವಾಗುತ್ತೆ ಎಂದು ಸೌಮ್ಯ ಭಟ್ ಹೇಳುತ್ತಾರೆ. ಇನ್ನು ಕೆಲವೊಂದು ಸನ್ನಿವೇಶಗಳಲ್ಲಿ ಅಭಿನಯಿಸುವಾಗ ನಮ್ಮದೋ ಅಥವಾ ನಮ್ಮ ಪರಿಚಯಸ್ಥರ ಜೀವನದ ಘಟನೆಗಳಿಗೆ ಹತ್ತಿರವೆನಿಸಿ ವಾಸ್ತವದಂತೆ ಭಾಸವಾಗುವುದೂ ಇದೆ. ಎರಡು ನಿಮಿಷದಲ್ಲಿ ಹೀಗೆ ಎಂದು ನಿರ್ಧರಿಸುವ ಕತೆಗಳ ಹಿಂದೆ ನೂರಾರು ಜನರ ಶ್ರಮವಿದೆ ಎಂದು ಹೇಳಿದ್ದಾರೆ.
'ಹಿಟ್ಲರ್ ಕಲ್ಯಾಣ' ದಿನೆ ದಿನೇ ಹೊಸ ಟ್ವಿಸ್ಟ್ ನೀಡುತ್ತಾ ಸಿರಿಯಲ್ ಬಗೆಗಿನ ಕುತುಹಲವನ್ನು ಹೆಚ್ಚಿಸುತ್ತಿದೆ. ಇಷ್ಟು ದಿನ ಎಜೆ ಕಂಡ್ರೆ ಉರಿದು ಬೀಳುತ್ತಿದ್ದ ಲೀಲಾ ಇದೀಗ ಅವರ ಹತ್ತಿರವೇ ಸಹಾಯವನ್ನು ಕೇಳುತ್ತಾಳೆ, ಎಜೆನಾ ಗೋಳು ಹೋಯ್ದುಕೊಳ್ಳುತ್ತಾಳೆ, ಆದ್ರೆ ಹಿಟ್ಲರ್ ಎಜೆನ ತಂಗಿ ಪವಿತ್ರ ಮಾತ್ರ ತುಂಬಾ ಢಿಪರೆಂಟ್ ತುಂಬಾನೇ ಪಾಪ, ಆಕೆಯ ಗಂಡ ಹೆಣ್ಣು ಬಾಕ, ಎಜೆಯ ಶತ್ರು ಕೂಡ, ಇದೀಗ ಗಂಡನೇ ಎಜೆ ತಂಗಿಯನ್ನ ಸಾಯಿಸಲು ಟ್ರೈ ಮಾಡಿದ್ದಾನೆ.

ಒಂದು ಸಾಲಿಟ್ಟುಕೊಂಡು ಶುರುವಾಗುವ ಧಾರಾವಾಹಿ ಕತೆಗಳು ಸಾವಿರ ಸಂಚಿಕೆಗಳನ್ನು ಪೂರೈಸಬಹುದು ಅಥವಾ ಎಷ್ಟೇ ಚೆನ್ನಾಗಿದ್ದರೂ ಮಂಗಳ ಹಾಡಬಹುದು. ಸಮಯದ ಹಂಗಿಲ್ಲದೆ ಕೆಲಸ ಮಾಡುವ ಕತೆಗಾರನಿಂದ ಹಿಡಿದು, ಚಿತ್ರಕಥೆ, ಸಂಭಾಷಣೆ, ನಿರ್ಮಾಣ, ಈ ಧಾರಾವಾಹಿ ಹೀಗೆಯೇ ಇರಬೇಕೆಂದು ಯೋಜನೆಯನ್ನು ರೂಪಿಸುವ ವಾಹಿನಿಯ ತಂಡ, ನಿರ್ದೇಶನ, ಸಂಗೀತ, ಸಾಹಿತ್ಯ, ಸಂಕಲನ, ಪ್ರಸಾದನ, ವಸ್ತ್ರವಿನ್ಯಾಸ, ಚಿತ್ರೀಕರಣದ ಸಮಯದಲ್ಲಿ ದುಡಿಯುವವರ ಊಟೋಪಚಾರದಿಂದ ಹಿಡಿದು ಎಷ್ಟೇ ಹೊತ್ತಾದರೂ ನಗುಮೊಗದಿಂದ ಕ್ಷೇಮವಾಗಿ ಎಲ್ಲರನ್ನೂ ಮನೆಗೆ ತಲುಪಿಸುವ ವಾಹನ ಚಾಲಕರು ಹೀಗೆ ಹತ್ತು ಹಲವು ಕೈಗಳು, ಇದು ಎಲ್ಲರ ಹೊಟ್ಟೆಪಾಡು. ಹಾಗಾಗಿಯೇ ಧಾರಾವಾಹಿ ತಂಡ ಒಂದು ಕುಟುಂಬ ಇದ್ದಂತೆ ಎಂದು ಹೇಳಿದ್ದಾರೆ ಸೌಮ್ಯಭಟ್.

ವಾಹಿನಿ, ಪ್ರಸಾರ ಸಮಯ, ಶ್ರೀಮಂತಿಕೆ, ವಿಭಿನ್ನತೆ ಎಂಬೆಲ್ಲಾ ಆಯಾಮಗಳನ್ನೊಳಗೊಂಡು ವಾರದ ಐದು ದಿನ ಅರ್ಧ ಗಂಟೆಗಳ ಕಾಲ ಪ್ರಸಾರವಾಗುವುದು ವೀಕ್ಷಕರನ್ನು ರಂಜಿಸುವ ಸಲುವಾಗಿಯೆ. ವಾರಕ್ಕೊಮ್ಮೆ ಹೊರಬರುವ ಅಂಕಿ-ಅಂಶಗಳ ಮೇಲೆ ಇಷ್ಟೂ ಜೀವಗಳ ಮುಂದಿನ ದಿನಗಳು ಅವಲಂಬಿಸಿರುತ್ತೆ. ಬಣ್ಣದ ಬದುಕಿನ ಬಗ್ಗೆ ಹೊರಜಗತ್ತಿಗೆ ಏನೇನೋ ದೃಷ್ಟಿಕೋನವಿದ್ದರೂ ಅದರ ಆಳ - ಸತ್ಯಾಸತ್ಯತೆ ಅದರಲ್ಲಿರುವವರಿಗೇ ಗೊತ್ತು.

ಹೇಳಿ-ಕೇಳಿ ಬಣ್ಣದ ಜಗತ್ತು, ಎಲ್ಲಾ ಬಣ್ಣ ಮಸಿ ನುಂಗಿತು ಎಂಬಂತೆ ನಕಾರಾತ್ಮಕತೆಗಳೇ ಬೇಗ ಬೆಳಕಿಗೆ ಬರೋದು. ದಿನಬೆಳಗಾದರೆ ಬಣ್ಣವನ್ನು ದೇವರೆಂದು ಕೈಮುಗಿದು ಪೂಜಿಸಿ ಕೆಲಸ ಶುರು ಮಾಡುವ, ಜನರನ್ನು ರಂಜಿಸುವ ಕಲಾವಿದನ ನಿಜ ಬದುಕಿನಲ್ಲೂ ಇವೇ ಬಣ್ಣದ ಗುಣಗಳು ಆಟವಾಡುತ್ತಿರುತ್ತೆ.

ಈ ಎಲ್ಲಾ ಏಳು-ಬೀಳುಗಳ ಹಾದಿಯ ನಡುವೆ ಒಂದಷ್ಟು ಒಳ್ಳೆ ಮನಸುಗಳ ಹಾರೈಕೆ, ಮೆಚ್ಚುಗೆಯೇ ಸಾಧಿಸಲು ಹುಮ್ಮಸ್ಸು ನೀಡೋದು. ಉಪ್ಪು-ಹುಳಿ-ಖಾರ-ಒಗರು-ಕಹಿ- ಸಿಹಿಯ ಸಮ್ಮಿಶ್ರಣವೇ ರುಚಿಯಾದ ಅಡುಗೆಯ ಒಳಗುಟ್ಟು. ಇದೂ ಹಾಗೇ ಒಳ್ಳೆಯ ದಿನಗಳಿಗಾಗಿ ಶ್ರಮವಹಿಸಿ ಮಾಡುವ ಕಸರತ್ತು. ಎಲ್ಲವನ್ನೂ ಮೀರಿದ ಬದುಕಿನ ನಿಯತ್ತು ಎಂದಿದ್ದಾರೆ.
Recommended Video



Click it and Unblock the Notifications











