ಎಜೆಗೆ ಸವಾಲು ಹಾಕಿದ ಲೀಲಾ, ಮನೆ ಬಿಟ್ಟು ಹೋಗಲು ಸಿದ್ಧ!
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಿತ್ಯ ಎಡವಟ್ಟು ಮಾಡುತ್ತಿದ್ದ ಲೀಲಾ ಈಗ ಸ್ವಲ್ಪ ಬುದ್ಧಿವಂತಳಾಗುತ್ತಿದ್ದಾಳೆ. ಎಜೆ ಮನೆಯ ಸೊಸೆಯಾಗಿ, ಮೂವರ ಸೊಸೆಯಂದಿರ ಅತ್ತೆಯಾಗಿ ತನ್ನ ಸ್ಥಾನ, ಜವಾಬ್ದಾರಿಗಳನ್ನು ತೆಗೆದುಕೊಂಡು ನಿಭಾಯಿಸಲು ಶುರು ಮಾಡಿದ್ದಾಳೆ. ಆದರೆ, ಎಜೆಗೆ ಇನ್ನೂ ಲೀಲಾ ಮೇಲೆ ಭರವಸೆ ಬಂದಿಲ್ಲ.
ಲೀಲಾ ಏನೇ ಒಳ್ಳೆಯದನ್ನು ಮಾಡಲು ಮುಂದಾದರೂ, ಅಲ್ಲೊಂದು ತಪ್ಪಾಗುತ್ತಿದೆ. ಇದಕ್ಕೆ ಲೀಲಾ ಕಾರಣ ಎಂದು ಎಜೆ ನಂಬಿದ್ದಾನೆ. ಆದರೆ ಇದಕ್ಕೆಲ್ಲಾ ಕಾರಣ ಮೂವರು ಸೊಸೆಯಂದಿರು. ಅತ್ತೆಗೆ ಕೊಟ್ಟಿರುವ ಜವಾಬ್ದಾರಿಯನ್ನು ಕಿತ್ತುಕೊಳ್ಳಬೇಕು ಎಂದು ಹೊಂಚು ಹಾಕುತ್ತಿದ್ದಾರೆ. ಆದರೆ ಈ ವಿಚಾರ ಎಜೆಗೆ ತಿಳಿದಿಲ್ಲ.
ಲೀಲಾಳನ್ನು ಬೈಯಿಸಬೇಕು ಎಂದು ತೀರ್ಮಾನಿಸಿರುವ ದುರ್ಗಾ, ದೇವಸ್ಥಾನಕ್ಕೆ ದಾನ ಕೊಡಬೇಕಿದ್ದ ಒಡವೆಯನ್ನು ಕಳ್ಳತನ ಮಾಡಿಸಿದ್ದಾಳೆ. ಈ ಬಗ್ಗೆ ಅನುಮಾನಗೊಂಡಿರುವ ಲೀಲಾ ಪೊಲೀಸರಿಗೆ ದೂರು ನೀಡಿದ್ದಾಳೆ. ಈಗ ಪೊಲೀಸರು ಮನೆಗೆ ಬಂದು ದುರ್ಗಾಳನ್ನು ಅರೆಸ್ಟ್ ಮಾಡಲು ಮುಂದಾಗಿದ್ದಾರೆ. ಆದರೆ ದುರ್ಗಾ ಪರ ಎಜೆ ನಿಂತಿದ್ದಾನೆ.

ಎಜೆ ಎಂಟ್ರಿ, ದುರ್ಗಾಗೆ ತಪ್ಪಿದ ಸಂಕಷ್ಟ!
ಲೀಲಾನೇ ದುರ್ಗಾ ಮೇಲೆ ದೂರು ನೀಡಿದ್ದು ಎಂದು ಹೇಳಲಾಗಿದೆ. ಈಗ ನಾನು ತಿದ್ದಲಿಲ್ಲ ಎಂದರೆ, ಇವರಿಗೆ ಅಪರಾಧ ಮಾಡೋದು ಅಭ್ಯಾಸ ಆಗಿಬಿಡುತ್ತೆ ಎನ್ನುತ್ತಾಲೆ. ದುರ್ಗಾಳನ್ನು ಅರೆಸ್ಟ್ ಮಾಡುವಾಗ ಎಜೆ ಬರುತ್ತಾನೆ. ಅರೆಸ್ಟ್ ವಾರೆಂಟ್ ಇದ್ಯಾ? ಯಾವ ಆಧಾರದ ಮೇಲೆ ಅರೆಸ್ಟ್ ಮಾಡುತ್ತಿದ್ದೀರಾ.? ಬೀದಿಯಲ್ಲಿ ಹೋಗುವವರು ಬಂದು ಕಂಪ್ಲೇಂಟ್ ಕೊಟ್ಟರೂ ಅರೆಸ್ಟ್ ಮಾಡುತ್ತೀರಾ? ಫಸ್ಟ್ ಆಫ್ ಆಲ್ ಇದು ನಮ್ಮ ಮನೆಯ ವಿಷಯ. ದಯವಿಟ್ಟು ಇಲ್ಲಿಂದ ಹೊರಡಿ ಎಂದು ಹೇಳಿ, ಪೊಲೀಸರನ್ನು ಎಜೆ ಕಳಿಸುತ್ತಾನೆ.

ಎಜೆಗೆ ಆವಾಸ್ ಹಾಕಿದ ಲೀಲಾ!
ಪೊಲೀಸರು ಹೊರಟ ಮೇಲೆ ಎಜೆ, ಲೀಲಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಒಡವೆ ಕಳೆದು ಹೋದ ಬಗ್ಗೆ ನಾನು ನಿನ್ನ ಪ್ರಶ್ನೆ ಮಾಡಿದ್ನಾ.? ಕಳೆದು ಹೋದ ಒಡವೆಯನ್ನು ಮನೆಗೆ ವಾಪಸ್ ತೆಗೆದುಕೊಂಡು ಬಾ ಇಲ್ಲ ಅಂದರೆ ಮನೆಗೆ ಸೇರಿಸೊಲ್ಲ ಎಂದಿದ್ದೀನಾ? ಇದ್ಯಾವುದನ್ನೂ ಮಾಡದೇ ಇದ್ದ ಮೇಲೆ ದೂರು ಯಾಕೆ ಕೊಟ್ಟೆ. ಕಳೆದು ಹೋಗಿದ್ದು ನಮ್ಮನೆ ವಸ್ತು ತಾನೆ.? ಯಾರನ್ನ ಕೇಳಿ ದೂರು ಕೊಟ್ಟೆ ಎಂದು ಎಜೆ ಲೀಲಾಳನ್ನು ಪ್ರಶ್ನೆ ಮಾಡುತ್ತಾನೆ. ಆಗ ಲೀಲಾ ನಿಮಗೊಬ್ಬರಿಗೇ ಇದು ಮನೇನಾ.? ನಾನು ಕೂಡ ಈ ಮನೆಯವಳೇ ಅಲ್ವಾ? ನನಗೂ ಜವಾಬ್ದಾರಿ ಇದೆ. ನಾನು ಈ ಮನೆಯ ಗೃಹಿಣಿ ಎಂದು ಮಾತನಾಡುತ್ತಾಳೆ. ಯಾವಾಗಲೂ ನಿಮ್ಮ ಸೊಸೆಯಂದಿರೇ ಸರಿ ಅಂತ ಮಾತನಾಡುತ್ತೀರಿ ಎಂದು ಹೇಳುತ್ತಾಳೆ.

ದುರ್ಗಾ ಬಗ್ಗೆ ಸತ್ಯ ಹೇಳಿದ ಲೀಲಾ!
ಆಗ ಎಜೆ ನನ್ನ ಜೀವ ಇರುವವರೆಗೂ ನನ್ನ ಸೊಸೆಯಂದಿರ ಪರವಾಗಿಯೇ ಮಾತನಾಡುತ್ತೀನಿ. ಯಾಕೆಂದರೆ ಅವರು ಯಾವತ್ತಿಗೂ ನನ್ನ ಮರ್ಯಾದೆಯನ್ನು ಕಳೆಯುವಂತಹ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ಅಷ್ಟು ನಂಬಿಕೆ ನನಗಿದೆ. ಆದರೆ ನೀನು ನಾನು ನಿನ್ನ ಮೇಲಿಟ್ಟ ನಂಬಿಕೆಯನ್ನು ಕಳೆದುಕೊಂಡೆ ಎಂದು ಹೇಳುತ್ತಾನೆ. ಆಗ ಲೀಲಾ, ಸೂಪರ್ ಎಜೆ, ನಾನು ಕೂಡ ಈ ಮನೆ ಸೊಸೆಯೇ. ಆವತ್ತು ಒಡವೆಗಳು ಕಳೆದು ಹೋಗುವಂತೆ ಮಾಡಿ, ನನ್ನ ಮರ್ಯಾದೆಯನ್ನು ತೆಗೆದಿದ್ದು ಸರಿನಾ? ದೇವಸ್ಥಾನದಲ್ಲಿ ಪುರೋಹಿತರು ಹಾಗೂ ಅವರ ಶಿಷ್ಯಂದಿರು ನನ್ನ ಆಡಿಕೊಳ್ಳುವಂತೆ ಮಾಡಿದ್ದು ಸರಿನಾ? ಇದನ್ನೆಲ್ಲಾ ಮಾಡಿಸಿದ್ದು ನಿಮ್ಮ ಸೊಸೆ ದುರ್ಗಾ ಎಂದು ಹೇಳುತ್ತಾಳೆ.

ಎಜೆಗೆ ಸವಾಲು ಹಾಕಿದ ಲೀಲಾ!
ಎಜೆ ಸಾಕ್ಷಿ ಕೇಳಿದಾಗ ನಲವತ್ತೆಂಟು ಗಂಟೆಯಲ್ಲಿ ಸಾಕ್ಷಿ ತೋರಿಸುತ್ತೇನೆ. ಇಲ್ಲದಿದ್ದರೆ ನಾನೇ ಮನೆ ಬಿಟ್ಟು ಹೋಗುತ್ತೇನೆ ಎಂದು ಚಾಲೆಂಜ್ ಮಾಡಿದ್ದಾಳೆ. ಲೀಲಾ ಚಾಲೆಂಜ್ ನೋಡಿ ಮೂವರು ಸೊಸೆಯಂದಿರು ಖುಷಿ ಪಟ್ಟಿದ್ದಾರೆ. ಲೀಲಾ ಈ ಸಲ ಮನೆಯಿಂದ ಆಚೆ ಹೋಗುವುದು ಗ್ಯಾರೆಂಟಿ ಎಂದುಕೊಂಡಿದ್ದಾರೆ. ಆದರೆ ಲೀಲಾ ಈಗ ಏನು ಮಾಡುತ್ತಾಳೆ. ಅದಕ್ಕೆ ವಿರುದ್ಧವಾಗಿ ನಾವೇನು ಮಾಡಬೇಕು ಎಂದು ಮೂವರು ಸೊಸೆಯಂದಿರು ಲೆಕ್ಕಾಚಾರ ಹಾಕುತ್ತಿದ್ದಾರೆ.


Click it and Unblock the Notifications











