ಮುಕ್ತಾಯಗೊಂಡ 'ಹೊಂಗನಸು' ಧಾರಾವಾಹಿ; ಮತ್ತೆ ಕಿರುತೆರೆಗೆ ಬರುತ್ತಾರಾ ನಟಿ ರಕ್ಷಾ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿದ್ದ 'ಹೊಂಗನಸು' ಧಾರಾವಾಹಿಯು ಇದೀಗ ಮುಕ್ತಾಯಗೊಂಡಿದೆ. 'ಗುಪ್ಪದಂತ ಮನಸ್ಸು' ಎನ್ನುವ ತೆಲುಗು ಧಾರಾವಾಹಿಯ ರಿಮೇಕ್ ಇದಾಗಿದ್ದು ಯಶಸ್ವಿ 1168 ಸಂಚಿಕೆಗಳನ್ನು ಇದು ಪೂರೈಸಿತ್ತು. ಮುಕೇಶ್ ಗೌಡ ನಾಯಕ ರಿಷಿ ಪಾತ್ರದಲ್ಲಿ ಅಭಿನಯಿಸಿದ್ದರೆ, ರಕ್ಷಾ ಅವರು ನಾಯಕಿ ವಸುಂಧರಾ ಆಗಿ ಕಾಣಿಸಿಕೊಂಡಿದ್ದರು.
"ಎಲ್ಲಾ ಸುಂದರ ಕಥೆಗಳಿಗೆ ಒಂದು ಅಂತ್ಯವಿದೆ. ಸ್ಟಾರ್ ಸುವರ್ಣದ ಮಧ್ಯಾಹ್ನದ ಮನರಂಜನೆಯಲ್ಲಿ ಸಾವಿರಕ್ಕೂ ಹೆಚ್ಚಿನ ಸಂಖ್ಯೆಗಳನ್ನು ದಾಟಿ ನಿಮ್ಮನ್ನೆಲ್ಲಾ ಮನರಂಜಿಸಿದ ಹೊಂಗನಸು ಧಾರಾವಾಹಿಯ ಈ ಸುಂದರ ಪಯಣದಲ್ಲಿ ಇಷ್ಟು ಕಾಲ ಜೊತೆಗಿದ್ದ ತಮಗೆಲ್ಲರಿಗೂ ಪ್ರೀತಿಯ ಧನ್ಯವಾದಗಳು" ಎಂದು ವಾಹಿನಿಯು ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಬರೆದುಕೊಂಡಿದೆ.

ಇನ್ನು 'ಹೊಂಗನಸು' ಧಾರಾವಾಹಿಯಲ್ಲಿ ನಾಯಕಿ ವಸುಂಧರಾ ಆಗಿ ಅಭಿನಯಿಸಿ, ಕಿರುತೆರೆ ವೀಕ್ಷಕರ ಮನ ಗೆದ್ದ ಬೆಡಗಿಯ ಹೆಸರು ರಕ್ಷಾ ಗೌಡ. ಅಸಲಿಗೆ ಬಾಲ್ಯದಿಂದಲೂ ಈಕೆಗೆ ಇದ್ದ ಕನಸು ಐಎಎಸ್ ಅಧಿಕಾರಿಯಾಗಬೇಕು ಎಂಬುದು. ಆದರೆ ಆಕಸ್ಮಿಕವಾಗಿ ದೊರೆತ ಅವಕಾಶ ಆಕೆಯನ್ನು ನಟನೆಗೆ ಕಾಲಿಡುವಂತೆ ಮಾಡಿತು. ಅಚನಾಕ್ ಆಗಿ ದೊರೆತ ಅವಕಾಶದಿಂದ ಕನ್ನಡ ಕಿರುತೆರೆಗೆ ಕಾಲಿಟ್ಟ ಈಕೆ ಇಂದು ಪರಭಾಷೆಯ ಕಿರುತೆರೆಯಲ್ಲಿಯೂ ಗುರುತಿಸಿಕೊಂಡಿರುವ ಬೆಡಗಿ.
'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕ ರಮಣನ ತಂಗಿ ಅನ್ವಿತಾಳಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ರಕ್ಷಾ. ಮೊದಲ ಧಾರಾವಾಹಿಯಲ್ಲಿ ಪೋಷಕ ಪಾತ್ರದ ಮೂಲಕ ಗಮನಸೆಳೆದ ಈಕೆ ತದ ನಂತರ ಭಡ್ತಿ ಪಡೆದಿದ್ದು ನಾಯಕಿಯಾಗಿ. 'ಪುಟ್ಮಲ್ಲಿ' ಧಾರಾವಾಹಿಯಲ್ಲಿ ನಾಯಕಿ ಪುಟ್ಮಲ್ಲಿ ಆಗಿ ಬಣ್ಣ ಹಚ್ಚಿದ ಈಕೆ ಬಿಗ್ ಬಾಸ್ 10ರ ವಿನ್ನರ್ ಮಹೇಶ್ ಕಾರ್ತಿಕ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು.
ತದ ನಂತರ ತೆಲುಗು ಕಿರುತೆರೆಗೆ ಹಾರಿದ ರಕ್ಷಾ ಅಲ್ಲೂ ಕೂಡಾ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಹುಡುಗಿ. ಹೌದು, ತೆಲುಗಿನ 'ಕೃಷ್ಣವೇಣಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಈಕೆ ನಂತರ ಅಭಿನಯಿಸಿದ್ದು ಕೂಡಾ ತೆಲುಗು ಧಾರಾವಾಹಿಯಲ್ಲಿಯೇ.
ಹೌದು, ತೆಲುಗಿನ 'ಗುಪ್ಪದಂತ ಮನಸ್ಸು' ಧಾರಾವಾಹಿಯಲ್ಲಿ ನಾಯಕಿ ವಸುಂಧರಾ ಆಗಿ ಈಕೆ ಬಣ್ಣ ಹಚ್ಚಿದ್ದರು. ಮುಂದೆ ಅದೇ ಧಾರಾವಾಹಿಯು 'ಹೊಂಗನಸು' ಎಂಬ ಹೆಸರಿನಲ್ಲಿ ಕನ್ನಡಕ್ಕೆ ರಿಮೇಕ್ ಆಗಿದ್ದು, ವಸುಂಧರಾ ಆಗಿ ಕನ್ನಡ ಕಿರುತೆರೆಗೂ ಈಕೆ ಕಾಲಿಟ್ಟರು. 'ಹೊಂಗನಸು' ಧಾರಾವಾಹಿಯು ಸಾವಿರಕ್ಕೂ ಹೆಚ್ಚಿನ ಸಂಚಿಕೆ ಪ್ರಸಾರವಾಗಿದ್ದು ಇದೀಗ ಮುಕ್ತಾಯಗೊಂಡಿದೆ.
ಅಶ್ವಿನಿ ಪಲ್ಲಕ್ಕಿ ಅವರ ನಿರ್ದೇಶನದ 'ಫೋಟೋಗ್ರಾಫರ್ ಪಾಂಡು' ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೂ ಈಕೆ ಕಾಲಿಟ್ಟಿದ್ದರು. 'ಪುಟ್ಮಲ್ಲಿ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಿಂದ ದೂರವಿರುವ ರಕ್ಷಾ ಅವರು ಮತ್ತೆ ಕನ್ನಡ ಕಿರುತೆರೆಗೆ ಮರಳುತ್ತಾರಾ? ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಾರಾ? ಪ್ರಶ್ನೆ ಉತ್ತರ ಸಿಗಬೇಕಿದೆ.


Click it and Unblock the Notifications











