Actress Chandana: 'ಭರ್ಜರಿ ಬ್ಯಾಚುಲರ್ಸ್'ಗಾಗಿ ಕಿರುತೆರೆಗೆ ಮರಳಿದ 'ಹೂಮಳೆ' ಚಂದನಾ ಅನಂತಕೃಷ್ಣ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹೂಮಳೆ' ಧಾರಾವಾಹಿಯಲ್ಲಿ ನಾಯಕಿ ಲಹರಿ ಆಗಿ ಅಭಿನಯಿಸಿ ವೀಕ್ಷಕರ ಮನ ಸೆಳೆದಿದ್ದ ನಟಿ ಚಂದನಾ ಅನಂತಕೃಷ್ಣ. ತನ್ನ ನಟನೆಯ ಮೂಲಕ ಕಿರುತೆರೆ ಜಗತ್ತಿನಲ್ಲಿ ಗುರುತಿಸಿಕೊಂಡ ಬೆಡಗಿ.
'ಹೂಮಳೆ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಚಂದನಾ ಅನಂತಕೃಷ್ಣ ಸಣ್ಣ ಗ್ಯಾಪ್‌ನ ನಂತರ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಭರ್ಜರಿ ಬ್ಯಾಚುಲರ್ಸ್'ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಚಂದನಾ ರುದ್ರ ಮಾಸ್ಟರ್ ಮೆಂಟರ್ ಆಗಿದ್ದಾರೆ.

'ಪುಟ್ಮಲ್ಲಿ'ಯಾಗಿ ಕಿರುತೆರೆಗೆ ಎಂಟ್ರಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಟ್ಮಲ್ಲಿ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ಅಭಿನಯಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಚಂದನಾ ಮುಂದೆ ಬದಲಾದುದು ಯಡವಟ್ಟು ರಾಣಿಯಾಗಿ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ' ಧಾರಾವಾಹಿಯಲ್ಲಿ ನಾಯಕಿ ಚುಕ್ಕಿ ಆಲಿಯಾಸ್ ಯಡವಟ್ಟು ರಾಣಿಯಾಗಿ ಕಾಣಿಸಿಕೊಂಡ ಆಕೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.
ಬಿಗ್ ಬಾಸ್ ಸ್ಪರ್ಧಿಯಾಗಿ ಚಂದನಾ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 7'ರ ಸ್ಪರ್ಧಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಚಂದನಾ 11ವಾರಗಳ ಕಾಲ ದೊಡ್ಮನೆಯೊಳಗೆ ಮೋಡಿ ಮಾಡಿದರು. 11 ವಾರಾಂತ್ಯ ಬಿಗ್ ಬಾಸ್ ಮನೆಯಿಂದ ಹೊರಬಂದ ಚಂದನಾ ಮತ್ತೆ ಭಡ್ತಿ ಪಡೆದು ನಿರೂಪಕಿಯಾಗಿದ್ದರು.
ನಿರೂಪಕಿಯಾಗಿ ಮೋಡಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹಾಡು ಕರ್ನಾಟಕ' ರಿಯಾಲಿಟಿ ಶೋ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ನಿರೂಪಣಾ ಜಗತ್ತಿಗೆ ಕಾಲಿಟ್ಟಿದ್ದರು. ಈ ಮೂಲಕ ಚಂದನಾ ಪಟಪಟ ಮಾತುಗಳ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸ್ ಜ್ಯೂನಿಯರ್ಸ್'ನಲ್ಲಿ ಸ್ಪರ್ಧಿಯಾಗಿಯೂ ಈಕೆ ಮೋಡಿ ಮಾಡಿದರು.

ಕಿರುಚಿತ್ರದಲ್ಲಿಯೂ ಮೋಡಿ
ಕೇವಲ ಧಾರಾವಾಹಿಯಲ್ಲಿ ಮಾತ್ರವಲ್ಲದೇ ಆಲ್ಬಂ ಸಾಂಗ್ ನಲ್ಲಿ ನಟಿಸಿದ ಕೀರ್ತಿ ಚಂದನಾಳದ್ದು. ಸೋಲ್ ಕ್ರಾಫ್ಟ್ ಎನ್ನುವ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ 'ಎದುರಲ್ಲಿ ನೀನು ಇರುವಾಗ' ಎನ್ನುವ ಆಲ್ಬಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದಾರೆ ನಟಿ ಚಂದನಾ ಅನಂತಕೃಷ್ಣ. ಮುದ್ದಾದ ನಟನೆಯ ಮೂಲಕ ಮನ ಸೆಳೆದಿರುವ ಚಂದನಾ ಇದೀಗ ಕಿರುಚಿತ್ರವೊಂದರಲ್ಲಿಯೂ ಕಾಣಿಸಿಕೊಂಡಿದ್ದಾರೆ. ನಿಖಿಲ್ ಶೆಟ್ಟಿ ನಿರ್ದೇಶನದಲ್ಲಿ ಸೂರಜ್ ಜೋಯಿಸ್ ಸಂಗೀತವಿರುವ 'ರಾಧೆ' ಎನ್ನುವ ಕಿರುಚಿತ್ರದಲ್ಲಿ ನಟಿಸಲಿದ್ದು, ಅದರ ಪೋಸ್ಟರ್ ಅನ್ನು ಸ್ವತಃ ಚಂದನಾ ಅವರೇ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಕಲಾಕಲಾವಲ್ಲಭೆ
ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಿದ್ದ ಚಂದನಾ ಸಕಲಾಕಲಾವಲ್ಲಭೆ ಹೌದು. ಶಾಸ್ತ್ರೀಯ ಸಂಗೀತ, ನೃತ್ಯದ ಜೊತೆಗೆ ವೀಣೆಯನ್ನು ಕಲಿತಿರುವ ಚಂದನಾ ಏಕಪಾತ್ರಾಭಿನಯ ಮತ್ತು ನಾಟಕಗಳಲ್ಲಿಯೂ ನಟಿಸಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ವಿದ್ಯಾಭ್ಯಾಸ ಪಡೆದಿರುವ ಆಕೆ ಕಾಲೇಜಿನ ರಂಗಾಧ್ಯಯನ ಕೇಂದ್ರ ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವ ತಂಡಗಳಿಂದ ಮಗದಷ್ಟು ಆಕರ್ಷಣೆಗೆ ಒಳಗಾದರು. ಅಲ್ಲಿ ಡ್ಯಾನ್ಸ್ ನ ವಿವಿಧ ಪ್ರಕಾರಗಳಾದ ಕಥಕ್ ಹಾಗೂ ಮೋಹಿನಿ ಅಟ್ಟಂ ಕೂಡಾ ಕರಗತಮಾಡಿಕೊಂಡರು.


Click it and Unblock the Notifications











