ಬಿಗ್ ಬಾಸ್ 13 ಮುಕುಟದ ಮೇಲೆ 'ಹೂವಿನ ಬಾಣದಂತೆ' ವೈರಲ್ ಗರ್ಲ್ ನಿತ್ಯಶ್ರೀ ಕಣ್ಣು
''ಬಿಗ್ ಬಾಸ್'' ಹಲವರ ಕನಸು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ನಮ್ಮ ಜನ್ಮ ಪಾವನ ಎಂದುಕೊಂಡವರು ಹಲವಾರು ಜನ ಇದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದೇ ನಾನಾ ತರಹದ ಸರ್ಕಸನ್ನು ಕೂಡ ಮಾಡುತ್ತಾರೆ. ''ಬಿಗ್ ಬಾಸ್'' ಮನೆಗೆ ಹೋಗಿ ಬಂದ ನಂತರ ಅವರ ಬದುಕಿನಲ್ಲಾಗುವ ಬದಲಾವಣೆಗಳೇನು ಎನ್ನುವುದು ಅವರಿಗೆ ಗೊತ್ತಾದರು ಆ ಭಾಷೆ ಈ ಭಾಷೆ ಎನ್ನದೇ ಎಲ್ಲಾ ಭಾಷೆಯಲ್ಲಿ ಕೂಡ ಪ್ರತಿ ವರ್ಷ ''ಬಿಗ್ ಬಾಸ್'' ಜಾತ್ರೆಯಲ್ಲಿ ಭಾಗವಹಿಸುವ ಉತ್ಸಾಹ ಕಂಡು ಬಂದೇ ಬರುತ್ತೆ.
ಕನ್ನಡದಲ್ಲಿ ಕೂಡ ಈ ಉತ್ಸಾಹದ ಅಲೆ ಸದ್ಯ ಎದ್ದಿದೆ. ಇನ್ನು ಈ ಬಾರಿಯ ಕನ್ನಡ ''ಬಿಗ್ ಬಾಸ್'' ವಿಶೇಷ ಅಂದರೆ ಜನಸಾಮಾನ್ಯರಲ್ಲಿನ ಹಲವರಿಗೆ ಈ ಸಂತೆಯಲ್ಲಿ ಭಾಗಿಯಾಗುವ ಸೌಭಾಗ್ಯವನ್ನು ''ಬಿಗ್ ಬಾಸ್''ನ ಆಯೋಜಕರು ಈ ವರ್ಷ ನೀಡಿದ್ದಾರೆ. ಸೆಲೆಬ್ರಿಟಿಗಳ ಜೊತೆ ನೀವು ಕೂಡ ''ಬಿಗ್ ಬಾಸ್''ನಲ್ಲಿ ಭಾಗವಹಿಸಬಹುದು, ಕೈ ತಟ್ಟಿ ಹುರಿದುಂಬಿಸಿದ್ದು ಸಾಕು, ತೊಡೆ ತಟ್ಟಿ ಅಖಾಡಕ್ಕೆ ಇಳಿಯೋಕೆ ರೆಡಿ ತಾನೆ? ಎಂದು ಕರೆಯನ್ನು ನೀಡಿದ್ದಾರೆ.

''ಬಿಗ್ ಬಾಸ್''ನ ಈ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ತಿದೆ. ಹಲವರು ಬಿಗ್ ಬಾಸ್ ಮನೆಗೆ ಹೋಗಲೇಬೇಕೆಂದು ತಮ್ಮ ಬ್ಯಾಗ್ ಪ್ಯಾಕ್ ಮಾಡುತ್ತಿದ್ಧಾರೆ. 3 ನಿಮಿಷ ವಿಡಿಯೋ ಮಾಡಿ, ನಿಮ್ಮ ವಿವರಣೆಯೊಂದಿಗೆ colorskannada.jiostar.comನಲ್ಲಿ ಅಪ್‌ಲೋಡ್ ಮಾಡುತ್ತಿದ್ಧಾರೆ. ಆ ಪೈಕಿ ನಿತ್ಯಶ್ರೀ ಕೂಡ ಒಬ್ಬರು.
ಹೌದು, ನಿತ್ಯಶ್ರೀ.. ''ಬಿರುಗಾಳಿ'' ಚಿತ್ರದ ಹಾಡಿನ ಮೂಲಕ ಕೆಲ ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ್ದ ಚೆಲುವೆ. ಕೆ.ಆರ್.ಪೇಟೆ ಮಚಿಲೆಕೊಪ್ಪಲು ಗ್ರಾಮದ ಬೆಡಗಿ. ಮಹಾರಾಣಿ ಕಾಮರ್ಸ್ ಕಾಲೇಜ್‌ನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿರುವ ನಿತ್ಯಾಶ್ರೀ ಅಂದು ಯಾವ ಅದೃಷ್ಟದ ಘಳಿಗೆಯಲ್ಲಿ ಹಾಡಿದ್ದರೋ ಗೊತ್ತಿಲ್ಲ.
ಆದರೆ .. ಹಾಗೇ ಸುಮ್ಮನೆ ಇವರು ಹಾಡಿದ್ದ ಹಾಡು ಹಲವರ ಮೊಬೈಲ್‌ನಲ್ಲಿ ರಿಂಗಣಿಸಿತ್ತು. ವಿಡಿಯೋ ಲಕ್ಷಾನುಗಟ್ಟಲೆ ಪ್ರೇಕ್ಷಕರ ಹೃದಯವನ್ನು ಗೆದ್ದಿತ್ತು. ಇಷ್ಟೇ ಅಲ್ಲ ಟ್ರೋಲಿಗರಿಗೆ ಆಹಾರವೂ ಆಗಿತ್ತು.
ಹೀಗೆ ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಜಗದ್ವಿಖ್ಯಾತಗೊಂಡ ನಿತ್ಯಶ್ರೀ, ಸದ್ಯ ''ಬಿಗ್ ಬಾಸ್'' ಮನೆಗೆ ಹೋಗುವ ಆಸೆಯನ್ನು ವ್ಯಕ್ತಪಡಿಸಿದ್ಧಾರೆ. ಮೂರು ನಿಮಿಷ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ಧಾರೆ.

ಈ ಕುರಿತು ಮಾತನಾಡಿರುವ ನಿತ್ಯಶ್ರೀ, ನನ್ನ ಅಪ್ಪ ಆಟೋ ಡ್ರೈವರ್, ಅಮ್ಮ ಹೌಸ್ ವೈಫ್ ಆಗಿದ್ದಾರೆ. ''ಬಿಗ್ ಬಾಸ್'' ಅನ್ನೋದು ಎಷ್ಟೋ ಜನರ ಕನಸು. ಆ ಕನಸು ನನ್ನದು ಕೂಡ ಹೌದು ಎಂದಿದ್ಧಾರೆ.
ಅಲ್ಲಿ ಹೋಗಿ ಸಾಧನೆ ಮಾಡುವಂತಹದ್ದು ತುಂಬಾ ಇದೆ ಎಂದು ಹೇಳಿರುವ ನಿತ್ಯಶ್ರೀ, ನಾನು ಸೋಶಿಯಲ್ ಮೀಡಿಯಾದಲ್ಲಿ ''ಹೂವಿನ ಬಾಣದಂತೆ'' ಹಾಡು ಹಾಡಿ ವೈರಲ್ ಆಗಿದ್ದೆ. ಅದು ವೈರಲ್ ಆಗುತ್ತದೆ ಅಂತ ನನಗೆ ಗೊತ್ತಿರಲಿಲ್ಲ. ನನ್ನ ಫ್ರೆಂಡ್ಸ್ ಹೇಳಿದ್ರೂ ಅಂತ ಆ ಹಾಡು ಹಾಡಿದ್ದೆ ಅಷ್ಟೇ ಹೊರತು ಆ ಹಾಡಿಗೆ ಅವಮಾನ ಮಾಡುವ ಉದ್ದೇಶ ನನಗಿರಲಿಲ್ಲ ಎಂದು ಹೇಳಿದ್ಧಾರೆ.
ಆದರೂ ಕೂಡ ತುಂಬಾ ಕೆಟ್ಟದಾಗಿ ನನಗೆ ಕಮೆಂಟ್ ಮಾಡಿದರು, ಟ್ರೋಲ್ ಮಾಡಿದರು. ಅದರಿಂದ ನನಗೆ ತುಂಬಾ ನೋವಾಯಿತು ಎಂದು ಹೇಳಿರುವ ನಿತ್ಯಶ್ರೀ, ಅಲ್ಲಿ ನೀನೇನು ದೊಡ್ಡ ಸಾಧಕಿನಾ ಅಂತ ಕಮೆಂಟ್ ಕೂಡ ಬಂತು ಎಂದು ಹೇಳಿದ್ದಾರೆ.
ಆ ಕಮೆಂಟ್‌ನ ನಾನು ಸವಾಲಾಗಿ ತೆಗೆದುಕೊಳ್ಳಬೇಕಂತ ಅನ್ನಿಸಿತು. ಆದರೆ ಹಾಗೆ ಅಂದುಕೊಂಡರು ಕೂಡ ನನಗೆ ಯಾವುದೇ ವೇದಿಕೆ ಸಿಕ್ಕಿರಲಿಲ್ಲ. ಈಗ ವೇದಿಕೆ ಸಿಗುವ ಚಾನ್ಸ್ ಬಂದಿದೆ. ''ಬಿಗ್ ಬಾಸ್'' ನಮಗೋಸ್ಕರನೇ ಈ ವೇದಿಕೆಯನ್ನು ಮಾಡಿಕೊಟ್ಟಿದ್ದಾರೆ ಎಂದು ಹೇಳಿರುವ ನಿತ್ಯಶ್ರೀ, ಈ ವೇದಿಕೆ ಸಿಕ್ಕಿದರೆ ನಾನೇನು ಅಂತ ಇಡೀ ಕರ್ನಾಟಕನೇ ತೋರಿಸಿ ನನ್ನ ಅಪ್ಪ - ಅಮ್ಮನಿಗೆ ಹೆಸರು ಬರುವ ಹಾಗೆ ಮಾಡಿ, ನನ್ನನ್ನು ನಾನು ಕರ್ನಾಟಕದಲ್ಲಿ ಗುರುತಿಸಿಕೊಳ್ಳಬೇಕು. ನನ್ನ ಲೈಫ್‌ನ ಟರ್ನಿಂಗ್ ಪಾಯಿಂಟ್ ''ಬಿಗ್ ಬಾಸ್'' ಆಗಿರುತ್ತೆ ಎನ್ನುವುದು ನನ್ನ ಭಾವನೆ ಅಂದಿದ್ಧಾರೆ. ನಿತ್ಯಶ್ರೀ ಅವರ ಈ ಕನಸು ನನಸಾಗುತ್ತಾ ..? ಉತ್ತರ ಶೀಘ್ರದಲ್ಲಿಯೇ ಸಿಗಲಿದೆ.


Click it and Unblock the Notifications

