ಎಲ್ಲರೂ ಕೇಳ್ತಿದ್ದ ಪ್ರಶ್ನೆಗೆ ಉತ್ತರ ನೀಡಿದ ಅನುಶ್ರೀ, ಮುಂದಿನ ವರ್ಷ ಅದ್ಧೂರಿಯಾಗಿ ನಡೆಯಲಿದೆ ಮಾತಿನ ಮಲ್ಲಿ ಮದುವೆ..!
ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ.
ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಮದುವೆಯ ಪ್ರಶ್ನೆಯನ್ನ ಕೇಳಿ ಕೊಡಬಾರದ ಟಾರ್ಚರ್ ಕೊಡ್ತಾರೆ. ಕನ್ನಡ ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ ಅವರಿಗೆ ಈ ತರಹದ ಅನುಭವ ಅನೇಕ ಬಾರಿಯಾಗಿದೆ.

ಇಷ್ಟೇ ಯಾಕೆ.. ವಯಸ್ಸು ಮೂವತ್ತು ಪ್ಲಸ್ ಆದರೂ, ಅನುಶ್ರೀ ಮದುವೆಯಾಗದೇ ಇರುವುದಕ್ಕೆ ಬೇಸತ್ತ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆಯನ್ನು ಮಾಡಿಸಿದ ಉದಾಹರಣೆ ಇದೆ. ಹೀಗಾಗಿಯೇ ಇದೆಲ್ಲದರಿಂದ ಬೇಸತ್ತು ಮದ್ವೆಯಾಗುವ ಆಲೋಚನೆಯನ್ನೇ ಮಾಡದ ಅನುಶ್ರೀ ಈಗ ಮದುವೆ ಮಾಡಿಕೊಳ್ಳಲು ರೆಡಿಯಾಗಿದ್ದಾರೆ. ಖುದ್ದು ತಮ್ಮ ಮದುವೆಯ ವಿಚಾರವನ್ನು ವೇದಿಕೆ ಮೇಲೆ ಹಂಚಿಕೊಂಡಿದ್ದಾರೆ.
ಹೌದು, ರಂಗು ರಂಗಾಗಿ ಅದ್ದೂರಿಯಾಗಿ ನಡೆದ ಜೀ ಕುಟುಂಬ ಅವಾರ್ಡ್ಸ್ ಸಮಾರಂಭದಲ್ಲಿ ಅಕುಲ್ ಬಾಲಾಜಿ ಮದುವೆಯ ವಿಚಾರದಲ್ಲಿ ಅನುಶ್ರೀ ಕಾಲೆಳೆದಿದ್ದಾರೆ. ಎಲ್‌ಇಡಿಯಲ್ಲಿ ಅನುಶ್ರೀ ಅವರ ನಿಶ್ಚಿತಾರ್ಥದ ಫೋಟೊ ಬರುತ್ತೆ ನೋಡಿ ಎಂದು ಚಮಕ್ ನೀಡಿದ್ದಾರೆ. ಎಲ್‌ಇಡಿಯ ಬಾಗಿಲು ತೆರೆದು ಸಾಕ್ಷಾತ್ ಅವರೇ ನಡೆದುಕೊಂಡು ಬಂದರೆ ಏನು ಮಾಡ್ತೀಯಾ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಆ ನಂತರ ಕಾರ್ಯಕ್ರಮಕ್ಕೆ ಬರದಂತೆ ಆ ಹುಡುಗನನ್ನು ಅನುನೇ ತಡೆದಿದ್ದು ಎಂದಿದ್ದಾರೆ. ನಿಮ್ಮ ಖಾಸಗಿತನಕ್ಕೆ ಗೌರವ ನೀಡಿ ನಾವು ಅವರನ್ನು ಇಲ್ಲಿ ಕರೆಯಲಿಲ್ಲ ಎಂದಿದ್ದಾರೆ.
ಆ ನಂತರ ಮಾತನಾಡಿರುವ ಅನುಶ್ರೀ ನನ್ನ ಮದ್ವೆ ಚಿಂತೆ ನಮ್ಮ ಮನೆಯವರಿಗಿಂತ ಜಾಸ್ತಿ ಯೂಟ್ಯೂಬರ್‌ಗಳಿಗೆ ಇರುವುದು ಎಂದಿದ್ದಾರೆ. ಪ್ರತಿ ವಾರ ಯಾರತೆಲ್ಲ ಸಿಂಗಲ್ ಇದ್ದಾರೆ ಅವರೆಲ್ಲರ ಜೊತೆ ಮದುವೆ ಮಾಡಿಸಿದರು ಎಂದು ಹೇಳಿದ್ದಾರೆ. ಮುಂದುವರೆದು ಎಲ್ಲ ಹುಡುಗಿಗೆ ಇರುವ ಹಾಗೇ ಮದುವೆಯಾಗುವ ಆಸೆ ನನಗೂ ಇದೆ, ನನಗೂ ಜೀವನದಲ್ಲಿ ಒಬ್ಬ ಬಾಳ ಸಂಗಾತಿ ಬರಬೇಕೆನ್ನುವ ಆಸೆ ಇದೆ, ಆದರೆ.. ಎಲ್ಲದಕ್ಕೂ ಅದ್ರದ್ದೇ ಆದ ಸಮಯ ಇರುತ್ತೆ. ಅದ್ರದ್ದೇ ಆದ ಘಳಿಗೆ ಇರುತ್ತೆ ಎಂದಿರುವ ಅನುಶ್ರೀ ಸರಿಯಾದ ಸಮಯಕ್ಕೆ ಸರಿಯಾದ ವ್ಯಕ್ತಿ ಬರಬೇಕಾಗುತ್ತೆ, ಎಲ್ಲಕ್ಕಿಂತ ಹೆಚ್ಚಾಗಿ ಮದುವೆಯಾಗೋಕೆ ನಾನು ಮನಸು ಮಾಡಬೇಕಿತ್ತು, ಆದರೆ ನಾನು ಇಷ್ಟು ವರ್ಷಗಳ ಕಾಲ ಆ ಮನಸು ಮಾಡಿರಲಿಲ್ಲ ಎಂದಿದ್ದಾರೆ. ಆದರೆ ಈಗ ಇದೇ ಮೊದಲ ಬಾರಿ ನಾನು ಮದುವೆಯಾಗುವ ಮನಸು ಮಾಡಿದ್ದೇನೆ ಎಂದಿದ್ದಾರೆ. ಕನ್ನಡಿಗರ ಆಶೀರ್ವಾದದಿಂದ ಮುಂದಿನ ವರ್ಷ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಆ ಸರದಾರ ಆ ಹುಡುಗ ನನ್ನ ಬದುಕಿನಲ್ಲಿ ಬರಲಿ, ಅವನು ಬಂದರೆ ನಿಮ್ಮ ಮುಂದೆ ಕರೆದುಕೊಂಡು ಬಂದು ನಿಲ್ಲಿಸಿ ಅವನನ್ನು ನಿಮ್ಮೆಲ್ಲರಿಗೆ ಪರಿಚಯ ಮಾಡಿಸಿಕೊಡುವ ಅದೃಷ್ಟ ನನ್ನದಾಗಲಿ ಎಂದು ನಾನು ಅಂದುಕೊಳ್ಳುತ್ತೇನೆ ಎಂದಿದ್ದಾರೆ. ಅನುಶ್ರೀ ಹೀಗೆ ಹೇಳಿದ್ದೇ ತಡ ಅಕುಲ್ ಬಾಲಾಜಿ ಮುತ್ತಣ್ಣ ಚಿತ್ರದ ಹಾಡಿಗೆ ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆ ಕಾಮಿಡಿ ಕಿಲಾಡಿಗಳು ನಯನ, ಸೂರಜ್, ಜಗ್ಗಪ್ಪ ಹಾಗೂ ಗಿಲ್ಲಿ ಅವರ ಜೊತೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹರಟೆ ಹೊಡೆಯುತ್ತಿದ್ದ ಅನುಶ್ರೀ, ಚೆನ್ನಾಗಿ ಕೂತಿದ್ದೀರಾ ಕಂಡ್ರೋ ಮದುವೆ ಆಗಿರುವವರು ಒಂದೆಡೆ, ಮದುವೆ ಆಗದೆ ಇರೋರು ಮತ್ತೊಂದೆಡೆ ಎಂದು ಕಾಲೆಳೆದಿದ್ದರು. ಇದಕ್ಕೆ ಗಿಲ್ಲಿ, ನಾವು ಬೇರೆ ಬೇರೆ ಕುಳಿತಿದ್ದೇವೆ. ಮಧ್ಯದಲ್ಲಿ ಕುಳಿತ ನೀವೂ ಮದುವೆಗೆ ರೆಡಿ ಆಗಿದ್ದೀರಾ ಅನು ಅಕ್ಕ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಅನುಶ್ರೀ ಫಿಕ್ಸ್ ಆಗ್ತಿದ್ದೇನೆ ಎಂದು ಹೇಳಿದ್ದರು. ಅನುಶ್ರೀ ಅವರ ಈ ಮಾತು ಕೇಳಿ ಅಕ್ಕಂಗೆ ಲವ್ವಾಗಿದೆ ಎಂದು ಇವರ ಅಭಿಮಾನಿಗಳು ಸಂಭ್ರಮಿಸಿದ್ದರು.


Click it and Unblock the Notifications











