ಯಾಸ್ಮಿನ್ ಎಂದು ಹೆಸರು ಬದಲಿಸಿಕೊಂಡಿದ್ದೇಕೆ ಸೀತಾಲಕ್ಷ್ಮಿ? ಬದುಕಿನ ಕಹಿ ಸತ್ಯ ಹೇಳಿದ ನಟಿ
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಹಣ, ಅಂತಸ್ತು, ಕೀರ್ತಿ, ಎಲ್ಲವೂ ಇರುವ ಕೆಲ ಸೆಲೆಬ್ರೆಟಿಗಳ ಬದುಕಿನಲ್ಲಿ ಒಮ್ಮೊಮ್ಮೆ ಪ್ರೀತಿ ಮರಿಚೀಕೆಯಾಗಿರುತ್ತೆ. ಯಾರನ್ನು ಇವರು ಹೆಚ್ಚು ಪ್ರೀತಿಸುತ್ತಾರೋ? ಅತಿಯಾಗಿ ಮೋಹಿಸುತ್ತಾರೋ? ಇನ್ನಿಲ್ಲದಂತೆ ಇಷ್ಟಪಡುತ್ತಾರೋ ? ಅವರೇ ಕಾಡಿಸಿ ಪೀಡಿಸಿ ನಿರಾಸೆಯನ್ನುಂಟು ಮಾಡುತ್ತಾರೆ.
ಎರಡು ಜೀವ ಒಂದೇ ಉಸಿರು ಎಂದು ನಂಬಿಸಿ ಮದುವೆಯಾಗುತ್ತಾರೆ.ಮದುವೆಯ ನಂತರ ನಂಬಿಕೆ ದ್ರೋಹ ಮಾಡುತ್ತಾರೆ. ಮಾನಸಿಕ ಕಿರುಕುಳ ನೀಡುವುದಲ್ಲದೇ ದೈಹಿಕ ಹಲ್ಲೆ ಕೂಡ ಮಾಡುತ್ತಾರೆ. ಕೇವಲ ಜನಸಾಮಾನ್ಯರ ಬದುಕಿನಲ್ಲಿ ಮಾತ್ರವಲ್ಲ. ಚಿತ್ರರಂಗದಲ್ಲಿ ಕೂಡ ಹೀಗೆ ಹಲವರು ದೌರ್ಜನ್ಯಕ್ಕೊಳಗಾಗಿದ್ದಾರೆ. ಆ ಪೈಕಿ ಸೀತಾ ಲಕ್ಷ್ಮಿ ಕೂಡ ಒಬ್ಬರು.

ಹೌದು, ಸೀತಾ ಲಕ್ಷ್ಮೀ ..ತೆಲುಗಿನ ಖ್ಯಾತ ನಟಿ. ಕಳೆದೊಂದುವರೆ ಎರಡು ದಶಕಗಳಿಂದ ಕಿರುತೆರೆಯ ಮೂಲಕ ಆಂಧ್ರದ ಮನೆ ಮನ ತಲುಪಿರುವ ಸೀತಾ ಲಕ್ಷ್ಮಿ ಸದ್ಯ ''ಕಾರ್ತಿಕ ದೀಪಂ'' ಸೀರಿಯಲ್ ಮಾಡುತ್ತಿದ್ದಾರೆ.
ಇನ್ನು ಕೇವಲ ತೆಲುಗು ಮಾತ್ರವಲ್ಲ ತಮಿಳು ಮತ್ತು ಮಲಯಾಳಂನಲ್ಲಿಯೂ ಅಭಿನಯಿಸಿದ್ದಾರೆ. ಮೋಹನ್ ಲಾಲ್ ಜೊತೆ ಕೂಡ ತೆರೆ ಹಂಚಿಕೊಂಡಿದ್ದಾರೆ. ಕಿರುತೆರೆಯ ಜೊತೆ ಜೊತೆಯಲ್ಲಿ ಬೆಳ್ಳಿತೆರೆಯಲ್ಲಿಯೂ ಮಿಂಚಿದ್ದಾರೆ.
ಇಂಥಾ ಸೀತಾ ಲಕ್ಷ್ಮಿ ಅವರ ವರ್ತನೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಬದಲಾವಣೆ ಕಂಡು ಬರುತ್ತಿತ್ತು. ಒಮ್ಮೆಲೆ ಬುರ್ಖಾ ಧರಿಸಿ ಓಡಾಡಲು ಶುರು ಮಾಡಿದ್ದ ಸೀತಾ ಲಕ್ಷ್ಮಿ ಹಣೆಗೆ ಕುಂಕುಮ ಹಚ್ಚಿಕೊಳ್ಳುವುದನ್ನು ನಿಲ್ಲಿಸಿದ್ದರು. ನಮಾಜ್ ಮಾಡಲು ಶುರು ಮಾಡಿದ್ದರು. ಆ ವಿಡಿಯೋವನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದೆಲ್ಲವನ್ನು ಕಂಡು ಇವರ 2,49,000 ಫಾಲೋವರ್ಸ್ ಕಕ್ಕಾ ಬಿಕ್ಕಿಯಾಗಿದ್ದರು. ಸೀತಾ ಲಕ್ಷ್ಮೀ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಲು ಶುರು ಮಾಡಿದ್ದರು. ಕೆಲವರು ನೇರವಾಗಿ ಸೀತಾ ಲಕ್ಷ್ಮಿ ಅವರಲ್ಲಿ ಈ ಕುರಿತು ಪ್ರಶ್ನೆಯನ್ನು ಕೂಡ ಕೇಳಿದ್ದರು.

ಸದ್ಯ ಇದೇ ಪ್ರಶ್ನೆಗಳಿಗೆ ಸೀತಾ ಲಕ್ಷ್ಮೀ ಉತ್ತರ ನೀಡಿದ್ದಾರೆ. ಬದುಕಿನ ಕೆಲ ಕರಾಳ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಭಾವುಕರಾಗಿದ್ದಾರೆ.ಆ ನಂತರ ಅದೇನಾಯ್ತೋ ತಮ್ಮ ವಿಡಿಯೋ ಡಿಲೀಟ್ ಮಾಡಿದ್ದಾರೆ.
ಡಿಲೀಟ್ ಆದ ವಿಡಿಯೋದಲ್ಲಿ ಈ ಕುರಿತು ಮಾತನಾಡಿದ್ದ ಸೀತಾ ಲಕ್ಷ್ಮೀ, ಕಳೆದ ಹಲವು ದಿನಗಳಿಂದ ನಿಮ್ಮಲ್ಲಿ ಹಲವರು ನನಗೆ ಪ್ರಶ್ನೆ ಕೇಳುತ್ತಿದ್ದರು ಹೆಸರಿನಲ್ಲಿ ಸೀತಾ ಅಂತಿದೆ ಹಣೆಗೆ ಕುಂಕುಮ ಇದ್ದರೆ ಚೆನ್ನಾಗಿರುತ್ತದೆ ಎನ್ನುತ್ತಿದ್ದರು, ನೀವು ಬುರ್ಖಾ ಯಾಕೆ ಹಾಕ್ತೀದ್ದೀರಾ ಎಂದು ಕೇಳುತ್ತಿದ್ದರು,
ಅದಕ್ಕೀಗ ಉತ್ತರ ಕೊಡುವ ಸಮಯ ಬಂದಿದೆ ಎಂದಿದ್ದಾರೆ.
ನನ್ನ ಹೆಸರು ಸೀತಾ ಲಕ್ಷ್ಮೀ, ಅದು ನಮ್ಮ ತಂದೆ-ತಾಯಿ ಇಟ್ಟ ಹೆಸರು. ನನ್ನ ಆಧಾರ್ ಕಾರ್ಡ್, ಬ್ಯಾಂಕ್ ದಾಖಲೆಗಳಲ್ಲಿಯೂ ಇದೇ ಹೆಸರು ಇದೆ ಎಂದು ಹೇಳಿರುವ ಸೀತಾ ಲಕ್ಷ್ಮಿ 2013ರಲ್ಲಿ ನಾನು ಏಕಾಏಕಿ ನಾಲ್ಕು ವರ್ಷ ಕಣ್ಮರೆಯಾದೆ ಈ ಸಮಯದಲ್ಲಿ ಏನೇನಾಯ್ತು ಎನ್ನುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ ಎಂದಿದ್ಧಾರೆ. ಅನುಭವಿಸಿದವರಿಗೆ ಮಾತ್ರ ಅರ್ಥ ಆಗುತ್ತೆ ಎಂದು ಹೇಳಿದ್ಧಾರೆ.
ಅನಿಲ್ ಎಂಬ ವ್ಯಕ್ತಿಯನ್ನು ನಾನು ಮನಸಾರೆ ಪ್ರೀತಿ ಮಾಡಿದ್ದೆ, ಎರಡು ವರ್ಷ ಪ್ರೀತಿಸಿ ಮದುವೆಯಾಗಿದ್ದೆ ಎಂದು ಹೇಳಿರುವ ಸೀತಾ ಲಕ್ಷ್ಮಿ, ಆತ ವಯಸ್ಸಿನಲ್ಲಿ ನನಗಿಂತ ಚಿಕ್ಕವನು ಆದರೂ ಕೂಡ ಇಷ್ಟ ಪಟ್ಟು ಮದುವೆಯಾಗಿದ್ದೆ ಎಂದು ಹೇಳಿದ್ಧಾರೆ. ಹಲವರು ಅವರ ಕ್ಯಾರೆಕ್ಟರ್ ಸರಿ ಇಲ್ಲ ಎಂದು ನನಗೆ ಎಚ್ಚರಿಸಿದ್ದರು, ಆದರೆ ನಾನು ಕೇಳಲಿಲ್ಲ ಎಂದು ಹೇಳಿರುವ ಸೀತಾ ಲಕ್ಷ್ಮಿ ಮದುವೆ ನಂತರ ಅವನ ಬಣ್ಣ ಬಯಲಾಯ್ತು ಎಂದಿದ್ಧಾರೆ.
ಅವನಿಗೆ ನನ್ನ ಮೇಲೆ ಪ್ರೀತಿ ಇರಲಿಲ್ಲ. ಬದಲಿಗೆ ನನ್ನ ದುಡ್ಡಿನ ಮೇಲಿತ್ತು ಎಂದು ಹೇಳಿರುವ ಸೀತಾ ಲಕ್ಷ್ಮಿ, ಮದುವೆ ನಂತರ ಚಿತ್ರಹಿಂಸೆ ನೀಡಿದ ಎಂದು ಹೇಳಿದ್ದಾರೆ. ನಾನು ಗರ್ಭಿಣಿಯಾಗಿದ್ದೆ, ಆದರೂ ಕೂಡ ನನ್ನನ್ನು ಬಿಡದೇ ಒದ್ದ, ಹೊಡೆದ ಎಂದು ಹೇಳಿರುವ ಸೀತಾ ಲಕ್ಷ್ಮಿ ಅದು ಗರ್ಭಪಾತದಲ್ಲಿ ಕೊನೆಯಾಯ್ತು ಎಂದು ಕಣ್ಣೀರಾಗಿದ್ಧಾರೆ.
ಹಾಗೇ ನೋಡಿದರೆ ಮದುವೆಯಾಗಿ ಹತ್ತು ವರ್ಷ, ಆದರೆ ನಾನು ಅವನ ಜೊತೆ ಇದ್ದಿದ್ದು ಕೇವಲ ಮೂರೇ ವರ್ಷ ಎಂದು ಹೇಳಿರುವ ಸೀತಾ ಲಕ್ಷ್ಮಿ, ನನ್ನ ತಾಯಿ ಕ್ಯಾನ್ಸರ್ ದಿಂದ ಅಸ್ವಸ್ಥರಾಗಿದ್ದಾಗ, ನನ್ನ ತಾಯಿ ಹೆಸರಿನಲ್ಲಿ ನಾನು ಖರೀದಿ ಮಾಡಿದ್ದ ಫ್ಲಾಟ್ ಕೇಳಲು ಆತ ಬಂದ, ಸಹಿ ಹಾಕಿದರೆ ನನ್ನ ಜೊತೆ ಇರಬಹುದು ಎಂದ, ಕೊನೆಗೆ ವಿಚ್ಚೇದನ ಪಡೆದೆ ಎಂದು ಹೇಳಿದ್ದಾರೆ.
ಕೊನೆಗೊಂದು ದಿನ ನನ್ನ ಸ್ಕೂಲ್ ಫ್ರೆಂಡ್ ಆದ ಅಬ್ದುಲ್ ಖಾದರ್ ಸಿಕ್ಕ. ಅವರಲ್ಲಿ ನನ್ನ ವಿಷ್ಯ ಎಲ್ಲಾ ಹೇಳಿದೆ. ಆತ ನನಗೆ ಬಾಳು ಕೊಡಲು ಮುಂದೆ ಬಂದ ಎಂದು ಹೇಳಿರುವ ಸೀತಾ ಲಕ್ಷ್ಮಿ, ನನಗೂ ಒಂದು ಆಸರೆ ಬೇಕಿತ್ತು. ಅವರು ತುಂಬಾ ಒಳ್ಳೆಯವರು. ಆದ್ದರಿಂದ ಮದುವೆಯಾದೆ ಎಂದಿದ್ದಾರೆ.
ಸದ್ಯ ನನಗೆ ನನ್ನ ತವರು ಮನೆಯಿಂದ ಯಾವ ರೀತಿಯ ಬೆಂಬಲವೂ ಇಲ್ಲ, ನನ್ನ ಗಂಡನ ಮನೆಯವರೇ ನನಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿರುವ ಸೀತಾಲಕ್ಷ್ಮಿ ಉರ್ಫ್ ಯಾಸ್ಮಿನ್ ಈ ಎಲ್ಲಾ ಕಾರಣಗಳಿಂದ ಕೆಲವೊಂದು ಬದಲಾವಣೆಗಳನ್ನು ನಾನು ನನ್ನ ಜೀವನದಲ್ಲಿ ಮಾಡಿಕೊಂಡಿದ್ದೇನೆ, ಮತಾಂತರಗೊಂಡಿದ್ದೇನೆ, ಹೆಸರು ಬದಲಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಮುಂದುವರೆದು ಯಾಸ್ಮಿನ್ ಎಂದು ನನಗೆ ನಾಮಕರಣ ಮಾಡಿದ್ದು ನನ್ನ ಅತ್ತೆ, ಆದರೆ.. ನಾನು ಚಿತ್ರರಂಗದಲ್ಲಿ ಸೀತಾ ಲಕ್ಷ್ಮೀ ಎಂದೇ ಗುರತಿಸಿಕೊಂಡಿದ್ದೇನೆ, ಹೀಗಾಗಿ ಇಲ್ಲಿ ಇದೇ ಹೆಸರಿನಲ್ಲಿ ಮುಂದುವರೆಯುತ್ತೇನೆ ಎಂದು ಸೀತಾ ಲಕ್ಷ್ಮೀ ಹೇಳಿದ್ಧಾರೆ. ಆ ನಂತರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಡಿಲೀಟ್ ಮಾಡಿದ್ದಾರೆ.


Click it and Unblock the Notifications