ನನ್ನ ಹೆತ್ತ ತಾಯಿಯನ್ನೇ ಬ್ಲಾಕ್ ಮಾಡಿದ್ದೆ ; ಜೀವನದ ಕರಾಳ ದಿನಗಳನ್ನು ನೆನೆದು ಕಣ್ಣೀರಾದ ಬಿಗ್ ಬಾಸ್ ಸ್ಫರ್ಧಿ
ಕಷ್ಟಕಾಲದಲ್ಲಿ ಸಹಾಯಕ್ಕೆ ಬಂದವರೆಲ್ಲ ದೇವರಂತೆ ಕಾಣುತ್ತಾರೆ. ಅದು ಕಷ್ಟ ತೀರುವವರೆಗೆ ಮಾತ್ರ. ಇಂತಹ ಸ್ವಾರ್ಥ ಪ್ರಪಂಚದಲ್ಲಿ ಕಷ್ಟಕಾಲದಲ್ಲಿ ಯಾರೂ ಜೊತೆಯಾಗದಿದ್ದರೂ, ಹೆತ್ತವರು ಅಥವಾ ನಮ್ಮ ಮನೆಯ ಸದಸ್ಯರು ಮಾತ್ರ ನಮ್ಮ ಕೈ ಹಿಡಿಯುತ್ತಾರೆ, ನಮ್ಮ ಜೊತೆ ನಿಲ್ಲುತ್ತಾರೆ ಎನ್ನುವ ನಂಬಿಕೆ ಹಲವರಲ್ಲಿರುತ್ತೆ.
ಯಾಕೆಂದರೆ.. ಇವರಲ್ಲಿ ಸ್ವಾರ್ಥ ಇರುವುದಿಲ್ಲ. ಕಡುಕಷ್ಟದ ಸಮಯದಲ್ಲಿ ಇವರು ನೀಡುವ ಭಾವನಾತ್ಮಕ ಬೆಂಬಲವೇ ಕೆಲವರಿಗೆ ಶಕ್ತಿ ತುಂಬುತ್ತೆ. ಆದರೆ ಕೆಲ ಒಮ್ಮೆ ಇದೇ ಕುಟುಂಬದಲ್ಲಿನ ಆರ್ಥಿಕ ಒತ್ತಡ, ಜನರೇಷನ್ ಗ್ಯಾಪ್, ತಪ್ಪು ತಿಳುವಳಿಕೆ ಈ ಅಂತಿಮ ಆಸರೆಯಿಂದಲೂ ಕೂಡ ದೂರ ತಳ್ಳುತ್ತವೆ. ಉದಾಹರಣೆಗೆ ರಶ್ಮಿ ದೇಸಾಯಿ ಅವರ ಜೀವನಾನುಭವ.

ಹೌದು, ರಶ್ಮಿ ದೇಸಾಯಿ.. ಹಿಂದಿ ಕಿರುತೆರೆಯ ಸುರಸುಂದರಿ. ''ರಾವಣ್''.. ''ಪರಿ ಹು ಮೇ''.. ''ದಿಲ್ ಸೇ ದಿಲ್ ತಕ್''.. ಖ್ಯಾತಿಯ ಚೆಲುವೆ. ''ಉತ್ತರನ್'' ಧಾರಾವಾಹಿ ಮೂಲಕ ಜನಮನ ಗೆದ್ದವರು ಇವರು.
ಆದರೆ.. ಇದೇ ''ಉತ್ತರನ್'' ಧಾರಾವಾಹಿಯ ಸಮಯದಲ್ಲಿ ರಶ್ಮಿ ದೇಸಾಯಿ ಧಾರಾವಾಹಿಯಲ್ಲಿ ಆಕ್ಟ್ ಮಾಡುತ್ತಿದ್ದ ನಂದೀಶ್ ಸಂಧು ಅವರಿಗೆ ಮನ ಸೋತಿದ್ದರು. ಆ ನಂತರ 2012ರಲ್ಲಿ ಮದುವೆ ಕೂಡ ಆದರು.
ಆದರೆ ದುರಾದೃಷ್ಟ. ಈ ಸಂಬಂಧ ಕೇವಲ ನಾಲ್ಕು ವರ್ಷಕ್ಕೆ ಅಂದರೆ 2016ರಲ್ಲಿ ಮುರಿದು ಬಿತ್ತು. ವಿಚ್ಛೇದನದ ಬಳಿಕ ''ಬಿಗ್ ಬಾಸ್-13''ನೇ ಸೀಸನ್‌ನಲ್ಲಿ ರಶ್ಮಿ ಭಾಗವಹಿಸಿದ್ದರು. ಮೂರನೇ ರನ್ನರ್ ಅಪ್ ಕೂಡ ಆಗಿ ಹೊರ ಹೊಮ್ಮಿದ್ದರು. ಇಷ್ಟೇ ಅಲ್ಲ 2015ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಮತ್ತೊಮ್ಮೆ ''ಬಿಗ್ ಬಾಸ್'' ಮನೆ ಪ್ರವೇಶ ಮಾಡಿದ ರಶ್ಮಿ ಈ ಬಾರಿ 5ನೇ ರನ್ನರ್ ಅಪ್ ಆದರು.
ಆ ನಂತರ ಗಂಡನಿಂದ ದೂರವಾದ ದಿನ ಮನೆಯಿಲ್ಲದೆ ಬೀದಿ ಬದಿ ತನ್ನ ಕಾರನ್ನು ನಿಲ್ಲಿಸಿ ಅದರಲ್ಲೇ ಮಲಗಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಮುಂದುವರೆದು ವಿಚ್ಚೇದನದ ಸಮಯದಲ್ಲಿ 3 ರಿಂದ 3.5 ಕೋಟಿ ರೂಪಾಯಿ ಸಾಲದಲ್ಲಿ ಸಿಕ್ಕಿಕೊಂಡಿದ್ದೆ ಎಂದು ಹೇಳಿದ್ದ ರಶ್ಮಿ ದೇಸಾಯಿ ಆಗ ನನ್ನ ಕೈಯಲ್ಲಿ ಕೆಲಸವಿರಲಿಲ್ಲ, ತಿನ್ನೋಕೆ ಊಟ ಇರಲಿಲ್ಲ ಎಂದು ಹೇಳಿದ್ದರು. ನಾಲ್ಕು ದಿನ ನನ್ನ ಔಡಿ 6 ಕಾರಿನಲ್ಲಿ ಮಲಗಿದ್ದೆ ಎಂದು ಹೇಳಿದ್ದರು. ಈ ಮೂಲಕ ಟ್ರೋಲಿಗರಿಗೆ ಆಹಾರವೂ ಆಗಿದ್ದರು. ಹೀಗೆ ವಿಚ್ಚೇದನದ ನಂತರ ಬೇರೆ ಬೇರೆ ದಾರಿಯಲ್ಲಿ ರಶ್ಮಿ ದೇಸಾಯಿ ಮತ್ತು ನಂದೀಶ್ ಸಂಧು ನಡೆಯತೊಡಗಿದರು.

ಇಂಥಾ ರಶ್ಮಿ ದೇಸಾಯಿ ಸದ್ಯ ತಮ್ಮ ಬದುಕಿನ ಪುಟಗಳನ್ನು ತಿರುವಿ ಹಾಕಿದ್ದಾರೆ. ಕಡುಕಷ್ಟದಲ್ಲಿ ನಾನಿದ್ದಾಗ ನನ್ನ ತಾಯಿಯನ್ನೇ ನಾನು ಬ್ಲಾಕ್ ಮಾಡಿದ್ದೇ ಎಂದು ಭಾವುಕರಾಗಿದ್ದಾರೆ. ಹೌದು, ರಾಜೀವ್ ಖಂಡೇಲ್‌ವಾಲ್ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ''ತುಮ್ ಹೋ ನಾ'' ಕಾರ್ಯಕ್ರಮದಲ್ಲಿ ರಶ್ಮಿ ದೇಸಾಯಿ ಭಾಗವಹಿಸಿದ್ದರು.
ಈ ಸಮಯದಲ್ಲಿ ನಿಮ್ಮ ಜೀವನದ ಕಠಿಣ ಹಂತದಲ್ಲಿ ನಿಮ್ಮ ತಾಯಿಯ ಬೆಂಬಲ ಹೇಗಿತ್ತು ಎಂಬ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರ ನೀಡುವ ಸಮಯದಲ್ಲಿ ಭಾವುಕರಾದ ರಶ್ಮಿ ದೇಸಾಯಿ, ನಿಮ್ಮ ಬಳಿ ನಾನು ಸುಳ್ಳು ಹೇಳುವುದಿಲ್ಲ, ನನ್ನ ಬದುಕಿನ ಅತ್ಯಂತ ಕೆಟ್ಟ ಹಂತದ ಆ ಸಮಯದಲ್ಲಿ ನಿಧಿ, ಜೀವಿತಾ ಮತ್ತು ನದೀಮ್ ಭಾಯ್ (ಸಲ್ಮಾನ್ ಖಾನ್ ಆಪ್ತ ) ಈ ಮೂವರಿಗೆ ಮಾತ್ರ ನನ್ನ ಪರಿಸ್ಥಿತಿಯ ಸಂಪೂರ್ಣ ಸತ್ಯ ಗೊತ್ತಿತ್ತು ಎಂದಿದ್ದಾರೆ.
ಮಾನಸಿಕ ಒತ್ತಡದಿಂದ ನನ್ನ ಮತ್ತು ನನ್ನ ತಾಯಿಯ ನಡುವೆ ಗೋಡೆಯೇ ನಿರ್ಮಾಣವಾಗಿತ್ತು ಎಂದು ಹೇಳಿರುವ ರಶ್ಮಿ ದೇಸಾಯಿ, ಆ ಸಮಯದಲ್ಲಿ ನದೀಮ್ ಭಾಯ್ ನನಗೆ ತುಂಬಾನೇ ಸಹಾಯ ಮಾಡಿದರು ಎಂದು ಹೇಳಿದ್ದಾರೆ. ಆಗ ನಾನು ನನ್ನ ತಾಯಿಯ ಜೊತೆ ಮಾತನಾಡುತ್ತಲೇ ಇರಲಿಲ್ಲ, ನನ್ನ ತಾಯಿಯನ್ನು ಸೇರಿ ಇಡೀ ಕುಟುಂಬದ ಸದಸ್ಯರನ್ನೇ ನಾನು ಬ್ಲಾಕ್ ಮಾಡಿದ್ದೆ ಎಂದಿದ್ದಾರೆ.
ಮುಂದುವರೆದು ಆ ಸಮಯದಲ್ಲಿ ತಮ್ಮ ಜೀವನವೇ ಮುಗಿದುಹೋಯಿತು ಎಂದು ಅನಿಸುತ್ತಿತ್ತು. ಕೆರಿಯರ್ ಕೂಡ ಇರಲಿಲ್ಲ, ವೈಯಕ್ತಿಕ ಜೀವನವೂ ಚೆನ್ನಾಗಿರಲಿಲ್ಲ, ಆರ್ಥಿಕವಾಗಿಯೂ ಪರಿಸ್ಥಿತಿ ಹದಗೆಟ್ಟಿತ್ತು ಎಂದು ಹೇಳಿರುವ ರಶ್ಮಿ ನನ್ನ ಹತ್ತಿರ ದುಡ್ಡೂ ಇರಲಿಲ್ಲ, ನಂಬಬಹುದಾದ ವ್ಯಕ್ತಿಯೂ ಯಾರೂ ಇರಲಿಲ್ಲ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಹೀಗೆ ಎದುರಾಗುವ ಕಷ್ಟಗಳೇ ಬದುಕು ನಮಗೆ ಕಲಿಸುವ ಪಾಠ ಎಂದು ಹೇಳಿರುವ ರಶ್ಮಿ ದೇಸಾಯಿ ಮನುಷ್ಯರು ತಪ್ಪುಗಳಿಂದಲೇ ಕಲಿಯುತ್ತಾರೆ ಎಂದು ಹೇಳಿದ್ದಾರೆ. ಜೀವನವನ್ನು ಮತ್ತೆ ಹೊಸದಾಗಿ ಶುರು ಮಾಡುವುದರಲ್ಲಿ ತಪ್ಪೇನಿಲ್ಲ ಎಂಬುದನ್ನು ಅರಿತುಕೊಂಡೆ, ಜೀವನದಲ್ಲಿ ಎಲ್ಲರೂ ನಿಮ್ಮ ವಿರುದ್ಧವಾದಾಗ, ನಮ್ಮ ಜೊತೆ ಇರುವವರು ಮಾತ್ರ ನಿಜವಾದ ನಮ್ಮವರು ಎಂದು ರಶ್ಮಿ ಹೇಳಿದ್ದಾರೆ.


Click it and Unblock the Notifications