ಸರ್ಕಾರಿ ಕೆಲಸ, ಮುಂಗೋಪ ; ಆಕೆ ನನ್ನ ಬಂಗಾರ - ಆ*ತ್ಮಹತ್ಯೆಗೆ ಶರಣಾದ ನಂದಿನಿ ನೆನೆದು ತಾಯಿ ಕಣ್ಣೀರು
ಸಮಸ್ಯೆಗಳಿಗೆ ಆತ್ಮ*ಹತ್ಯೆ ಒಂದೇ ಪರಿಹಾರ ಅಲ್ಲ. ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಹೊಂದಬೇಕು. ಸಮಸ್ಯೆ ಬಂದಾಗ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆದರೆ ವಿಶ್ವದೆಲ್ಲೆಡೆ ಆತ್ಮ*ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಿಂದೊಮ್ಮೆ ಆತ್ಮ*ಹತ್ಯೆ ಪ್ರಕರಣ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಇದು ಸಾಮಾಜಿಕ ಸಮಸ್ಯೆ ಎಂದು ಕೂಡ ಹೇಳಿದೆ. ಪ್ರತಿ 100 ಜನರಲ್ಲಿ 70 ಜನ..
ಪುರುಷರೇ ಆತ್ಮ*ಹತ್ಯೆ ಮಾಡಿಕೊಳ್ಳುತ್ತಾರೆ..ಎಂದು ಎನ್‌ಸಿಆರ್‌ಬಿ { ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ } ಕೂಡ ವರದಿ ನೀಡಿದೆ. ಇಷ್ಟೇ ಅಲ್ಲದೇ ಶೇಕಡಾ 36 % ಮಹಿಳೆಯರು ಆತ್ಮ*ಹತ್ಯೆಗೆ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದೆ. ಆತ್ಮ*ಹತ್ಯೆ ಮಾಡಿಕೊಳ್ಳುವುದರಲ್ಲಿ ಪುರುಷರು ಮತ್ತು ಆತ್ಮ*ಹತ್ಯೆಗೆ ಪ್ರಯತ್ನಿಸುವರಲ್ಲಿ ಮಹಿಳೆಯರು ಮುಂದಿರುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. ಜೀವನದಲ್ಲಿ ನಾನಾ ಸಮಸ್ಯೆಗಳಿಂದ ಬೇಸತ್ತು, ತಾಳ್ಮೆಯ ಕೊರತೆಯಿಂದ ಆತ್ಮ*ಹತ್ಯೆ ಮಾಡಿಕೊಳ್ಳುವರ ಸಂಖ್ಯೆ ಈಗೀಗ ಹೆಚ್ಚಾಗುತ್ತಿದೆ. ಇದಕ್ಕೆ ''ನೀನಾದೆ ನಾ'' ಮತ್ತು ''ಗೌರಿ'' ಖ್ಯಾತಿಯ ನಂದಿನಿ ದುರಂತ ಅಂತ್ಯ ಮತ್ತೊಂದು ಉದಾಹರಣೆ.

ಹೌದು, ನಂದಿನಿ.. ಮೂಲತಃ ವಿಜಯನಗರ ಜಿಲ್ಲೆಯ ಕೊಟ್ಟೂರಿನವರು. ಮಾಡೆಲಿಂಗ್ ಲೋಕದಲ್ಲಿ ಮಿಂಚುತ್ತಲೇ ಕನ್ನಡದ ಕಿರುತೆರೆಯನ್ನು ಪ್ರವೇಶ ಮಾಡಿದ್ದ ನಂದಿನಿ ''ಜೀವ ಹೂವಾಗಿದೆ''.. ''ಸಂಘರ್ಷ''.. ''ನೀನಾದೆ ನಾ''.. ''ಮಧುಮಗಳು''.. ''ಅಣ್ಣ ತಂಗಿ'' ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ತಮ್ಮ ಅಭಿನಯದ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದರು.
ಆ ನಂತರ ತಮಿಳಿನತ್ತ ವಲಸೆ ಹೋಗಿದ್ದ ನಂದಿನಿ ಸದ್ಯ ''ಗೌರಿ'' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ''ಕಲೈನರ್ ಟಿವಿ''ಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ನಂದಿನಿ ಅವರಿಗೆ ಅಪಾರವಾದ ಹೆಸರು ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟಿತ್ತು. ''ಕನಕ'' ಮತ್ತು ''ದುರ್ಗಾ'' ಎಂಬ ಎರಡು ವಿಭಿನ್ನ ಪಾತ್ರಗಳನ್ನು ನಂದಿನಿ ಈ ಧಾರಾವಾಹಿಯಲ್ಲಿ ನಿರ್ವಹಿಸುತ್ತಿದ್ದರು. ದ್ವಿಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ಅಭಿನಯದ ಮೂಲಕ ತಮಿಳುನಾಡಿನೆಲ್ಲೆಡೆ ಮನೆ ಮಾತಾಗಿದ್ದರು.
ಇಂಥಾ ನಂದಿನಿ ನಿನ್ನೆ ( ಡಿಸೆಂಬರ್ 29) ನೇಣಿಗೆ ಶರಣಾದರು. ನಂದಿನಿ ಅವರ ಈ ನಿರ್ಧಾರದಿಂದ ಸಹಜವಾಗಿಯೇ ಕಿರುತೆರೆ ಲೋಕ ಆಘಾತಕ್ಕೀಡಾಗಿದೆ. ಕೇವಲ ಕನ್ನಡ ಮಾತ್ರವಲ್ಲ ತಮಿಳಿನ ಕಿರುತೆರೆಯಲ್ಲಿ ಕೂಡ ಶೋಕ ಮಡುಗಟ್ಟಿದೆ. ಇನ್ನು ನಂದಿನಿ ಅವರ ಹೆತ್ತ ತಾಯಿಯ ಆರ್ತನಾದ ಹೇಳಲು ಅಸಾಧ್ಯ. ಎದೆಯೆತ್ತರಕ್ಕೆ ಬೆಳೆದ ಮಗಳ ದುಡುಕಿನ ನಿರ್ಧಾರದಿಂದ ದುಃಖದ ಅವರ ತಾಯಿ ಮಡುವಿನಲ್ಲಿದ್ದಾರೆ. ದುಃಖದಲ್ಲಿಯೇ ಮಾಧ್ಯಮದವರಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಮಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಮಾಧ್ಯಮದವರ ಮುಂದೆ ತಮ್ಮ ಮಗಳ ಕುರಿತು ಮಾತನಾಡಿರುವ ನಂದಿನಿ ಅವರ ತಾಯಿ ಬಸವರಾಜೇಶ್ವರಿ ಟೀಚಿಂಗ್ ಕೆಲಸ ನಿನಗೆ ಇಷ್ಟವಾಗಲಿಲ್ಲ ಅಂದ್ರೆ ಬಿಡು. ಇಷ್ಟವಿದ್ದರೆ ಮಾಡು. ನೀನು ತುಂಬಾ ಸ್ಲಿಮ್ ಆಗುತ್ತಿದ್ಯಾ? ಆರೋಗ್ಯ ಕಡೆ ಗಮನ ಕೊಡು ಎಂದು ಹೇಳಿದ್ದೇ ಎಂದಿದ್ದಾರೆ. ಅಲ್ಲಿ ಇಷ್ಟವಿದ್ದರೆ ಇರು. ಇಲ್ಲದಿದ್ದರೆ ಬಂದು ಬಿಡು. ಮನೆಯಲ್ಲಿ ಇರು. ನಮಗೆ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ ಎಂದಿದ್ದೆ ಎಂದು ಮಗಳ ಜೊತೆಗಿನ ತಮ್ಮ ಸಂಬಂಧ ನೆನೆದು ಬಿಕ್ಕಿದ್ದಾರೆ.

ನನ್ನ ಮಗಳು ಸ್ವಲ್ಪ ಮುಂಗೋಪಿಯಾಗಿದ್ದಳು, ಸಿಟ್ಟು ಸಿಟ್ಟು ಮಾಡುತ್ತಿದ್ದಳು ಎಂದು ಹೇಳಿರುವ ಬಸವರಾಜೇಶ್ವರಿ ಬೆಂಗಳೂರಿನಲ್ಲಿ ಇದ್ದಾಗ ಆ್ಯಕ್ಟಿಂಗ್ ಕೋರ್ಸ್ ಮಾಡ್ತೀನಿ ಅಂದಳು, ಅದಕ್ಕೂ ವಿರೋಧ ಮಾಡಿರಲಿಲ್ಲ. ನಾನು ಶಿಕ್ಷಕಿಯಾಗಿದ್ದೆ, ನಮ್ಮ ಯಜಮಾನರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅವರು ತೀರಿಕೊಂಡ ಬಳಿ ಅನುಕಂಪ ಆಧಾರಿತ ನೌಕರಿ ಮಾಡಲು ಹೇಳಿದಾಗ ಬೇಡ ಅಂದಳು. ಹೀಗಾಗಿ, ಅದನ್ನ ಅಲ್ಲಿಗೆ ಬಿಟ್ಟುಬಿಟ್ಟಿದ್ದೆವು ಎಂದು ಹೇಳಿದ್ದಾರೆ. ನನ್ನ ಮಗಳಿಗೆ ನಾನೇ ಮಹಾನಟಿ ಅಂತಾ ಬಿರುದು ಕೊಟ್ಟಿದ್ದೆ ಎಂದು ಕಣ್ಣೀರು ಹಾಕಿದ್ದಾರೆ.
ಮುಂದುವರೆದು ಕೆಲ ದಿನಗಳ ನಂತರ ಅವಳೇ ಮತ್ತೆ ಕೆಲಸ ಮಾಡುವುದಾಗಿ ಹೇಳಿದ್ದಳು ಎಂದಿರುವ ಬಸವರಾಜೇಶ್ವರಿ ಆ ನಂತರ ಮತ್ತೆ ಕೆಲ ದಿನ ಆದ ಮೇಲೆ ನನಗೆ ಧಾರಾವಾಹಿಯಲ್ಲಿ ಚೆನ್ನಾಗಿ ಅವಕಾಶಗಳು ಸಿಗುತ್ತಿವೆ, ಹೀಗಾಗಿ ಸರಕಾರಿ ಕೆಲಸ ಬೇಡ ಅಂದಳು ಎಂದು ನೆನಪು ಮಾಡಿಕೊಂಡಿದ್ದಾರೆ.
ಶನಿವಾರ ನಾನು ಬೆಂಗಳೂರಿಗೆ ಹೊರಟಿದ್ದೆ. ಇವಳಿಗಾಗಿ ನಾನು ತಿಂಡಿ ಮಾಡಿಕೊಂಡು ಹೋಗಿದ್ದೆ. ಮಗಳಿಗೆ ಕೆಂಪು ಚೆಟ್ನಿ ಅಂದ್ರೆ ಇಷ್ಟ ಅಂತಾ ಅದನ್ನು ಮಾಡಿಕೊಂಡು, ಎಳ್ಳು ಬೆಲ್ಲ ತೆಗೆದುಕೊಂಡು ಎಲ್ಲವನ್ನೂ ರೆಡಿ ಮಾಡಿಕೊಂಡು ಇದ್ದೆ ಎಂದು ಹೇಳಿರುವ ಬಸವರಾಜೇಶ್ವರಿ ರಜೆ ಇದ್ದರೆ ಮನೆಗೆ ಬಾ ಎಂದು ಹೇಳೋಣ ಅನ್ಕೊಂಡಿದ್ದೆ ಎಂದು ಹೇಳಿದ್ದಾರೆ.
ಭಾನುವಾರ ನಾನು ನನ್ನ ಅಮ್ಮನ ಮನೆಗೆ ಹೋಗಿದ್ದೆ ಎಂದು ಹೇಳಿರುವ ನಂದಿನಿ ತಾಯಿ ನಾನು ಅಮ್ಮನ ಕರೆದುಕೊಂಡು ಹೋಗಿ, ನೆಲಮಂಗಲದಲ್ಲಿ ಒಂದೆರಡು ಮನೆ ನೋಡಿಕೊಂಡು ಬಂದಿದ್ವಿ. ಮನೆಯ ವಿಡಿಯೋಗಳನ್ನ ಮಾಡಿಕೊಂಡು ಬಂದಿದ್ದೆ. ಆಕೆಗೆ ತೋರಿಸಿ ಅವಳಿಗೆ ಇಷ್ಟವಾಗಿದ್ದರೆ ತಗೊಳ್ಳೋಣ ಅನ್ಕೊಂಡಿದ್ದೆ, ಆದರೆ ಅಷ್ಟರಲ್ಲಿ ಇಷ್ಟೆಲ್ಲಾ ಆಯ್ತು ಎಂದು ಭಾವುಕರಾಗಿದ್ದಾರೆ. ನನ್ನ ಮಗಳು ಬಂಗಾರ, ದಯವಿಟ್ಟು ಆಕೆಯ ಬಗ್ಗೆಯಾಗಲಿ ನಮ್ಮ ಬಗ್ಗೆ ಆಗಲಿ ಅಪಪ್ರಚಾರ ಮಾಡಬೇಡಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.


Click it and Unblock the Notifications











