ನಾನು 100% ನಿಜಾ ಹೇಳಿದ್ರೆ ಜನ ನನ್ನ ದೇವತೆ ಮಾಡ್ಬಿಡ್ತಾರೆ ; ವೈಯಕ್ತಿಕ ಬದುಕಿನ ಕಠೋರ ಸತ್ಯ ಹೇಳಿದ ಜಾಹ್ನವಿ
ನಗು ಹಿಂದೆ ನೋವು ಇದ್ದರೂ ಪರವಾಗಿಲ್ಲ. ಆದರೆ ನಂಬಿಕೆಯ ಹಿಂದೆ ಯಾವತ್ತು ಮೋಸ ಇರಬಾರದು. ಕೈ ಹಿಡಿದು ನಡೆಸುವವರು ಜೊತೆಯಿಲ್ಲದಿದ್ದರೂ ಪರವಾಗಿಲ್ಲ, ಆದರೆ ನಂಬಿಸಿ ಕೈಬಿಡುವ ಗುಣ ಮಾತ್ರ ಇರಬಾರದು. ಕಷ್ಟಗಳು ಸಾಲು ಸಾಲಾಗಿ ಬಂದರೂ ಪರವಾಗಿಲ್ಲ, ಆದರೆ ಸ್ನೇಹದ ಮುಖವಾಡ ಹೊತ್ತು ಹಿತ ಶತ್ರುಗಳು ಅಕ್ಕ-ಪಕ್ಕ ಇರಬಾರದು.
ಪ್ರೀತಿಸುವವರು ದೂರವಾದರೂ ಪರವಾಗಿಲ್ಲ, ಆದರೆ ಆ ಪ್ರೀತಿಯ ಹಿಂದೆ ಸ್ವಾರ್ಥದ ಹಸಿವು ಇರಬಾರದು. ಯಾರೂ ಇಲ್ಲದಿದ್ದರೂ ಒಂಟಿಯಾಗಿ ಬದುಕಬಹುದು, ಆದರೆ ನಂಬಿಕೆ ದ್ರೋಹಿಗಳ ಜೊತೆ ಬದುಕು ಸಾಗಬಾರದು. ಈ ಎಲ್ಲ ಮಾತುಗಳಿಗೆ ಪ್ರತಿಬಿಂಬದಂತೆ ಇದೆ ಜಾಹ್ನವಿ ಅವರ ವೈಯಕ್ತಿಕ ಬದುಕು.

ಹೌದು, ಜಾಹ್ನವಿ.. ಕಳೆದ ವರ್ಷ ''ಬಿಗ್ ಬಾಸ್'' ಸ್ಫರ್ಧಿ. ಕಳೆದ ಬಾರಿ ''ಬಿಗ್ ಬಾಸ್'' ಫಿನಾಲೆ ತಲುಪುವರ ಸಾಲಿನಲ್ಲಿ ಹಲವರ ಪ್ರಕಾರ ಜಾಹ್ನವಿ ಮುಂಚೂಣಿಯಲ್ಲಿದ್ದರು.
ಆದರೆ..ಜಾಹ್ನವಿ ಅದೆಲ್ಲಿ ಎಡವಿದರು ಎನ್ನುವುದು ''ಬಿಗ್ ಬಾಸ್''ಗೆ ಗೊತ್ತಾದರೂ ''ಬಿಗ್ ಬಾಸ್'' ಸ್ಫರ್ಧಿ ಎಂಬ ಲೆಬಲ್‌ನ ಹೊರತಾಗಿ ಕನ್ನಡ ಸುದ್ದಿ ಲೋಕದಲ್ಲಿ ನಿರೂಪಕಿಯಾಗಿ ಕೂಡ ಹೆಸರು ಮಾಡಿದವರು ಜಾಹ್ನವಿ.
ತಮ್ಮ ಮಾತು ಮತ್ತು ತಮ್ಮ ಜ್ಞಾನದಿಂದಲೇ, ಅತ್ಯಲ್ಪ ಅವಧಿಯಲ್ಲಿಯೇ ಮಾಧ್ಯಮ ಲೋಕದಲ್ಲಿ ಹೆಸರು ಸಂಪಾದಿಸಿದ ಜಾಹ್ನವಿ ''ಬಿಗ್ ಬಾಸ್'' ಮನೆಯಿಂದ ಹೊರ ಬಂದ ನಂತರ ಸದ್ಯ ಚಿತ್ರರಂಗದತ್ತ ಗಮನ ವಹಿಸಿದ್ದಾರೆ. ಕಿರುತೆರೆಯ ಮೇಲೆ ಕೂಡ ಕಣ್ಣಿಟ್ಟಿದ್ದಾರೆ. ಇದೇ ಸಮಯದಲ್ಲಿ ತಮ್ಮ ವೈಯಕ್ತಿಕ ಬದುಕಿನ ಸುತ್ತ ಮುತ್ತ ಕೇಳಿ ಬರುವ ಮಾತು ಮತ್ತು ಆರೋಪಗಳ ಕುರಿತು ಮಾತನಾಡುತ್ತಾ ಕಣ್ಣೀರಾಗಿದ್ದಾರೆ.
ಹೌದು, ಅಸಲಿಗೆ ''ಬಿಗ್ ಬಾಸ್'' ಮನೆಯಲ್ಲಿದ್ದಾಗ ಜಸ್ಟ್ ಮಾತ್ ಮಾತಲ್ಲಿ ತಮ್ಮ ಡಿವೋರ್ಸ್ ವಿಚಾರವನ್ನು ಜಾಹ್ನವಿ ಮಾತನಾಡಿದ್ದರು. ಡಿವೋರ್ಸ್ ಆಗುವ ಮುಂಚೆಯೇ ಅವರಿಗೆ ಮದುವೆ ಆಗಿ ಮಗು ಇದ್ದ ವಿಚಾರ ಗೊತ್ತಾಯ್ತು. ಅವರು ಮದುವೆಯಾಗಿದ್ದು ಬೇರೆ ಯಾರು ಅಲ್ಲ ಬದಲಿಗೆ ನನ್ನ ಫ್ರೆಂಡ್‌ನ್ನೇ ಎಂದು ಹೇಳಿದ್ದರು.

ಜಾಹ್ನವಿ ಅವರ ಈ ಮಾತುಗಳಿಂದ ಕೆರಳಿ ಕೆಂಡವಾಗಿದ್ದ ಇವರ ಮಾಜಿ ಪತಿ ಕಾರ್ತಿಕ್ ಮಾಧ್ಯಮದವರ ಎದುರು ಧಗಧಗಿಸಿದ್ದರು. ಗಂಡನನ್ನು ಬಿಟ್ಟು ಬೇರೆ ವ್ಯಕ್ತಿ ಜೊತೆ ಕಮ್ಯೂನಿಕೇಷನ್‌ನಲ್ಲಿ ಇದ್ದಾಗ ಅದನ್ನು ಯಾರು ಸಹಿಸಿಕೊಳ್ತಾರೆ ಎಂದು ಪ್ರಶ್ನೆ ಮಾಡಿದ್ದ ಕಾರ್ತಿಕ್, ವಿವರವಾಗಿ ಹೇಳಲು ನನಗೆ ಇಷ್ಟವಿಲ್ಲ. ಅವಳು ಕೆಳಮಟ್ಟಕ್ಕೆ ಇಳಿದು ಮಾತನಾಡ್ತಾಳೆ ಅಂದ್ರೆ, ಆ ರೀತಿ ನನಗೆ ಮಾತನಾಡಲು ಇಷ್ಟವಿಲ್ಲ ಎಂದು ಹೇಳಿದ್ದರು.
ಇಷ್ಟೇ ಅಲ್ಲ ಹೆಣ್ಣು ಎನ್ನುವ ಕಾರಣಕ್ಕೆ ಗೌರವ ಕೊಡ್ತೀನಿ. ಅವಳು ಏನೇನೋ ಹೇಳಿಕೆ ಕೊಡಬಹುದು. ಅದು ಸತ್ಯ ಅಲ್ಲ. ಆಕೆ ಬೇರೆ ವ್ಯಕ್ತಿ ಜೊತೆ ಮಾತನಾಡುವುದು ನೋಡ್ತಾ ಸುಮ್ಮನಿರಲು ಸಾಧ್ಯವಿಲ್ಲ. ಹಂಗಾಗಿ ನಾನು ಕುಡಿದು ಆಕೆಗೆ ಹೊಡೆದಿದ್ದೀನಿ ಎಂದು ಗುಡುಗಿದ್ದರು ಕಾರ್ತಿಕ್. ಸದ್ಯ ಜಾಹ್ನವಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಮಾತನಾಡಿದ್ದಾರೆ. ತಮ್ಮ ಮನದ ನೋವು ಹಂಚಿಕೊಂಡಿದ್ಧಾರೆ.
ಈ ಕುರಿತು ''ನ್ಯೂಸೋ ನ್ಯೂಸು'' ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜಾಹ್ನವಿ, ''ಬಿಗ್ ಬಾಸ್'' ಮನೆಯಿಂದ ಹೊರ ಬಂದ ನಂತರ ಜೊತೆಯಲ್ಲಿ ಇದ್ದವರೇ ನನ್ನ ಬಗ್ಗೆ ಬಹಳ ಕೆಟ್ಟದಾಗಿ ಮಾತಾಡಿದ್ದಾರೆ ಅಂತ ಗೊತ್ತಾಯ್ತು ಎಂದು ಹೇಳಿದ್ದಾರೆ.
ಆಗ ನನ್ನ ಕುಟುಂಬದವರು ಕೂಡ ನೀನೂ ನಿಜ ಹೇಳು, ಸತ್ಯ ಗೊತ್ತಾಗಬೇಕು, ಅವರ ಬಂಡವಾಳ ಗೊತ್ತಾಗಬೇಕು ಎಂದು ಹೇಳಿದರು ಎಂದು ಹೇಳಿರುವ ಜಾಹ್ನವಿ, ನಾನು ಮಾಧ್ಯಮಗಳಲ್ಲಿ ಎಲ್ಲೋ ಒಂದು 0.001% ಮಾತಾಡಿರಬಹುದು ಅಷ್ಟೇ. ನನ್ನ ಪರ್ಸನಲ್ ವಿಚಾರದ ಬಗ್ಗೆ 100% ಸತ್ಯ ಮಾತಾಡಿದ್ರೆ ನನ್ನನ್ನ ಇವತ್ತು ಜನರು ದೇವತೆ ಮಾಡಿಬಿಡ್ತಾರೇನೋ ಎಂದು ಹೇಳಿದ್ದಾರೆ. ಸತ್ಯ ಅಷ್ಟೊಂದು ಕಠೋರವಾಗಿದೆ ಎಂದಿದ್ದಾರೆ.

ಆ ಸತ್ಯ ನನ್ನಲ್ಲೇ ಇರಲಿ, ಬೇರೆಯವರು ನನ್ನನ್ನು ಕೆಟ್ಟೋಳು ಮಾಡಿದ್ದಾರಲ್ಲ ಮಾಡ್ಲಿ. ಎಲ್ಲದಕ್ಕೂ ಕಾಲ ಅನ್ನೋದು ಇರುತ್ತಲ್ವಾ..? ಎಂದು ಪ್ರಶ್ನೆ ಮಾಡಿರುವ ಜಾಹ್ನವಿ ಕಾಲಾಯ ತಸ್ಮೈ ನಮಃ ಎಂದಿದ್ದಾರೆ. ಕಾಲವೇ ಸರಿಯಾದ ಉತ್ತರ ಕೊಡುತ್ತೆ ಎಂದಿದ್ದಾರೆ.
ಮುಂದುವರೆದು ನಾನೇನಾದರೂ ಅವರ ಬಂಡವಾಳಗಳನ್ನೆಲ್ಲಾ ಬಿಚ್ಚಿಟ್ಟುಬಿಟ್ಟರೆ ಇವತ್ತು ಬಹುಶಃ ನನ್ನನ್ನ ದೇವತೆ ಮಾಡ್ತಾರೇನೋ. ನನಗೆ ಅದು ಬೇಕಾಗಿಲ್ಲ. ಕೆಟ್ಟವಳ ಹಾಗೇ ಇದ್ದುಬಿಡೋಣ ಎಂದು ಕೂಡ ಹೇಳಿರುವ ಜಾಹ್ನವಿ ನನ್ನ ಅಣ್ಣ ಆಗಿರಬಹುದು, ನನ್ನ ಅಮ್ಮ ಆಗಿರಬಹುದು, ಇಂದು ನನ್ನ ಬಗ್ಗೆ ಅವರೆಲ್ಲಾ ಹೆಮ್ಮೆ ಪಡ್ತಾರೆ ಅಷ್ಟೇ ಸಾಕು ಎಂದಿದ್ದಾರೆ.
ನನ್ನ ಅಣ್ಣ ಇವತ್ತು ಸ್ಟೇಟಸ್ ಅಲ್ಲಿ ನನ್ನ ತಂಗಿ ನನ್ನ ಹೆಮ್ಮೆ ಅಂತ ಹಾಕೊಳ್ತಾನೆ ಅಂದ್ರೆ ಸುಮ್ಮನೆ ಅಲ್ಲ. ನಮ್ಮ ಅಣ್ಣ ತುಂಬಾ ಡಿಸಿಪ್ಲಿನ್ಡ್. ಹೀಗೇ ಇರಬೇಕು, ಹಾಗೆ ಇರಬೇಕು ಅಂತ ಬದುಕಿದವರು ಅವರು ಎಂದು ಹೇಳಿರುವ ಜಾಹ್ನವಿ ಅಂಥವರು ನಮ್ಮನ್ನು ಮೆಚ್ಚಿಕೊಂಡ್ರೆ ನನಗೆ ಅಷ್ಟು ಸಾಕು. ಒಳ್ಳೆಯವರು ನಮ್ಮನ್ನು ಮೆಚ್ಚಿಕೊಂಡ್ರೆ ಸಾಕು. ಹೊರಗಡೆಯವರು ಏನೂ ಉತ್ತರ ಕೊಡೋದು ಬೇಕಾಗಿಲ್ಲ ಎಂದು ಹೇಳಿದ್ದಾರೆ.
ಯಾರೋ ಒಬ್ಬ ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದನ್ನ ಕೆಲವರು ಮಾತಾಡಬಹುದು. ಬಟ್ ಆ ಸ್ಟೇಟ್ಮೆಂಟ್ ಕೊಟ್ಟಿರುವಂತಹ ವ್ಯಕ್ತಿಗೂ ಕೂಡ ನಾನೇನು, 14 ವರ್ಷ ಹೇಗಿದ್ದೆ, ಪ್ರತಿಯೊಂದೂ ಗೊತ್ತಿದೆ ಎಂದು ಹೇಳಿರುವ ಜಾಹ್ನವಿ ಇದಕ್ಕೆಲ್ಲಾ ಕಾಲವೇ ಉತ್ತರ ಕೊಡುತ್ತೆ. ಈಗ ನಾನದನ್ನ ದೊಡ್ಡದು ಮಾಡಲ್ಲ ಎಂದು ಹೇಳಿದ್ದಾರೆ. ಎಲ್ಲದಕ್ಕೂ ನನ್ನ ಮಗ ಅಡ್ಡ ಬರ್ತಾನೆ. ಈಗ ಕೊಚ್ಚೆ ಮೇಲೆ ಕಲ್ಲೆಸೆಯುತ್ತಾ ಕೂತರೆ ನಮ್ಮ ಮೇಲೆ ಹಾರುತ್ತೆ ಎಂದು ಹೇಳಿರುವ ಜಾಹ್ನವಿ ನಾನು ಮೌನವಾಗಿರಬಹುದು ಆದರೆ ದೇವರು ಎಲ್ಲವನ್ನೂ ನೋಡ್ತಾ ಇರ್ತಾನೆ ಅಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ. ತಮ್ಮ ಮನದ ನೋವನ್ನು ಈ ಮೂಲಕ ಹಂಚಿಕೊಂಡಿದ್ದಾರೆ.


Click it and Unblock the Notifications











