"ನಾನು ಇಲ್ಲಿಯ ತನಕ ಯಾವುದೇ ಪಾತ್ರಕ್ಕೂ ಆಡಿಶನ್ ನೀಡಿಲ್ಲ" : 'ಲಕ್ಷ್ಮಿ ಬಾರಮ್ಮ' ನಟಿ ಅನಿಕಾ ಸಿಂಧ್ಯಾ
'ಕಾದಂಬರಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಅನಿಕಾ ಸಿಂಧ್ಯ ಪಾಸಿಟಿವ್ ಪಾತ್ರಗಳಿಗಿಂತ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಬರೋಬ್ಬರಿ ಮೂವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಅಂಗಳದಲ್ಲಿ ಖಳನಾಯಕಿಯಾಗಿಯೇ ಗುರುತಿಸಿಕೊಂಡಿರುವ ಅನಿಕಾ ಸಿಂಧ್ಯಾ ಅವರು ಯಾವ ಪಾತ್ರಕ್ಕೂ ಆಡಿಶನ್ ಕೊಟ್ಟೆ ಇಲ್ಲವಂತೆ. ಇದು ಆಶ್ಚರ್ಯ ಎಂದೆನಿಸಿದರೂ ಸತ್ಯ.
ಅಂದ ಹಾಗೇ ಅನಿಕಾ ಸಿಂಧ್ಯಾ ಅವರ ನಟನೆಯನ್ನು ಒಪ್ಪಿಕೊಂಡ ನಿರ್ದೇಶಕರುಗಳು ಅನಿಕಾ ಅವರಿಗೆ ಆಡಿಶನ್‌ಗಳನ್ನು ತೆಗೆದುಕೊಳ್ಳದೇ ತಮ್ಮ ಧಾರಾವಾಹಿಯಲ್ಲಿ ನಟಿಸುವ ಅವಕಾಶಗಳನ್ನು ನೀಡಿದ್ದಾರೆಯಂತೆ. ಈಗ ಹೆಚ್ಚಿನ ಧಾರಾವಾಹಿಗಳು ಆಡಿಶನ್ ಮೂಲಕವೇ ನಡೆಯುತ್ತದೆಯಂತೆ. ಮೊದಲೆಲ್ಲಾ ಡೈಲಾಗ್ ಡೆಲಿವರಿ ಬಗ್ಗೆ ಹೆಚ್ಚಿನ ಗಮನವಿರುತ್ತಿತ್ತು. ಆದರೆ, ಇಂದು ಹೆಚ್ಚಿನ ಪ್ರಾಮುಖ್ಯತೆ ಲುಕ್ ಟೆಸ್ಟಿಗೆ ಎನ್ನುವುದು ಅನಿಕಾ ಅವರ ಮಾತು.

ಈಗ ಏನನ್ನು ಬೇಕಾದರೂ ಎಡಿಟ್ ಮೂಲಕ ಸರಿ ಮಾಡಿಕೊಳ್ಳಬಹುದಾಗಿದೆ. ಈಗಿನ ಹೊಸ ಕಲಾವಿದರಿಗೆ ಅವಕಾಶಗಳು ಹೆಚ್ಚು ಅದೇ ರೀತಿ ಅನುಕೂಲಗಳು ಇವೆ. ನಮಗೆ ಮೊದಲು ಇಂಡಸ್ಟ್ರಿಯಲ್ಲಿ ಇಷ್ಟೊಂದು ಅನುಕೂಲಗಳಿಲ್ಲ ಎನ್ನುತ್ತಾರೆ ಅನಿಕಾ ಸಿಂಧ್ಯ. ಇನ್ನು ಮೊದಲೆಲ್ಲಾ ಪಾಪ್ಯುಲಾರಿಟಿಯನ್ನು ಪಡೆಯುವುದು ತುಂಬಾ ಕಷ್ಟವಾಗಿತ್ತಂತೆ. ಈಗ ಹಾಗಲ್ಲ ಸೋಶಿಯಲ್ ಮೀಡಿಯಾದಿಂದಾಗಿ ಒಂದು ದಿನದಲ್ಲೇ ಸಾವಿರಾರು ಜನರು ಫಾಲೋ ಮಾಡುವಂತೆ ಮಾಡಬಹುದು ಎಂದಿದ್ದಾರೆ ಅನಿಕಾ.
ಇಂದಿಗೂ ಕೂಡಾ ಅನಿಕಾ ಅವರು ವಿಲನ್ ಪಾತ್ರಗಳ ಮೂಲಕವೇ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಪ್ರತಿ ಧಾರಾವಾಹಿಯಲ್ಲೂ ಖಳನಾಯಕಿಯಾಗಿ ಸೈ ಎನಿಸಿಕೊಂಡಿರುವ ಆಕೆ ಮಾಡುವ ಪ್ರತಿ ಪಾತ್ರವೂ ವಿಭಿನ್ನ, ವಿಶೇಷ ಹಾಗೂ ಸಮಾಧಾನವನ್ನು ತಂದುಕೊಟ್ಟಿದೆಯಂತೆ. ಇನ್ನು ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ತುಂಬಾನೇ ಆ್ಯಕ್ಟೀವ್ ಆಗಿರುವ ಅನಿಕಾ ಸಿಂಧ್ಯಾ ಆಗಾಗ ತಮ್ಮ ಹೊಸ ಲುಕ್ ನಿಂದ ಅಭಿಮಾನಿಗಳನ್ನು ಫಾಲೋವರ್ಸ್ ಅನ್ನು ಬೆರಗಾಗಿಸುತ್ತಿರುತ್ತಾರಂತೆ.

ಡಾಕ್ಟರ್ ಆಗಬೇಕೆಂದುಕೊಂಡಿದ್ದ ಅನಿಕಾ ಸಿಂಧ್ಯಾ ಅವರು ಆಕಸ್ಮಿಕವಾಗಿ ನಟನೆಗೆ ಕಾಲಿಟ್ಟು ಆ್ಯಕ್ಟರ್ ಆಗಿ ಗುರುತಿಸಿಕೊಂಡರು. 'ಕಾದಂಬರಿ' ಎನ್ನುವ ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಈಕೆ ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ಅಬ್ಬರಿಸಿದ ಗಟ್ಟಿಗಿತ್ತಿ. 'ಗುಪ್ತಗಾಮಿನಿ', 'ಕುಂಕುಮಭಾಗ್ಯ', 'ಕಂಕಣ', 'ನನ್ನವಳು', 'ಸುಕನ್ಯಾ', 'ಮನೆಮಗಳು', 'ಶುಭಮಂಗಳ', 'ಮಂದಾರ', 'ಸೂರ್ಯಕಾಂತಿ', 'ಆಕಾಶದೀಪ', 'ಲಕ್ಷ್ಮಿ ಬಾರಮ್ಮ' ಹೀಗೆ ಮೂವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.


Click it and Unblock the Notifications











