'ಗಾಂಧಿಗೆ ಸಾವಿಲ್ಲ' ನಾಟಕ ನೋಡಿ ನಟನೆಗಿಳಿದ ಈ ಕನ್ನಡದ ನಟನ್ಯಾರು? ಇವರ ಹಿನ್ನೆಲೆಯೇನು ಗೊತ್ತೆ?
ಕಳೆದ ಐದು ವರ್ಷಗಳಿಂದ ಸಾರ್ಥಕ್ ಪಾತ್ರದ ಮೂಲಕ ಈ ನಟ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಅಂದ್ಹಾಗೆ ಇವರ ಹೆಸರು ಗಿರೀಶ್ ಬೆಟ್ಟಪ್ಪ. ಇವರು ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆದಿಟ್ಟಿಕೊಂಡಿದ್ದಾರೆ. ಕಿರುತೆರೆ ಹಾಗೂ ಸಿನಿಮಾ ಎರಡರಲ್ಲೂ ಬ್ಯುಸಿಯಾಗಿದ್ದರೂ, 'ಗಟ್ಟಿಮೇಳ' ಧಾರಾವಾಹಿಯ ಸಾರ್ಥಕ್ ಪಾತ್ರವನ್ನು ಮರೆಯೋದಿಲ್ಲ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ'ದಲ್ಲಿ ನಾಯಕಿ ಅಮೂಲ್ಯಳ ದೊಡ್ಡಮ್ಮನ ಮಗ ಸಾರ್ಥಕ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಗಿರೀಶ್ ಬೆಟ್ಟಪ್ಪ ಈಗ ಕೇವಲ ಕಿರುತೆರೆ ಅಷ್ಟೇ ಅಲ್ಲ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಛಾಪನ್ನು ಪಸರಿಸಿದ್ದಾರೆ ಎಂದರೆ ಅದಕ್ಕೆ ಕಾರಣ ರಂಗಭೂಮಿ.

'ಗಾಂಧಿಗೆ ಸಾವಿಲ್ಲ' ಎಂಬ ನಾಟಕ ನೋಡಿದ ಗಿರೀಶ್ ಅವರಿಗೆ ತಾನು ಕೂಡಾ ನಟನಾಗಬೇಕು. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆ ಮೂಡಿತು. ಅಂತೆಯೇ ರಂಗಭೂಮಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಗಿರೀಶ್ ಬೆಟ್ಟಪ್ಪ ಎಂದಿಗೂ ಕಿರುತೆರೆಯಲ್ಲಾಗಲೀ, ಹಿರಿತೆರೆಯಲ್ಲಾಗಲೀ ನಟಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಸ್ನೇಹಿತರ ಒತ್ತಾಯದ ಮೇರೆಗೆ ಆಡಿಶನ್‌ಗಳಿಗೆ ಹೋಗಲಾರಂಭಿಸಿದ್ದರು. ಸತ್ಯರಾಜ್ ಅರಸ್ ಪಾತ್ರದ ಮೂಲಕ ಗಿರೀಶ್ ಕಿರುತೆರೆಗೆ ಕಾಲಿಟ್ಟರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಸತ್ಯರಾಜ್ ಅರಸ್ ಆಗಿ ಕಿರುತೆರೆ ಪಯಣ ಶುರು ಮಾಡಿದ್ದ ಗಿರೀಶ್ ಬೆಟ್ಟಪ್ಪ ಮುಂದೆ ಸಾರ್ಥಕ್ ಆಗಿ ಬದಲಾಗಿದ್ದರು. ಕಳೆದ ಐದು ವರ್ಷಗಳಿಂದ ಸಾರ್ಥಕ್ ಆಗಿ ನಟಿಸುತ್ತಿರುವ ಗಿರೀಶ್ ಬೆಟ್ಟಪ್ಪ "ಐದು ವರ್ಷಗಳಿಂದ ಸಾರ್ಥಕ್ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದೇನೆ. ತುಂಬಾ ಖುಷಿಯಾಗುತ್ತಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ.
"ಜನ ನನ್ನನ್ನು ಸಾರ್ಥಕ್ ಪಾತ್ರದ ಮೂಲಕವೇ ಗುರುತಿಸುತ್ತಾರೆ. ಖುಷಿಯ ವಿಚಾರವೆಂದರೆ ತುಂಬಾ ಜನರು ಅದುವೇ ನನ್ನ ನಿಜವಾದ ಹೆಸರು ಎಂದು ಅಂದುಕೊಂಡಿದ್ದಾರೆ. ಗಿರೀಶ್ ಎಂಬುದು ನನ್ನ ಹೆಸರು ಎಂದು ಯಾರಿಗೂ ಗೊತ್ತಿಲ್ಲ" ಎಂದು ಹೇಳುವ ಗಿರೀಶ್ ಅವರು ಸಾರ್ಥಕ್ ಪಾತ್ರದಿಂದ ಸಾಕಷ್ಟು ತಾಳ್ಮೆಯನ್ನು ಕಲಿತಿದ್ದಾರೆಯಂತೆ.

ಇನ್ನು ಇತ್ತೀಚೆಗಷ್ಟೇ ಮುಕ್ತಾಯಗೊಂಡಿರುವ 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ನೆಗೆಟಿವ್ ಛಾಯೆ ಇರುವ ಪಾತ್ರಕ್ಕೆ ಜೀವ ತುಂಬಿದ ಗಿರೀಶ್‌ಗೆ ಆ ಪಾತ್ರ ತುಂಬಾ ಇಷ್ಟ. ನೆಗೆಟಿವ್ ಪಾತ್ರಗಳಲ್ಲಿ ನಟನೆಗೆ ಅವಕಾಶ ಜಾಸ್ತಿ ಎಂದು ಹೇಳುವ ಗಿರೀಶ್ ಅವರಿಗೆ ಮುಂದಿನ ದಿನಗಳಲ್ಲಿ ಇನ್ನು ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಬಯಕೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಪ್ರೀತಿಯ ಅರಸಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ ಗಿರೀಶ್ ಸಿನಿಮಾಗಳಲ್ಲಿಯೂ ಮೋಡಿ ಮಾಡಿದ್ದಾರೆ.
'ಬಡವ ರಾಸ್ಕಲ್', 'ದಿಲ್ ಪಸಂದ್' ಸಿನಿಮಾಗಳಲ್ಲಿ ಗಿರೀಶ್ ಬೆಟ್ಟಪ್ಪ ನಟಿಸಿದ್ದಾರೆ. ಇದರ ಜೊತೆಗೆ 'ನಗುವಿನ ಹೂಗಳ ಮೇಲೆ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು ಅದು ಇನ್ನು ಕೂಡಾ ತೆರೆ ಕಾಣಬೇಕಿದೆ. "ನಾನಿಂದು ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಮುಖ್ಯ ಕಾರಣ ಎಂದರೆ ರಂಗಭೂಮಿ. ಜೊತೆಗೆ ನನ್ನ ನಾಟಕ ನಿರ್ದೇಶಕರಾಗಿರುವ ಅಭಿಮನ್ಯು ಭೂಪತಿ. ನಾನಿಂದು ನಟನೆಯಲ್ಲಿ ಪಕ್ವವಾಗಿದ್ದೇನೆ ಎಂದರೆ ಅದಕ್ಕೆ ಅವರು ಹೇಳಿ ಕೊಟ್ಟಿರುವಂತಹ ನಟನೆ ಮತ್ತು ನಾಟಕಗಳೇ ಕಾರಣ" ಎಂದು ಫಿಲ್ಮಿಬೀಟ್ ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ.


Click it and Unblock the Notifications











