ಏಕಾಏಕಿ ಧಾರಾವಾಹಿಯಿಂದ ನನ್ನ ಹೊರ ಹಾಕಿದ್ರು , 45 ದಿನ ಕೈ ಮುಗಿದು ಬೇಡಿಕೊಂಡೆ - ಕಣ್ಣೀರು ಹಾಕಿದ ಕಿರುತೆರೆ ನಟಿ
ಕಿರುತೆರೆಯಲ್ಲಿ ಒಮ್ಮೊಮ್ಮೆ ಪ್ರೇಕ್ಷಕರ ಹೃದಯ ಗೆದ್ದ ಪಾತ್ರಗಳು ಏಕಾಏಕಿ ಕಣ್ಮರೆಯಾಗುತ್ತಾವೆ. ಇನ್ನೂ ಕೆಲ ಒಮ್ಮೆ ಆ ಪಾತ್ರಧಾರಿಗಳೇ ಬದಲಾಗುತ್ತಾರೆ. ಆ ಜಾಗಕ್ಕೆ ಬೇರೊಬ್ಬರು ಬರುತ್ತಾರೆ. ಹೀಗಾದಾಗ ನೋಡುಗರಲ್ಲಿ ಗೊಂದಲ ಸೃಷ್ಟಿಯಾಗುತ್ತೆ. ತಮ್ಮ ಇಷ್ಟದ ಕಲಾವಿದ ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರ ಬಂದಿದ್ದೇಕೆ..? ಪಾತ್ರದಿಂದ ಹೊರ ನಡೆದಿದ್ದೇಕೆ ? ಎನ್ನುವ ಪ್ರಶ್ನೆಗಳು ಹಲವರನ್ನು ಕಾಡಲು ಶುರುಮಾಡುತ್ತಾವೆ.
ಯಾಕೆಂದರೆ ಎಲ್ಲರೂ ಭಾವನೆಗಳನ್ನು ಕಡೆಗಣಿಸಿ ಸಂಭಾವನೆ ವಿಚಾರಕ್ಕೆ ಹೊರ ಬಂದಿರುವುದಿಲ್ಲ. ಬೇರೆ ಒಳ್ಳೆಯ ಪಾತ್ರ ಸಿಕ್ತು ಎಂದು ಬದುಕು ನೀಡಿದ ಧಾರಾವಾಹಿಗೆ ಗುಡ್ ಬೈ ಹೇಳಿರುವುದಿಲ್ಲ. ತೆರೆಮರೆಯ ಹಿಂದೆ ಇಲ್ಲಿ ಹಲವಾರು ಕಥೆಗಳಿರುತ್ತಾವೆ. ಉದಾಹರಣೆಗೆ ಜಸ್ವೀರ್ ಕೌರ್ ಅವರ ಜೀವನಾನುಭವ.

ಹೌದು, ಜಸ್ವೀರ್ ಕೌರ್.. ಹಿಂದಿ ಕಿರುತೆರೆಯ ಖ್ಯಾತ ಹೆಸರು. ಬಹುಶಃ ''ಸಿಐಡಿ'' ಧಾರಾವಾಹಿಯನ್ನು ತಪ್ಪದೇ ನೋಡಿದವರು ಇವರನ್ನು ಮರೆಯಲಾರರು. 1998ರಲ್ಲಿ ತೆರೆಗೆ ಬಂದ "ಸೋಲ್ಜರ್" ಚಿತ್ರದ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡ ಜಸ್ವೀರ್ ಆ ನಂತರ "ಬಾದ್‌ಶಾ".. "ತಾಲ್".. "ಕಹೋ ನಾ..ಪ್ಯಾರ್ ಹೈ".. "ಬಾದಲ್".. "ಮೊಹಬ್ಬತೇ''..ಚಿತ್ರಗಳಲ್ಲಿ ಕಾಣಿಸಿಕೊಂಡರು.
ಆದರೆ ಬೆಳ್ಳಿತೆರೆಯಲ್ಲಿ ಅದೃಷ್ಟ ಕೈ ಹಿಡಿಯಲಿಲ್ಲ. ಪ್ರೇಕ್ಷಕರ ಆಶೀರ್ವಾದ ಸಿಗಲಿಲ್ಲ. ಈ ಹಿನ್ನೆಲೆ 2004ರಲ್ಲಿ "ಕೆ. ಸ್ಟ್ರೀಟ್ ಪಾಲಿ ಹಿಲ್" ಮೂಲಕ ಕಿರುತೆರೆಯನ್ನು ಪ್ರವೇಶ ಮಾಡಿದ ಜಸ್ವೀರ್, 2006ರ "ಘರ್ ಕಿ ಲಕ್ಷ್ಮಿ ಬೇಟಿಯಾನ್" ಮೂಲಕ ಮನೆ ಮಾತಾದರು. "ವೀರ್ ಶಿವಾಜಿ".. "ಅದಾಲತ್".. "ಹಿಟ್ಲರ್ ದೀದಿ".. "ಗಂಗಾ".. "ಸಸುರಾಲ್ ಸಿಮಾರ್ ಕಾ".. "ಅನುಪಮಾ".. ಇವರ ಕೆಲ ಪ್ರಮುಖ ಮತ್ತು ಪ್ರಸಿದ್ಧ ಧಾರಾವಾಹಿಗಳು.
ಇಂಥಾ ಜಸ್ವೀರ್ ಕೌರ್ ಅವರ ಬದುಕನ್ನು ''ಸಿಐಡಿ'' ಧಾರಾವಾಹಿ ಬದಲಿಸಿದ್ದೆಷ್ಟು ಸತ್ಯವೋ, ಈ ಧಾರಾವಾಹಿಯಿಂದ ಇವರ ಬದುಕು ಬರ್ಬಾದ್ ಆಗಿದ್ದು ಕೂಡ ಅಷ್ಟೇ ಸತ್ಯ. ಖುದ್ದು ಜಸ್ವೀರ್ ಕೌರ್ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ತಮ್ಮ ಬದುಕಿನ ಕರಾಳ ದಿನಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಈ ಕುರಿತು ಸಬ್ಹೋಜಿತ್ ಘೋಷ್ ಅವರಿಗೆ ನೀಡಲಾದ ಸಂದರ್ಶನದಲ್ಲಿ ಮಾತನಾಡಿರುವ ಜಸ್ವೀರ್ ಕೌರ್, ''ಸಿಐಡಿ'' ಧಾರಾವಾಹಿಗೆ ನಾನು ಎರಡು ವರ್ಷ ತನು ಮನ ಅರ್ಪಿಸಿ ಕೆಲಸ ಮಾಡಿದ್ದೇ, ಬೆವರು ಸುರಿಸಿದ್ದೇ, ಆದರೆ ನನ್ನನ್ನೂ ಹೇಳದೇ ಕೇಳದೇ ಆ ಧಾರಾವಾಹಿಯಿಂದ ಹೊರ ಹಾಕಿದರು ಎಂದು ಹೇಳಿದ್ದಾರೆ.

ನನ್ನ ವರ್ತನೆ ಸರಿ ಇಲ್ಲ, ನಾನು ಎಲ್ಲರ ಜೊತೆ ಕಿರಿಕ್ ಮಾಡುತ್ತೇನೆ ಎಂದು ನನಗೆ ಆ ಧಾರಾವಾಹಿಯ ನಿರ್ಮಾಪಕರು ಹೇಳಿದರು, ಸ್ಕ್ರಿಪ್ಟ್ ಎಸೆಯುತ್ತೇನೆ, ಅಸಹ್ಯ ಅಶ್ಲೀಲ ಭಾಷೆಯ ಉಪಯೋಗ ಮಾಡುತ್ತೇನೆ ಎಂದು ಹೇಳಿ ನನ್ನನ್ನೂ ಒದ್ದು ಹೊರಗಡೆ ಹಾಕಿದರು ಎಂದು ಅಲವತ್ತುಕೊಂಡಿರುವ ಜಸ್ವೀರ್ ಕೌರ್ ನಾನು ಅವರು ಮಾಡಿದ ಆರೋಪದಂತೆ ಯಾವತ್ತೂ ನಡೆದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು, ಈ ನೋವು ತಡೆಯಲಾರದೇ ನಾನು ಒಂದಲ್ಲ, ಎರಡಲ್ಲ, ಸತತವಾಗಿ 45 ದಿನ ಕಣ್ಣೀರು ಹಾಕಿದ್ದೇ ಎಂದು ಹೇಳಿರುವ ಜಸ್ವೀರ್ ಕೌರ್, ನನ್ನ ಜೊತೆ ಎರಡು ವರ್ಷ ಶಿವಾಜಿ ಸಾತಮ್, ಆದಿತ್ಯ ಶ್ರೀವಾಸ್ತವ, ದಯಾನಂದ ಶೆಟ್ಟಿ, ದಿನೇಶ್ ಫಡ್ನಿಸ್, ನರೇಂದ್ರ ಗುಪ್ತಾ ಸೇರಿದಂತೆ ಹಲವರು ಕೆಲಸ ಮಾಡಿದ್ದರು. ದುರಂತ ಅಂದರೆ ನನ್ನ ಪರವಾಗಿ ಒಬ್ಬರು ಆ ಕ್ಷಣಕ್ಕೆ ಧ್ವನಿ ಎತ್ತಲಿಲ್ಲ ಎಂದು ಹೇಳಿದ್ಧಾರೆ.
''ಸಿಐಡಿ'' ಧಾರಾವಾಹಿಯಿಂದ ಹೊರ ಬಂದ ನಂತರ ನನ್ನ ಬದುಕು ಅಲ್ಲೋಲ.. ಕಲ್ಲೋಲವಾಯ್ತು.. ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೇ ಎಂದು ಹೇಳಿರುವ ಜಸ್ವೀರ್ ಕೌರ್, ಆ ನಿರ್ಮಾಪಕರ ಒಂದು ನಿರ್ಧಾರದಿಂದ ನಾನು ಬೀದಿಗೆ ಬಿದ್ದೆ ಎಂದು ಹೇಳಿದ್ದಾರೆ.
ನನ್ನ ಮನೆಯ ಇಎಂಐ ಕಟ್ಟಲು ಕೂಡ ನನ್ನ ಬಳಿ ಆಗ ದುಡ್ಡಿರಲಿಲ್ಲ, ನನ್ನ ಬಳಿ ಕೇವಲ 100 ರೂಪಾಯಿ ಇತ್ತು, ಆದರೆ ನನ್ನ ಖರ್ಚು ವೆಚ್ಚ ಅದಕ್ಕೂ ಮೀರಿದ್ದಾಗಿತ್ತು ಎಂದು ಹೇಳಿರುವ ಜಸ್ವೀರ್ ಕೌರ್ ನಾನು ದುಡ್ಡಿಲ್ಲದೇ ಹಲವು ದಿನ ಉಪವಾಸ ಮಲಗಿದ್ದು ಇದೆ ಎಂದಿದ್ದಾರೆ. ನೆಲದ ಮೇಲೆ ಮಲಗಿ ಕಣ್ಣೀರು ಕೂಡ ಹಾಕಿದ ದಿನಗಳು ಕೂಡ ಇವೆ ಎಂದು ಭಾವುಕರಾಗಿದ್ದಾರೆ.
ಒಂದಲ್ಲ, ಎರಡಲ್ಲ, 7 ವರ್ಷ ಚಿಕ್ಕ ಚಿಕ್ಕ ಪಾತ್ರಗಳನ್ನು ನಿರ್ವಹಿಸುವ ಮೂಲಕ ನಾನು ನನ್ನ ಬದುಕು ದೂಡಿದೆ ಎಂದು ಹೇಳಿರುವ ಜಸ್ವೀರ್ ಕೌರ್, ನನ್ನ ಕೂದಲಿನ ಒಂದು ಭಾಗವನ್ನು ಯಾರೋ ಕತ್ತರಿಸಿದ್ದರು ಎನ್ನುವುದು ನನಗೆ ಆ ನಂತರ ಗೊತ್ತಾಯ್ತು. ಕತ್ತರಿಸಿದ ಕೂದಲನ್ನು ಮಣ್ಣಿನಲ್ಲಿ ಹೂಳಲಾಗಿತ್ತು. ಈ ವಿಚಾರವನ್ನು ಜ್ಯೋತಿಷಿ ಒಬ್ಬರು ನನಗೆ ಹೇಳಿದರು ಎಂದು ಹೇಳಿದ್ದಾರೆ. ನನ್ನ ಮೇಲೆ ಮಾಟ -ಮಂತ್ರದ ಪ್ರಯೋಗವನ್ನು ಮಾಡಲಾಗಿತ್ತು ಎಂದು ಕಣ್ಣೀರು ಹಾಕಿದ್ದಾರೆ.
ಅಂದ್ಹಾಗೇ ಜಸ್ವೀರ್ ಕೌರ್ ಸದ್ಯ ''ಅನುಪಮಾ'' ಧಾರಾವಾಹಿಯ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಇವರ 'ದೇವಿಕಾ' ಪಾತ್ರ ಭಾರೀ ಜನ ಮನ್ನಣೆ ಗಳಿಸಿದೆ. ಇದೇ ಸಮಯದಲ್ಲಿ ಜಸ್ವೀರ್ ಕೌರ್ ಈ ಸಂದರ್ಶನ ನೀಡಿದ್ದು ಈ ಸಂದರ್ಶನದ ತುಣುಕು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಿಂದಿ ಬೆಳ್ಳಿತೆರೆ ಮತ್ತು ಕಿರುತೆರೆಯ ರಾಜಕೀಯಕ್ಕೆ ಹಿಡಿದ ಸ್ಪಷ್ಟವಾದ ಕೈಗನ್ನಡಿ ಇದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.


Click it and Unblock the Notifications











