ಯಾರಿಗೂ ಹೆದರದ ವಕೀಲ್ ಸಾಬ್‌ಗೆ ಬಿಗ್ ಬಾಸ್ ಧ್ವನಿ ಕೇಳಿದರೆ ಭಯ ಆಗುತ್ತಿತ್ತಂತೆ..!
ಪ್ರಕರಣ ಯಾವುದೇ ಇರಲಿ, ಸಾಮಾಜಿಕ ಜಾಲತಾಣದ ಮೂಲಕ ಆ ಪ್ರಕರಣದ ಕುರಿತು ವಕಾಲತ್ತು ಮಾಡುತ್ತಿದ್ದವರು ಕೆ.ಎನ್. ಜಗದೀಶ್. ವಕೀಲ್ ಸಾಬ್ ಎಂದೇ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿಯನ್ನೂ ಗಳಿಸಿರುವ ಇವರ ಕೈಯಲ್ಲಿ ಹಲವು ರಾಜಕಾರಣಿಗಳ ಜಾತಕ ಇದೆ. ಇದಕ್ಕೆ ಪುರಾವೆ ಎನ್ನುವಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರ ಅಶ್ಲೀಲ ವಿಡಿಯೋ ಇದೆ ಎಂದು ಜಗದೀಶ್ ತೀರಾ ಇತ್ತೀಚೆಗೆ ಹೇಳಿದ್ದರು. ಈ ಮೂಲಕ ಸದ್ದು ಮಾಡಿದ್ದರು.
ಇಂಥಾ ಜಗದೀಶ್ ಈ ಹಿಂದೆ ತಾವು ಕೊಟ್ಟ ಮಾತಿನಂತೆ ಬಿಗ್ ಬಾಸ್ ಮನೆಯಲ್ಲಿ ಹದಿನೈದು ಇಪ್ಪತ್ತು ದಿನ ಇದ್ದು ಮರಳಿ ಬಂದಿದ್ದಾರೆ. ತಮ್ಮ ಮನೆ ಸೇರಿದ್ದಾರೆ. ಆದರೆ, ಜಗದೀಶ್ ತಮ್ಮ ಮನೆಗೆ ಹೋಗಿರುವುದು ಅನೇಕರಿಗೆ ಇಷ್ಟ ಆಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಬಿಗ್ ಬಾಸ್ ಗೆಲ್ಲುವ ಸಾಮರ್ಥ್ಯ ಇದ್ದಿದ್ದು ಕೇವಲ ವಕೀಲ್ ಸಾಬ್ ಅವರಿಗೆ ಮಾತ್ರ ಎನ್ನುವ ವಾದವನ್ನು ಅನೇಕರು ಮಾಡುತ್ತಿದ್ದಾರೆ . ಜಗದೀಶ್ ಇರದ ಕಾರ್ಯಕ್ರಮ ನೋಡಲು ಕೂಡ ತುಂಬಾ ಬೋರ್ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಜಗದೀಶ್ ಅವರನ್ನು ಮತ್ತೆ ಮನೆಗೆ ಬಿಗ್ ಬಾಸ್ ಕರೆದುಕೊಂಡು ಬರಬೇಕು ಎನ್ನುತ್ತಿದ್ದಾರೆ. ಇದು ಸಾಧ್ಯವಾಗುತ್ತಾ..? ಗೊತ್ತಿಲ್ಲ. ಆದರೆ ಸದ್ಯಕ್ಕೆ ನನಗೆ ಬಿಗ್ ಬಾಸ್ ಮನೆಗೆ ಮತ್ತೆ ಹೋಗುವ ಯಾವ ಆಲೋಚನೆ ಇಲ್ಲ ಎಂದು ಜಗದೀಶ್ ಹೇಳಿದ್ದಾರೆ.

ಹೌದು, ಅಸಲಿಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಖುದ್ದು ಜಗದೀಶ್ ಎಲ್ಲ ಸ್ಫರ್ಧಿಗಳಲ್ಲಿ ಕ್ಷಮೆ ಕೇಳಿದ್ದರು. ಇನ್ನೊಂದು ಅವಕಾಶ ಇದ್ದಲ್ಲಿ ನನ್ನನ್ನು ಬಿಗ್ ಬಾಸ್ ಮನೆಯೊಳಗೆ ಕರೆದುಕೊಳ್ಳಬಹುದಾ ಎಂದು ಪ್ರಶ್ನೆ ಮಾಡಿದ್ದರು. ಈ ಕಾರಣಕ್ಕೆ ಜಗದೀಶ್ ಮತ್ತೆ ಬಿಗ್ ಬಾಸ್ ಮನೆಗೆ ಬರುವುದು ಖಚಿತ ಎಂದು ಬಿಗ್ ಬಾಸ್ ಪ್ರೇಕ್ಷಕರು ಅಂದುಕೊಂಡಿದ್ದರು. ಆದರೆ ಈಗ ಸುವರ್ಣ ನ್ಯೂಸ್ ಗೆ ನೀಡಿರುವ ಸಂದರ್ಶನದಲ್ಲಿ ಮರಳಿ ಮತ್ತೆ ಬಿಗ್ ಬಾಸ್ ಮನೆಗೆ ಹೋಗುವ ಯಾವ ಇರಾದೆ ಕೂಡ ನನಗೆ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಅಸಂಖ್ಯಾತ ಅಭಿಮಾನಿಗಳಿಗೆ ಜಗದೀಶ್ ನಿರಾಸೆ ಮಾಡಿದ್ದಾರೆ.
ಇನ್ನೂ ಈ ಸಂದರ್ಶನದಲ್ಲಿ ತಮ್ಮ ಬಿಗ್ ಬಾಸ್ ಅನುಭವ ಹಂಚಿಕೊಂಡಿರುವ ಜಗದೀಶ್, ಬಿಗ್ ಬಾಸ್ ಕಾರ್ಯಕ್ರಮವನ್ನು ಬಾಯ್ತುಂಬ ಹೊಗಳಿದ್ದಾರೆ. ಬಿಗ್ ಬಾಸ್ ನಿಯಮಗಳ ಬಗ್ಗೆ ಮಾತನಾಡುತ್ತಾ ರಂಜಿತ್ ಮತ್ತು ತ್ರಿವಿಕ್ರಂ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ದೈಹಿಕ ಹಲ್ಲೆ ಮಾಡಬಾರದೆಂದು ಬಿಗ್ ಬಾಸ್ ನಿಯಮದಲ್ಲಿಯೇ ಇದೆ ಆದರೆ ಆ ನಿಯಮ ಉಲ್ಲಂಘಿಸಿ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದಿರುವ ಜಗದೀಶ್ ನನಗೆ ಯಾರ ಮೇಲೆ ಕೋಪ ಇಲ್ಲ ಎಲ್ಲರಿಗೂ ಒಳ್ಳೆಯದಾಗಲಿ ಎಂದಿದ್ದಾರೆ. ಯಾರ ವಿರುದ್ಧ ಕೂಡ ದ್ವೇಷ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಬಿಗ್ ಬಾಸ್ ಒಂದು ಕನ್ನಡಿ ಇದ್ದ ಹಾಗೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳೋಕೆ ಅತ್ಯುತ್ತಮ ವೇದಿಕೆ ಎಂದಿರುವ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಕೆಲವೇ ದಿನ ಇದ್ದರೂ ಕೂಡ ನಾನು ತುಂಬಾ ಕಲಿತಿದ್ದೇನೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಎಲ್ಲರನ್ನು ಕರೆಯುವುದಿಲ್ಲ. ನನ್ನನ್ನು ಕರೆದಿದ್ದಾರೆ ಅನ್ನುವುದೇ ಖುಷಿಯ ವಿಚಾರ ಎಂದು ಹೇಳಿದ್ದಾರೆ. ಆ ಮನೆಯಲ್ಲಿ ಇರುವವರು ಎಲ್ಲರು ಚಿತ್ರರಂಗದ ಹಿನ್ನೆಲೆಯಿಂದ ಬಂದವರು ನಾನು ವಕೀಲ ವೃತ್ತಿಯಿಂದ ಹೋಗಿದ್ದೆ ಎಂದು ಹೇಳಿರುವ ಜಗದೀಶ್, ಹೊರಗಡೆ ಬಂದ ನಂತರ ನಾನು ಎಲ್ಲ ಸಂಚಿಕೆಗಳನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ. ಅವಕಾಶ ನೀಡಿದ್ದಕ್ಕೆ ಬಿಗ್ ಬಾಸ್‌ಗೆ ಧನ್ಯವಾದವನ್ನು ಹೇಳಿದ್ದಾರೆ.
ಮುಂದುವರೆದು ಮೊದಲ ಮೂರು ದಿನ ಉಡಾಫೆ ಸ್ವಭಾವದಿಂದ ಅಲ್ಲಿದ್ದೆ, ಆದರೆ ಮೂರು ದಿನದ ನಂತರ ಬಿಗ್ ಬಾಸ್ ಧ್ವನಿ ಕೇಳಿದರೆ ಸಾಕು ನನಗೆ ಭಯ ಆಗಲು ಶುರುವಾಯ್ತು ಎಂದಿರುವ ಜಗದೀಶ್ ಬಿಗ್ ಬಾಸ್ ಸಲಹೆ ಸೂಚನೆಯನ್ನು ಕಾಲ ಕಾಲಕ್ಕೆ ಸರಿಯಾಗಿ ನೀಡಿದ್ದಾರೆ ಎಂದಿದ್ದಾರೆ. ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಿರುವ ಕಿಚ್ಚ ಸುದೀಪ್ ಅವರಿಗೆ ಕೂಡ ವಕೀಲ್ ಸಾಬ್ ಸೆಲ್ಯೂಟ್ ಹೊಡೆದಿದ್ದಾರೆ.


Click it and Unblock the Notifications











