12 ವರ್ಷದ ನಂತರ 2ನೇ ಮದುವೆಗೆ ರೆಡಿಯಾದ ನಟಿ? ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ 14 ವರ್ಷದ ಹಿಂದಿನ ಅಪೂರ್ಣ ಪ್ರೇಮಕಥೆ ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್‌ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್‌ನಲ್ಲಿಯೇ ಎಲ್ಲ ಸುದ್ದಿ ಕೆಲವೇ ಸೆಕೆಂಡ್‌ನಲ್ಲಿ ತಲುಪಿ ಬಿಡುತ್ತಾವೆ. ಇನ್ನೂ ಸಾಮಾಜಿಕ ಜಾಲತಾಣವಂತೂ ಎಲ್ಲ ಮಾಧ್ಯಮಗಳನ್ನು ಸೈಡ್‌ಗೆ ತಳ್ಳಿ ತನ್ನ ಕಂಬಂಧ ಬಾಹುಗಳಿಂದ ಜನರನ್ನು ಆಕ್ರಮಿಸಿಕೊಂಡಿದೆ.
ಆದರೆ, ಈ ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಸುದ್ದಿಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎನ್ನುವುದನ್ನು ಅರಿಯುವಷ್ಟರಲ್ಲಿ ಆ ಸುಳ್ಳು ಸುದ್ದಿ ಎಲ್ಲಿಂದ ಎಲ್ಲೆಲ್ಲಿಗೋ ತಲುಪಿ ಮತ್ಯಾವುದೋ ಪ್ರಮಾದವನ್ನು ಸೃಷ್ಟಿಸಿರುತ್ತೆ. ವೈರಲ್ ಆಗಿರುತ್ತೆ. ವೈರಲ್ ಆದ ಈ ಸುದ್ದಿಗಳನ್ನೇ ಜನ ನಿಜಾ ಎಂದುಕೊಳ್ಳುತ್ತಾರೆ. ಚರ್ಚೆ ಮಾಡಲು ಶುರುಮಾಡುತ್ತಾರೆ. ಜೆನ್ನಿಫರ್ ವಿಂಗೆಟ್ ಮತ್ತು ಕರಣ್ ವಾಹಿ ಅವರ ವಿಚಾರದಲ್ಲಿ ಕೂಡ ಸದ್ಯ ಇದೇ ಆಗಿದೆ.

ಹೌದು, ಜೆನ್ನಿಫರ್ ವಿಂಗೆಟ್ ಮತ್ತು ಕರಣ್ ವಾಹಿ ಹಿಂದಿ ಕಿರುತೆರೆಯ ಪ್ರೇಕ್ಷಕರಿಗೆ ಚಿರಪರಿಚಿತ ಮುಖಗಳು. ''ಕಸೌತಿ ಜಿಂದಗಿ ಕೇ'', ''ಕ್ಯಾ ಹೋಗಾ ನಿಮ್ಮೋ ಕಾ''.. ''ಕಹೀ ತೋ ಹೋಗಾ''.. ''ಸರಸ್ವತಿ ಚಂದ್ರ''.. ''ಬೇಹದ್''... ಹೀಗೆ ಹಲವಾರು ಧಾರಾವಾಹಿಗಳ ಮೂಲಕ ಜೆನ್ನಿಫರ್ ವಿಂಗೆಟ್ ಅಭಿಮಾನಿಗಳನ್ನು ಸಂಪಾದಿಸಿದ್ದರೆ ಕರಣ್ ವಾಹಿ ''ಬಾತ್ ಹಮಾರಿ ಪಕ್ಕಿ ಹೈ''.. ''ಚನ್ನಾ ಮೇರೆಯಾ''.. ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ನಿರೂಪಕನಾಗಿ ಕೂಡ ಹೆಸರು ಮಾಡಿದ್ದಾರೆ.
ಇನ್ನೂ ಜೆನ್ನಿಫರ್ ಮತ್ತು ಕರಣ್ ಜೊತೆಯಲ್ಲಿ ಕೆಲಸ ಕೂಡ ಮಾಡಿದ್ದಾರೆ. ಆ ಧಾರಾವಾಹಿಯ ಹೆಸರು ''ದಿಲ್ ಮಿಲ್ ಗಯೇ''. ಒಂದೂವರೆ ದಶಕದ ಹಿಂದೆ ಕಿರುತೆರೆಯಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ಧಾರಾವಾಹಿ ಇದು. ಈ ಧಾರಾವಾಹಿಯಲ್ಲಿ ಇವರಿಬ್ಬರ ಜೋಡಿ ಮೋಡಿ ಮಾಡಿತ್ತು. ಇಬ್ಬರ ನಡುವಿನ ಕೆಮೆಸ್ಟ್ರೀಯನ್ನು ಕಂಡು ಹಲವರು ಇವರು ಇಬ್ಬರು ನಿಜ ಜೀವನದಲ್ಲಿ ಮದುವೆಯಾಗಬೇಕೆಂದು ಆಶಿಸಿದ್ದರು. ''ಜೆನ್‌ರನ್'' ಎಂಬ ಹೆಸರಿನಿಂದಲೇ ಇವರಿಬ್ಬರನ್ನು ಕರೆಯುತ್ತಿದ್ದರು.
ಆದರೆ ಜೆನ್ನಿಫರ್ ವಿಂಗೆಟ್ ಇಲ್ಲಿ ಎಡವಿದರು. ಕರಣ್ ವಾಹಿ ಬದಲು ಇದೇ ಧಾರಾವಾಹಿಯಲ್ಲಿ ಮತ್ತೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ಕರಣ್ ಸಿಂಗ್ ಗ್ರೋವರ್‌ಗೆ ಮನ ಸೋತರು. ಆದರೆ. ಮನೆಯವರು ಇವರ ಪ್ರೀತಿಯನ್ನು ಒಪ್ಪಲಿಲ್ಲ. ಬದಲಿಗೆ ವಿರೋಧ ಮಾಡಿದ್ದರು. ಯಾಕೆಂದರೆ ಕರಣ್ ಸಿಂಗ್ ಗ್ರೋವರ್ ಅವರಿಗೆ ಅದಾಗಲೇ ನಟಿ ಶ್ರದ್ಧಾ ನಿಗಮ್ ಜೊತೆ ಮದುವೆಯಾಗಿತ್ತು. ಕೇವಲ ಹತ್ತೇ ತಿಂಗಳಿಗೆ ಇವರ ದಾಂಪತ್ಯ ಜೀವನ ಮುರಿದು ಬಿದ್ದಿತ್ತು.
ಹೀಗಾಗಿಯೇ ಕರಣ್ ಸಿಂಗ್ ಗ್ರೋವರ್ ಜೊತೆ ಮದ್ವೆಯಾಗಲು ಜೆನ್ನಿಫರ್ ಮುಂದಾದಾಗ ಮನೆಯವರು ಮಾತ್ರ ಅಲ್ಲ ಉದ್ಯಮದ ಸ್ನೇಹಿತರು ಕೂಡ ಬೇಡ ಎನ್ನುವ ಸಲಹೆಯನ್ನು ನೀಡಿದ್ದರು. ಆದರೆ, ವಿರೋಧದ ನಡುವೆಯೂ 2012ರಲ್ಲಿ ಕರಣ್ ಸಿಂಗ್ ಗ್ರೋವರ್ ಅವರನ್ನೇ ಜೆನ್ನಿಫರ್ ಮದುವೆಯಾದರು. ದುರಾದೃಷ್ಟ ಈ ಮದುವೆ ಕೇವಲ ಎರಡೇ ವರ್ಷಕ್ಕೆ ಮುರಿದು ಬಿತ್ತು. ಮತ್ತೊಂದು ಕಡೆ ಕರಣ್ ವಾಹಿ ಮದುವೆಯಾಗದೇ ಹಾಗೇ ಉಳಿದುಕೊಂಡರು.

ಇಂಥಾ ಜೆನ್ನಿಫರ್ ಮತ್ತು ಕರಣ್ ವಾಹಿ 14 ವರ್ಷದ ನಂತರ ಬದುಕಿನ ಪಥದಲ್ಲಿ ಮತ್ತೆ ಮುಖಾಮುಖಿಯಾದರು. ''ರೈಸಿಂಗ್‌ಹಾನಿ vs. ರೈಸಿಂಗ್‌ಹಾನಿ'' ಎಂಬ ವೆಬ್ ಸರಣಿಯಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಈ ಸರಣಿಯಲ್ಲಿ ಕೂಡ ಚರ್ಚೆಯಾಗಿದ್ದು ಇವರ ಆತ್ಮೀಯತೆ ಮತ್ತು ಕೆಮೆಸ್ಟ್ರೀ.
14 ವರ್ಷಗಳ ಹಿಂದೆ ಮಾಡಿದ್ದ ಮೋಡಿಯನ್ನೇ ಈ ಜೋಡಿ ಮತ್ತೆ ಮಾಡಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ 2024ರಿಂದಲೇ ಈ ಜೋಡಿಯ ಮೇಲೆ ಒಂದು ವರ್ಗ ನಿಗಾ ವಹಿಸಿದೆ. ಈಗಲಾದರೂ ಇಬ್ಬರು ಮದುವೆಯಾಗಿ ಎಂದು ದುಂಬಾಲು ಬಿದ್ದಿದೆ. ಅದರಲ್ಲಿಯೂ ಇತ್ತೀಚೆನ ದಿನಗಳಲ್ಲಿ ಇವರ ಮದುವೆ ಕುರಿತು ಸಾಕಷ್ಟು ಊಹಾಪೋಹ ಹರಿದಾಡುತ್ತಿವೆ. ಇನ್ನೇನು ಇಬ್ಬರ ಮದುವೆ ನಡೆಯಲಿದೆ ಎಂಬಂತೆ ಚರ್ಚೆಗಳಾಗುತ್ತಿವೆ.
ಈ ಹಿನ್ನೆಲೆ ಕರಣ್ ವಾಹಿ ಮೌನ ಮುರಿದಿದ್ದಾರೆ. ಪುಕ್ಸಟ್ಟೆ ಪ್ರಚಾರ ಮಾಡುತ್ತಿರುವ ಎಲ್ಲರಿಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಧನ್ಯವಾದ ಹೇಳಿದ್ದಾರೆ. ''ಹಿಂದೂಸ್ತಾನ್ ಟೈಮ್ಸ್''ಗೆ ನೀಡಿದ ಸಂದರ್ಶನದಲ್ಲಿ ನಮ್ಮ ಮದುವೆಯ ಕುರಿತು ಹಬ್ಬಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು, ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.
ಆದರೂ ಕೂಡ ಹಲವರಿಗೆ ಇವರ ಮಾತಿನ ಮೇಲೆ ನಂಬಿಕೆ ಇಲ್ಲ. ಯಾಕೆಂದರೆ ಏನಿಲ್ಲ.. ಏನಿಲ್ಲ.. ಎಂದು ಹೇಳುತ್ತಲೇ ಹಲವರು ಇಲ್ಲಿ ಮದುವೆಯಾಗಿದ್ದಾರೆ. ಜೆನ್ನಿಫರ್ ವಿಂಗೆಟ್ ಮತ್ತು ಕರಣ್ ವಾಹಿ ಕೂಡ ಈ ಸಾಲಿಗೆ ಸೇರುತ್ತಾರಾ ಅಥವಾ ಕೇವಲ ಬೆಸ್ಟ್ ಫ್ರೆಂಡ್ಸ್ ಆಗಿ ಉಳಿಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಅಂದ್ಹಾಗೇ ಜೆನ್ನಿಫರ್‌ಗೆ ಈಗ 40 ವರ್ಷ. ಕರಣ್ ವಾಹಿಗೆ 39 ವರ್ಷ. ಇನ್ನು ಜೆನ್ನಿಫರ್‌ಗೆ ಡಿವೋರ್ಸ್ ನೀಡಿದ ಕರಣ್ ಸಿಂಗ್ ಗ್ರೋವರ್ ಬೇರೆ ಯಾರು ಬದಲಿಗೆ ಬಿಪಾಷಾ ಬಸು. ಕರಣ್ ಸಿಂಗ್ ಗ್ರೋವರ್‌ಗೆ ಬಿಪಾಷಾ ಬಸು 3ನೇ ಪತ್ನಿ.


Click it and Unblock the Notifications











