ಇನ್ಫೋಸಿಸ್ ನಾರಾಯಣ ಮೂರ್ತಿ 6 ಸಾವಿರ ಸಾಲ ಪಡೆದು ಕೋಟ್ಯಧಿಪತಿ ಆದ ಕಥೆ
Recommended Video
ಇನ್ಫೋಸಿಸ್ ಸಹ ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರು ಹುಟ್ಟಿದ್ದು ಶಿಡ್ಲಘಟ್ಟದಲ್ಲಿ ಆದರೂ ಬೆಳೆದದ್ದು ಮಾತ್ರ ಮಂಡ್ಯದಲ್ಲಿ. ಮೈಸೂರಿನ ಎನ್.ಐ.ಯಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ಮಾಡಿ ನಂತರ ಮೂರು ನಾಲ್ಕು ಕಂಪನಿಗಳಲ್ಲಿ ಕೆಲಸ ಮಾಡಿದ ನಾರಾಯಣ ಮೂರ್ತಿ ಅವರಿಗೆ ಫ್ರಾನ್ಸ್‌ಗೆ ಹೋಗುವ ಅವಕಾಶ ಒಲಿದು ಬರುತ್ತದೆ.
ಆದರೆ ಅಲ್ಲಿ ಅವರಿಗೆ ಜರುಗಿದ ಅವಮಾನ, 72 ಗಂಟೆಗಳ ಕಾಲ ಅವರು ಅನುಭವಿಸಿದ ಸೆರೆಮನೆ ವಾಸ ಅವರಿಗೆ ಅಪಾರ ನೋವುಂಟು ಮಾಡುತ್ತದೆ. ತದನಂತರ ಅವರು ಭಾರತಕ್ಕೆ ಮರಳುತ್ತಾರೆ.
ಕೊನೆಗೂ ಸಾಧಕರ ಕುರ್ಚಿಯಲ್ಲಿ ಕುಳಿತ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ
ಭಾರತಕ್ಕೆ ಮರಳಿದ ನಾರಾಯಣ ಮೂರ್ತಿಯವರು ತಮ್ಮ ಸ್ನೇಹಿತನ ಮೂಲಕ ಸುಧಾ ಮೂರ್ತಿಯವರನ್ನು ಭೇಟಿ ಆಗಿ, ಆಟೋ ರಿಕ್ಷಾ ಒಂದರಲ್ಲಿ ಅವರಿಗೆ ಪ್ರಪೋಸ್ ಮಾಡುತ್ತಾರೆ. ನಂತರ ಅವರನ್ನು ಬೆಂಗಳೂರಿನಲ್ಲಿ ಸರಳವಾಗಿ ಮದುವೆ ಆಗುತ್ತಾರೆ. ಆದರೆ ಮದುವೆಗೆ ನಾರಾಯಣ ಮೂರ್ತಿ ಅವರು ಸುಧಾ ಮೂರ್ತಿ ಅವರ ತಂದೆಗೆ ಎರಡು ಷರತ್ತುಗಳನ್ನು ವಿಧಿಸಿರುತ್ತಾರೆ. ಏನದು ಷರತ್ತು? ಮುಂದೆ ಓದಿ....

ಮದುವೆ ಖರ್ಚು ಹಂಚಿಕೆ
ಮಗಳ ಮೈಮೇಲೆ ಯಾವುದೇ ಒಡವೆ ಇರಕೂಡದು ಹಾಗೂ ಮದುವೆಯಲ್ಲಿ ಬರುವ ಖರ್ಚನ್ನು ಇಬ್ಬರೂ ಸಮವಾಗಿ ಹಂಚಿಕೊಳ್ಳಬೇಕು ಎಂದು. ಅದರ ಅನುಸಾರ ಮದುವೆಗೆ ಆದ 800 ನೂರು ರೂಪಾಯಿ ಖರ್ಚನ್ನು ಇಬ್ಬರು ಸಮವಾಗಿ ಹಂಚಿಕೊಂಡು ಮದುವೆ ಆಗುತ್ತಾರೆ.

ಸಾಲ ಪಡೆದ ನಾರಾಯಣ ಮೂರ್ತಿ
ಮದುವೆಯ ನಂತರ ಸ್ವಂತ ಕಂಪೆನಿ ತೆಗೆಯಲು ನಿರ್ಧರಿಸುವ ನಾರಾಯಣ ಮೂರ್ತಿಯವರು, ಸುಧಾ ಮೂರ್ತಿ ಅವರ ಬಳಿ ಹತ್ತು ಸಾವಿರ ರೂಪಾಯಿ ಸಾಲವನ್ನು ಪಡೆಯುತ್ತಾರೆ. ಕೇವಲ ಹತ್ತು ಸಾವಿರ ರೂಪಾಯಿ ಬಂಡವಾಳ ಹಾಗೂ 6 ಜನ ಸ್ನೇಹಿತರ ಜೊತೆ ಸೇರಿ ಪೂಣೆಯಲ್ಲಿ ಶುರುವಾದ ಇವರ ಇನ್ಫೋಸಿಸ್ ಸಂಸ್ಥೆಯ ಒಟ್ಟು ಬೆಲೆ ಈಗ ಮೂರು ಲಕ್ಷದ ಇಪ್ಪತ್ತು ಸಾವಿರ ಕೋಟಿಗಳು. ಕೇವಲ 6 ಜನರಿಂದ ಶುರುವಾದ ಕಂಪೆನಿಯಲ್ಲಿ ಈಗ 2 ಲಕ್ಷಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದು 42 ದೇಶಗಳಲ್ಲಿ ಇನ್ಫೋಸಿಸ್ ಕಂಪನಿಯ ಬ್ರ್ಯಾಂಚ್ ಗಳು ಇವೆ.

ಸಾಧಕರ ಸೀಟಿನಲ್ಲಿ ನಿಜವಾದ ಸಾಧಕರು
ಇಷ್ಟೆಲ್ಲಾ ಸಾಧನೆ ಮಾಡಿರುವ ನಾರಾಯಣ ಮೂರ್ತಿಯವರಿಗೆ ಪದ್ಮಶ್ರೀ, ಪದ್ಮಭೂಷಣ ಎರಡೂ ಲಭಿಸಿದ್ದು, ಅವರ ವ್ಯಕ್ತಿತ್ವ ಮಾತ್ರ ಇನ್ನೂ ಸರಳವಾಗಿದೆ ಎನ್ನುವುದಕ್ಕೆ ಸಾಕ್ಷಿ. ಇಂತಹ ಸಾಧಕರು ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟಿನಲ್ಲಿ ಅತಿಥಿಯಾಗಿ ಕೂತಿದ್ದಾರೆ. ಇವರಿಗೆ ಎಂಜಿನಿಯರಿಂಗ್ ಪಾಠ ಹೇಳಿಕೊಟ್ಟ ಅವರ ಗುರುಗಳಾದ ಸೀತಾರಾಮ್ ಅವರು ಕಾರ್ಯಕ್ರಮಕ್ಕೆ ಬಂದಾಗ ಅವರ ಕಾಲಿಗೆ ಅವರು ನಮಸ್ಕರಿಸಿದ್ದು ಕಾರ್ಯಕ್ರಮದ ಅವಿಸ್ಮರಣೀಯ ಕ್ಷಣವಾಗಿತ್ತು.

ಸುಧಾಮೂರ್ತಿ ಅವರು ಭಾಗಿ
ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯವರ ಅದ್ಭುತ ಸಂಚಿಕೆ ಇದೇ ಶನಿವಾರ ಹಾಗೂ ಭಾನುವಾರ ಅಂದ್ರೆ ಜೂನ್ 1 ಮತ್ತು 2ನೇ ತಾರೀಖು ರಾತ್ರಿ 9:30ಕ್ಕೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು. ಶನಿವಾರ ಸುಧಾಮೂರ್ತಿ ಹಾಗೂ ಭಾನುವಾರ ನಾರಾಯಣ ಮೂರ್ತಿ ಅವರ ಸಂಚಿಕೆ ಟೆಲಿಕಾಸ್ಟ್ ಆಗಲಿದೆ. ಈ ಎರಡು ಮೇರು ವ್ಯಕ್ತಿಗಳ ಬಗ್ಗೆ ನೀವು ಮತ್ತಷ್ಟು ತಿಳಿದುಕೊಳ್ಳಬಹುದು.


Click it and Unblock the Notifications











