Interview: 'ಭಜರಂಗಿ' ಪಾತ್ರ ಈ ಧಾರಾವಾಹಿಗೆ 'ದೃಷ್ಟಿಬೊಟ್ಟು'; ಏನಂತಾರೆ ಸುಜಯ್ ಹೆಗಡೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ದೃಷ್ಟಿಬೊಟ್ಟು' ಕೂಡಾ ಒಂದು. 2024ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ಈ ಧಾರಾವಾಹಿಯು ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದೆ. ರಾಮ್ ವೈದ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ದೃಷ್ಟಿಬೊಟ್ಟು' ಧಾರಾವಾಹಿಯ ನಿರ್ಮಾಪಕರು ಕೂಡಾ ಕನ್ನಡ ಕಿರುತೆರೆಯ ಜನಪ್ರಿಯ ನಟ.
ಹೌದು, 'ಗಟ್ಟಿಮೇಳ' ಧಾರಾವಾಹಿಯಲ್ಲಿ ವೇದಾಂತ್ ವಸಿಷ್ಠ ಆಗಿ ಅಭಿನಯಿಸಿದ್ದ ರಕ್ಷ್ ರಾಮ್ ಅವರು 'ದೃಷ್ಟಿಬೊಟ್ಟು' ಧಾರಾವಾಹಿಯ ನಿರ್ಮಾಪಕರಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೂರ್ಯ ನಾಯಕ ದತ್ತ ಆಗಿ ಕಾಣಿಸಿಕೊಂಡರೆ, ನವ ನಟಿ ಅರ್ಪಿತಾ ಮೋಹಿತೆ ನಾಯಕಿ ದೃಷ್ಟಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇನ್ನು ನಟ ಸುಜಯ್ ಹೆಗಡೆ ಅವರು ಈ ಧಾರಾವಾಹಿಯಲ್ಲಿ ಭಜರಂಗಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇತ್ತೀಚೆಗಷ್ಟೇ 'ದೃಷ್ಟಿಬೊಟ್ಟು' ಧಾರಾವಾಹಿ ಯಶಸ್ವಿ ನೂರು ಸಂಚಿಕೆ ಪೂರೈಸಿದ್ದು ಸುಜಯ್ ಹೆಗಡೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ಅವರು 'ದೃಷ್ಟಿಬೊಟ್ಟು ಧಾರಾವಾಹಿಯು ನೂರು ಸಂಚಿಕೆ ಪೂರೈಸಿರುವುದಕ್ಕೆ ಖುಷಿಯಿದೆ. ಕನ್ನಡದಲ್ಲಿ ಒಂದು ಆ್ಯಕ್ಷನ್ ಪ್ಯಾಕ್ಡ್ ಸೀರಿಯಲ್ ಇಲ್ಲಿಯ ತನಕ ಬಂದಿರ್ಲಿಲ್ಲ. ಮೊದಲ ಬಾರಿಗೆ ಇಂತಹ ಒಂದು ಅಂಟೆಪ್ಟ್ ಅನ್ನು ಈ ಧಾರಾವಾಹಿ ತಂಡ ಮಾಡಿದೆ" ಎಂದು ಹೇಳಿಕೊಂಡಿದ್ದಾರೆ.
"ಅಂದ ಹಾಗೇ ಈ ಆ್ಯಕ್ಷನ್ ಪ್ಯಾಕ್ಡ್ ಧಾರಾವಾಹಿಯನ್ನು ಕಿರುತೆರೆ ವೀಕ್ಷಕರು ಕೂಡಾ ಮೆಚ್ಚಿಕೊಂಡಿದ್ದಾರೆ. ಜೊತೆಗೆ ವಿಭಿನ್ನ ರೀತಿಯ ಈ ಧಾರಾವಾಹಿಯನ್ನು ವೀಕ್ಷಕರು ಪ್ರೋತ್ಸಾಹಿಸುತ್ತಿದ್ದಾರೆ. ತುಂಬಾ ಖುಷಿಯಾಗುತ್ತಿದೆ. ಒಂದು ಒಳ್ಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ನನಗೂ ಸಂತಸವಾಗುತ್ತಿದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡುವಾಗ ಹೇಳಿಕೊಂಡಿದ್ದಾರೆ ಸುಜಯ್ ಹೆಗಡೆ.
"ಭಜರಂಗಿ ಎನ್ನುವ ಕ್ಯಾರೆಕ್ಟರ್ ಸುಜಯ್‌ಗೆ ಅಂದ್ರೆ ನನ್ನ ವಿರುದ್ಧವಾದ ಪಾತ್ರ ಹೌದು. ವಿರುದ್ಧವಾದ ಪಾತ್ರವಾದರೂ ನನಗೆ ಭಜರಂಗಿ ಆಗಿ ನಟಿಸುತ್ತಿರುವುದಕ್ಕೆ ಖುಷಿಯಿದೆ. ಇಷ್ಟು ವರ್ಷ ನಾನು ಮಾಡಿದಕ್ಕಿಂತಲೂ ಇದು ತುಂಬಾ ವಿಭಿನ್ನವಾದ ಪಾತ್ರ. ಭಜರಂಗಿ ಪಾತ್ರದಲ್ಲಿ ತುಂಬಾ ಇಮೋಷನ್ಸ್ ಇದೆ. ಎನರ್ಜಿಟಿಕ್, ಫ್ರೆಂಡ್ಲಿ ಹಾಗೂ ತುಂಬಾ ಲಾಯಲ್ ಆಗಿರುವಂತಹ ಪಾತ್ರವದು. ಇನ್ನು ನಾಯಕ ದತ್ತನ ಮೇಲೆ ಭಜರಂಗಿಗೆ ಅದೆಷ್ಟು ಅಭಿಮಾನವೆಂದರೆ ದತ್ತನಿಗಾಗಿ ತನ್ನ ಜೀವನವನ್ನು ಬಲಿಕೊಡಲು ಭಜರಂಗಿ ಸಿದ್ಧ ಇರ್ತಾನೆ. ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಒಂದೇ ಪಾತ್ರದಲ್ಲಿ ಹಲವಾರು ಭಾವನೆಗಳು! ನಿಜವಾಗಿಯೂ ತುಂಬಾ ಖುಷಿಯಾಗುತ್ತಿದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡುತ್ತಾ ಹಂಚಿಕೊಂಡಿದ್ದಾರೆ ಸುಜಯ್ ಹೆಗಡೆ.
"ಇಲ್ಲಿಯವರೆಗೆ ನಾನು ನಟಿಸಿರುವಂತಹ ಪಾತ್ರಕ್ಕೂ, ಭಜರಂಗಿಯ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿಯವರೆಗೆ ನಾನು ಸೀರಿಯಸ್ ಆಗಿರುವಂತಹ ಪಾತ್ರಗಳಲ್ಲಿ ನಟಿಸಿದ್ದೇ ಇಲ್ಲ. ಜಾಲಿಯಾಗಿ, ಫನ್ ಒರಿಯೆಂಟಡ್ ಪಾತ್ರಗಳಲ್ಲಿ ಮಾತ್ರ ನಾನು ಅಭಿನಯಿಸಿದ್ದು. ಭಜರಂಗಿ ಪಾತ್ರದಲ್ಲಿ ಹಾಗಲ್ಲ, ಸೀರಿಯಸ್, ಕೇರಿಂಗ್, ತಾಳ್ಮೆ ಇವೆಲ್ಲವೂ ಅಡಕವಾಗಿತ್ತು. ವಿಭಿನ್ನ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ" ಎಂದು ಹೇಳಿಕೊಂಡಿದ್ದಾರೆ ಸುಜಯ್ ಹೆಗಡೆ.
ಭಜರಂಗಿ ಪಾತ್ರ ಹೇಗಿದೆ ಅಂತ ಹೇಳಿದ್ರೆ 'ಸಲಾರ್' ಸಿನಿಮಾದಲ್ಲಿ ಇಬ್ಬರೂ ಹೀರೋಗಳ ಫ್ರೆಂಡ್ ಶಿಪ್ ಇದೆಯಲ್ವಾ ಅದೇ ಥರ. ಬೆಸ್ಟ್ ಫ್ರೆಂಡ್ಸ್, ಆದರೆ, ಅಣ್ಣ ತಮ್ಮನ ಥರ ಇರ್ತಾರೆ. ದತ್ತಬಾಯ್ ಮತ್ತೆ ಭಜರಂಗಿ ಕೂಡಾ ಅಷ್ಟೇ, ತುಂಬಾ ಒಳ್ಳೆಯ ಫ್ರೆಂಡ್ಸ್. ಒಬ್ಬರನ್ನೊಬ್ಬರು ಬಿಟ್ಟುಕೊಡೊಲ್ಲ. ಒಬ್ಬರಿಗೊಬ್ಬರು ಜೊತೆಯಾಗಿ ನಿಲ್ತೇವೆ. ಅಂದ ಹಾಗೇ ನಮ್ಮಿಬ್ಬರ ಭೇಟಿಯಾಗೋದು ಮೂರನೇ ಕ್ಲಾಸ್‌ನಲ್ಲಿದ್ದಾಗ. ನಾನು ಅನಾಥ, ದತ್ತನೂ ಅನಾಥ. ಅಲ್ಲಿಂದ ಕಷ್ಟಪಟ್ಟು ಒಂದು ಹಂತಕ್ಕೆ ಬಂದಿರುತ್ತೇವೆ" ಎಂದು ಈ ಹಿಂದೆ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಅಂದ ಹಾಗೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸುಜಯ್ ಹೆಗಡೆ ನಟನೆಯ ಮೂರನೇ ಧಾರಾವಾಹಿ ಹೌದು. ಈ ಮೊದಲು 'ಗೋಕುಲದಲ್ಲಿ ಸೀತೆ' ಧಾರಾವಾಹಿಯಲ್ಲಿ ಸುಜಯ್ ನಟಿಸಿದ್ದರು. ತದ ನಂತರ ಪೌರಾಣಿಕ ಧಾರಾವಾಹಿ 'ಶನಿ' ಹಾಗೂ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಈಕೆ ಬಣ್ಣ ಹಚ್ಚಿದ್ದರು. ಇದೀಗ ವರ್ಷಗಳ ನಂತರ 'ದೃಷ್ಟಿಬೊಟ್ಟು' ಧಾರಾವಾಹಿಯ ಭಜರಂಗಿ ಆಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











