ಮರಾಠಿ ಮೂಲದ ಗೌತಮಿಗೆ ಕನ್ನಡ ಅಂದ್ರೆ ಅಸಡ್ಡೆನಾ? ಯಾಕೀ ಆರೋಪ?
ಬಿಗ್‌ಬಾಸ್ ಕನ್ನಡ ಸೀಸನ್ -11 ಕುತೂಹಲದ ಘಟ್ಟ ತಲುಪಿದೆ. ಗ್ರ್ಯಾಂಡ್ ಫಿನಾಲೆಗೆ ಸ್ಪರ್ಧಿಗಳು ಎಂಟ್ರಿ ಕೊಡುವ ಸಮಯ ಹತ್ತಿರವಾಗಿದೆ. ಶೀಘ್ರದಲ್ಲೇ ಒಬ್ಬೊಬ್ಬರಾಗಿ ಫಿನಾಲೆಗೆ ಟಿಕೆಟ್ ಪಡೆಯಲಿದ್ದಾರೆ. ಇನ್ನು ಮುಂದೆ ಅಸಲಿ ಆಟ ಶುರು ಎಂದು ಹೊಸ ಪ್ರೋಮೊ ಬಂದಿದೆ. ಈ ಬಾರಿ ಯಾರು ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿಯುತ್ತಾರೆ ಕಾದು ನೋಡಬೇಕಿದೆ.
ಸದ್ಯ ಒಂಭತ್ತು ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯಲ್ಲಿದ್ದಾರೆ. ಕಳೆದ ವಾರ ಕೂಡ ಎಲಿಮಿನೇಷನ್ ಇರಲಿಲ್ಲ. ಈ ವೀಕೆಂಡ್ ಡಬಲ್ ಎಲಿಮಿನೇಷನ್ ಪಕ್ಕಾ ಎನ್ನಲಾಗ್ತಿದೆ. ಇನ್ನು ಗೌತಮಿ ಜಾಧವ್ ತಮ್ಮ ವರಸೆ ಬದಲಿಸಿದ್ದಾರೆ. ಮಂಜು ಜೊತೆ ಸ್ನೇಹ ಕಡಿದುಕೊಂಡು ಫಿನಾಲೆ ಕಡೆ ಮುಖ ಮಾಡಿದ್ದಾರೆ. ಅತ್ತ ಮಂಜು ಕೂಡ ಅದೇ ನಿರ್ಧಾರಕ್ಕೆ ಬಂದಿದ್ದಾರೆ. ಇದೆಲ್ಲದರ ನಡುವೆ ಗೌತಮಿ ಬಗ್ಗೆ ಯುಮುನಾ ಶ್ರೀನಿಧಿ ಆರೋಪವೊಂದನ್ನು ಮಾಡಿದ್ದಾರೆ.

ಗೌತಮಿಗೆ ಕನ್ನಡ ಓದಲು ಬರೆಯಲು ಬರಲ್ಲ. 12 ವರ್ಷಗಳಿಂದ ಕರ್ನಾಟಕದಲ್ಲಿ ಇದ್ದರೂ ಕನ್ನಡ ಕಲಿಯುವ ಪ್ರಯತ್ನ ಮಾಡಿಲ್ಲ. ನಾಡಗೀತೆ ಹಾಡುವುದಕ್ಕೂ ಬರದೇ ರಾಜ್ಯೋತ್ಸವದ ದಿನ ಸುಮ್ಮನಿದ್ದರು ಎಂದು ಯಮುನಾ ಆರೋಪಿಸಿದ್ದಾರೆ. ಬಾಸ್ ಟಿವಿ ಯೂಟ್ಯೂಬ್ ಚಾನಲ್‌ಗೆ ಯಮುನಾ ಸಂದರ್ಶನ ನೀಡಿದ್ದಾರೆ. ಈ ವೇಳೆ ಗೌತಮಿ ಬಗ್ಗೆ ಮಾತನಾಡಿದ್ದಾರೆ.
ರಾಜ್ಯೋತ್ಸವದ ದಿನ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳೆಲ್ಲಾ ನಾಡಗೀತೆ ಹಾಡಿದ್ದರು. ಆದರೆ ಗೌತಮಿ ಮಾತ್ರ ಹಾಡಲಿಲ್ಲ ಎಂದು ಯಮುನಾ ಹೇಳಿದ್ದಾರೆ. ಇದು ನನ್ನ ಮನಸ್ಸಿಗೆ ಬಹಳ ನೋವುಂಟು ಮಾಡಿದೆ. ನಾನು ಮನೆಯೊಳಗೆ ಇದ್ದಿದ್ದರೆ ಈ ಬಗ್ಗೆ ಖಂಡಿತ ದನಿ ಎತ್ತುತ್ತಿದ್ದೆ ಎಂದಿದ್ದಾರೆ. ಇದು ಬಹಳ ಜನಕ್ಕೆ ಗೊತ್ತಾಗಲಿಲ್ಲ. ಕೆಲವರು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು ಎಂದು ಯಮುನಾ ತಿಳಿಸಿದ್ದಾರೆ.
ಯಮುನಾ ಶ್ರೀನಿಧಿ ಮಾತನಾಡಿ "ರಾಜ್ಯೋತ್ಸವದ ದಿನ ಬಿಗ್‌ಬಾಸ್ ಮನೆಯಲ್ಲಿ ಆಚರಣೆ ಜೋರಾಗಿತ್ತು. ಎಲ್ಲರೂ ನಾಡಗೀತೆ ಹಾಡಿದರು. ಕೆಲವರು ಗಟ್ಟಿ ಧ್ವನಿಯಲ್ಲಿ ಹಾಡಿದರು. ಗೌತಮಿ ಮಾತ್ರ ಹಾಡದೇ ಬಾಯಿಮುಚ್ಚಿಕೊಂಡಿದ್ದರು. ಬೇರೆ ದೇಶದ ಗೀತೆಯಾಗಿದ್ದರೆ ನಾವು ಹಾಡುವುದಿಲ್ಲ, ಅದೇ ರೀತಿ ಗೌತಮಿ ಮಾಡಿದ್ದಾರೆ. ಗೌತಮಿ ಮರಾಠಿ ಮೂಲದವರಂತೆ, ಪರವಾಗಿಲ್ಲ, ಆದರೆ ಕಲಿಯಬಹುದಿತ್ತಲ್ಲ" ಎಂದು ಪ್ರಶ್ನಿಸಿದ್ದಾರೆ.
"ಕನ್ನಡ ನೆಲ ಬೇಕು, ಜಲ ಬೇಕು, ಅವಕಾಶಗಳು ಬೇಕು. ಆದರೆ ನಮ್ಮ ನಾಡಗೀತೆ ಗೊತ್ತಿಲ್ವಾ? ಬರದಿದ್ದರೆ ಕಲಿಯಲು ಎಷ್ಟು ದಿನ ಬೇಕು? ವಿದೇಶದಲ್ಲಿರುವ ಕನ್ನಡಿಗರು ಕನ್ನಡ ಬರೆದು ಓದುತ್ತಾರೆ, ನಾಡಗೀತೆ ಹಾಡುತ್ತಾರೆ. ನಾನು ಅಮೆರಿಕಾದಲ್ಲಿ ಕನ್ನಡ ಸಂಘದ ಅಧ್ಯಕ್ಷೆ ಆಗಿದ್ದಕ್ಕೆ ಹೇಳ್ತಿದ್ದೀನಿ. ಅಲ್ಲಿನ ಮಕ್ಕಳು ನಾಡಗೀತೆ ಹಾಡುತ್ತಾರೆ. ಆದರೆ 12 ವರ್ಷಗಳಿಂದ ಇದ್ದರೂ ಗೌತಮಿಗೆ ಕನ್ನಡ ಓದಲು ಬರಲ್ಲ, ಒಂದು ದಿನವೂ ಟಾಸ್ಕ್ ಬಗ್ಗೆ ಓದಲಿಲ್ಲ" ಎಂದು ಯಮುನಾ ಆರೋಪಿಸಿದ್ದಾರೆ.
ಸಾಕಷ್ಟು ಜನ ಯಮನಾ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನೀವು ಹೇಳಿದ್ದು ನಿಜ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಕೆಲವರು ಗೌತಮಿ ಪರ ವಹಿಸಿ ಮಾತನಾಡುತ್ತಿದ್ದಾರೆ. ಕಿರುತೆರೆಯ 'ಸತ್ಯ' ಧಾರಾವಾಹಿಯಿಂದ ಗೌತಮಿ ಮನೆ ಮಾತಾಗಿದ್ದರು. ಅದೇ ಜನಪ್ರಿಯತೆಯಿಂದ ಬಿಗ್‌ಬಾಸ್ ಮನೆಗೆ ಹೋಗುವ ಅವಕಾಶ ಪಡೆದಿದ್ದರು.
ಗೌತಮಿ ಜಾಧವ್ ಬಿಗ್‌ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಹೋಗುವುದು ಖಚಿತ ಎನ್ನಲಾಗ್ತಿದೆ. ಸಾಕಷ್ಟು ಅಭಿಮಾನಿಗಳು ಆಕೆಯನ್ನು ಬೆಂಬಲಿಸುತ್ತಿದ್ದಾರೆ. ಇತ್ತೀಚೆಗೆ ಗೌತಮಿ ಪತಿ ಅಭಿಷೇಕ್ ಕಾಸರಗೋಡು ಮನೆಯೊಳಗೆ ಹೋಗಿದ್ದರು. ಗೌತಮಿ ಆಟದ ಬಗ್ಗೆ ಚರ್ಚಿಸಿದ್ದರು, ಪರೋಕ್ಷವಾಗಿ ಒಂದಷ್ಟು ಸಲಹೆ ಸೂಚನೆ ಕೊಟ್ಟು ಬಂದಿದ್ದರು. ಬಿಗ್‌ಬಾಸ್ ಫಿನಾಲೆಗೆ ಇನ್ನು 2 ವಾರ ಮಾತ್ರ ಬಾಕಿಯಿದೆ.


Click it and Unblock the Notifications











