ಡಿವೋರ್ಸ್ ವದಂತಿಗೆ ಫುಲ್ ಸ್ಟಾಪ್ ; ಅಗ್ನಿಸಾಕ್ಷಿ ಇಶಿತಾ ಜೊತೆ ರೊಮ್ಯಾಂಟಿಕ್ ಹಾಡಿಗೆ ಡ್ಯಾನ್ಸ್ ಮಾಡಿದ ಮುರುಗ
ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟಿಕೊಳ್ತಾವೆ. ಹಾಗಂತೆ.. ಹೀಗಂತೆ .. ಎಂಬ ಅಂತೆ ಕಂತೆ ಸಂತೆಯಲ್ಲಿ ಹಲವಾರು ಸುದ್ದಿಗಳು ಸದ್ದು ಮಾಡುತ್ತಾವೆ. ಹೀಗೆ ಸದ್ದು ಮಾಡುವ ಸುದ್ದಿಗಳಲ್ಲಿ ಅರ್ಧ ಸತ್ಯವಾದರೆ ಉಳಿದಿದೆಲ್ಲವೂ ಮಿಥ್ಯ ಆಗಿರುತ್ತಾವೆ.
ಆ ಪೈಕಿ ತಮ್ಮ ಕುರಿತು ಕೆಲ ಸುದ್ದಿಗಳನ್ನು ಕಂಡು.. ಸಾಮಾನ್ಯವಾಗಿ ಕೆಲ ತಾರೆಯರು ಸುಮ್ಮನಾಗುತ್ತಾರೆ. ಇನ್ನೂ ಕೆಲವರು ಉರಿದು ಬೀಳುತ್ತಾರೆ. ಮತ್ತೂ ಕೆಲವರು ಸಮಯ ಸಂದರ್ಭ ಬಂದಾಗ ತಮ್ಮ ಕುರಿತು ಹಬ್ಬಿಸಲಾದ ಇಲ್ಲ ಸಲ್ಲದ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಇನ್ನೂ ಕೆಲವರು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುವ ಅಭಿಪ್ರಾಯಕ್ಕೆ ಸೋಶಿಯಲ್ ಮೀಡಿಯಾ ಮೂಲಕವೇ ಉತ್ತರ ಕೊಡುತ್ತಾರೆ. ಉದಾಹರಣೆಗೆ ಇಶಿತಾ ವರ್ಷ ಮತ್ತು ಮುರುಗ ಜೋಡಿಯನ್ನೇ ತೆಗೆದುಕೊಳ್ಳಿ.

ಹೌದು, ಇಶಿತಾ ವರ್ಷ.. ''ಸರಸು'', ''ಕೃಷ್ಣ ರುಕ್ಮಿಣಿ'', ''ತಂಗಾಳಿ'', ''ಮನಸು ಮಮತಾ'', ಸೇರಿ ಹಲವು ಧಾರಾವಾಹಿ ಮಾಡಿರುವ ಇಶಿತಾ ಅವರ ಬದುಕಿಗೆ ''ಅಗ್ನಿಸಾಕ್ಷಿ'' ಭದ್ರ ಬುನಾದಿ ಹಾಕಿತ್ತು. ''ಅಗ್ನಿಸಾಕ್ಷಿ'' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಇಶಿತಾ ಮಿಂಚಿದ್ದರು. ಇವತ್ತು ಕೂಡ ಇವರನ್ನು ಅನೇಕರು ಮಾಯಾ ಎಂದೇ ಕರೆಯುತ್ತಾರೆ.
''ಅಗ್ನಿಸಾಕ್ಷಿ'' ಧಾರಾವಾಹಿ ನಂತರ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಇಶಿತಾ ಇದೇ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತಮಗೆ ಡ್ಯಾನ್ಸ್ ಕಲಿಸಿದ ಮುರುಘನ್ ಅವರಿಗೆ ಮನ ಸೋತರು. ಇಬ್ಬರೂ ಪ್ರೇಮ ಲೋಕದಲ್ಲಿ ಸತತವಾಗಿ ಆರು ವರ್ಷಗಳ ಕಾಲ ಕಳೆದರು.
2019ರಲ್ಲಿ ಇಬ್ಬರೂ ಮದುವೆಯಾದರು. ಮದುವೆಯಾದ ಬಳಿಕ ಕಿರುತೆರೆಯಿಂದ ಕೊಂಚ ದೂರ ಉಳಿದರೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಮದುವೆಯಾದ ಬಳಿ ರಾಜಾ-ರಾಣಿ ಸೀಸನ್ 1 ರಲ್ಲಿ ಪತಿ ಮುರುಘನ್ ಜೊತೆಗೆ ಇಶಿತಾ ಅವರು ಭಾಗವಹಿಸಿದರು. ಇದರಲ್ಲಿ ರನ್ನರಪ್ ಆಗಿ ಹೊರ ಹೊಮ್ಮಿದರು.
ಆದರೆ ಇದು 5G ಯುಗ. ಮನದ ಭಾವನೆ ಸಾಮಾಜಿಕ ಜಾಲತಾಣದ ಮೂಲಕ ಹೊರ ಬಂದಾಗಲೇ ಜನ ಹೌದೌದು ಎನ್ನುತ್ತಾರೆ. ಮುದ್ದಾದ ಜೋಡಿ ಎಂದೆಲ್ಲಾ ಕೊಂಡಾಡುತ್ತಾರೆ.ನಡೆಯಲ್ಲಿ ಚೂರು ಬದಲಾವಣೆ ಕಂಡರೂ ಜನ ಅನುಮಾನ ಪಡಲು ಶುರು ಮಾಡುತ್ತಾರೆ. ದಾಂಪತ್ಯದಲ್ಲಿ ಬಿರುಕು ಮೂಡಿದೆಯಂತೆ, ಹಾಗಂತೆ-ಹೀಗಂತೆ, ಎಂದೆಲ್ಲಾ ಮಾತನಾಡಲು ಶುರು ಮಾಡುತ್ತಾರೆ. ತಮ್ಮೆಲ್ಲ ಕೆಲಸವನ್ನು ಪಕ್ಕಕ್ಕೆ ತಳ್ಳಿ ಇವರ ವೈಯಕ್ತಿಕ ಜೀವನದ ಕುರಿತು ಚರ್ಚೆ ಮಾಡುತ್ತಾರೆ.

ಇಶಿತಾ ಮತ್ತು ಮುರುಘಾನಂದ ಅವರ ವಿಚಾರದಲ್ಲಿ ಕೂಡ ಇದೇ ಆಗಿತ್ತು. ಇಬ್ಬರು ಜೊತೆಯಲ್ಲಿ ಫೋಟೊ ಹಂಚಿಕೊಳ್ಳದಿರುವುದನ್ನು ಕಂಡು ಹಲವರು ಇವರ ಸಂಬಂಧದ ಕುರಿತು ಪ್ರಶ್ನೆ ಮಾಡಲು ಶುರು ಮಾಡಿದ್ದರು. ಇಬ್ಬರು ವಿಚ್ಚೇದನ ಪಡೆಯುತ್ತಿದ್ದಾರೆ ಎಂದು ಚರ್ಚೆ ಮಾಡಲು ಶುರು ಮಾಡಿದ್ದರು. ಇಷ್ಟೇ ಅಲ್ಲ ಇನ್ನೂ ಕೆಲವರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ಇಶಿತಾ ಅವರಿಗೆ ಕೇಳಿದ್ದರು ಕೂಡ.
ಮುರುಗ ಸರ್ ಎಲ್ಲಿದ್ದಾರೆ? ನಿಮ್ಮ ಯಾವುದೇ ವಿಡಿಯೋದಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ ಯಾಕೆ? ಎಂದು ಪ್ರಶ್ನೆ ಮಾಡಿದ್ದ ಕೆಲವರು, ನೀವಿಬ್ಬರು ಒಟ್ಟಿಗೆ ಯಾಕೆ ವಿಡಿಯೋ ಮಾಡುತ್ತಿಲ್ಲ? ಮುರುಗ ಅವರ ಫೋಟೊಗಳನ್ನು ಯಾಕೆ ಶೇರ್ ಮಾಡುತ್ತಿಲ್ಲ? ಇಬ್ಬರೂ ದೂರ ಆಗಿದ್ದೀರಾ? ಎಂದೆಲ್ಲಾ ಕಾಮೆಂಟ್ ಮಾಡುವ ಮೂಲಕ ಮಾನಸಿಕ ಹಿಂಸೆ ಕೊಡಲು ಶುರು ಮಾಡಿದ್ದರು.
ಇದೆಲ್ಲದರಿಂದ ಬೇಸತ್ತು ಅವರು ಎಲ್ಲಿದ್ದಾರೆ ಎಂಬುವುದನ್ನು ತಿಳಿದುಕೊಳ್ಳುವುದಕ್ಕೆ ಅವರ ಅಕೌಂಟ್ ಫಾಲೋ ಮಾಡಿ ಎಂದು ಇಶಿತಾ ನೊಂದುಕೊಂಡು ಉತ್ತರ ನೀಡಿದ್ದರೂ ಕೂಡ ಇವರ ಅನುಮಾನ ದೂರವಾಗಿರಲಿಲ್ಲ. ಚರ್ಚೆಗೆ ಕಡಿವಾಣ ಬಿದ್ದಿರಲಿಲ್ಲ.
ಈಗ ಈ ಎಲ್ಲಾ ಅಂತೆ-ಕಂತೆಗಳಿಗೆ ಇಶಿತಾ ಮತ್ತು ಮುರುಘಾ ಮಾಸ್ಟರ್ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ಧಾರೆ. ಪತ್ನಿ ಇಶಿತಾ ವರ್ಷಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮುರುಗಾನಂದ, ಇಶಿತಾ ಜೊತೆಗಿನ ಮುದ್ದಾದ ರೋಮ್ಯಾಂಟಿಕ್ ವಿಡಿಯೋ ಶೇರ್ ಮಾಡಿ ಶುಭ ಕೋರಿದ್ದಾರೆ.
ಇಷ್ಟೇ ಅಲ್ಲ ಪ್ರೀತಿಯ ಸಾಲುಗಳನ್ನು ಕೂಡ ಬರೆದುಕೊಂಡಿರುವ ಮುರುಘಾ ತಮ್ಮ ಬದುಕಿನಲ್ಲಿ ಇಶಿತಾ ಯಾಕೆ ಮುಖ್ಯ ಎಂದು ಕೂಡ ಹೇಳಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ಮತ್ತು ನಡೆಯುತ್ತಿರುವ ತಮ್ಮ ವಿಚ್ಚೇದನದ ವದಂತಿಗೆ ಫುಲ್ ಸ್ಟಾಪ್ ಹಾಕುವ ಪ್ರಯತ್ನವನ್ನು ಕೂಡ ಮಾಡಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರು ಈ ವಿಡಿಯೋಗೆ ರಿಯ್ಯಾಕ್ಟ್ ಮಾಡಿದ್ದಾರೆ. ನೀವಿಬ್ಬರು ಡಿವೋರ್ಸ್ ಪಡೆಯುತ್ತೀದ್ದೀರಾ ಎಂಬ ಸುದ್ದಿ ಕೇಳಿ ಶಾಕ್ ಆಗಿತ್ತು. ಆದರೆ ಈಗ ಬಹಳ ಸಮಯದ ನಂತರ ನಿಮ್ಮಿಬ್ಬರನ್ನು ಜೊತೆಯಾಗಿ ನೋಡಿ ತುಂಬಾನೆ ಖುಷಿಯಾಯ್ತು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.


Click it and Unblock the Notifications