"ಅಗ್ನಿಸಾಕ್ಷಿ ಅಂಜಲಿ ಪಾತ್ರಕ್ಕೂ ನನಗೂ ಹೆಚ್ಚಿನ ವ್ಯತ್ಯಾಸವಿಲ್ಲ" ಎಂದ ಕಿರುತೆರೆ ನಟಿ ಸುಕೃತಾ ನಾಗ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಅಗ್ನಿಸಾಕ್ಷಿ'ಯೂ ಒಂದು. ವಿಭಿನ್ನ ಕಥೆಯ ಜೊತೆಗೆ ಪಾತ್ರವರ್ಗದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯು ಶುರುವಾದ ವರ್ಷ ಡಿಸೆಂಬರ್ 2, 2013. ಬರೋಬ್ಬರಿ ಏಳು ವರ್ಷಗಳ ಕಾಲ ಪ್ರಸಾರವಾಗಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯು 2020 ಜನವರಿ 3 ರಂದು ಮುಕ್ತಾಯಗೊಂಡಿತ್ತು.
'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ತಂಗಿ ಅಂಜಲಿಯಾಗಿ ಅಭಿನಯಿಸುತ್ತಿರುವ ಸುಕೃತಾ ನಾಗ್ ಈ ಜರ್ನಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. "ನಾನು ನಟಿಸಿರುವ ಅಗ್ನಿಸಾಕ್ಷಿ ಧಾರಾವಾಹಿಯು ಯಶಸ್ವಿ ಹತ್ತು ವರ್ಷ ಪೂರೈಸಿದೆ. ತುಂಬಾನೇ ಸಂತೋಷವಾಗುತ್ತಿದೆ. ಮಾತ್ರವಲ್ಲ ಹೆಮ್ಮೆಯೂ ಆಗುತ್ತಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಸುಕೃತಾ ನಾಗ್ ಸಂತಸ ಹಂಚಿಕೊಂಡಿದ್ದಾರೆ.

"ಅಗ್ನಿಸಾಕ್ಷಿ ಧಾರಾವಾಹಿ ಮುಕ್ತಾಯಗೊಂಡು ಮೂರು ವರ್ಷಗಳು ಕಳೆದಿದೆ. ಆದರೂ ಕೂಡಾ ಜನ ನನ್ನನ್ನು ಇಂದಿಗೂ ಅದೇ ಪಾತ್ರದ ಮೂಲಕ ಗುರುತಿಸುತ್ತಾರೆ. ಈಗಲೂ ಕಿರುತೆರೆ ವೀಕ್ಷಕರು ಅಂಜಲಿ ಪಾತ್ರದಿಂದ ನನ್ನನ್ನು ಗುರುತಿಸುವಾಗ, ಕರೆಯುವಾಗ ತುಂಬಾನೇ ಖುಷಿಯಾಗುತ್ತಿದೆ" ಎಂದು ಫಿಲ್ಮಿ ಜನತೆಗೆ ಹೇಳಿಕೊಳ್ಳುವ ಸುಕೃತಾ ನಾಗ್ ತದ ನಂತರ ಲಕ್ಷಣ ಧಾರಾವಾಹಿಯಲ್ಲಿ ನಟಿಸಿದ್ದು ಖಳನಾಯಕಿಯಾಗಿ ಮೋಡಿ ಮಾಡಿದ್ದಾರೆ.
"ಅಂಜಲಿ ಪಾತ್ರ ಮುಖ್ಯವಾಗಿ ಪಾಸಿಟಿವ್ ಆಗಿತ್ತು. ಆಕೆ ಸ್ವೀಟ್, ಕ್ಯೂಟ್ ಹುಡುಗಿ. ಅಣ್ಣ ಅತ್ತಿಗೆ, ಅಪ್ಪ, ಹೀಗೆ ಕುಟುಂಬವೇ ಅವಳ ಪ್ರಪಂಚ. ರಿಲೇಶನ್ ಶಿಪ್ ಗೆ ಬೆಲೆ ಕೊಡುವ ಹುಡುಗಿ ಈಕೆ. ಆದರೆ ಅದರ ನಂತರ ನಾನು ಲಕ್ಷಣ ಸೀರಿಯಲ್‌ನಲ್ಲಿ ಶ್ವೇತಾ ಪಾತ್ರಕ್ಕೆ ಜೀವ ತುಂಬಿದೆ. ಇಲ್ಲಿ ನಾನು ಸೆಲ್ ಫಿಶ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೆ. ಯಾರ ಬಗ್ಗೆನೂ ಯೋಚನೆ ಇಲ್ಲ. ಎಮೋಷನಲ್ ಕನೆಕ್ಷನ್ ಇಲ್ಲ. ಒಟ್ಟಿನಲ್ಲಿ ಒಂದು ಪಕ್ಕಾ ಪಾಸಿಟಿವ್ ಆದರೆ ಮಗದೊಂದು ಪಕ್ಕಾ ನೆಗೆಟಿವ್ " ಎಂದು ಎರಡು ಪಾತ್ರಗಳ ಬಗ್ಗೆ ಸುಕೃತಾ ನಾಗ್ ಹೋಲಿಸಿ ಮಾತನಾಡುತ್ತಾರೆ.

"ಇನ್ನು ಸುಕೃತಾ ಹಾಗೂ ಅಂಜಲಿಗೆ ಹೇಳಿಕೊಳ್ಳುವಂತಹ ವ್ಯತ್ಯಾಸವೇನಿಲ್ಲ. ಸುಕೃತಾ ಕೂಡಾ ಅಂಜಲಿಯ ಹಾಗೇ ಮಾತುಗಾರ್ತಿ, ಕ್ಯೂಟ್ ಮತ್ತೆ ಸ್ವೀಟ್ ಜೊತೆಗೆ ಬಬ್ಲಿ ಹುಡುಗಿ. ಆದರೆ ಶ್ವೇತಾ ಪಾತ್ರ ಮಾಡುವುದಕ್ಕೆ ಕಷ್ಟ ಆಗಿತ್ತು. ಯಾಕೆಂದ್ರೆ ಅದು ಕಂಪ್ಲೀಟ್ ವಿರುದ್ಧದ ಪಾತ್ರ. ಪ್ರತಿ ಸಲ ನಟಿಸುವಾಗಲೂ ಸರಿಯಾಗಿದೆಯಾ ಅಂಥ ಕೇಳ್ತಿದ್ದೆ ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದರು ಸುಕೃತಾ ನಾಗ್.
"ಅಗ್ನಿಸಾಕ್ಷಿ ಧಾರಾವಾಹಿಯ ಅಂಜಲಿ ಪಾತ್ರದ ಮೂಲಕ ಜನ ನನ್ನನ್ನು ಇಷ್ಟಪಡುತ್ತಿದ್ದರು. ಪ್ರೀತಿ ನೀಡುತ್ತಿದ್ದರು. ಆದರೆ ಶ್ವೇತಾ ಚೆಂಗಪ್ಪ ಪಾತ್ರದಲ್ಲಿ ಜನರು ನನ್ನನ್ನು ಹೇಟ್ ಮಾಡುತ್ತಿದ್ದರು" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುವಾಗ ಹೇಳಿಕೊಂಡಿದ್ದಾರೆ ಸುಕೃತಾ ನಾಗ್. ಇದರ ಜೊತೆಗೆ "ಲಕ್ಷಣ ಧಾರಾವಾಹಿಯ ನಂತರ ನಾನು ವೃಂದಾ ಆಗಿ ಕಿರುತೆರೆಗೆ ಮರಳಿದ್ದೇನೆ" ಎಂದು ಹೇಳಲು ಈಕೆ ಮರೆಯಲಿಲ್ಲ.
"ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ನಾನು ವೃಂದಾ ಆಗಿ ನಟಿಸುವ ಮೂಲಕ ಕಂ ಬ್ಯಾಕ್ ಆಗಿದ್ದೇನೆ. ಲಕ್ಷಣ ಧಾರಾವಾಹಿ ಇತ್ತೀಚೆಗಷ್ಟೇ ಮುಕ್ತಾಯ ಕಂಡಿತ್ತು. ಈಗ ಶಾರ್ಟ್ ಬ್ರೇಕ್ ಮೂಲಕ ಮರಳಿರುವುದು ನನಗಂತೂ ಖುಷಿ ನೀಡಿದೆ. ಸದ್ಯಕ್ಕೆ ವೃಂದಾ ಪಾತ್ರ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ಈ ಪಾತ್ರ ಹೇಗೆ ಸಾಗಲಿದೆ ಎಂಬ ಕುತೂಹಲವೂ ನನಗಿದೆ" ಎಂದು ಹೊಸ ಪಾತ್ರದ ಬಗ್ಗೆಯೂ ಫಿಲ್ಮಿಬೀಟ್ ಜೊತೆಗೆ ಹೇಳಿಕೊಂಡಿದ್ದಾರೆ ಸುಕೃತಾ ನಾಗ್.


Click it and Unblock the Notifications











