ಮರಾಠಿ ಭಾಷೆ ಬಗ್ಗೆ ಅವಹೇಳನ: ಕ್ಷಮೆ ಕೇಳಿದ ಬಿಗ್ ಬಾಸ್ ಸ್ಪರ್ಧಿ
ಮರಾಠಿ ಭಾಷೆಯ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಗಾಯಕ ಜಾನ್ ಕುಮಾರ್ ಸನು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಬಿಗ್ ಬಾಸ್ 14ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿರುವ ಜಾನ್ ಕುಮಾರ್, ಇತ್ತೀಚಿನ ಎಪಿಸೋಡ್‌ವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಜಾನ್ ಕುಮಾರ್ ಸನು ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್‌ಎಸ್) ನಾಯಕ ಅಮೆ ಖೋಪ್ಕರ್ ಹಾಗೂ ಆಡಳಿತ ಪಕ್ಷ ಶಿವಸೇನಾ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಿನ 24 ಗಂಟೆಯಲ್ಲಿ ಜಾನ್ ಕುಮಾರ್ ಸನು ಕ್ಷಮೆ ಕೇಳದಿದ್ದರೆ ಬಿಗ್ ಬಾಸ್ ಶೋ ನಿಲ್ಲಿಸಬೇಕಾಗುತ್ತದೆ ಎಂದು ಅಮೆ ಖೋಪ್ಕರ್ ಎಚ್ಚರಿಕೆ ನೀಡಿದ್ದರು.

ಜಾನ್ ಕುಮಾರ್ ಸನು ಹೇಳಿಕೆಯಿಂದ ಮಹಾರಾಷ್ಟ್ರದಲ್ಲಿ ವಿವಾದ ಉಂಟಾಗಿರುವ ಬಗ್ಗೆ ಬಿಗ್ ಬಾಸ್ ಆಯೋಜಕರು ಸ್ಪರ್ಧಿಗೆ ತಿಳಿಸಿದ್ದು, ನಿನ್ನೆಯ ಸಂಚಿಕೆಯಲ್ಲಿ ಜಾನ್ ಕುಮಾರ್ ಕ್ಷಮೆ ಕೇಳಿದ್ದಾರೆ.
''ಮರಾಠಿ ಜನರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇನೆ. ನಿಮ್ಮ ಭಾವನೆಗಳನ್ನು ನೋಯಿಸುವ ಉದ್ದೇಶ ನನಗಿರಲಿಲ್ಲ ಆದರೆ ಅದು ತಪ್ಪಾಗಿದ್ದರೆ ನಾನು ತುಂಬಾ ವಿಷಾದಿಸುತ್ತೇನೆ. ಬಿಗ್ ಬಾಸ್ ನಾನು ನಿಮ್ಮನ್ನು ಮುಜುಗರಕ್ಕೀಡು ಮಾಡಿದರೆ, ಮತ್ತೆ ಇದನ್ನು ಪುನರಾವರ್ತಿಸುವುದಿಲ್ಲ ಎಂದು ಹೇಳಲು ಬಯಸುತ್ತೇನೆ'' ಎಂದು ಸ್ಪಷ್ಟನೆ ನೀಡಿದ್ದಾರೆ.
ಏನಿದು ವಿವಾದ?
ಜಾನ್ ಕುಮಾರ್ ಸನು ಬಿಗ್ ಬಾಸ್ ಮನೆಯಲ್ಲಿ ''ಇತರೆ ಸ್ಪರ್ಧಿಗಳು ತನ್ನೊಂದಿಗೆ ಮಾತನಾಡಲು ಬಯಸಿದರೆ ಮರಾಠಿಯಲ್ಲಿ ಮಾತನಾಡಬೇಡಿ'' ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಈಗ ಭಾರಿ ವಿರೋಧ ವ್ಯಕ್ತವಾಗಿದೆ. ಮರಾಠಿ ಭಾಷೆಯ ಬಗ್ಗೆ ಇಂತಹ ಅವಹೇಳನಕಾರಿ ಮತ್ತು ಅಗೌರವವನ್ನು ನಾವು ಸಹಿಸುವುದಿಲ್ಲ, ಮಹಾರಾಷ್ಟ್ರದಲ್ಲಿ ಇರಬೇಕಾದರೆ ನೀವು ಮರಾಠಿ ಭಾಷೆಯನ್ನು ಗೌರವಿಸಬೇಕು ಎಂದು ಎಂಎನ್‌ಎಸ್ ನಾಯಕ ಖೋಪ್ಕರ್ ಆಕ್ರೋಶಗೊಂಡಿದ್ದರು.


Click it and Unblock the Notifications











