ಪ್ರೇಮಿಗಳಿಗಾಗಿ ಬರ್ತಿದೆ 'ಜಾಕ್ ಪಾಟ್ ಪ್ರೇಮೋತ್ಸವ'; ವಾರಾಂತ್ಯದಲ್ಲಿ ಸಖತ್ ಮನರಂಜನೆ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುವರ್ಣ ಜಾಕ್ ಪಾಟ್' ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅನುಪಮಾ ಗೌಡ ನಿರೂಪಣೆ ಮಾಡುತ್ತಿರುವ ಪ್ರತಿ ವಾರಾಂತ್ಯ ಪ್ರಸಾರವಾಗುತ್ತಿರುವ ಸುವರ್ಣ ಜಾಕ್ ಪಾಟ್‌ನಲ್ಲಿ ಈ ಭಾರಿ ಪ್ರೇಮಿಗಳಿಗೆ ಹಬ್ಬದ ಸಂಭ್ರಮ.
ಹೌದು, ಸ್ಟಾರ್ ಸುವರ್ಣ ವಾಹಿನಿಯು ವ್ಯಾಲಂಟೈನ್ಸ್ ಡೇ ಪ್ರಯುಕ್ತ 'ಜಾಕ್ ಪಾಟ್ ಪ್ರೇಮೋತ್ಸವ' ಎಂಬ ವಿಶೇಷ ಸಂಚಿಕೆಯನ್ನು ಚಿತ್ರೀಕರಿಸಿತ್ತು. ಅದನ್ನು ಪ್ರಸಾರ ಮಾಡಲು ಸ್ಟಾರ್ ಸುವರ್ಣ ಸಜ್ಜಾಗಿದೆ.

ಇದೇ ಭಾನುವಾರ ರಾತ್ರಿ ಏಳು ಗಂಟೆಗೆ ಪ್ರಸಾರವಾಗಲಿರುವ 'ಜಾಕ್ ಪಾಟ್ ಪ್ರೇಮೋತ್ಸವ' ಕಾರ್ಯಕ್ರಮವು ಕಿರುತೆರೆ ವೀಕ್ಷಕರ ಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಅಂದ ಹಾಗೇ ಈ ವಾರದ 'ಜಾಕ್ ಪಾಟ್' ಸಂಪೂರ್ಣ ಸಂಗೀತಮಯವಾಗಿದೆ ಎಂದರೂ ತಪ್ಪಾಗಲಾರದು. ಯಾಕೆಂದರೆ, ಈ ವಾರದ ಶೋವಿನಲ್ಲಿ ಕನ್ನಡಿಗರ ನೆಚ್ಚಿನ ರಾಪರ್ ಚಂದನ್ ಶೆಟ್ಟಿ, 'ಕಾಟೇರ' ಸಿನಿಮಾ ಖ್ಯಾತಿಯ ಗಾಯಕ ಅನಿರುದ್ಧ ಶಾಸ್ತ್ರೀ, ಐಶ್ವರ್ಯ ರಂಗರಾಜನ್, ಚಿನ್ಮಯಿ ಅತ್ರೇಯಸ್, ಇಂಪನಾ ಜಯರಾಜ್, ಸುಹಾನಾ ಸೈಯದ್ ಮತ್ತು ಕಾರ್ತಿಕ್ ಶರ್ಮ ಸೇರಿದಂತೆ ಖ್ಯಾತ ಗಾಯಕ-ಗಾಯಕಿಯರು ಭಾಗವಹಿಸಲಿದ್ದಾರೆ.
ಇದರ ಜೊತೆಗೆ 'ಜಾಕ್ ಪಾಟ್ ಪ್ರೇಮೋತ್ಸವ' ವೇದಿಕೆಯಲ್ಲಿ ಕರಾವಳಿಯ ಅದ್ಭುತ ಕಲೆ 'ಚಂಡೆ'ಯ ನಾದಾಮೃತವನ್ನು ತೋರಿಸಲಾಗಿದೆ. ಇಂತಹ ಪ್ರಯತ್ನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಪ್ರಪ್ರಥಮ ಬಾರಿಗೆ ನಡೆದಿದ್ದು ಆ ಮೂಲಕ ವೀಕ್ಷಕರಿಗೆ ಕರಾವಳಿಯ ಸುಂದರ ಕಲೆಯನ್ನು ಪರಿಚಯಿಸಲಾಗಿದೆ.

ಇನ್ನು ಪ್ರೇಮೋತ್ಸವ ವೇದಿಕೆಯಲ್ಲಿ ಗಾಯಕಿ ಬಿ.ಆರ್. ಛಾಯಾ ಅವರನ್ನು ಗೌರವಿಸಲಾಗಿದೆ. ಕರ್ನಾಟಕದ ಹೆಸರಾಂತ ಗಾನ ಕೋಗಿಲೆ ಶ್ರೀಮತಿ ಬಿ. ಆರ್. ಛಾಯಾರವರು ಹಿನ್ನಲೆ ಗಾಯಕಿಯಾಗಿ ಸಂಗೀತ ಕ್ಷೇತ್ರದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅವರು ಸಾಧನೆಗೈದ ಅಂಗವಾಗಿ ಪ್ರೇಮೋತ್ಸವದ ವೇದಿಕೆಯಲ್ಲಿ ಗೌರವಾರ್ಪಣೆಯನ್ನು ಸಲ್ಲಿಸಲಾಗಿದೆ.
ಬೊಂಬಾಟ್ ಭೋಜನ ಕಾರ್ಯಕ್ರಮದ ರೂವಾರಿ ಸಿಹಿ ಕಹಿ ಚಂದ್ರು-ನಟಿ ಸಿಹಿ ಕಹಿ ಗೀತಾ ಅವರು 40 ವರ್ಷಗಳ ದಾಂಪತ್ಯ ಜೀವನವನ್ನು ಪೂರೈಸಿರುವ ಸಂಭ್ರಮದಲ್ಲಿದ್ದಾರೆ. ಈ ಜೋಡಿ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಪ್ರೇಮೋತ್ಸವ ವೇದಿಕೆಯಲ್ಲಿ ಸಂಭ್ರಮಿಸಿದ್ದಾರೆ. ಜೊತೆಗೆ ತಮ್ಮ ದಾಂಪತ್ಯ ಜೀವನದಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಮೆಲುಕು ಹಾಕಿ ಸಂತೋಷದ ಕ್ಷಣಗಳನ್ನುಎಲ್ಲರೊಡನೆ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಬರೋಬ್ಬರಿ ಎರಡು ಗಂಟೆಗಳ ಕಾಲ ಪ್ರಸಾರವಾಗುವ 'ಜಾಕ್ ಪಾಟ್ ಪ್ರೇಮೋತ್ಸವ' ಕಾರ್ಯಕ್ರಮ ಪ್ರಸಾರ ಆಗಲಿದೆ. ಈ ಮೂಲಕ ಕಿರುತೆರೆ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications











