ಪರಭಾಷೆಯವರ ಬೂಟು ನೆಕ್ಕುವುದು ಬೇಡ, ನಮ್ಮಲ್ಲಿ ಕಲಾವಿದರಿದ್ದಾರೆ: ಜಗ್ಗೇಶ್
ಸ್ಯಾಂಡಲ್ ವುಡ್ ಗೆ ಪರಭಾಷೆ ಕಲಾವಿದರು ಬರೋದು ಹೊಸದೇನಲ್ಲ. ಬಹಳ ವರ್ಷದಿಂದಲೇ ಬೇರೆ ಇಂಡಸ್ಟ್ರಿಯ ನಟ-ನಟಿಯರು ಕನ್ನಡ ಸಿನಿಮಾದಲ್ಲಿ ನಟಿಸಿ ಹೋಗಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್ ಬೇರೆಯದ್ದೇ ರೂಪ ಪಡೆದುಕೊಳ್ಳುತ್ತಿದೆ.
ಬೇರೆ ಇಂಡಸ್ಟ್ರಿ ಹೀರೋ-ಹೀರೋಯಿನ್ ಗಳು ಬಂದ್ರೆ ಅದರಿಂದ ಚಿತ್ರಕ್ಕೆ ಮೈಲೇಜ್ ಸಿಗುತ್ತೆ, ಪ್ರಚಾರ ಹೆಚ್ಚಾಗುತ್ತೆ ಎಂಬ ಮಾತುಗಳಿವೆ. ಇಂತಹ ಬೆಳವಣಿಗೆಯ ಮಧ್ಯೆಯೂ ಕನ್ನಡ ಕಲಾವಿದರಿಗೆ ಅವಕಾಶ ಸಿಗಬೇಕು ಎನ್ನುವುದು ಅನೇಕರ ವಾದ.
ಇಂತಹದ್ದೇ ಅಭಿಪ್ರಾಯವನ್ನ ನವರಸ ನಾಯಕ ಜಗ್ಗೇಶ್ ಅವರು ಕೂಡ ವ್ಯಕ್ತಪಡಿಸಿದ್ದಾರೆ. ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಜಗ್ಗೇಶ್ ಪರಭಾಷೆ ಕಲಾವಿದರ ಹಿಂದೆ ಹೋಗುವುದನ್ನ ಬಿಡಿ ಎಂದು ಹೇಳಿದ್ದಾರೆ. ಮುಂದೆ ಓದಿ....

ಪರಭಾಷಿಗರ ಬೂಟು ನೆಕ್ಕುವುದು ಬೇಡ
''ಕಿರುತೆರೆಯಲ್ಲಿ ನಟಿಸುತ್ತಿರುವ ಕಲಾವಿದರು ನಮಗೆ ಗುರುಗಳು ಇದ್ದಂತೆ. ಪ್ರತಿಯೊಂದರಲ್ಲೂ ತಿಳುವಳಿಕೆ ಹೊಂದಿದ್ದಾರೆ. ಸುಂದರವಾಗಿ ಕಾಣ್ತಾರೆ. ಒಂದೊಂದು ಧಾರಾವಾಹಿಯಲ್ಲೂ ನೂರು ನೂರು ಸಿನಿಮಾಗಳಿಗೆ ಬೇಕಾಗಿರುವಂತ ಕಲಾವಿದರಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೇಳುವುದೇನಂದರೆ, ಬೇರೆ ರಾಜ್ಯಗಳಿಗೆ ಹೋಗಿ ಅವರ ಬೂಟು ನೆಕ್ಕುತ್ತಾ ಕಲಾವಿದರನ್ನ ಕರೆದುಕೊಂಡು ಬರುವುದು ಬೇಡ. ಇಲ್ಲಿ ಅದ್ಭುತ ಕಲಾವಿದರಿದ್ದಾರೆ'' ಎಂದು ಒತ್ತಾಯಿಸಿದ್ದಾರೆ.

ಹೇಳುವ ಹಕ್ಕು ನನಗಿದೆಲ್ಲ
''38 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ಇದನ್ನ ಹೇಳುವ ಹಕ್ಕು ನನಗಿದೆ. ನಮ್ಮಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿರುವ ಕಲಾವಿದರಿದ್ದಾರೆ. ದಯವಿಟ್ಟು ನಿರ್ಮಾಪಕರು ಇದನ್ನ ಗಮನಹರಿಸಬೇಕು'' ಎಂದು ಜಗ್ಗೇಶ್ ಮನವಿ ಮಾಡಿಕೊಂಡಿದ್ದಾರೆ.

ಇಂದಿನ ವ್ಯವಸ್ಥೆ ಸರಿಯಿಲ್ಲ
''ವರ್ಷಗಳ ಹಿಂದೆ ಕಲಾವಿದರು ಅಂದ್ರೆ ಸೆಟ್ ಗೆ ಹೋಗುವುದಕ್ಕೂ ಮುಂಚೆ ತಯಾರಿ ನಡೆಸುತ್ತಿದ್ದರು. ಬಿಡುವಿನ ವೇಳೆಯಲ್ಲಿ ಕೂತು ಚರ್ಚೆ ಮಾಡ್ತಿದ್ದರು. ಈಗ ಕ್ಯಾರವ್ಯಾನ್ ಗಳು ವ್ಯವಸ್ಥೆ ಬಂದಿದ್ದು, ಶೂಟಿಂಗ್ ಮಾತ್ರ ಹೊರಗೆ ಬರ್ತಾರೆ. ಮುಗಿದ ತಕ್ಷಣ ಹೋಗಿ ಬಾಗಿಲು ಹಾಕ್ತಾರೆ. ಪರಸ್ಪರ ಮಾತಾಡಿದ್ರೆ ಬಾಂಧವ್ಯ ಬೆಸೆಯುವುದು'' ಎಂದು ಸಲಹೆ ನೀಡಿದರು.

ಪತ್ನಿ ಜೊತೆ ಭಾಗವಹಿಸಿದ್ದ ಜಗ್ಗೇಶ್
ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೆ ಪತ್ನಿ ಪರಿಮಳ ಅವರ ಜೊತೆ ಭಾಗವಹಿಸಿದ್ದರು. ಈ ವೇಳೆ ತಮ್ಮ ಲವ್ ಸ್ಟೋರಿಯ ಹಳೆಯ ನೆನಪುಗಳನ್ನ ಹಂಚಿಕೊಂಡರು. ಸದ್ಯ 'ತೋತಾಪುರಿ' ಹಾಗೂ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾಗಳಲ್ಲಿ ಜಗ್ಗೇಶ್ ನಟಿಸುತ್ತಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಅವರ ಜೊತೆಯೂ ಒಂದು ಸಿನಿಮಾ ಮಾಡ್ತಿದ್ದಾರೆ.


Click it and Unblock the Notifications











