ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟ ಜೀವಿತಾ ವಸಿಷ್ಠ; ಯಾವ ಧಾರಾವಾಹಿ ಗೊತ್ತಾ?
ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಪೈಕಿ ಸ್ಟಾರ್ ಸುವರ್ಣ ವಾಹಿನಿಯೂ ಒಂದು. "ಅವನು ಮತ್ತು ಶ್ರಾವಣಿ", "ಆಸೆ", " ಗೌರಿಶಂಕರ" ಹೀಗೆ ಸಾಲು ಸಾಲು ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದೆ ಸ್ಟಾರ್ ಸುವರ್ಣ. ಇಂತಿಪ್ಪ ವಾಹಿನಿಯಲ್ಲಿ ಇದೀಗ ಹೊಸ ಧಾರಾವಾಹಿಯೊಂದು ಶುರುವಾಗಲಿದೆ.
ಹೌದು, "ಶ್ರೀದೇವಿ ಮಹಾತ್ಮೆ" ಎನ್ನುವ ಧಾರಾವಾಹಿಯು ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಶುರುವಾಗಲಿದೆ. ಕೆಲದಿನಗಳ ಹಿಂದೆಯಷ್ಟೇ ವಾಹಿನಿಯು ಈ ಧಾರಾವಾಹಿಯ ಪ್ರೋಮೋವೊಂದನ್ನು ಬಿಡುಗಡೆ ಮಾಡಿದ್ದು ಅದು ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡಿತ್ತು. ಬಹಳಷ್ಟು ಅದ್ಧೂರಿಯಾಗಿದ್ದ ಈ ಪ್ರೋಮೋದಲ್ಲಿ ನೆಟ್ಟಿಗರನ್ನು ಆಕರ್ಷಿಸಿದ್ದು ಬೇರಾರೂ ಅಲ್ಲ, ಸಾಕ್ಷಾತ್ ದೇವಿಯೆ.

ಹೌದು, ಜಗನ್ಮಾತೆ ಪಾರ್ವತಿಯ ಅಂದ, ಚೆಂದಕ್ಕೆ ನೆಟ್ಟಿಗರು ಮಾತ್ರವಲ್ಲದೇ ಕಿರುತೆರೆ ವೀಕ್ಷಕರು ಕೂಡಾ ಫಿದಾ ಆಗಿದ್ದಾರೆ. ಮೊದಲ ನೋಟದಲ್ಲಿಯೇ ಕಿರುತೆರೆ ವೀಕ್ಷಕರನ್ನು ಫಿದಾ ಆಗಿಸಿರುವ ಆ ಚೆಂದುಳ್ಳಿ ಚೆಲುವೆಯ ಹೆಸರು ಜೀವಿತಾ ವಸಿಷ್ಠ. ಮೊದಲ ಬಾರಿಗೆ ಕಿರುತೆರೆಯಲ್ಲಿ ನಾಯಕಿಯಾಗಿ ಮಿಂಚಲಿರುವ ಜೀವಿತಾ ವಸಿಷ್ಠ ಕಿರುತೆರೆಗೆ ಹೊಸಬರೇ ಹೊರತು ಹಿರಿತೆರೆಗಲ್ಲ.
ನೆನಪಿರಲಿ ಪ್ರೇಮ್ ಹಾಗೂ ಟಗರು ಪುಟ್ಟಿ ಖ್ಯಾತಿಯ ಮಾನ್ವಿತಾ ಕಾಮತ್ ನಟನೆಯ "ಅಪ್ಪ ಐ ಲವ್ ಯೂ" ಸಿನಿಮಾದಲ್ಲಿ ನಟಿಸಿದ್ದರು ಜೀವಿತಾ ವಸಿಷ್ಠ. ಇದರ ಜೊತೆಗೆ "ವಾಸಂತಿ ನಲಿದಾಗ" ಎನ್ನುವ ಸಿನಿಮಾದಲ್ಲಿಯೂ ಅಭಿನಯಿಸಿರುವ ಈಕೆ ಸಾಧುಕೋಕಿಲ, ಸಾಯಿಕುಮಾರ್, ಸುಧಾರಾಣಿ ಅವರಂತಹ ಮೇರು ಕಲಾವಿದರೊಂದಿಗೆ ತೆರೆ ಹಂಚಿಕೊಂಡಿರುವ ಬೆಡಗಿ.
ಇನ್ನು ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲೂ ಈಕೆ ಸಕತ್ ಆ್ಯಕ್ಟೀವ್. ಸಮಯ ಸಿಕ್ಕಾಗಲೆಲ್ಲಾ ಪಕ್ಕ ಟ್ರೆಡಿಶನಲ್ ಜೊತೆಗೆ ಮಾಡರ್ನ್ ಫೋಟೋಶೂಟ್ ಗಳನ್ನು ಮಾಡಿಸಿ ನೆಟ್ಟಿಗರ ಮನ ಸೆಳೆಯುತ್ತಾರೆ. ಮೂಲತಃ ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ಈಕೆ ರೀಲ್ಸ್ ಕೂಡಾ ಮಾಡುತ್ತಾರೆ. ಆಗಾಗ ತಾವು ಮಾಡಿರುವಂತಹ ರೀಲ್ಸ್ ಗಳನ್ನು ತಪ್ಪದೇ ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಕೂಡಾ ಮಾಡುತ್ತಿರುತ್ತಾರೆ.
ಪಾರ್ವತಿ ದೇವಿಯಾಗಿ ಕಿರುತೆರೆಗೆ ಕಾಲಿಡುತ್ತಿರುವುದು ಜೀವಿತಾ ಅವರಿಗೂ ಕೂಡಾ ಖುಷಿ ತಂದಿದೆ. ಧಾರಾವಾಹಿಯ ಪ್ರೋಮೋವೊಂದನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಜೀವಿತಾ ವಸಿಷ್ಠ "ನನ್ನ ಹೊಸ ಅಧ್ಯಾಯಕ್ಕೆ ನಿಮ್ಮ ಆಶೀರ್ವಾದ ಬಹಳ ಮುಖ್ಯ. ಇಂತಹ ಸುವರ್ಣಾವಕಾಶ ನೀಡಿದ್ದಕ್ಕೆ ಸ್ಟಾರ್ ಸುವರ್ಣ ವಾಹಿನಿಗೂ, ನಂದಿ ಮೂವೀಸ್ ನವರಿಗೂ ಹೃತ್ಫೂರ್ವಕ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕಿರುತೆರೆಗೆ ಕಾಲಿಡುತ್ತಿರುವ ಜೀವಿತಾ ಅವರು ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಾರಾ ಎಂದು ಕಾದುನೋಡಬೇಕಾಗಿದೆ.


Click it and Unblock the Notifications











