"ಅವಿಭಕ್ತ ಕುಟುಂಬದ ಪರಿಕಲ್ಪನೆ ನನಗೆ ತುಂಬಾ ಇಷ್ಟ": 'ಜೇನುಗೂಡು' ಆರವ್ ಸೂರ್ಯ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಜೇನುಗೂಡು' ಧಾರಾವಾಹಿಯಲ್ಲಿ ನಾಯಕ ಶಶಾಂಕನ ಪಾತ್ರವನ್ನು ನಿರ್ವಹಿಸುತ್ತಿರುವ ಆರವ್ ಸೂರ್ಯ ತಮ್ಮ ಅಭಿನಯವನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ. ಈ ಧಾರಾವಾಹಿಯ ಚಿತ್ರೀಕರಣ ಮಾಡಲು ಪ್ರಾರಂಭಿಸಿದಾಗಿನಿಂದ ಅವಿಭಕ್ತ ಕುಟುಂಬದ ಪರಿಕಲ್ಪನೆಯನ್ನು ತುಂಬಾ ಪ್ರೀತಿಸಲು ಪ್ರಾರಂಭಿಸಿದ್ದೇನೆ ಎನ್ನುತ್ತಾರೆ ನಟ.
ನಾನು ನಿಜ ಜೀವನದಲ್ಲೂ ಕುಟುಂಬ ಆಧಾರಿತ ವ್ಯಕ್ತಿ. ಇದೂ ಕೂಡ ನನಗೆ ಒಂದು ರೀತಿಯಲ್ಲಿ ಪಾತ್ರದೊಂದಿಗೆ ಬೆರೆಯಲು ಸಹಾಯ ಮಾಡಿದೆ. ಧಾರಾವಾಹಿಯ ಶಶಾಂಕ್ ಮತ್ತು ನಿಜಜೀವನದ ಆರವ್ ಇಬ್ಬರೂ ಕುಟುಂಬ ಆಧಾರಿತರು. ಜೇನುಗೂಡು ಜೊತೆ, ನಾನು ಮತ್ತೊಮ್ಮೆ ಅವಿಭಕ್ತ ಕುಟುಂಬದ ಪರಿಕಲ್ಪನೆಯನ್ನು ಪ್ರೀತಿಸಲು ಪ್ರಾರಂಭಿಸಿದೆ ಎನ್ನುತ್ತಾರೆ.

ವಿಭಕ್ತ ಕುಟುಂಬದ ವ್ಯವಸ್ಥೆ ಸಾಮಾನ್ಯ
ಇತ್ತೀಚಿನ ವರ್ಷಗಳಲ್ಲಿ ಅವಿಭಕ್ತ ಕುಟುಂಬವನ್ನು ಹುಡುಕುವುದು ತುಂಬಾ ಕಷ್ಟಕರವಾಗಿದೆ. ವಿಭಕ್ತ ಕುಟುಂಬ ವ್ಯವಸ್ಥೆ ಸಾಮಾನ್ಯವಾಗಿ ಬಿಟ್ಟಿದೆ. ನಾನು ಜೇನುಗೂಡಿನ ಚಿತ್ರೀಕರಣವನ್ನು ಪ್ರಾರಂಭಿಸಿದಾಗ, ನನ್ನ ಬಾಲ್ಯದ ದಿನಗಳೆಲ್ಲಾ ನೆನಪಾಗುತ್ತಿದ್ದವು. ಬಾಲ್ಯದ ರಜಾದಿನಗಳ ವಿನೋದ, ಅಜ್ಜಿ ಮನೆಯ ಭೇಟಿ ಆ ದಿನಗಳೆಲ್ಲಾ ಹಿಂತಿರುಗಬೇಕೆಂದು ನಾನು ಬಯಸುತ್ತೇನೆ. ಆದರೆ, ಪ್ರಸ್ತುತ ದಿನಗಳಲ್ಲಿನ ಬದ್ಧತೆ ಮತ್ತು ಜೀವನಶೈಲಿಯಲ್ಲಿ ಅವಿಭಕ್ತ ಕುಟುಂಬವನ್ನು ಉಳಿಸಿಕೊಳ್ಳುವ ಅವಕಾಶಗಳು ಕಡಿಮೆಯಾಗುತ್ತಿದೆ.
ಅಭಿಮಾನಿಗಳಿಂದ ಉತ್ತಮ ವಿಮರ್ಶೆ
ಈಗಲಾದರೆ, ನಮ್ಮ ಸಂಬಂಧಿಕರನ್ನು ಭೇಟಿ ಮಾಡುವ ಮೊದಲು ನಾವು ಎರಡು ಬಾರಿ ಯೋಚಿಸುವಂತಾಗುತ್ತದೆ. ಅವರನ್ನು ಭೇಟಿ ಮಾಡುವ ಮೊದಲು ನಾವು ಕರೆ ಮಾಡಿ ಕೇಳಬೇಕಾಗುತ್ತದೆ ಎಂಬುದು ಆರವ್ ಸೂರ್ಯ ಅಭಿಪ್ರಾಯ. ಇದರ ಜೊತೆಗೆ ನನ್ನ ಮದುವೆಯಾದ ಒಂದು ವಾರದ ನಂತರ ಜೇನುಗೂಡಿನ ಅವಕಾಶ ನನಗೆ ದೊರಕಿತು. ಉತ್ತರ ಕರ್ನಾಟಕದ ಸೊಗಡಿದೆ ಎಂಬುದಕ್ಕಾಗಿ ನಾನು ನನ್ನ ಆಡಿಷನ್ ನೀಡಿದ್ದೆ. ಅವಕಾಶವೂ ದೊರಕಿತು. ಇಲ್ಲಿಯವರೆಗಿನ ನನ್ನ ಧಾರಾವಾಹಿಯ ಪ್ರಯಾಣ ಅದ್ಭುತವಾಗಿದೆ ಮತ್ತು ಅಭಿಮಾನಿಗಳಿಂದ ಉತ್ತಮ ವಿಮರ್ಶೆಗಳನ್ನು ಸ್ವೀಕರಿಸುತ್ತಿದ್ದೇನೆ ಎಂದು ಹೇಳುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲೂ 'ಜೇನುಗೂಡು'
ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೀಕ್ಷಕರು ಜೇನುಗೂಡನ್ನು ಕೇವಲ ಅವಿಭಕ್ತ ಕುಟುಂಬದ ಪರಿಕಲ್ಪನೆಯಿಂದ ಇಷ್ಟಪಡುತ್ತಾರೆ. ಹಲವರಿಗೆ ನಿಜ ಜೀವನದಲ್ಲಿ ಅವಿಭಕ್ತ ಕುಟುಂಬದೊಂದಿಗೆ ಬದುಕಲು ಸಾಧ್ಯವಾಗುವುದಿಲ್ಲ ಅಂತಹವರು ಈ ಧಾರಾವಾಹಿಯ ಮೂಲಕ ಬೇರೆ ಸಂತೋಷವನ್ನು ಕಂಡುಕೊಳ್ಳುತ್ತಿದ್ದಾರೆ. ಉತ್ತಮ ಪ್ರತಿಕ್ರಿಯೆಗಳನ್ನು ನೋಡಿದಾಗ ಹೆಮ್ಮೆಯೆನಿಸುತ್ತದೆ ಎಂದು ಖುಷಿಯನ್ನು ವ್ಯಕ್ತಪಡಿಸಿದರು.


Click it and Unblock the Notifications











