Jothe Jotheyali: ಮಗುವಿನ ಬಗ್ಗೆ ಸತ್ಯ ಹೇಳಿದ ಅನು ಸಿರಿಮನೆ: ಆರ್ಯ ಮನೆ ಬಿಟ್ಟು ಹೋಗಿದ್ದೇಕೆ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ಸಿಕ್ಕಾಪಟ್ಟೆ ಗೊಂದಲದಲ್ಲಿದ್ದ ಧಾರಾವಾಹಿ ಈಗ ಮತ್ತೊಂದು ದಿಕ್ಕಿಗೆ ಸಾಗಿದೆ. ವೈದ್ಯರು ಅನು ಹೊಟ್ಟೆಯಲ್ಲಿ ಮಗುವೇ ಇಲ್ಲ ಎಂದು ಹೇಳಿರುವುದು ಎಲ್ಲರಿಗೂ ಗೊಂದಲವನ್ನು ಸೃಷ್ಟಿಸಿದೆ. ಧಾರಾವಾಹಿಯಲ್ಲಿ ಏನೇ ನಡೆದರೂ ಹೆಚ್ಚು ಗಾಬರಿಯಿಲ್ಲದೇ, ಆರಾಮಾಗಿರುವುದನ್ನು ನೋಡಿ ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದಾರೆ.
ಮಾನ್ಸಿ ಒಬ್ಬಳೇ ಸರಿ, ಎಲ್ಲವನ್ನೂ ಸರಿಯಾಗಿ ಪ್ರಶ್ನೆ ಮಾಡುತ್ತಾಳೆ ಎಂದು ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಕಳೆದ ಆರೇಳು ತಿಂಗಳಿನಿಂದ ಬಹಳಷ್ಟು ಬದಲಾವಣೆಗಳನ್ನು ಕಂಡಿದೆ. ಇದೀಗ ಆರ್ಯ, ಅನುಳನ್ನು ಪ್ರಶ್ನೆ ಮಾಡಿದ್ದಾನೆ. ನಿನ್ನ ಹೊಟ್ಟೆಯಲ್ಲಿ ನನ್ನ ಮಗು ಇದೆಯಾ ಇಲ್ಲವಾ ಎಂದು ಕೇಳಿದ್ದಾನೆ. ಇದಕ್ಕೆ ಉತ್ತರ ಕೊಡದೇ ಅನು ಬೇರೆ ಏನೇನೋ ಮಾತನಾಡಿದ್ದಾಳೆ. ಆಸ್ತಿಯನ್ನು ಕೊಡಲು ಮುಂದಾಗಿದ್ದಾಳೆ. ಆದರೆ ಆರ್ಯನಿಗೆ ತನ್ನ ಮಗು ಬದುಕಿದೆಯಾ ಇಲ್ಲವೇ ಎಂಬುದೊಂದೇ ಬೇಕಿರುವುದು.

ಪದೇ ಪದೇ ಆರ್ಯ ನನ್ನ ಮಗು ಇದೆಯಾ ಇಲ್ಲವಾ ಎಂದು ಹೇಳು ಅಷ್ಟೇ ಅಂತ ಕೇಳುತ್ತಾನೆ. ಆಗ ಅನು ತಲೆ ಆಡಿಸಿದಾಗ, ಆರ್ಯ ಬೇಸರದಲ್ಲಿ ಕೋಪಗೊಂಡು ಹೊರಟು ಬಿಡುತ್ತಾನೆ. ಅನು ಎಷ್ಟು ಹೋಗಿ ಕೇಳಿಕೊಂಡರೂ ಆರ್ಯ ನಿಲ್ಲುವುದಿಲ್ಲ. ಝೇಂಡೇ ಜೊತೆಗೆ ಮನೆಯಿಂದ ಹೊರಟೇ ಬಿಡುತ್ತಾನೆ. ಆಗ ಅನು ಅಸಹಾಯಕಳಾಗಿ ನಿಲ್ಲುತ್ತಾಳೆ. ಸದಾ ಜೊತೆಗಿರುವುದಾಗಿ ಹೇಳಿದ ಆರ್ಯ ಸರ್ ನನ್ನನ್ನು ಬಿಟ್ಟು ಹೋದರು ಎಂದು ನಿಂತ ಜಾಗದಲ್ಲೇ ಕುಸಿದು ಬೀಳುತ್ತಾಳೆ.
ಆಗ ಮೀರಾ ಬಂದು ಅನುಗೆ ಸಮಾಧಾನ ಮಾಡುತ್ತಾಳೆ. ಒಳಗೆ ಬಾ ಎಂದು ಮನೆಯವರೆಲ್ಲಾ ಕರೆದರೂ ಬರುವುದಿಲ್ಲ. ಇಲ್ಲ ಆರ್ಯ ಸರ್ ಇಲ್ಲ ಎಂದ ಮೇಲೆ ನಾನ್ಯಾಕೆ ಬರಲಿ ಎಂದು ಹೇಳುತ್ತಾಳೆ. ಆಗ ಶಾರದಾ ದೇವಿ ಸಮಾಧಾನ ಮಾಡುತ್ತಾಳೆ. ನಿನ್ನ ಹೊಟ್ಟೆಯಲ್ಲಿ ಮಗು ಇಲ್ಲ ಎಂಬ ಸತ್ಯ ನನಗೆ ಮೊದಲೇ ಗೊತ್ತಿತ್ತು. ಮಗುವಿನ ಬಗ್ಗೆ ನೀನೆಷ್ಟು ಕನಸನ್ನು ಹೊತ್ತಿದ್ದೆ ಎಂಬುದೂ ಗೊತ್ತು ನನಗೆ ಬೇಸರ ಮಾಡಿಕೊಳ್ಳಬೇಡ. ನಿನಗೆ ಯಾವಾಗ ಸತ್ಯ ಹೇಳಬೇಕು ಅನಿಸುತ್ತೋ ಆಗಲೇ ಹೇಳು ಎಂದು ಹೇಳುತ್ತಾಳೆ.
ಆಗ ಅನು ಇಲ್ಲ ಈಗಲೇ ಹೇಳುತ್ತೇನೆ ಎನ್ನುತ್ತಾಳೆ. ಆರ್ಯ ಸರ್ ಸತ್ತರು ಎಂದು ತಿಳಿದಾಗ ನಾನು ಅಕಸ್ಮಾತ್ ಆಗಿ ನದಿಯಲ್ಲಿ ಬಿದ್ದಾಗಲೇ ನನ್ನ ಮಗು ನನ್ನಿಂದ ದೂರ ಆಯ್ತು. ಆಗ ನನ್ನ ಕೈಯಲ್ಲಿ ಮಗುವನ್ನು ಉಳಿಸಿಕೊಳ್ಳಲು ಆಗಲಿಲ್ಲ. ನಂತರ ಅದನ್ನು ನಿಮಗೆಲ್ಲಾ ಹೇಳಲು ಸಾಧ್ಯವಾಗಲಿಲ್ಲ. ಸ್ವಲ್ಪ ದಿನ ಕಳೆದ ಮೇಲೆ ಆರ್ಯ ಸರ್ ಬದುಕಿರುವುದು ಗೊತ್ತಾಯ್ತು. ಆಗ ನಾನು ನನ್ನಲ್ಲೇ ನಾನು ಗರ್ಭಿಣಿ ಎಂದು ಭಾವಿಸಲು ಶುರು ಮಾಡಿದೆ. ನನ್ನ ಹೊಟ್ಟೆಯಲ್ಲಿ ಮಗು ಇದೆ ಎಂಬುದನ್ನು ನಂಬಲು ಪ್ರಾರಂಭಿಸಿದೆ ಎಂದು ಹೇಳುತ್ತಾಳೆ.

ಮಾತು ಮುಂದುವರಿಸಿ, ಅದೇ ಸಂದರ್ಭದಲ್ಲಿ ಆರ್ಯ ಸರ್ ಕೂಡ ಮಗುವಿನ ಮೇಲೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಪ್ರಾರಂಭಿಸಿದರು. ಆಗ ನನಗೆ ಸತ್ಯ ಹೇಳುವುದು ಹೇಗೆ ಎನ್ನುವುದೇ ಅರ್ಥವಾಗಲಿಲ್ಲ. ಈಗ ಸತ್ಯ ಹೇಳುವ ವೇಳೆಗೆ ಮತ್ತೆ ಎಲ್ಲವೂ ನನ್ನ ಕೈ ಮೀರಿ ಹೋಯಿತು ಎಂದು ಹೇಳುತ್ತಾಳೆ. ಅನು ಮಾತುಗಳನ್ನು ಕೇಳಿದ ಶಾರದಾ ಸಮಾಧಾನ ಮಾಡುತ್ತಾಳೆ. ನೀನೀಗ ರೆಸ್ಟ್ ಮಾಡು ಬಾ ಎನ್ನುತ್ತಾಳೆ.
ಶಾರದಾ ಮಾತುಗಳನ್ನು ಕೇಳಿದ ಪುಷ್ಪ ಖುಷಿಪಡುತ್ತಾಳೆ. ಮಗು ಇಲ್ಲ ಎಂದು ಹೇಳಿದರೂ ನನ್ನ ಮಗಳನ್ನು ಸಮಾಧಾನ ಮಾಡುತ್ತಿದ್ದೀರಾ ಎಂದು ಹೇಳುತ್ತಾಳೆ. ಈಗ ಆರ್ಯ ಮುಂದೆ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೋ ಕಾದು ನೋಡಬೇಕಿದೆ.


Click it and Unblock the Notifications











