ಎಂಗೇಜ್ ಮೆಂಟ್ ವೀಡಿಯೋ ಶೇರ್ ಮಾಡಿ ಸರ್ಪ್ರೈಸ್ ಕೊಟ್ಟ ನಟಿ
ನಟಿ ಶಿಲ್ಪಾ ಅಯ್ಯರ್ ಎಂದರೆ ಹೆಚ್ಚು ಜನಕ್ಕೆ ಗುರುತು ಸಿಗುವುದು ಕಷ್ಟ. ಅದೇ 'ಜೊತೆ ಜೊತೆಯಲಿ' ಧಾರಾವಾಹಿಯ ಮಾನ್ಸಿ ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ.
ಧಾರಾವಾಹಿಯಲ್ಲಿ ಸದ್ಯ ಮಾನ್ಸಿ ಆಗಿ ನಯನಾ ನಟಿಸುತ್ತಿದ್ದಾರೆ. ಆದರೆ, ನಯನಾ ಬರುವುದಕ್ಕೂ ಮುನ್ನ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಾನ್ಸಿ ಪಾತ್ರದಲ್ಲಿ ನಟಿಸಿದ್ದು ಶಿಲ್ಪಾ ಅಯ್ಯರ್.
ಶಿಲ್ಪಾ ಅಯ್ಯರ್ ಬ್ರೋ ಇನ್ ಲಾ ಎನ್ನುವ ಸ್ಟೈಲ್ ವೀಕ್ಷಕರನ್ನು ರಂಜಿಸುತ್ತಿದ್ದದಂತೂ ನಿಜ. ಅಷ್ಟೇ ಅಲ್ಲದೇ, ಶಿಲ್ಪಾ ಅಯ್ಯರ್ ಅವರ ಡ್ರೆಸ್ಸಿಂಗ್ ಸೆನ್ಸ್ ಕೂಡ ಹೆಂಗಳೆಯರಿಗೆ ಇಷ್ಟವಾಗುತ್ತಿತ್ತು.

ಆಂಕರಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ
ಶಿಲ್ಪಾ ಹಾಡುಗಾರ್ತಿ ಆಗುವ ಕನಸು ಕಂಡಾಕೆ. ಆದರೆ, ಆಗಿದ್ದು ಮಾತ್ರ ನಟಿ. ಆಂಕರಿಂಗ್ ಮಾಡುವ ಆಸೆ ಇದ್ದ ಶಿಲ್ಪಾ ಪ್ರಜಾ ಟಾಕೀಸ್ ಎಂಬ ಕಾರ್ಯಕ್ರಮವನ್ನು ನಡೆಸಿಕೊಟ್ಟು ವೀಕ್ಷಕರಿಗೆ ಪರಿಚಯವಾದರು. ಹಾಗೆ 'ಶಾಂತಂ ಪಾಪಂ' ಮೂಲಕ ಕಿರುತೆರೆಯಲ್ಲಿ ನಟನೆಯನ್ನೂ ಪ್ರಾರಂಭಿಸಿದರು. ಚಿಕ್ಕ ವಯಸ್ಸಿನಿಂದ ಸಂಗೀತ, ನೃತ್ಯ ಎರಡೂ ಕಲಿತಿದ್ದ ಶಿಲ್ಪಾ, ನಟಿಯಾಗಿ ಗುರುತಿಸಿಕೊಂಡರು. 'ಬ್ರಹ್ಮಗಂಟು', 'ನಾಗಮಂಡಲ', 'ಕಸ್ತೂರಿ ನಿವಾಸ' ಧಾರಾವಾಹಿಗಳಲ್ಲಿ ನಟಿಸಿದರು.

ಮತ್ತೊಂದು ಧಾರಾವಾಹಿಯಲ್ಲಿ ಸಂಗೀತಾ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಾನ್ಸಿ ಪಾತ್ರ ಶಿಲ್ಪಾ ಅವರಿಗೆ ಬ್ರೇಕ್ ಕೊಟ್ಟ ಪಾತ್ರ. ಮಾನ್ಸಿ ಈ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸಿದ್ದರು. ಆದರೆ, ಕಾರಣಾಂತರಗಳಿಂದ ಅರ್ಧದಲ್ಲೇ ಧಾರಾವಾಹಿಯಿಂದ ಹೊರ ನಡೆಯಬೇಕಾಯ್ತು. ಇದಾದ ಬಳಿಕ ಕೆಲ ಕಾಲ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆಕ್ಟೀವ್ ಆಗಿದ್ದರು. ಬಳಿಕ 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ಸಂಗೀತ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಇದೀಗ ಶಿಲ್ಪಾ ಅಯ್ಯರ್ ಅವರು ಸಿಂಗಲ್ ಇಂದ ಡಬಲ್ ಆಗಿದ್ದಾರೆ. ಹೌದು.. ಶಿಲ್ಪಾ ಅಯ್ಯರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥದ ವೀಡಿಯೋ ವೈರಲ್
ಸೈಲೆಂಟ್ ಆಗಿ ನಟಿ ಶಿಲ್ಪಾ ಅಯ್ಯರ್ ಅವರು ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ವಿಶ್ವನಾಥ್ ಎಂಬುವರಿಗೆ ಉಂಗುರ ತೊಡಿಸಿರುವ ಶಿಲ್ಪಾ ಅಯ್ಯರ್ ಅವರು ಈಗ ಮದುವೆಗೆ ಸಜ್ಜಾಗಿದ್ದಾರೆ. ನಿಶ್ಚಿತಾರ್ಥದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಶಿಲ್ಪಾ, ನನ್ನ ಹೃದಯ ಕದ್ದ ಹುಡುಗ, ನನ್ನ ಜೀವನದ ಬೆಸ್ಟ್ ನಿರ್ಧಾರ ಎಂದು ಬರೆದುಕೊಂಡಿದ್ದಾರೆ. ಶಿಲ್ಪಾ ಅವರು ಪೋಸ್ಟ್ ಮಾಡಿರುವ ವೀಡಿಯೋವನ್ನು ನೋಡಿ ಕೆಲವರು ಶಾಕ್ ಆದರೂ, ಎಲ್ಲರೂ ಖುಷಿಪಟ್ಟು ವಿಶ್ ಮಾಡಿದ್ದಾರೆ. ಇನ್ನು ಶಿಲ್ಪಾ ಅವರು ತಾವು ಎಂಗೇಜ್ ಆಗಿರುವ ಹುಡುಗನ ಬಗ್ಗೆ ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ.

ವ್ಯಾಲೆನ್ಟೈನ್ಸ್ ಡೇ ಸ್ಪೆಷಲ್
ಈಗಾಗಲೇ ಮದುವೆಯ ದಿನಾಂಕವೂ ಫಿಕ್ಸ್ ಆಗಿದ್ದು, ಇಷ್ಟರಲ್ಲೇ ಸಪ್ತಪದಿ ತುಳಿಯುತ್ತಿದ್ದಾರೆ. ಆದರೆ, ದಿನಾಂಕವನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಇನ್ನು ಶಿಲ್ಪಾ ಅವರಿಗೆ ಅವರ ಭಾವಿ ಗಂಡ ವ್ಯಾಲೆಂಟೈನ್ಸ್ ಡೇಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಶಿಲ್ಪಾ ಅವರು ಗಿಫ್ಟ್ ನೀಡಿರುವ ವೀಡಿಯೋವನ್ನು ಕೂಡ ಅಪ್ ಲೋಡ್ ಮಾಡಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿರುವ ಶಿಲ್ಪಾ ಅಯ್ಯರ್ ಅವರ ಕನಸುಗಳೆಲ್ಲಾ ನನಸಾಗಲಿ ಎಂದು ಶುಭ ಹಾರೈಸೋಣ.


Click it and Unblock the Notifications











