ಬದುಕುಳಿದ ಅನು: ಝೇಂಡೆಗೆ ಶಾಕ್!
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಝೇಂಡೇ ವಿಲನ್ ಆಗಿ ಕಾಣುತ್ತಿದ್ದಾನೆ. ಅನುಗೆ ಇವೆಲ್ಲವೂ ಗೊಂದಲವನ್ನುಂಟು ಮಾಡುತ್ತಿದೆ. ಮುಂದೇನು ಮಾಡಬೇಕು ಎಂಬುದೇ ತಿಳಿಯದೇ ಒದ್ದಾಡುತ್ತಿದ್ದಾಳೆ.
ಆರ್ಯನಿಗೆ ಝೇಂಡೇ ನಾಪತ್ತೆಯಾಗಿರುವುದೇ ದೊಡ್ಡ ತಲೆನೋವಾಗಿದೆ. ಸದಾ ಜೊತೆಗಿರುತ್ತಿದ್ದ ಝೇಂಡೇ ಈಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಆರ್ಯನಿಗೆ ಆಶ್ಚರ್ಯದ ಜೊತೆಗೆ ಆತಂಕವನ್ನೂ ಸೃಷ್ಟಿಸಿದೆ. ಝೇಂಡೇಗೆ ಏನೋ ತೊಂದರೆಯಾಗಿದೆ ಎಂದು ಆರ್ಯ ಆಲೋಚಿಸುತ್ತಿದ್ದಾರೆ.
ಶಾರದಾ ದೇವಿ ಎಲ್ಲವನ್ನೂ ತಿಳಿದುಕೊಂಡು ಒಂದು ರೀತಿಯ ಮೌನಕ್ಕೆ ಜಾರಿದ್ದಾರೆ. ಇದು ಹರ್ಷವರ್ಧನ್‌ನನ್ನು ಚಿಂತೆಗೀಡಾಗುವಂತೆ ಮಾಡಿದೆ. ಇದೆಲ್ಲವನ್ನೂ ಶಾರದಾ ಬಳಿ ಮಾತನಾಡಿದ್ದಕ್ಕೆ, "ತಾಳ್ಮೆಯಿಂದ ಇರು. ನಮ್ಮಿಂದ ಬೇರೆಯವರಿಗೆ ತೊಂದರೆಯಾಗಬಾರದು" ಎಂದು ಮಾತನಾಡಿದ್ದಾಳೆ.

ಗೊಂದಲದಲ್ಲಿ ಹರ್ಷವರ್ಧನ್!
ಶಾರದಾದೇವಿ ಬಳಿ ಹೋಗಿ ಆರ್ಯನ ವಿಚಾರದಲ್ಲಿ ತನ್ನ ಅಭಿಪ್ರಾಯವನ್ನು ಹೇಳಿದ್ದನ್ನು ಅನು ಕೇಳಿಸಿಕೊಳ್ಳುತ್ತಾಳೆ. ನಿಮ್ಮ ಬಳಿ ಮಾತನಾಡಬೇಕು ಎಂದು ಹೇಳಿ, ಹರ್ಷನನ್ನು ಅನು ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಹರ್ಷನಿಗೆ ಈಗ ನಾವು ಝೇಂಡೇನಾ ಹುಡುಕಬೇಕು ಎಂದು ಅನು ಹೇಳುತ್ತಾಳೆ. ಅನು ಮಾತು ಕೇಳಿ ಹರ್ಷ ಶಾಕ್ ಆಗುತ್ತಾನೆ. ಮಾತು ಮುಂದುವರೆಸುವ ಅನು, ಆರ್ಯ ಸರ್ ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಇದರಿಂದ ತುಂಬಾ ತೊಂದರೆಯಾಗುತ್ತದೆ. ಏನೋ ಮಾಡಲು ಹೋಗಿ, ಇನ್ನೇನೋ ಆಗುತ್ತೆ ಮೊದಲು ನಾವು ಝೇಂಡೇ ಎಲ್ಲಿದ್ದಾರೆ ಎಂದು ಹುಡುಕಬೇಕು ಎಂದು ಹೇಳುತ್ತಾಳೆ. ಇದಕ್ಕೆ ಹರ್ಷ ಒಪ್ಪುವುದಿಲ್ಲ.

ಆರ್ಯನಿಗೆ ಝೇಂಡೇ ಚಿಂತೆ!
ಅಷ್ಟೊತ್ತಿಗೆ ಅಲ್ಲಿಗೆ ಬಂದ ಆರ್ಯವರ್ಧನ್, ಹೌದು ನಾವು ಝೇಂಡೇ ಅನ್ನು ಹುಡುಕಬೇಕು. ಝೇಂಡೇ ಯಾವತ್ತೂ ಹೀಗೆ ಝೇಂಡೇ ನಾಪತ್ತೆಯಾಗಿದ್ದೇ ಇಲ್ಲ. ಅಕಸ್ಮಾತ್ ದೂರ ಇದ್ದರೂ, ಅವನ ಹುಡುಗರಿನಿಂದನಾದರೂ ಹತ್ತಿರದಲ್ಲೇ ಇರುವ ಫೀಲ್ ಕೊಡುತ್ತಿದ್ದ. ಆದರೆ ಈಗ ಸಂಪೂರ್ಣವಾಗಿ ನನ್ನಿಂದ ದೂರಾ ಆಗಿದ್ದಾನೆ. ಇನ್ನೂ ತಡ ಮಾಡುವುದು ಸರಿಯಲ್ಲ. ಇವತ್ತು ಪೊಲೀಸ್ ಕಮೀಷನರ್ ಅವರನ್ನು ಭೇಟಿ ಮಾಡುತ್ತೀನಿ. ಝೇಂಡೇಗೆ ಏನೋ ತೊಂದರೆಯಾಗಿದೆ ಎಂದು ಹೇಳುತ್ತಲೇ ಆರ್ಯ ಆಫೀಸಿಗೆ ಹೊರಡುತ್ತಾನೆ.

ಅನು ಬದುಕಿರುವ ವಿಚಾರ ತಿಳಿದ ಝೇಂಡೇ!
ಇತ್ತ ಝೇಂಡೇಗೆ ಅನು ಬದುಕಿರುವ ವಿಚಾರ ಗೊತ್ತಾಗಿದೆ. ಎಂಥಹ ಕೆಲಸವಾಯಿತು ಎಂದು ಝೇಂಡೇ ತಲೆ ಕೆಡಿಸಿಕೊಂಡಿದ್ದಾನೆ. ಹುಡುಗರಿಗೆ ಹೊಡೆದು, ಹೇಳಿದ ಕೆಲಸವನ್ನು ಸರಿಯಾಗಿ ಮಾಡುವುದಕ್ಕೆ ಆಗುವುದಿಲ್ಲವಾ ಎಂದು ಬೈದಿದ್ದಾನೆ. ಆದರೆ, ಹುಡುಗರು "ಉಸಿರು ನಿಂತಿತ್ತು. ಆದರೆ ಅದು ಹೇಗೆ ಬದುಕಿದರೋ ಗೊತ್ತಾಗುತ್ತಿಲ್ಲ" ಎಂದು ಹೇಳುತ್ತಾರೆ. ಬೀಸಿದ ಬಾಣದಿಂದ ಅನು ತಪ್ಪಿಸಿಕೊಂಡಿದ್ದಾಳೆ. ಮುಂದೆ ಸರಿಯಾಗಿ ಗುರಿ ಇಡಬೇಕು ಎಂದು ಝೇಂಡೇ ಯೋಚಿಸುತ್ತಾನೆ.

ಚಿಂತೆಯಲ್ಲಿ ಅನು ಪೋಷಕರು!
ಇತ್ತ ಸುಬ್ಬು ಹಾಗೂ ಪುಷ್ಪ ಅನು ಹೇಗಿದ್ದಾಳೋ ನೋಡಿಕೊಂಡು ಬರೋಣ ಎಂದು ಮನೆಗೆ ಬಂದಿದ್ದಾರೆ. ಇವರ ಜೊತೆಗೆ ಸಂಪತ್ ಕೂಡ ಬಂದಿದ್ದಾನೆ. ಅನು ಅಪ್ಪ-ಅಮ್ಮನನ್ನು ನೋಡಿ ಖುಷಿ ಪಟ್ಟಿದ್ದಾಳೆ. ಸಂಪತ್‌ನನ್ನು ನೋಡಿದ ಅನು ರಮ್ಯ ಕೂಡ ಬಂದಿದ್ದಾಳೆ ಎಂದು ಹುಡುಕಾಡುತ್ತಾಳೆ. ಆದರೆ ಸಂಪತ್ ರಮ್ಯಾ ಬಂದಿಲ್ಲ. ನಿನ್ನ ಮೇಲೆ ಕೋಪ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಾನೆ. ಆಗ ಅನುಗೆ ಸ್ವಲ್ಪ ಬೇಜಾರಾಗುತ್ತದೆ. ಪುಷ್ಪಾಗೆ ನಿಜವಾಗಲೂ ಮಗಳು ಸುಖವಾಗಿದ್ದಾಳೋ ಇಲ್ಲವೋ ಅನ್ನೋದೇ ಅನುಮಾನ. ಸಂಪತ್‌ಗೆ ಪಾಪ ಅನು ಎಷ್ಟೇ ಕಷ್ಟವಿದ್ದರೂ, ಯಾರ ಬಳಿಯೂ ಹೇಳಿಕೊಳ್ಳುವಂತಿಲ್ಲ ಎಂದು ಒಬ್ಬನೇ ಮಾತನಾಡಿಕೊಳ್ಳುತ್ತಾನೆ. ಮಾನ್ಸಿಗೆ ಸಂಪತ್ ಬಂದಿರುವುದು ಇಷ್ಟವಾಗುವುದಿಲ್ಲ. ಈ ನಡುವೆ ಜಲಂಧರ್ ಅನುಗೆ ಕರೆ ಮಾಡುತ್ತಾರೆ.


Click it and Unblock the Notifications











