ಅಮ್ಮನ ಮುಂದೆ ಝೇಂಡೆ ಬಂಡವಾಳ ಬಯಲು: ಸಿಕ್ಕಿಬಿದ್ದ ಆರ್ಯವರ್ಧನ್!
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಹೊಸಮನಿ ಅಜ್ಜನನ್ನು ಝೇಂಡೇ ಕಿಡ್ನ್ಯಾಪ್ ಮಾಡಿದ್ದಾನೆ. ಗೋಡೌನ್‌ನಲ್ಲಿ ಕಟ್ಟಿ ಹಾಕಿದ್ದಾನೆ. ಈ ವಿಚಾರ ತಿಳಿದ ಅನು ಈಗ ಹೊಸಮನಿ ಅವರನ್ನು ಬಿಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆದರೆ ಹೊಸಮನಿ ಅಜ್ಜನನ್ನು ಕಿಡ್ನ್ಯಾಪ್ ಮಾಡಿರುವುದು ಆರ್ಯವರ್ಧನಿಗೆ ಗೊತ್ತಿಲ್ಲ. ಅನು ಮೀರಾ ಕ್ಯಾಬಿನ್‌ಗೆ ಬಂದು ಹೊಸಮನಿ ಅಜ್ಜನನ್ನು ಝೇಂಡೇ ಕಿಡ್ನ್ಯಾಪ್ ಮಾಡಿರುವ ವಿಚಾರವನ್ನು ತಿಳಿಸುತ್ತಾಳೆ. ಈಗ ಅವರನ್ನು ಬಿಡಿಸಿಕೊಂಡು ಬರಲು ಹರ್ಷವರ್ಧನ್ ಹೊರಟಿರುವ ವಿಚಾರವನ್ನೂ ಹೇಳಿ, ನಾವಿನ್ನೂ ಏನೇನು ಫೇಸ್ ಮಾಡಬೇಕೋ ಗೊತ್ತಿಲ್ಲ. ನಾಳೆ ದಾಖಲೆಗಳಿಗೆ ಸಹಿ ಹಾಕುವಾಗ ಏನೆಲ್ಲಾ ಆಗುತ್ತದೋ ಎಂದು ಹೇಳುತ್ತಾಳೆ. ಇದಕ್ಕೆ ಮೀರಾ ಹೆದರಬೇಡ ಅನು ನಾವೆಲ್ಲಾ ಇದ್ದೀವಿ ಎನ್ನುತ್ತಾಳೆ.
ಇನ್ನು ಹರ್ಷನಿಗೆ ಕರೆ ಮಾಡುವ ಅನು, ಝೇಂಡೇ ಕಡೆಯವರು ಎಂದು ಹೇಳಿಕೊಂಡೇ ಹೋಗು. ಯಾವುದೇ ಕಾರಣಕ್ಕೂ ಈ ವಿಚಾರ ಹೊರಗೆ ತಿಳಿಯಬಾರದು. ಅನುಮಾನ ಬಾರದಂತೆ ಅಲ್ಲಿರುವ ಬಾಡಿಗಾರ್ಡ್ ಬಳಿ ನಡೆದುಕೊಳ್ಳಿ. ಅಷ್ಟೇ ಅಲ್ಲದೇ ಈ ವಿಚಾರ ಆರ್ಯನಿಗೂ ಗೊತ್ತಿಲ್ಲ. ಈ ಸಂದರ್ಭವನ್ನು ಬಳಸಿಕೊಂಡು ಆರ್ಯ ಹಾಗೂ ಝೇಂಡೇ ನಡುವೆ ತಂದಿಡಬೇಕು ಎಂದು ಹೇಳುತ್ತಾಳೆ.

ಅಜ್ಜಯ್ಯನನ್ನು ಕರೆದುಕೊಂಡು ಬಂದ ಹರ್ಷ!
ಹರ್ಷ ಗೋಡೌನ್‌ಗೆ ಹೋಗಿ ಅಜ್ಜಯ್ಯನನ್ನು ಹುಡುಕಿ ಕರೆದುಕೊಂಡು ಬರುತ್ತಾನೆ. ಅಜ್ಜಯ್ಯ ಹರ್ಷನ ಬಳಿ ಇದನ್ನೆಲ್ಲಾ ಝೇಂಡೇ ಸಾಹೇಬರೇ ಮಾಡಿದ್ದು ಎಂದು ಹೇಳುತ್ತಾರೆ. ಹರ್ಷ ಅನುಗೆ ಕಾಲ್ ಮಾಡುತ್ತಾನೆ. ಆಗ ಅನು ಅಜ್ಜಯ್ಯನನ್ನು ಸೇಫ್ ಆಗಿ ಮನೆಗೆ ಕರೆದುಕೊಂಡು ಹೋಗಿ. ನಾನು ಮನೆಗೆ ಬರುತ್ತೇನೆ ಎಂದು ಹೇಳುತ್ತಾಳೆ. ಇನ್ನು ಮೀರಾ ಬಳಿ ಆರ್ಯ ಸರ್ ಮುಗ್ಧ ಅನಿಸುತ್ತೆ. ಝೇಂಡೇ ಆರ್ಯಗೆ ಏನನ್ನೂ ಹೇಳದಂತೆ ಮಾಡಿದ್ದಾನೆ ಎಂದಾಗ ಮೀರಾ ಈ ಸಂದರ್ಭದಲ್ಲಿ ಏನೇನೋ ಯೋಚಿಸಬೇಡ ಅನು. ಈಗ ಮಾಡಬೇಕಿರುವುದನ್ನು ಮಾಡೋಣ ಎಂದು ಹೇಳುತ್ತಾಳೆ.

ಅಜ್ಜಯ್ಯನ ಮಾತು ಕೇಳಿ ಶಾರದ ಶಾಕ್!
ಹೊಸಮನಿಯನ್ನು ಹರ್ಷವರ್ಧನ್ ಮನೆಗೆ ಕರೆದುಕೊಂಡು ಬರುತ್ತಾನೆ. ಆಗ ಶಾರದಾ ಹೇಗಿದ್ದೀರಾ, ನಿಮಗೆ ಏನೂ ತೊಂದರೆ ಆಗಿಲ್ಲ ತಾನೆ ಎಂದು ಕೇಳುತ್ತಾರೆ. ಆಗ ಹೊಸಮನಿ ಇಲ್ಲ ಎನ್ನುತ್ತಾರೆ. ಹರ್ಷ ಮಾತನಾಡಿ, ಅತ್ತಿಗೆ ಗೆಸ್ ಮಾಡಿದ್ದು ಕರೆಕ್ಟ್ ಆಗಿಯೇ ಇದೆ. ಝೇಂಡೇನೇ ಹೊಸಮನಿಯನ್ನು ಕರೆದುಕೊಂಡು ಹೋಗಿದ್ದರು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದಾಗ ಶಾರದಾ ನಂಬುವುದಿಲ್ಲ. ಹೊಸಮನಿ ಇದೇ ಸತ್ಯ ಎಂದು ಹೇಳುತ್ತಾನೆ. ಅನು ಬಗ್ಗೆ ತಿಳಿದುಕೊಳ್ಳಲು ನನ್ನನ್ನು ಝೇಂಡೇ ಕರೆದುಕೊಂಡು ಹೋಗಿದ್ದರು ಎಂದು ಹೇಳುತ್ತಾರೆ.

ಅಪ್ಪನ ಸಾವಿನ ರಹಸ್ಯ ತಿಳಿದ ಹರ್ಷ!
ಹೊಸಮನಿ ಮಾತು ಮುಂದುವರಿಸುತ್ತಾ, ಇದೇ ಮೊದಲೇನಲ್ಲ. ಝೇಂಡೇ ಸಾಹೇಬರು ಪದೇ ಪದೇ ನನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತಾರೆ. ಈ ಮನೆಯ ಸುದ್ದಿಗಳನ್ನು ಹೇಳಿ ನನ್ನ ಹೆದರಿಸಿ ಬೆದರಿಸಿ ತಿಳಿದುಕೊಳ್ಳುತ್ತಾರೆ. ಎಷ್ಟು ಸಲ ಬೇಡ ಎಂದರು ಕೇಳುವುದಿಲ್ಲ ಎಂದು ಹೇಳುತ್ತಾನೆ. ಹಾಗೆ ಎಷ್ಟು ವರ್ಷದಿಂದ ಎಂದು ಹೇಳಿ, ಯಾವ ಸತ್ಯಾನೂ ಮುಚ್ಚಿಡಬೇಡಿ ಎಂದು ಅನು ಹೇಳುತ್ತಾಳೆ. ಆಗ ಹೊಸಮನಿ ರಾಜವರ್ಧನ್ ಸಾಹೇಬರಿಗೆ ಮಾತ್ರೆ ಕೊಟ್ಟಿದ್ದು ತಾನೇ ಎಂದು ಒಪ್ಪಿಕೊಳ್ಳುವಂತೆ ಹೊಸಮನಿಗೆ ಝೇಂಡೇ ಕಳೆದ 22 ವರ್ಷದಿಂದ ಹೆದರಿಸಿದ ವಿಚಾರವನ್ನು ಹೇಳುತ್ತಾರೆ. ಆಗ ಹರ್ಷ ಅಪ್ಪನಿಗೆ ಮಾತ್ರೆ ಕೊಟ್ಟಿದ್ದರಿಂದ ಸಾವನ್ನಪ್ಪಿದ್ರಾ ಎಂದು ಶಾಕ್ ಆಗುತ್ತಾನೆ. ತಲೆ ಸುತ್ತಿ ಬೀಳುತ್ತಾನೆ.

ಅಮ್ಮನಿಗೆ ಎಲ್ಲಾ ಸತ್ಯ ಗೊತ್ತಾಯ್ತು!
ಹರ್ಷನಿಗೆ ಮಾತ್ರೆ ಕೊಟ್ಟಾಗ ಹರ್ಷನ ತಲೆ ಸುತ್ತು ಹೆಚ್ಚಾಗುತ್ತದೆ. ಆಗ ಮಾತ್ರೆ ಚೆಕ್ ಮಾಡಿದ ಅನು ಬದಲಾಗಿರುವ ವಿಚಾರವನ್ನು ಹೇಳುತ್ತಾಳೆ. ಆಗ ಶಾರದಾ ಶಾಕ್ ಆಗಿ ಬೀಳುತ್ತಾಳೆ. ನಂತರ ಶಾರದಾಗೆ ಎಚ್ಚರವಾದ ಮೇಲೆ, ಮಾತ್ರೆಗಳನ್ನು ಬದಲಾಯಿಸಿದ್ದು ಝೇಂಡೇ ಸಾಹೇಬರೇ ಎಂದು ಹೊಸಮನಿ ಹೇಳುತ್ತಾರೆ. ಆಗ ಶಾರದಾ ಝೇಂಡೇನಾ ಬಚಾವ್ ಮಾಡೋಕೆ ಆರ್ಯ ಡೆತ್ ಸರ್ಟಿಫಿಕೇಟ್ ಬದಲಾಯಿಸಿದ್ನಾ ಎಂದು ಕೇಳುತ್ತಾರೆ. ಇದೆಲ್ಲವನ್ನು ಈಗಲೇ ಆರ್ಯಗೆ ಹೇಳುತ್ತೀನಿ. ಪಾಪ ಆರ್ಯಗೆ ಗೊತ್ತಿಲ್ಲದೇ, ಕ್ರೂರಿ ಝೇಂಡೇನಾ ಜೊತೆಗಿಟ್ಟುಕೊಂಡಿದ್ದಾನೆ ಎನ್ನುತ್ತಾಳೆ. ಆಗ ಅನು ಅದರ ಅವಶ್ಯಕತೆ ಇಲ್ಲ ಎಂದಾಗ ಆರ್ಯ ಕೂಡ ತನಗೆ ಮೋಸ ಮಾಡಿದ್ದಾನೆ ಎಂಬ ವಿಚಾರವನ್ನು ಅರ್ಥ ಮಾಡಿಕೊಳ್ಳುತ್ತಾಳೆ.


Click it and Unblock the Notifications











