ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ಜೂ.ಎನ್ ಟಿ ಆರ್: ಯಾವ ಶೋ?
ತೆಲುಗಿನ ಖ್ಯಾತ ನಟ ಜೂ ಎನ್ ಟಿ ಆರ್ ಮತ್ತೆ ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಹೋಸ್ಟ್ ಮಾಡುವ ಮೂಲಕ ಕಿರುತೆರೆ ಪ್ರೇಕ್ಷಕರ ಮುಂದೆ ಬಂದಿದ್ದ ಜೂ ಎನ್ ಟಿ ಆರ್ ಬಳಿಕ ಯಾವುದೇ ಶೋ ನಡೆಸಿಕೊಟ್ಟಿರಲಿಲ್ಲ. ಇದೀಗ ಮತ್ತೊಂದು ಶೋ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ಅಂದಹಾಗೆ ಜೂ ಎನ್ ಟಿ ಆರ್ ಈ ಬಾರಿ ಕಿರುತೆರೆಗೆ ಎಂಟ್ರಿ ಕೊಡುತ್ತಿರುವುದು ಜನಪ್ರಿಯ ಕ್ವಿಜ್ ಕಾರ್ಯಕ್ರಮ ನಡೆಸಿಕೊಡಲು. ಹೌದು, ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ ಪತಿ ತೆಲುಗು ವರ್ಷನ್ ನಿರೂಪಣೆ ಮಾಡುವ ಮೂಲಕ ಮತ್ತೆ ಟಿವಿಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ತೆಲುಗಿನಲ್ಲಿ ಮೀಲೋ ಎವರು ಕೋಟೀಶ್ವರರು ಹೆಸರಿನಲ್ಲಿ ಕ್ವಿಜ್ ಕಾರ್ಯಕ್ರಮ ಪ್ರಸಾರವಾಗಲಿದೆ. ಈಗಾಗಲೇ ತೆಲುಗಿನಲ್ಲಿ 4 ಆವೃತ್ತಿ ಯಶಸ್ವಿಯಾಗಿ ನಡೆದಿದು, ಜನಪ್ರಿಯ ಶೋಗಳಲ್ಲಿ ಒಂದಾಗಿದೆ. ಇದೀಗ 5ನೇ ಆವೃತ್ತಿ ಪ್ರಾರಂಭವಾಗುತ್ತಿದ್ದು, ಈ ಬಾರಿ ಜೂ ಎನ್ ಟಿ ಆರ್ ಹಾಟ್ ಸೀಟಿನಲ್ಲಿ ಕುಳಿತವರಿಗೆ ಪ್ರಶ್ನೆ ಕೇಳಲಿದ್ದಾರೆ.

ಮೀಲೋ ಎವರು ಕೋಟೀಶ್ವರರು ಮೊದಲ 3 ಆವೃತ್ತಿಯನ್ನು ಅಕ್ಕಿನೇನಿ ನಾಗಾರ್ಜುನ್ ನಡೆಸಿಕೊಟ್ಟಿದ್ದಾರೆ. ಬಳಿಕ 4ನೇ ಆವೃತ್ತಿ ಮೆಗಾಸ್ಟಾರ್ ಪಾಲಾಗಿತ್ತು. ಇದೀಗ ಜೂ ಎನ್ ಟ್ ಆರ್ ಹೆಗಲಿಗೆ ಬಿದ್ದಿದೆ. ಈಗಾಗಲೇ ಕಾರ್ಯಕ್ರಮದ ಪ್ರೋಮ್ ರಿಲೀಸ್ ಆಗಿದ್ದು, ಈ ಬಾರಿ ನಿರೂಪಕ ಬದಲಾಗುವ ಜೊತೆಗೆ ಚಾನೆಲ್ ಕೂಡ ಬದಲಾಗಿದೆ. ಈ ಬಾರಿ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿದೆ.
ಅಂದಹಾಗೆ ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ ಪತಿ 12ನೇ ಆವೃತ್ತಿ ಇತ್ತೀಚಿಗಷ್ಟೆ ಮುಕ್ತಾಯವಾಗಿದೆ. ಪ್ರೇಕ್ಷಕರು ತುಂಬಾ ಇಷ್ಟಪಟ್ಟು ನೋಡುವ ರಿಯಾಲಿಟಿ ಶೋಗಳಲ್ಲಿ ಒಂದಾಗಿದ್ದು, ಈ ಬಾರಿ ಜೂ ಎನ್ ಟಿ ಆರ್ ಹೇಗೆ ನಡೆಸಿಕೊಡಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಜೂ ಎನ್ ಟಿ ಆರ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಜೂ ಎನ್ ಟಿ ಆರ್ ಮುಂದಿನ ಸಿನಿಮಾ ಕೂಡ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆರ್ ಆರ್ ಆರ್ ಸಿನಿಮಾ ಇದೇ ವರ್ಷ ಅಕ್ಟೋಬರ್ ನಲ್ಲಿ ತೆರೆಗೆ ಬರುತ್ತಿದೆ.


Click it and Unblock the Notifications











