Actress Chandrakala: ಕನ್ನಡ ಕಿರುತೆರೆಯ ಜ್ಯೂನಿಯರ್ ಉಮಾಶ್ರೀ ಬಣ್ಣದ ಪಯಣ ಶುರುವಾಗಿದ್ದೇಗೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಣ್ಯವತಿ' ಧಾರಾವಾಹಿಯಲ್ಲಿ ನಾಯಕ ನಂದನ್ ಅಜ್ಜಿ ಅಮ್ಮಾಜಿಯಾಗಿ ಅಭಿನಯಿಸುತ್ತಿರುವ ಚಂದ್ರಕಲಾ ಮೋಹನ್ ಬಗ್ಗೆ ಗೊತ್ತಿಲ್ಲದವರಾರು ಹೇಳಿ? ಟಿವಿ ನೋಡುವ ಎಲ್ಲಾ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಚಂದ್ರಕಲಾ ಮೋಹನ್ ಅವರ ಮುಖ ಚಿರಪರಿಚಿತ.
ಹೌದು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಪುಟ್ಟ ಗೌರಿ ಮದುವೆ'ಯಲ್ಲಿ ರಾಜಲಕ್ಷ್ಮೀ ಅಲಿಯಾಸ್ ಅಜ್ಜಮ್ಮ ಆಗಿ ಕಾಣಿಸಿಕೊಂಡಿದ್ದ ಚಂದ್ರಕಲಾ ಮೋಹನ್ ಅದೇ ಪಾತ್ರದ ಮೂಲಕ ಕರುನಾಡಿ ಗುರುತಿಸಿಕೊಂಡಿದ್ದ ಪ್ರತಿಭೆ. ಈಗಲೂ ಕೂಡಾ ಅವರು ಅದೇ ಪಾತ್ರದ ಮೂಲಕವೇ ಗುರುತಿಸಲ್ಪಡುತ್ತಿದ್ದಾರೆ.

ಹತ್ತನೇ ವರ್ಷದಿಂದಲೇ ಬೆಸೆದಿತ್ತು ಬಣ್ಣದ ಲೋಕ
ತನ್ನ 10ನೇ ವಯಸ್ಸಿನಿಂದಲೂ ನಟನೆಯ ನಂಟು ಬೆಳೆಸಿಕೊಂಡ ಚಂದ್ರಕಲಾ ಮೋಹನ್ ಮೊದಲ ಬಾರಿ ನಟಿಸಿದ್ದು ಗೀತಾ ನಾಟಕದಲ್ಲಿ. ತದ ನಂತರ 'ಕುರುಕ್ಷೇತ್ರ', 'ದಕ್ಷಯಜ್ಞ','ಶ್ರೀಕೃಷ್ಣ ಸಂಧಾನ', 'ರತ್ನ ಮಾಂಗಲ್ಯ', 'ಬಸ್ ಕಂಡಕ್ಟರ್', 'ಸತಿ ಜೀವನದ ಜ್ಯೋತಿ', 'ಗೌಡ್ರಗದ್ಲ' ಸೇರಿದಂತೆ ಅನೇಕ ನಾಟಕಗಳಲ್ಲಿ ನಟಿಸಿರುವ ಚಂದ್ರಕಲಾ ಮೋಹನ್ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮರೀಚಿಕೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು.
'ಮೂಡಲ ಮನೆ' ಶಾಂತ ಆಗಿ ಫೇಮಸ್ಸು
'ಜೀವನ', 'ಕುಸುಮಾಂಜಲಿ', 'ರಂಗೋಲಿ', 'ಗೋಧೂಳಿ', 'ಎಸ್ಸೆಸ್ಸೆಲ್ಸಿ ನನ್ಮಕ್ಳು' ಹತ್ತು ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ ಚಂದ್ರಕಲಾ ಮೋಹನ್ ಅವರಿಗೆ 'ಮೂಡಲಮನೆ'ಯ ಶಾಂತಾ ಪಾತ್ರ ಸಾಕಷ್ಟು ಜನಪ್ರಿಯತೆ ನೀಡಿತ್ತು. ಮೂಲತಃ ಮಂಡ್ಯದವರಾದ ಚಂದ್ರಕಲಾ ಅವರಿಗೆ ಉತ್ತರಕರ್ನಾಟಕದ ಭಾಷೆಯ ಆ ಧಾರಾವಾಹಿಯಲ್ಲಿ ನಟಿಸುವುದು ಸವಾಲಾಗಿತ್ತು. ಆದರೂ ಆ ಪಾತ್ರಕ್ಕೆ ಜೀವ ತುಂಬಿದ್ದ ಚಂದ್ರಕಲಾ ಮೋಹನ್ ಶಾಂತಾ ಆಗಿ ಮೋಡಿ ಮಾಡಿದರು.

ಖಳನಾಯಕಿಯಾಗಿಯೂ ಸೈ
'ತಾಯಿ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ ಇವರು ನಂತರ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ತಾಯವ್ವ ಎಂಬ ಗೌಡ್ತಿ ಪಾತ್ರದ ಮೂಲಕ ಕಿರುತೆರೆ ಅಂಗಳದಲ್ಲಿ ಮಿಂಚಿದರು. ಜೊತೆಗೆ ಆ ಪಾತ್ರಕ್ಕೆ ಬೆಸ್ಟ್ ಖಳನಾಯಕಿ ಪ್ರಶಸ್ತಿಯನ್ನು ಪಡೆದ ಈಕೆ 'ಬೆಂಕಿಯಲ್ಲಿ ಅರಳಿದ ಹೂ' ಧಾರಾವಾಹಿಯಲ್ಲೂ ಖಳನಾಯಕಿ ಆಗಿ ಕಾಣಿಸಿಕೊಂಡಿದ್ದು ಝೀ ಕನ್ನಡ ವಾಹಿನಿ ಕೊಡುವ ಅದ್ಭುತ ಖಳನಾಯಕಿ ಪ್ರಶಸ್ತಿಗೆ ಪಡೆದ ಹೆಗ್ಗಳಿಕೆ ಇವರದು.
ಪ್ರಶಸ್ತಿಗಳ ಸರಮಾಲೆ
'ಅನುಬಂಧ ಅವಾರ್ಡ್ಸ್'ನ ಮನ ಮೆಚ್ಚಿದ ಹಿರಿಯ ಪ್ರಶಸ್ತಿ, ಅಂತರಾಷ್ಟ್ರೀಯ ಪ್ರಶಸ್ತಿ ಆರ್ಯಭಟ, ಬೆಸ್ಟ್ ಸಪೋರ್ಟಿಂಗ್ ಆರ್ಟಿಸ್ಟ್ ಪ್ರಶಸ್ತಿ, ಅಭಿನಯ ಶಾರದೆ, ಕಲಾ ಸರಸ್ವತಿ, ಕಲಾ ಚತುರೆ ಮುಂತಾದ ಬಿರುದುಗಳನ್ನು ಪಡೆದಿರುವ ಚಂದ್ರಕಲಾ ಮೋಹನ್ ಅವರು ಜ್ಯೂನಿಯರ್ ಉಮಾಶ್ರೀ ಎಂದೇ ಗುರುತಿಸಲ್ಪಟ್ಟವರು.
ಸಿನಿಮಾದಲ್ಲೂ ನಟಿಸಿದ ಚಂದ್ರಕಲಾ
ಕಿರುತೆರೆಯ ನಂತರ ಬೆಳ್ಳಿತೆರೆಯಲ್ಲೂ ಗುರುತಿಸಿಕೊಂಡಿರುವ ಚಂದ್ರಕಲಾ ಮೋಹನ್ 'ಋಣಾನುಬಂಧ' ಸಿನಿಮಾದಲ್ಲಿನ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 'ರಾಜಧಾನಿ', 'ಭದ್ರ', 'ಜೈಲಲಿತಾ', 'ನಾ ರಾಣಿ ನೀ ಮಹಾರಾಣಿ', 'ಸುಹಾಸಿನಿ', 'ಮಿ. ಪುಡಾರಿ', 'ಆಂತರ್ಯ', 'ಭಕ್ತಶಂಕರ', 'ಗೇಮ್ ಫಾರ್ ಲವ್', 'ಮದುವೆ ದಿಬ್ಬ' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತುಳು ಚಿತ್ರ 'ಪಿಲಿಬೈಲ್ ಯಮುನಕ್ಕ'ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕೋಸ್ಟಲ್ ವುಡ್ ನಲ್ಲೂ ನಟನಾ ಕಂಪನ್ನು ಪಸರಿಸಿದ ಚಂದ್ರಕಲಾ ಮೋಹನ್ ಸದ್ಯ ಕಿರುತೆರೆಯಲ್ಲಿ ಬ್ಯುಸಿ.
ರಿಯಾಲಿಟಿ ಶೋವಿನಲ್ಲಿ ಮಿಂಚು
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 8'ರ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟು ಸೈ ಎನಿಸಿಕೊಂಡಿದ್ದ ಈಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೂಪರ್ ಕ್ವೀನ್' ಶೋವಿನಲ್ಲೂ ನಟಿಸಿದ್ದಾರೆ. 'ಪುಟ್ಟ ಗೌರಿ ಮದುವೆ' ಧಾರಾವಾಹಿಯ ನಂತರ 'ದಾಸ ಪುರಂದರ'ದಲ್ಲಿ ನಟಿಸಿದ್ದ ಈಕೆ ಸದ್ಯ 'ಉಧೋ ಉಧೋ ಶ್ರೀ ರೇಣುಕಾ ಯಲ್ಲವ್ವ' ಹಾಗೂ 'ಪುಣ್ಯವತಿ'ಯಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











