ಕೇವಲ ಒಂದೂವರೆ ವರ್ಷಕ್ಕೆ ಮುದುಡಿತು ಪ್ರೀತಿ, ಯುವ ನಟಿಯ ದಾಂಪತ್ಯದಲ್ಲಿ ಬಿರುಕು
ಪ್ರೀತಿಯೇ ಸರ್ವಸ್ವವಲ್ಲ. ಆದರೆ ಬದುಕಿನ ಈ ಬಹುಮುಖ್ಯ ಅಧ್ಯಾಯವನ್ನು ಅಷ್ಟೇ ಜತನದಿಂದ, ಅದಕ್ಕಿರುವ ಆಳ- ಅರ್ಥವನ್ನೊಮ್ಮೆ ಮನಗಂಡು .. ಆಲೋಚಿಸಿ .. ಅಭ್ಯಸಿಸಿ .. ಆಯ್ದುಕೊಳ್ಳುವ ಪ್ರವೃತ್ತಿ ಪ್ರೀತಿಗೆ ಹೊಸ ಅರ್ಥವನ್ನು ತುಂಬಿದೆ. ಅದು ಕೇವಲ ಭಾವೋದ್ವೇಗದ ಭ್ರಮಾಲೋಕವಾಗಿ ಉಳಿದಿಲ್ಲ. ಬದಲಿಗೆ ವಾಸ್ತವದ ಭೂತಗನ್ನಡಿಯಲ್ಲಿಟ್ಟು ಪರೀಕ್ಷಿಸಿ, ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಜಮಾನಾ ಈಗಿನದು. ಆದರೂ ಕೂಡ ಕೆಲವರು ಎಡವುತ್ತಾರೆ.
ಆಕರ್ಷಣೆಯನ್ನೇ ಪ್ರೀತಿಯೆಂದು ಅಂದುಕೊಳ್ಳುತ್ತಾರೆ. ಇದೇ ಭ್ರಮೆಯಲ್ಲಿ ಮದುವೆ ಕೂಡ ಆಗುತ್ತಾರೆ. ಆದರೆ ಆರಂಭದ ಆಕರ್ಷಣೆಯನ್ನು ದೀರ್ಘಕಾಲ ಉಳಿಯಬಲ್ಲ ಪ್ರೀತಿಯಾಗಿ ಬದಲಾಯಿಸಲು ಇವರಿಂದ ಸಾಧ್ಯವಾಗುವುದೇ ಇಲ್ಲ.

ಹೀಗಾಗಿಯೇ ಮದುವೆಯಾದ ಕೆಲ ದಿನಗಳ ನಂತರ ಇವರಿಗೆ ಕಿರಿಕಿರಿಯಾಗಲು ಶುರುವಾಗುತ್ತೆ. ಸಂಬಂಧ ಕಡಿದುಕೊಂಡು ಹೊರ ಬಂದರೆ ಸಾಕು ಎಂಬ ಭಾವನೆ ಮೂಡುತ್ತೆ. ಆಗ ವಿಚ್ಛೇದನ ಹೊರತು ಪಡಿಸಿ ಬೇರೆ ಯಾವ ದಾರಿ ಕೂಡ ಇವರ ಕಣ್ಮುಂದೆ ಕಾಣಿಸುವುದಿಲ್ಲ.
ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅದರಲ್ಲಿಯೂ ಚಿತ್ರರಂಗದಲ್ಲಿ ಮದುವೆ ಮಾಡಿಕೊಂಡು ಒಂದೆರಡು ವರ್ಷ ಕೂಡ ಆಗಿರುವುದಿಲ್ಲ. ಆಗಲೇ ಡಿವೋರ್ಸ್ ಪೇಪರ್ ಹಿಡಿದು ಅನೇಕರು ಕೌಟಂಬಿಕ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಉದಾಹರಣೆಗೆ ಯೋಗಿತಾ ಚವ್ಹಾಣ್ ಮತ್ತು ಸೌರಭ್ ಚೌಘುಲೆ.
ಹೌದು, ಯೋಗಿತಾ ಚವ್ಹಾಣ್ ಮತ್ತು ಸೌರಭ್ ಚೌಘುಲೆ ... ಮರಾಠಿ ಕಿರುತೆರೆಯ ತಾರೆಯರು. '' ಜೀವ್ ಮಝಾ ಗುಂತಲಾ'' ಇವರ ಪ್ರೇಮಕ್ಕೆ ಬುನಾದಿಯನ್ನು ಹಾಕಿದ್ದ ಧಾರಾವಾಹಿ. ಈ ಧಾರಾವಾಹಿಯಲ್ಲಿ ನಾಯಕ-ನಾಯಕಿಯಾಗಿ ಆಕ್ಟ್ ಮಾಡುತ್ತಲೇ ಪ್ರೀತಿಯ ಬಲೆಯಲ್ಲಿ ಸಿಲುಕಿಕೊಂಡಿದ್ದರು ಇಬ್ಬರು.
ಆದರೂ ಕೂಡ ತಮ್ಮ ಸಂಬಂಧವನ್ನು ತುಂಬಾ ಗೌಪ್ಯವಾಗಿ ಇಟ್ಟಿದ್ದ ಇಬ್ಬರು ಕಳೆದ ವರ್ಷ ಮಾರ್ಚ್ 3ರಂದು ಖುಷಿ ಖುಷಿಯಿಂದ ಮದುವೆಯಾಗಿದ್ದರು. ತಮ್ಮ ಅತ್ಯಾಪ್ತ ಸ್ನೇಹಿತರ ಜೊತೆ ಸಂಭ್ರಮಿಸಿ ಗುರು ಹಿರಿಯರ ಆಶೀರ್ವಾದ ಪಡೆದಿದ್ದರು.

ಇನ್ನು ತಮ್ಮ ಭವಿಷ್ಯದ ಕುರಿತು ತುಂಬಾನೇ ಮಹತ್ವಕಾಂಕ್ಷಿಯಾಗಿದ್ದ ಇಬ್ಬರು ಮದುವೆಯಾದ ಎರಡು ಮೂರು ತಿಂಗಳಿಗೆ ಸ್ವಂತ ಮನೆಯನ್ನು ಖರೀದಿಸಿದರು. ಗೃಹ ಪ್ರವೇಶವನ್ನು ಕೂಡ ಮಾಡಿದರು. ಆದರೆ.. ಈಗ ಕೇವಲ ಒಂದೂವರೆ ವರ್ಷಕ್ಕೆ ಇವರ ಪ್ರೀತಿ ಮುದುಡಿದೆ. ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ವಿಚ್ಛೇದನಕ್ಕೆ ಇಬ್ಬರು ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಸುದ್ದಿ ಕೂಡ ಇದೆ.
ಇದಕ್ಕೆ ಪೂರಕವಾಗಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಇದ್ದ ತಮ್ಮ ಮದುವೆಯ ಫೋಟೊಗಳನ್ನೆಲ್ಲ ಯೋಗಿತಾ ಡಿಲೀಟ್ ಮಾಡಿದ್ಧಾರೆ. ಯೋಗಿತಾ ಅವರ ಖಾತೆಯಲ್ಲಿ ಸೌರಭ್ ಚೌಘುಲೆ ಅವರ ಯಾವ ನೆನಪುಗಳು ಕೂಡ ಇಲ್ಲ. ಇಬ್ಬರ ಸಂದರ್ಶನದ ತುಣುಕುಗಳು.. ಜೊತೆಯಲ್ಲಿ ಮಾಡಿದ್ದ ರೀಲ್ಸ್.. ಎಲ್ಲವೂ ಕಣ್ಮರೆಯಾಗಿವೆ.

ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ''ನ್ಯೂಸ್ 18 ಮರಾಠಿ''ಗೆ ಪ್ರತಿಕ್ರಿಯೆಯನ್ನು ನೀಡಿರುವ ಯೋಗಿತಾ ವಿಚ್ಛೇದನದ ವಿಚಾರದ ಕುರಿತು ಮಾತನಾಡಲು ನಿರಾಕರಿಸಿದ್ದಾರೆ. ವ್ಯೆಯಕ್ತಿಕ ಜೀವನದ ಕುರಿತು ಮಾತನಾಡಲು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದಾರೆ. ''ನ್ಯೂಸ್ 18 ಮರಾಠಿ'' ಸುದ್ದಿಯನ್ನು ಖಚಿತ ಪಡಿಸಿಕೊಳ್ಳಲು ಸೌರಭ್ ಚೌಘುಲೆ ಅವರನ್ನು ಕೂಡ ಸಂಪರ್ಕ ಮಾಡಿದ್ದು ಸೌರವ್ ಫೋನ್ ಕರೆಯನ್ನು ಸ್ವೀಕರಿಸಿಲ್ಲ.
ಈ ಹಿನ್ನೆಲೆ ಯೋಗಿತಾ ಚವ್ಹಾಣ್ ಮತ್ತು ಸೌರಭ್ ಚೌಘುಲೆ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ನೂರಕ್ಕೆ ನೂರು ನಿಜಾ ಎನ್ನುವ ಅಭಿಪ್ರಾಯ ಕಿರುತೆರೆ ವಲಯದಲ್ಲಿ ಮತ್ತು ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಒಂದೂವರೆ ವರ್ಷಕ್ಕೆ ಇಬ್ಬರ ದಾಂಪತ್ಯ ಜೀವನ ಮುರಿದು ಬಿದ್ದಿದೆ.


Click it and Unblock the Notifications











