ಕೊಲ್ಲಲು ಪ್ರಾರಂಭಿಸಿದರೆ ತಡೆಯಲು ಅಸಾಧ್ಯ: ಕಾಳಿ ಸ್ವಾಮಿ ಪ್ರಚೋದನಕಾರಿ ಹೇಳಿಕೆ
ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಘಟನೆ ತೀವ್ರವಾಗಿ ಚರ್ಚೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೋಮು ಸೂಕ್ಷ್ಮ ವಾತಾವರಣ ಸೃಷ್ಟಿಯಾಗಿದ್ದು ನಿಷೇಧಾಜ್ಞೆ ಘೋಷಿಸಲಾಗಿದೆ.
ಹರ್ಷ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸದೇ ಬಿಡುವುದಿಲ್ಲ ಎಂದಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸದೇ ಬಿಡುವುದಿಲ್ಲ ಎಂದಿದ್ದಾರೆ. ಹರ್ಷ ಕೊಲೆ ಕೋಮು ದ್ವೇಷದ ಹಿನ್ನೆಲೆಯಲ್ಲಿಯೇ ಆಗಿದೆ ಎಂದು ಅನುಮಾನವನ್ನು ವ್ಯಕ್ತಪಡಿಸಲಾಗಿದೆ.
ಮಾಜಿ ಬಿಗ್‌ಬಾಸ್ ಸ್ಪರ್ಧಿ ಕಾಳಿ ಸ್ವಾಮೀಜಿ ಮುಂದಾಳತ್ವದಲ್ಲಿ ಹರ್ಷ ಅಂತ್ಯಕ್ರಿಯೆ ನಿನ್ನೆ ನಡೆದಿದೆ. ಹರ್ಷ ಮೃತ್ಯುವಿನ ಬಳಿಕ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ. ಕೆಲವರು ಈ ಉದ್ವಿಗ್ನ ಪರಿಸ್ಥಿತಿಯನ್ನು ಕೋಮು ದ್ವೇಷದ ಮಾತುಗಳ ಮೂಲಕ, ಸಂದೇಶಗಳ ಮೂಲಕ ಇನ್ನಷ್ಟು ಉದ್ವಿಗ್ನಗೊಳಿಸುವ ಯತ್ನ ಮಾಡುತ್ತಿದ್ದಾರೆ.

ತಡೆಯಲು ಯಾರಿಂದ ಆಗುವುದಿಲ್ಲ: ಕಾಳಿ ಸ್ವಾಮಿ
ನಿನ್ನೆ ಹರ್ಷ ಅಂತ್ಯಕ್ರಿಯೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಬಿಗ್‌ಬಾಸ್ ಮಾಜಿ ಸ್ಪರ್ಧಿ, ಮಾಜಿ ನೃತ್ಯ ಶಿಕ್ಷಕ ಋಷಿಕುಮಾರ ಸ್ವಾಮಿ ಅಲಿಯಾಸ್ ಕಾಳಿ ಸ್ವಾಮೀಜಿ, ''ಹಿಜಾಬ್, ಬುರ್ಖಾ ವಿಷಯಕ್ಕೆ ನನ್ನ ಮಗನನ್ನು (ಹರ್ಷ) ಅನ್ನು ಕೊಂದಿದ್ದೀರ. ನ್ಯಾಯಾಲಯ ಕೊಟ್ಟರೆ ತಗೋಳಿ, ಆದರೆ ನಮ್ಮ ಮನೆ ಮಕ್ಕಳನ್ನು ಕೊಚ್ಚಿ-ಕೊಚ್ಚಿ ಕೊಲ್ಲಲು ಬರ್ತಿದ್ದೀರಿ ಅಂದರೆ ನಾವು ಸುಮ್ಮನಿರಲ್ಲ. ನಾವು ಕೊಚ್ಚಿ ಕೊಲ್ಲಲು ಆರಂಭಿಸಿದರೆ ಹರಿ, ಹರ, ಬ್ರಹ್ಮ ಬಂದರೂ ನಮ್ಮನ್ನು ತಡೆಯಲು ಆಗುವುದಿಲ್ಲ'' ಎಂದು ಎಚ್ಚರಿಕೆ ನೀಡಿದ್ದಾರೆ ಕಾಳಿ ಸ್ವಾಮೀಜಿ.

ಸಹಾಯ ಮಾಡಿರೆಂದು ಮನವಿ
ಮೈಸೂರು ಮಹಾರಾಜ ಯಧುವೀರ್ ಕುರಿತು ಮಾತನಾಡಿರುವ ಕಾಳಿ ಸ್ವಾಮೀಜಿ, ''ಕೆಲವು ದಿನಗಳ ಹಿಂದಷ್ಟೆ ಹಿಂದು ಧರ್ಮ ರಕ್ಷಣೆಗೆ ಬದ್ಧ ಎಂದು ಹೇಳಿಕೆ ನೀಡಿದ್ದೀರಿ. ಹಿಂದುಗಳೆಲ್ಲ ಒಂದಾಗಿ, ಏನೇ ಕಷ್ಟ ಬಂದರೂ ಸಹಿಸಿಕೊಳ್ಳಿ ಎಂದಿದ್ದೀರಿ. ಆದರೆ ಈ ಕಷ್ಟವನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಆ ಮನೆಗೆ (ಹರ್ಷ ಕುಟುಂಬಕ್ಕೆ) ನಿಮ್ಮಿಂದ ಏನಾದರೂ ಸಹಾಯ ಆಗಲೇ ಬೇಕು. ಅವರದ್ದು ಬಡ ಕುಟುಂಬ, ಆತನ ಕುಟುಂಬದ ಬ್ಯಾಂಕ್ ಖಾತೆ ಸಂಖ್ಯೆ ನಿಮಗೆ ಸಿಗುತ್ತದೆ. ಅವರಿಗೆ ಸಹಾಯ ಮಾಡಿ'' ಎಂದು ಕಾಳಿ ಸ್ವಾಮಿ ಮನವಿ ಮಾಡಿದ್ದಾರೆ.

ಬಂಧನಕ್ಕೆ ಒತ್ತಾಯ
ಕಾಳಿ ಸ್ವಾಮಿಯ 'ಕೊಚ್ಚಿ ಕೊಲ್ಲುವ' ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಈಗಾಗಲೇ ಶಿವಮೊಗ್ಗದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ ಇಂಥಹಾ ಸಮಯದಲ್ಲಿ ಇನ್ನಷ್ಟು ದ್ವೇಷ ಹೆಚ್ಚಿಸುವ, ಜನರನ್ನು ಹಿಂಸೆಗೆ ಪ್ರೇರೇಪಿಸುವ ಹೇಳಿಕೆಯನ್ನು ಕಾಳಿ ಸ್ವಾಮೀಜಿ ನೀಡಿದ್ದಾರೆ, ಅವರ ವಿರುದ್ಧ ದೂರು ದಾಖಲಾಗಬೇಕು, ಕಾಳಿ ಸ್ವಾಮಿಯ ಬಂಧನವಾಗಬೇಕು ಎಂದು ಸಹ ಕೆಲವರು ಒತ್ತಾಯ ಮಾಡಿದ್ದಾರೆ. ಹರ್ಷ ಕೊಲೆ ಪ್ರಕರಣವನ್ನು ಹಲವರು ತಮ್ಮ ಪ್ರಚಾರಕ್ಕೆ, ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೆಲವು ರಾಜಕೀಯ ನಾಯಕರು ಉದ್ದೇಶಪೂರ್ವಕವಾಗಿ ಕೋಮು ದ್ವೇಷದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.

ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ಕಾಳಿ ಸ್ವಾಮಿ
ಕೆಲವು ದಿನಗಳ ಹಿಂದೆ ಸಹ ಕಾಳಿ ಸ್ವಾಮೀಜಿ ಕೋಮು ಸಾಮರಸ್ಯ ಕೆಡಿಸುವ ಹೇಳಿಕೆ ನೀಡಿದ್ದರು. ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ್ದ ಕಾಳಿ ಸ್ವಾಮೀಜಿ, ಅಲ್ಲಿನ ಮಸೀದಿಯನ್ನು ಒಡೆಯಬೇಕು ಎಂದು ವಿಡಿಯೋದಲ್ಲಿ ಹೇಳಿದ್ದರು. ಅವರ ವಿರುದ್ಧ ದೂರು ದಾಖಲಾಗಿ ಪೊಲೀಸರು ಕಾಳಿ ಸ್ವಾಮೀಜಿಯನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಕಾಳಿ ಸ್ವಾಮೀಜಿಯ ಬಿಡುಗಡೆ ಆಯಿತು. ಈಗ ಮತ್ತೆ ಕೋಮು ಸಾಮರಸ್ಯ ಕದಡುವ ಮಾತನ್ನು ಕಾಳಿ ಸ್ವಾಮಿ ಆಡಿದ್ದಾರೆ.


Click it and Unblock the Notifications











