'ಕಮಲಿ' ಬಳಿಕ 'ಗೌರಿ'ಯಾಗಿ ಬಂದ ಅಮೂಲ್ಯ; ಮೈಸೂರಿನ ಹುಡುಗಿ ಎಂಟ್ರಿಗೆ ವೀಕ್ಷಕರು ದಿಲ್‌ಖುಷ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಶ್ರೀಗೌರಿ'. ಇಂದು (ಜನವರಿ 29) ರಾತ್ರಿ 8.30ಗೆ ಆರಂಭವಾಗಲಿರುವ ಈ ಧಾರಾವಾಹಿಯಲ್ಲಿ ನಾಯಕಿ ಗೌರಿಯಾಗಿ ನಟಿಸಲಿದ್ದಾರೆ ಅಮೂಲ್ಯ ಗೌಡ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಮಲಿ' ಧಾರಾವಾಹಿಯಲ್ಲಿ ನಾಯಕಿ ಕಮಲಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಕದ್ದ, ಗೆದ್ದ ಮೈಸೂರಿನ ಹುಡುಗಿ ಅಮೂಲ್ಯ.
ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಅಮೂಲ್ಯ ನಟಿಯಾಗಿದ್ದು ತೀರಾ ಆಕಸ್ಮಿಕ. ಮಾತ್ರವಲ್ಲ ಎಂದಿಗೂ ಕೂಡಾ ಆಕೆ ನಟಿಯಾಗುತ್ತೇನೆ ಎಂದು ಅಂದುಕೊಂಡವರಲ್ಲ. ಆದರೆ, ಅಚಾನಕ್ ಆಗಿ ಅಮೂಲ್ಯ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಾರಿಗುಂಟು ಯಾರಿಗಿಲ್ಲ' ರಿಯಾಲಿಟಿ ಶೋ ವಿಗೆ ಸಂಬಂಧಿಕರೊಡನೆ ಅಮೂಲ್ಯ ಹೋಗಿದ್ದರು. ಆ ಶೋವಿನಲ್ಲಿ ಅಮೂಲ್ಯ ಜೊತೆಗೆ ಮಾತನಾಡಿದವರೊಬ್ಬರು ನಟಿಸುವ ವಿಚಾರದ ಬಗ್ಗೆ ಪ್ರಸ್ತಾಪಿಸಿದರು. ಬಯಸದೇ ಬಂದಿರುವ ಅವಕಾಶವನ್ನು ಬೇಡ ಎನ್ನಲೊಲ್ಲದೇ ಒಪ್ಪಿಕೊಂಡ ಆಕೆ 'ಅನುರಾಗ ಸಂಗಮ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು. 'ಅನುರಾಗ ಸಂಗಮ'ದಲ್ಲಿ ಶ್ರೀನಾಥ್ ಮಗಳಾಗಿ ನಟಿಸಿದ ಈಕೆ ನಂತರ 'ಸ್ವಾತಿಮುತ್ತು' ಧಾರಾವಾಹಿಯಲ್ಲಿ ನಟಿಸಿದ್ದರು.
ಮುಂದೆ 'ಸ್ವಾತಿಮುತ್ತು', 'ಪುನರ್ ವಿವಾಹ', 'ಅರಮನೆ' ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅಮೂಲ್ಯಗೆ ಕಮಲಿ ಪಾತ್ರ ಬ್ರೇಕ್ ನೀಡಿತ್ತು. ಮೃದು ಸ್ವಭಾವದ ಹಳ್ಳಿ ಹುಡುಗಿ ಕಮಲಿಯಾಗಿ ಕಾಣಿಸಿಕೊಂಡ ಅಮೂಲ್ಯ ಅವರು ಆ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಮನೆ ಮಗಳಾಗಿ ಮೋಡಿ ಮಾಡಿದ ಅಮೂಲ್ಯ ಇಂದಿಗೂ ಕಮಲಿಯಾಗಿ ಗುರುತಿಸಲ್ಪಡುವುದು ವಿಶೇಷ.

ಗೌರಿಯು ಕಮಲಿಯಂತೆ ಹಳ್ಳಿಯಲ್ಲಿ ಬೆಳೆದ ಹುಡುಗಿಯಾದರೂ ಗೌರಿಗೂ, ಕಮಲಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಅಮೂಲ್ಯ ಹೇಳುತ್ತಾರೆ. ತುಂಬಾ ಸಂತಸದಿಂದ ಇರುವ ಗೌರಿಯು ತನ್ನ ಬದುಕಿನಲ್ಲಿ ಎಷ್ಟೇ ನೋವಿದ್ದರೂ ಅದನ್ನು ಯಾರ ಮುಂದೆಯೂ ತೋರಿಸಿಕೊಳ್ಳುವುದಿಲ್ಲ. ನಗುನಗುತ್ತಾ ಎಲ್ಲವನ್ನು ನಿಭಾಯಿಸುವ ಗೌರಿ ವಿದ್ಯಾವಂತೆ. ಏನೇ ಸಮಸ್ಯೆಗಳು ಎದುರಾದರೂ ಅದನ್ನು ಅಷ್ಟೇ ಸುಲಭವಾಗಿ ಪರಿಹರಿಸಿಕೊಳ್ಳುವಂತಹ ಚಾಲಾಕಿ ಗೌರಿ ಎಂದು ತಮ್ಮ ಹೊಸ ಧಾರಾವಾಹಿಯ ಪಾತ್ರದ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದರು ಅಮೂಲ್ಯ.
ಒಂದೇ ರೀತಿಯ ಪಾತ್ರಗಳಲ್ಲಿ ನಟಿಸುವುದೆಂದರೆ ನಿಜವಾಗಿಯೂ ಬೋರ್ ಹಿಡಿಸುತ್ತದೆ. ಆದರೆ, ನಿಜ ಹೇಳಬೇಕೆಂದರೆ ಅದು ಸವಾಲು ಕೂಡಾ ಹೌದು ಎಂಬುದು ಅಮೂಲ್ಯ ಅಭಿಪ್ರಾಯ. ಧಾರಾವಾಹಿ ಎಂದ ಮೇಲೆ ಮೂರು ನಾಲ್ಕು ವರ್ಷಗಳ ಕಾಲ ಒಂದೇ ಪಾತ್ರಕ್ಕೆ ಸ್ಟಿಕ್ ಆನ್ ಆಗಿರಬೇಕು. ಆದರೆ, ಮೊದಲ ಧಾರಾವಾಹಿಗಿಂತ ಇದರಲ್ಲಿ ಯಾವ ರೀತಿಯಲ್ಲಿ ಭಿನ್ನವಾಗಿ ನಟಿಸಬಹುದು ಎಂಬುದೇ ನಟಿಗಿರುವ ಚಾಲೆಂಜ್. ಪಾತ್ರ ಹೇಗಿದೆ ಅನ್ನುವ ವಿಷಯಕ್ಕಿಂತಲೂ ಮೊದಲಿನ ಪಾತ್ರಕ್ಕೂ ಇದಕ್ಕೂ ವ್ಯತ್ಯಾಸವೇನಿದೆ ಎಂಬುದನ್ನು ತಿಳಿಯಬೇಕು. ಅಭಿನಯಕ್ಕೆ ಒತ್ತು ಕೊಡುವಂತಹ ಪಾತ್ರಗಳನ್ನಷ್ಟೇ ಆಯ್ಕೆ ಮಾಡಲು ಇಷ್ಟ ಎಂಬುದು ಅಮೂಲ್ಯ ಅವರ ಅಭಿಪ್ರಾಯ.
ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ಅಮೂಲ್ಯ ಇದೀಗ ವರ್ಷದ ನಂತರ ಕನ್ನಡ ಕಿರುತೆರೆಗೆ 'ಶ್ರೀಗೌರಿ'ಯಾಗಿ ಮರಳುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬಿಗ್ ಬಾಸ್ ಸೀಸನ್ 9'ರ ಭಾಗವಾಗಿದ್ದ ಅಮೂಲ್ಯ ಮುಂದೆ ತೆಲುಗು ಧಾರಾವಾಹಿಯ ಮೂಲಕ ಪರಭಾಷೆಯ ವೀಕ್ಷಕರನ್ನು ರಂಜಿಸಿದರು. ಇದೀಗ ಗೌರಿಯಾಗಿ ಕಿರುತೆರೆಗೆ ಕಾಲಿಡಲಿರುವ ಈಕೆ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಿದರೆ ಸಿನಿಮಾದಲ್ಲಿ ನಟಿಸಿದರೂ ಆಶ್ಚರ್ಯವಿಲ್ಲ.


Click it and Unblock the Notifications











